ನವದೆಹಲಿ: ಬಾಲಿವುಡ್ ನಟಿ ತನುಶ್ರೀ ದತ್ತಾ ಅವರ ಮೇಲೆ 10 ವರ್ಷಗಳ ಹಿಂದೆ ನಡೆದ ದಾಳಿಯ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಘಟನೆ 'ಹಾರ್ನ್ ಓಕೆ ಪ್ಲೀಜ್' ಚಿತ್ರದ ಸೆಟ್ ಬಳಿ ನಡೆದಿದ್ದು, ವಿವಾದದ ಬಳಿಕ ನಾನಾ ಪಾಟೇಕರ್ ಅವರ ಬೆಂಬಲಿಗರು ತನುಶ್ರೀ ಮತ್ತು ಅವರ ತಂದೆ ಕುಳಿತಿದ್ದ ಕಾರಿನ ಮೇಲೆ ದಾಳಿ ಮಾಡಿ, ಸುತ್ತುವರೆದಿದ್ದಾರೆ. ಆದರೆ ತನುಶ್ರೀ ಕಾರಿನೊಳಗೆ ಬಂಧಿತರಾಗಿದ್ದರಿಂದ ದಾಳಿಕೋರರು ಏನೂ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಇತ್ತೀಚೆಗಷ್ಟೇ ನಟಿ ತನುಶ್ರೀ ದತ್ತಾ 2008ರಲ್ಲಿ ಬಿಡುಗಡೆಯಾದ 'ಹಾರ್ನ್ ಓಕೆ ಪ್ಲೀಸ್' ಚಿತ್ರೀಕರಣದ ಸಂದರ್ಭದಲ್ಲಿ ಹಿರಿಯ ನಟ ನಾನಾ ಪಾಟೇಕರ್ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿ, ದೌರ್ಜನ್ಯ ನಡೆಸಿದ್ದರು ಎಂದು ಸಂದರ್ಶನವೊಂದರಲ್ಲಿ ಆರೋಪಿಸಿದ್ದರು. ಅಲ್ಲದೆ, ನಾನಾ ಪಾಟೇಕರ್ ಅವರ ವರ್ತನೆಯಿಂದ ಬೇಸತ್ತು ಚಿತ್ರದಿಂದ ಹೊರಬಂದಿದ್ದ ತನುಶ್ರೀ ಮೇಲೆ ರಾಜಕೀಯ ಪಕ್ಷದ ಗೂಂಡಾಗಳನ್ನೂ ಕರೆಸಿ ತನುಶ್ರೀ ಮೇಲೆ ಅಟ್ಯಾಕ್ ಮಾಡಿಸಿದ್ದರು.
ಈ 10 ವರ್ಷಗಳ ಹಿಂದಿನ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವೀಡಿಯೋದಲ್ಲಿ ನಟಿ ತನುಶ್ರೀ ದತ್ತಾ ಮತ್ತು ಆಕೆಯ ತಂದೆ ಕಾರಿನೊಳಗೆ ಕುಳಿತಿದ್ದಾರೆ. ಪೊಲೀಸರು ಇದ್ದರೂ ಸಹ ಅವರನ್ನು ಲೆಕ್ಕಿಸದೆ ಗೂಂಡಾಗಳು ತನುಶ್ರೀ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಅವರಲ್ಲಿ ಒಬ್ಬ ವೀಡಿಯೋ ಕ್ಯಾಮೆರಾದಿಂದ ಕಾರಿನ ಗಾಜನ್ನು ಒಡೆಯಲು ಯತ್ನಿಸಿ ಕಾರು ಮುಂದೆ ಚಲಿಸುವುದನ್ನು ತಡೆಯಲು ಕಾರಿನ ಚಕ್ರದಿಂದ ಗಾಳಿ ತೆಗೆದರೆ, ಮತ್ತೋರ್ವ ಕಾರಿನ ಮೇಲೆ ಹತ್ತಿ ತುಳಿದು ದಾಂಧಲೆ ನಡೆಸಿದ್ದಾನೆ. ಕಡೆಗೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆ ವೀಡಿಯೋ ಇಲ್ಲಿದೆ...
Here is a video footage of goons attacking #TanushreeDutta car in 2008#NanaPatekar
— Abhi (@Nakshh_) October 1, 2018
ಏನಿದು ಆರೋಪ
ನಾನಾ ಪಾಟೇಕರ್ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಒಂಭತ್ತು ವರ್ಷಗಳ ಬಳಿಕ ತನುಶ್ರೀ ಆಪಾದಿಸಿದ್ದರು. 'ಆಶಿಕ್ ಬನಾಯಾ ಆಪ್ನೆ' ಚಿತ್ರದ ಮೂಲಕ ಸುದ್ದಿಯಾಗಿದ್ದ ಈ ಮಾಜಿ ಮಿಸ್ ಇಂಡಿಯಾ ಕೆಲ ವರಶಗಳಿಂದ ವಿದೇಶದಲ್ಲಿದ್ದರು. ಕಳೆದ ಜುಲೈನಲ್ಲಷ್ಟೇ ಭಾರತಕ್ಕೆ ಮರಳಿದ್ದ 34 ವರ್ಷದ ತನುಶ್ರೀ, ಪಾಟೇಕರ್ ವರ್ತನೆ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.