ಚಂಡೀಗಢ: ನಕಲಿ ಐಟಿ ಪ್ರಮಾಣಪತ್ರಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೆ ನೀಡಲಾಗಿದ್ದ ಡಿಎಸ್ಪಿ ಹುದ್ದೆಯನ್ನು ಪಂಜಾಬ್ ಸರ್ಕಾರ ಹಿಂಪಡೆದಿದೆ.
ಉತ್ತರ ಪ್ರದೇಶದ ಮೀರತ್ ನ ಚೌಧರಿ ಸಿಂಗ್ ವಿವಿಯಲ್ಲಿ 2011ರಲ್ಲಿ ಪದವಿ ಮುಗಿಸಿದ್ದಾಗಿ ಪಡೆದಿದ್ದ ಪ್ರಮಾಣ ಪತ್ರಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯ ಜತೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹರ್ಮನ್ ಪ್ರೀತ್ ಕೌರ್ ಅವರಿಗೆ ನೀಡಲಾಗಿದ್ದ ಪದವಿ ಪ್ರಮಾಣಪತ್ರ ನಕಲಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಡಿಎಸ್ಪಿ ಹುದ್ದೆಯಿಂದ ಸರಕಾರ ಇಳಿಸಿದೆ.
ಕಳೆದ ಮಾರ್ಚ್ 1 ರಂದು ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿಯಾಗಿ ಸೇರ್ಪಡೆಯಾಗಿದ್ದರು. ಆದರೆ, ಪದವಿ ಪ್ರಮಾಣ ಪತ್ರಗಳು ನಕಲಿ ಆಗಿರುವುದರಿಂದ ಅವರ ವಿದ್ಯಾರ್ಹತೆಯನ್ನು 12ನೇ ತರಗತಿ ಮಾತ್ರ ಎಂದು ಪರಿಗಣಿಸಲಾಗಿದ್ದು, ನಿಯಮಾವಳಿಗಳ ಪ್ರಕಾರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ನೀಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಅವರನ್ನು ಕಾನ್ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡುವ ಸಾಧ್ಯತೆ ಇದೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಮಾನ್ ಪ್ರೀತ್ ತಂದೆ ಹರ್ಮಿಂದರ್ ಸಿಂಗ್ ಅವರು, ಹರ್ಮಾನ್ ಪ್ರೀತ್ ಕೌರ್ ಮೋಗಾದಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದರು. ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ನಂತರ ಆಕೆ ದೆಹಲಿ ಮತ್ತು ಮೀರತ್ನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಳು. ರೈಲ್ವೆ ಇಲಾಖೆಗೆ ಇದೇ ಅಂಕಪಟ್ಟಿಯನ್ನು ಸಲ್ಲಿಸಿದ್ದೆವು. ಹಾಗಿದ್ದ ಮೇಲೆ ಇದು ನಕಲಿ ಆಗಲು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.