8ನೇ ಬಾರಿ ಸ್ಯಾಫ್ ಕಪ್‌ ಫುಟ್ಬಾಲ್ ಚಾಂಪಿಯನ್ ಆದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಛೆಟ್ರಿ

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದ ಸುನಿಲ್‌ ಛೆಟ್ರಿ (Sunil Chhetri) ಪಡೆ ಬಳಿಕ ನೇಪಾಳ ಹಾಗೂ ಮಾಲ್ಡೀವ್ಸ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿತ್ತು.

Written by - Puttaraj K Alur | Last Updated : Oct 17, 2021, 08:14 AM IST
  • ನೇಪಾಳವನ್ನು3-0 ಅಂತರದಿಂದ ಮಣಿಸಿ ಸ್ಯಾಫ್ ಚಾಂಪಿಯನ್ ಆದ ಭಾರತೀಯ ಫುಟ್ಬಾಲ್ ತಂಡ
  • ಸುನೀಲ್ ಛೆಟ್ರಿ ನಾಯಕತ್ವದಲ್ಲಿ 8ನೇ ಬಾರಿಗೆ ಸ್ಯಾಫ್ ಚಾಂಪಿಯನ್​ಶಿಪ್ ಪ್ರಶಸ್ತಿ ಎತ್ತಿಹಿಡಿದ ಭಾರತ
  • ಖ್ಯಾತ ಫುಟ್ಬಾಲ್ ಸ್ಟಾರ್ ಲಿಯೊನಲ್ ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಛೆಟ್ರಿ
8ನೇ ಬಾರಿ ಸ್ಯಾಫ್ ಕಪ್‌ ಫುಟ್ಬಾಲ್ ಚಾಂಪಿಯನ್ ಆದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಛೆಟ್ರಿ

ನವದೆಹಲಿ: ನೇಪಾಳವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಭಾರತೀಯ ಫುಟ್ಬಾಲ್ ತಂಡವು 8ನೇ ಬಾರಿಗೆ ಸ್ಯಾಫ್‌ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಶನಿವಾರ ನಡೆದ ಸ್ಯಾಫ್‌ ಕಪ್‌ (SAFF Cup) ಫುಟ್ಬಾಲ್‌ ಟೂರ್ನಿ (Football)ಯ ಫೈನಲ್‌ ಪಂದ್ಯದಲ್ಲಿ ನೇಪಾಳ ವಿರುದ್ಧ ಸುನೀಲ್ ಛೆಟ್ರಿ ನಾಯಕತ್ವದ ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿದೆ.

ಕೊನೆಯ 2 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಫುಟ್ಬಾಲ್ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದ ಸುನಿಲ್‌ ಛೆಟ್ರಿ (Sunil Chhetri) ಪಡೆ ಬಳಿಕ ನೇಪಾಳ ಹಾಗೂ ಮಾಲ್ಡೀವ್ಸ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿತ್ತು.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿದ್ದಕ್ಕೆ ಗರಂ ಆದ್ರಾ ವಿರಾಟ್ ಕೊಹ್ಲಿ...!

13 ಆವೃತ್ತಿಗಳಲ್ಲಿ 12ನೇ ಬಾರಿಗೆ ಫೈನಲ್‌ ಪ್ರವೇಶಿಸಿದ್ದ ಭಾರತವು ಫಿಫಾ ರ‍್ಯಾಂಕಿಂಗ್‌ (FIFA Rankings)ನಲ್ಲಿ 168ನೇ ಸ್ಥಾನದಲ್ಲಿರುವ ನೇಪಾಳವನ್ನು ಸೋಲಿಸುವ ಮೂಲಕ ದಾಖಲೆಯ 8ನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿಹಿಡಿದಿದೆ. ಇದೇ ವೇಳೆ ಸುನೀಲ್ ಛೆಟ್ರಿ 49ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಖ್ಯಾತ ಫುಟ್‌ಬಾಲ್‌ ಸ್ಟಾರ್‌ ಲಿಯೊನೆಲ್‌ ಮೆಸ್ಸಿಯ 80 ಅಂತಾರಾಷ್ಟ್ರೀಯ ಗೋಲುಗಳನ್ನು ಸರಿಗಟ್ಟಿದ ದಾಖಲೆಯನ್ನು ಬರೆದರು.

ದ್ವಿತೀಯಾರ್ಧದಲ್ಲಿ ಗೆದ್ದ ಭಾರತ

ಭಾರತದ ಪರ ದ್ವಿತೀಯಾರ್ಧದಲ್ಲಿ ಸುನಿಲ್ ಛೆಟ್ರಿ(Sunil Chhetri), ಸುರೇಶ್ ಸಿಂಗ್ ಮತ್ತು ಸಹಲ್ ಅಬ್ದುಲ್ ಸಮದ್ ಗೋಲು ಗಳಿಸಿದರು. ಸುರೇಶ್ 50ನೇ ನಿಮಿಷದಲ್ಲಿ ಮತ್ತು ಸಮದ್ 90ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ

ಮೊದಲಾರ್ಧದಲ್ಲಿ ಭಾರತ ತಂಡದ ಆಟಗಾರರು ಚೆಂಡಿನ ನಿಯಂತ್ರಣದ ವಿಷಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು, ಆದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಸುನಿಲ್ ಛೆಟ್ರಿ(Sunil Chhetri) ದ್ವಿತೀಯಾರ್ಧದ ಕೆಲವೇ ನಿಮಿಷಗಳಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ ಮುನ್ನಡೆ ನೀಡಿದರು. ಒಂದು ನಿಮಿಷದ ನಂತರ ಸುರೇಶ್ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ಇದನ್ನೂ ಓದಿ: T20 World Cup 2021: ಭಾರತಕ್ಕೆ ಟೂರ್ನಾಮೆಂಟ್ ಗೆಲ್ಲುವ ಪ್ರಬುದ್ಧತೆ ಬೇಕು-ಸೌರವ್ ಗಂಗೂಲಿ

ವಿದೇಶಿ ತರಬೇತುದಾರನೊಂದಿಗೆ ಯಶಸ್ಸು

ಮುಖ್ಯ ತರಬೇತುದಾರ ಇಗೊರ್ ಸ್ಟಿಮಾಕ್‌ನೊಂದಿಗೆ ಇದು ಭಾರತದ ಮೊದಲ ಪ್ರಶಸ್ತಿಯಾಗಿದೆ. ಜಿರಿ ಪೆಸೆಕ್ (1993) ಮತ್ತು ಸ್ಟೀಫನ್ ಕಾನ್ಸ್ಟಂಟೈನ್ (2015)ನಂತರ ಇವರು 3ನೇ ವಿದೇಶಿ ತರಬೇತುದಾರ ಎನಿಸಿಕೊಂಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಭಾರತೀಯ ತಂಡವು ಪ್ರಶಸ್ತಿಯನ್ನು ಗೆದ್ದಿತು.

ಅದ್ಭುತ ಪ್ರದರ್ಶನ ನೀಡಿದ ಮನ್ವೀರ್ ಸಿಂಗ್

ನೇಪಾಳ ವಿರುದ್ಧದ ಪಂದ್ಯದಲ್ಲಿ ಮನ್ವೀರ್ ಸಿಂಗ್ ಕೂಡ ಅದ್ಭುತ ಪ್ರದರ್ಶನ ನೀಡಿದರು. 52ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಕೂಡ ಗೋಲಿನ ಸಮೀಪಕ್ಕೆ ಬಂದರು, ಆದರೆ ಅವರ ಎಡಗಾಲಿನ ಹೊಡೆತವನ್ನು ನೇಪಾಳದ ಗೋಲ್ ಕೀಪರ್ ತಡೆದರು. ಭಾರತದ 3ನೇ ಗೋಲನ್ನು ಸಹಲ್ ಅಬ್ದುಲ್ ಸಮದ್ 90ನೇ ನಿಮಿಷದಲ್ಲಿ ಗಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News