ಮಂಗಳೂರು: ಪೈಲೆಟ್ ಆರೋಗ್ಯ ಕೈಕೊಟ್ಟ ಹಿನ್ನೆಲೆಯಲ್ಲಿ ಟೇಕ್ ಆಫ್ ಆಗಬೇಕಿದ್ದ ಸ್ಪೈಸ್ ಜೆಟ್ ವಿಮಾನ ರನ್ ವೇನಲ್ಲೇ ನಿಂತ ಘಟನೆ ಮಂಗಳವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮಂಗಳೂರಿನಿಂದ ದುಬೈಗೆ ರಾತ್ರಿ 12.45ಕ್ಕೆ ತೆರಳಬೇಕಿದ್ದ ಸ್ಪೈಸ್ ಜೆಟ್ ಎಸ್‌ಜಿ-59 ವಿಮಾನ ರನ್ ವೇ ಅಲ್ಲಿ ಇನ್ನೇನು ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ಪೈಲೆಟ್ ಗೆ ಅನಾರೋಗ್ಯ ಕಾಡಿದೆ. ಈ ಕೂಡಲೇ ರನ್ ವೇ ಅಲ್ಲೇ ವಿಮಾನ ನಿಲ್ಲಿಸಿದ್ದರಿಂದ ಹಾರಾಟ ಸ್ಥಗಿತಗೊಂಡಿದೆ.
ವಿಮಾನ ಹಾರಾಟ ಸ್ಥಗಿತಗೊಂಡದ್ದರಿಂದ ವಿಮಾನದಲ್ಲಿ 188 ಪ್ರಯಾಣಿಕರು ಪರ್ಯಾಯ ಪೈಲೆಟ್ ವ್ಯವಸ್ಥೆಗಾಗಿ ವಿಮಾನದಲ್ಲೇ ಹಲವು ಹಣತೆಗಳ ಕಾಲ ಜಾಗರಣೆ ಮಾಡಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಮತ್ತೆ ಪ್ರಯಾಣ ಬೆಳೆಸುವ ಸಿದ್ಧತೆ ನಡೆಸಲಾಗಿತ್ತಾದರೂ, ಪೈಲಟ್ ಆರೋಗ್ಯ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದರಿಂದ ಪ್ರಯಾಣ ರದ್ದುಗೊಳಿಸಲಾಗಿದೆ. ಪ್ರಸ್ತುತ ರನ್-ವೇಯಲ್ಲಿ ನಿಂತಿರುವ ಸ್ಪೈಸ್ ಜೆಟ್ ವಿಮಾನದಿಂದ ಉಳಿದ ವಿಮಾನಗಳ ಹಾರಾಟಕ್ಕೂ ತೊಂದರೆಯಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಟರ್ಕಿಯಿಂದ ಬರಬೇಕಾದ ಪರ್ಯಾಯ ಪೈಲಟ್ ಮಧ್ಯಾಹ್ನ ತಲುಪುವ ನಿರೀಕ್ಷೆಯಿದ್ದು, ವಿಮಾನ ತೆರಳಲು ಸಂಜೆ 4 ಗಂಟೆ ಸಮಯ ನಿಗದಿ ಮಾಡಲಾಗಿದೆ.