ಬಮೂಲ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ: ತನಿಖೆಗೆ ಸರ್ಕಾರದ ಆದೇಶ

ಬಮೂಲ್‍ನ ವಿವಿಧ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ಸಿಐಟಿ ಅಥವಾ ಎಸ್‌ಐಟಿಯಿಂದ ತನಿಖೆ ನಡೆಸುವಂತೆ ಸಂಸದ ಡಿ.ಕೆ.ಸುರೇಶ್‌ ಆಗ್ರಹಿಸಿದ್ದರು.

Written by - Zee Kannada News Desk | Last Updated : Apr 23, 2022, 11:07 AM IST
  • ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ನೇಮಕಾತಿಯಲ್ಲಿ ಅಕ್ರಮ ಆರೋಪ
  • ಸಂಸದ ಡಿ.ಕೆ.ಸುರೇಶ್ ದೂರಿನ ಮೇರೆಗೆ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ
  • ಸಹಕಾರ ಇಲಾಖೆ ಜಂಟಿ ಪ್ರಬಂಧಕರಿಂದ ತನಿಖೆಗೆ ಆದೇಶ ನೀಡಿದ ಸಚಿವ ಎಸ್.ಟಿ.ಸೋಮಶೇಖರ್
ಬಮೂಲ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ: ತನಿಖೆಗೆ ಸರ್ಕಾರದ ಆದೇಶ title=
ಬಮೂಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ

ಬೆಂಗಳೂರು: ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪದ ಮೇರೆಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಂಸದ ಡಿ.ಕೆ.ಸುರೇಶ್ ಅವರ ನೀಡಿರುವ ದೂರನ್ನಾಧರಿಸಿ ಸಹಕಾರ ಇಲಾಖೆ ಜಂಟಿ ಪ್ರಬಂಧಕರಿಂದ ತನಿಖೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆದೇಶ ನೀಡಿದ್ದಾರೆ. ಹಾಲು ಒಕ್ಕೂಟಗಳ ಸಿಬ್ಬಂದಿ ನೇಮಕಾತಿಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ, ಸ್ವಜನ ಪಕ್ಷಪಾತದಡಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಲಿಖಿತ ಪರೀಕ್ಷೆಯಲ್ಲಿ ಅನ್ಯಾಯವೆಸಲಾಗಿದೆ. SIT ಅಥವಾ ಸಿಐಡಿಯಿಂದ ತನಿಖೆ ನಡೆಸುವಂತೆ ಸಂಸದ ಡಿ.ಕೆ.ಸುರೇಶ್ ಸರ್ಕಾರಕ್ಕೆ ಆಗ್ರಹಿಸಿದ್ದರು.

ಇದನ್ನೂ ಓದಿ: PSI Recruitment Scam: ಮುನ್ನಾಭಾಯಿ MBBS ಸ್ಟೈಲ್‍ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು

ಈ ಕುರಿತು ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಪತ್ರ ಬರೆದಿದ್ದ ಡಿ.ಕೆ.ಸುರೇಶ್, 2021ರ ಡಿಸೆಂಬರ್‌ 12ರಂದು ನಡೆಸಲಾಗಿರುವ ಲಿಖಿತ ಪರೀಕ್ಷೆಯಲ್ಲಿ ಹಲವು ಅಕ್ರಮಗ, ನ್ಯೂನತೆಗಳು ನಡೆದಿವೆ. ಬಮೂಲ್‌ ಸಂಸ್ಥೆಯ CEO ಅವರು ಸಹಕಾರ ಸಂಘದ ನಿಯಮ ಪಾಲಿಸಿಲ್ಲ. ನಿವೃತ್ತಿ ಅಂಚಿನಲ್ಲಿದ್ದ ಅವರು ಸಂಸ್ಥೆ ಮೇಲೆ ಆರ್ಥಿಕವಾಗಿ ಹಾಗೂ ಸಂಸ್ಥೆಯ ನೀತಿ ನಿಯಮಗಳಿಗೆ ಗಂಭೀರ ಪರಿಣಾಮ ಬೀರುವ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಆದರೆ, ಸಹಕಾರಿ ಸಂಘದ ನಿಯಮಗಳನ್ನು ಅವರು ಸಂಪೂರ್ಣವಾಗಿ ಧಿಕ್ಕರಿಸಿದ್ದಾರೆ ಎಂದು ಆರೋಪಿಸಿದ್ದರು.

ಪ್ರಶ್ನೆ ಪತ್ರಿಕೆ ತಯಾರಿಕೆ, ಮೌಲ್ಯ ಮಾಪನ, ಫಲಿತಾಂಶ ಪ್ರಕಟಣೆಯ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿತ್ತು. ಇದಕ್ಕೆ ಬಮೂಲ್‌ ಆಡಳಿತ ಮಂಡಳಿ ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳಿಂದ ವಿರೋಧವಿದ್ದರೂ ಬಾಹ್ಯ ಒತ್ತಡ ಹಾಗೂ ರಾಜಕೀಯ ಶಿಫಾರಸಿನಿಂದ ಮುಕ್ತ ವಿವಿಗೆ ಜವಾಬ್ದಾರಿ ವಹಿಸಲಾಗಿದೆ. ವಿವಿಯ ಉಪ ಕುಲಪತಿಗಳು ಸದರಿ ಕಾರ್ಯವನ್ನು ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಯ ಸಿಬ್ಬಂದಿಯೊಂದಿಗೆ ಸೇರಿ ರಾಜ್ಯ ಮುಕ್ತ ವಿವಿಯನ್ನು ಕತ್ತಲಿನಲ್ಲಿಟ್ಟು ಫಲಿತಾಂಶ ಮತ್ತು ಮೌಲ್ಯಮಾಪನ ಕಾರ್ಯ ಕೈಗೊಂಡಿದ್ದಾರೆ ಎಂದು ಅವರು ದೂರಿದ್ದರು.

ಇದನ್ನೂ ಓದಿ: ರಸ್ತೆಯಲ್ಲಿಯೇ ಪ್ರೇಮಿಗಳ ಲವ್ವಿ-ಡವ್ವಿ; ಪೆಟ್ರೊಲ್ ಟ್ಯಾಂಕ್ ಮೇಲೆ ಕುಳಿತು ಲವರ್ಸ್ ಹುಚ್ಚಾಟ!

ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ನಿಗದಿತ ಸಮಯಕ್ಕಿಂತ ಅರ್ಧಗಂಟೆ ಮೊದಲೇ ಸೋರಿಕೆಯಾಗಿದ್ದು, ಅನರ್ಹ ಹಾಗೂ ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಮೋಸವಾಗಿದೆ. ಈ ವಿಚಾರವನ್ನು ಸ್ವತಃ ಬಮೂಲ್‌ನ ವ್ಯವಸ್ಥಾಪಕ ನಿರ್ದೇಶಕರೇ ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ. ಅಭ್ಯರ್ಥಿಗಳ ನೇಮಕಾತಿಗೆ 1:5 ಅನುಪಾತ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ದೂರವಾಣಿ ಮೂಲಕ ಅಮಿಷವೊಡ್ಡಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಪರೀಕ್ಷೆಯ ಒಎಂಆರ್‌ ಶೀಟ್‍ನಲ್ಲಿ 3ನೇ ವ್ಯಕ್ತಿಯಿಂದ ಉತ್ತರ ಭರ್ತಿ ಮಾಡಿಸಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News