ಇತ್ತೀಚಿನ ಬೆಳವಣಿಗೆಯಲ್ಲಿ, ಸೂರ್ಯನ ಬೆಳಕಿನ ಅವಶ್ಯಕತೆಯಿಲ್ಲದೆ ಕತ್ತಲಲ್ಲೂ ಛಾಯಾಚಿತ್ರ ತೆಗೆಯುವ ಸಾಮರ್ಥ್ಯ ಹೊಂದಿರುವ ಚಂದ್ರಯಾನ-2ರ ಆರ್ಬಿಟರ್, ಚಂದ್ರನ ಮೇಲ್ಮೈಯಲ್ಲಿರುವ ವಿಕ್ರಮ್ ಲ್ಯಾಂಡರ್‌ನ ಛಾಯಾಚಿತ್ರವನ್ನು ತೆಗೆದಿದೆ.
ಈ ನೂತನ ಛಾಯಾಚಿತ್ರವನ್ನು ಚಂದ್ರನ ರಾತ್ರಿಯ ಸಮಯದಲ್ಲಿ (ಲೂನಾರ್ ನೈಟ್) ಕ್ಲಿಕ್ಕಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಲ್ಯಾಂಡರ್‌ನ ವಿಶಿಷ್ಟವಾದ 'ಅನಾಗ್ಲಿಫ್' ಚಿತ್ರವನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಚಂದ್ರನ ಮೇಲೆ ರಾತ್ರಿ ಆರಂಭಗೊಂಡಿತು. ಅನಾಗ್ಲಿಫ್ ಚಿತ್ರ ಸೂಕ್ತ ಗಾಜಿನ ಮೂಲಕ ವೀಕ್ಷಿಸಿದಾಗ, ಚಂದ್ರನ ಮೂರು ಆಯಾಮಗಳ ಚಿತ್ರಣವನ್ನು (3D) ಒದಗಿಸುತ್ತದೆ.
2019ರಿಂದಲೂ ಕಾರ್ಯಾಚರಿಸುತ್ತಿರುವ, ಭಾರತದ ಲೂನಾರ್ ಆರ್ಬಿಟರ್‌ನಲ್ಲಿರುವ ಡ್ಯುಯಲ್ ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರೇಡಾರ್ (ಡಿಎಫ್ಎಸ್ಎಆರ್) ಉಪಕರಣ ಬುಧವಾರ, ಸೆಪ್ಟೆಂಬರ್ 6ರಂದು ಚಂದ್ರಯಾನ-3ರ ಲ್ಯಾಂಡರ್‌ನ ಛಾಯಾಚಿತ್ರವನ್ನು ಕ್ಲಿಕ್ಕಿಸಿದೆ.
ಸಿಂಥೆಟಿಕ್ ಅಪರ್ಚರ್ ರೇಡಾರ್ ಎನ್ನುವುದು ರೇಡಿಯೋ ತರಂಗಗಳನ್ನು ಬಳಸಿಕೊಂಡು, ಛಾಯಾಚಿತ್ರ ತೆಗೆಯುವ ಒಂದು ವಿಧಾನವಾಗಿದೆ.
ಡಿಎಫ್ಎಸ್ಎಆರ್: ಗ್ರಹಗಳ ರಹಸ್ಯಗಳ ಅನಾವರಣ ಸಾಮರ್ಥ್ಯ
ಡ್ಯುಯಲ್ ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರೇಡಾರ್ (ಡಿಎಫ್ಎಸ್ಎಆರ್) ಒಂದು ರೇಡಾರ್ ಉಪಕರಣವಾಗಿದ್ದು, ಎರಡು ಪ್ರತ್ಯೇಕ ಆವರ್ತನಗಳಲ್ಲಿ (ಫ್ರೀಕ್ವೆನ್ಸಿ) ಕಾರ್ಯಾಚರಿಸುತ್ತದೆ. ಅವು ಸಾಮಾನ್ಯವಾಗಿ ಎಲ್-ಬ್ಯಾಂಡ್ (20-30 ಗಿಗಾ ಹರ್ಟ್ಸ್) ಹಾಗೂ ಎಸ್ ಬ್ಯಾಂಡ್ (2-4 ಗಿಗಾ ಹರ್ಟ್ಸ್) ಆಗಿವೆ. ಈ ಸಾಮರ್ಥ್ಯದ ಕಾರಣದಿಂದ, ಉಪಕರಣ ಚಂದ್ರನಂತಹ ವಸ್ತುಗಳ ಮೇಲ್ಮೈಯನ್ನು ಒಂದು ಆವರ್ತನದ ರೇಡಾರ್‌ಗಿಂತ ಹೆಚ್ಚು ಸ್ಪಷ್ಟವಾಗಿ ಛಾಯಾಗ್ರಹಣ ನಡೆಸುತ್ತದೆ.
ಇದನ್ನೂ ಓದಿ- ಭಾರತಕ್ಕೆ ರಣಾಂಗಣದ ಮೇಲುಗೈ ನೀಡಲಿವೆ ಅಗ್ನಿ 5, ಅಗ್ನಿ 6 ಐಸಿಬಿಎಂ ಕ್ಷಿಪಣಿಗಳು
ಡಿಎಫ್ಎಸ್ಎಆರ್ ರೇಡಾರ್ ತಂತ್ರಜ್ಞಾನದ ಮೂಲಕ ಕಾರ್ಯಾಚರಿಸುವುದರಿಂದ, ಅದು ಸೂರ್ಯನ ಬೆಳಕಿನ ಮೇಲೆ ಅವಲಂಬಿತವಾಗದೆ ಛಾಯಾಗ್ರಹಣ ನಡೆಸುತ್ತದೆ. ಇದರಿಂದಾಗಿ ಡಿಎಫ್ಎಸ್ಎಆರ್‌ಗೆ ಚಂದ್ರನ ರಾತ್ರಿಯ ವೇಳೆಯಲ್ಲೂ ಅಲ್ಲಿದ್ದ ವಿಕ್ರಮ್ ಲ್ಯಾಂಡರ್‌ನ ಚಿತ್ರ ಸೆರೆಹಿಡಿಯಲು ಸಾಧ್ಯವಾಯಿತು.
ಡಿಎಫ್ಎಸ್ಎಆರ್ ರೇಡಾರ್ ಮಿಡಿತವನ್ನು ಹೊರಸೂಸಿ, ಗುರಿಯ ಮೇಲ್ಮೈಯಿಂದ ಬರುವ ಪ್ರತಿಧ್ವನಿಯನ್ನು ಸ್ವೀಕರಿಸುವ ಮೂಲಕ ಕಾರ್ಯಾಚರಿಸುತ್ತದೆ. ಈ ಪ್ರತಿಧ್ವನಿ ಮರಳಿ ಬರಲು ತೆಗೆದುಕೊಳ್ಳುವ ಸಮಯ ಆ ಮೇಲ್ಮೈ ಎಷ್ಟು ದೂರದಲ್ಲಿದೆ ಎಂಬ ಮಾಹಿತಿ ನೀಡುತ್ತದೆ. ಈ ಪ್ರತಿಧ್ವನಿ ಎಷ್ಟು ಶಕ್ತಿಶಾಲಿಯಾಗಿದೆ ಎನ್ನುವುದು ಮೇಲ್ಮೈಯ ದೊರಗುತನವನ್ನು ವಿವರಿಸುತ್ತದೆ.
ಎರಡು ಆವರ್ತನಗಳಲ್ಲಿ ಕಾರ್ಯಾಚರಿಸುವುದರಿಂದ, ಡಿಎಫ್ಎಸ್ಎಆರ್ ಯಾವುದೇ ಮೇಲ್ಮೈಯಲ್ಲಿರುವ ವಸ್ತುಗಳು ಯಾವ ರೀತಿಯವು ಎಂದು ಗುರುತಿಸುತ್ತದೆ. ಉದಾಹರಣೆಗೆ, ನೀರಿನ ರೇಡಾರ್ ಸಿಗ್ನೇಚರ್ ಕಲ್ಲಿನ ರೇಡಾರ್ ಸಿಗ್ನೇಚರ್‌ಗಿಂತ ಭಿನ್ನವಾಗಿರುತ್ತದೆ. ಇದರಿಂದಾಗಿ ಡಿಎಫ್ಎಸ್ಎಆರ್ ಚಂದ್ರನ ಮೇಲ್ಮೈಯಲ್ಲಿ ನೀರಿನ ಹರಡುವಿಕೆಯನ್ನು ಚಿತ್ರಿಸಲು ಸಾಧ್ಯವಾಗುತ್ತದೆ. ಇದು ಚಂದ್ರನ ಭೂವಿಜ್ಞಾನವನ್ನು ತಿಳಿಯಲು ಮತ್ತು ಚಂದ್ರ ಜೀವಿಗಳಿಗೆ ವಾಸಯೋಗ್ಯವೇ ಎಂದು ಅಧ್ಯಯನ ಮಾಡಲು ಅನುಕೂಲ ಕಲ್ಪಿಸುತ್ತದೆ.
ಡಿಎಫ್ಎಸ್ಎಆರ್ ಅನ್ನು ಚಂದ್ರನ ಉಪ ಮೇಲ್ಮೈಯ ಅಧ್ಯಯನ ನಡೆಸಲು ಬಳಸಲಾಗುತ್ತದೆ. ಎಲ್ ಬ್ಯಾಂಡಿನ ಹೆಚ್ಚು ಉದ್ದನೆಯ ರೇಡಾರ್ ತರಂಗಾಂತರ ಕಡಿಮೆ ಉದ್ದನೆಯ ಎಸ್ ಬ್ಯಾಂಡ್ ತರಂಗಾಂತರಕ್ಕಿಂತ ಚಂದ್ರನ ಮೇಲ್ಮೈಯಲ್ಲಿ ಹೆಚ್ಚು ಆಳಕ್ಕೆ ಕ್ರಮಿಸಬಲ್ಲದು. ಇದರಿಂದಾಗಿ ಡಿಎಫ್ಎಸ್ಎಆರ್ ಚಂದ್ರನ ಮೇಲ್ಮೈಯ ಆಳದಲ್ಲಿರುವ ಲಾವಾ ಕೊಳವೆಗಳು ಹಾಗೂ ಮಂಜುಗಡ್ಡೆಯ ಸಂಗ್ರಹಗಳನ್ನು ಗುರುತಿಸಬಲ್ಲದು.
ಡಿಎಫ್ಎಸ್ಎಆರ್ ಚಂದ್ರ ಮಾತ್ರವಲ್ಲದೆ, ಇತರ ಗ್ರಹಗಳ ಅಧ್ಯಯನ ನಡೆಸಲೂ ಸೂಕ್ತವಾದ ಉಪಕರಣವಾಗಿದೆ. ವಿಜ್ಞಾನಿಗಳು ಇದನ್ನು ಚಂದ್ರನ ಮೇಲ್ಮೈಯ ಚಿತ್ರಣ ರಚಿಸಲು, ಒಳಪದರದ ಅಧ್ಯಯನ ನಡೆಸಲು, ನೀರು ಮತ್ತು ಇತರ ಸಂಪನ್ಮೂಲಗಳಿಗಾಗಿ ಹುಡುಕಾಟ ನಡೆಸಲು ಬಳಸುತ್ತಾರೆ.
ಇದನ್ನೂ ಓದಿ- ಭವಿಷ್ಯದ ಅನ್ವೇಷಣೆಗಳ ಮೇಲಿನ ಪರಿಣಾಮಗಳು: ಯಶಸ್ವಿ ಲೂನಾರ್ ಹಾಪ್ ಪ್ರಯೋಗ ನಡೆಸಿದ ವಿಕ್ರಮ್ ಲ್ಯಾಂಡರ್
ಡಿಎಫ್ಎಸ್ಎಆರ್ ಉಪಕರಣದ ಕೆಲವು ಅನುಕೂಲತೆಗಳು:-
* ಇವುಗಳು ಒಂದು ಆವರ್ತನದ (ಫ್ರೀಕ್ವೆನ್ಸಿ) ರೇಡಾರ್‌ಗಳಿಂದ ಹೆಚ್ಚು ಸ್ಪಷ್ಟವಾಗಿ, ಮಾಹಿತಿಪೂರ್ಣವಾಗಿ ವಸ್ತುಗಳ ಮೇಲ್ಮೈಯ ಚಿತ್ರಣವನ್ನು ಗ್ರಹಿಸುತ್ತವೆ.
* ಇದು ಮೇಲ್ಮೈಯಲ್ಲಿರುವ ವಸ್ತುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತದೆ.
* ಮೇಲ್ಮೈಯಲ್ಲಿರುವ ವಸ್ತುಗಳು ಮಾತ್ರವಲ್ಲದೆ, ಆಳದಲ್ಲಿರುವ ಇತರ ವಸ್ತುಗಳು, ವೈಶಿಷ್ಟ್ಯಗಳನ್ನೂ ಇದು ಗುರುತಿಸಬಲ್ಲದು.
* ಇದೊಂದು ಹಗುರವಾದ, ಸಣ್ಣ ಗಾತ್ರದ ಉಪಕರಣವಾಗಿದ್ದು, ಇದನ್ನು ಸುಲಭವಾಗಿ ಬಾಹ್ಯಾಕಾಶ ನೌಕೆಯಲ್ಲಿ ನಿಯೋಜಿಸಬಹುದಾಗಿದೆ.
ಡಿಎಫ್ಎಸ್ಎಆರ್ ಗ್ರಹಗಳ ಅನ್ವೇಷಣೆಯಲ್ಲಿ ಒಂದು ಮಹತ್ವದ ಉಪಕರಣವಾಗಿದೆ. ಇದನ್ನು ಚಂದ್ರಯಾನ-2, ಮಾರ್ಸ್ ರಿಕನಯಸೆನ್ಸ್ ಆರ್ಬಿಟರ್ ಹಾಗೂ ಒಸಿರಿಸ್-ಆರ್‌ಇಎಕ್ಸ್ (OSIRIS-REx) ಸೇರಿದಂತೆ, ಹಲವು ಯೋಜನೆಗಳಲ್ಲಿ ಬಳಸಿಕೊಳ್ಳಲಾಗಿದೆ. ಈ ಉಪಕರಣ ಮುಂದಿನ ದಿನಗಳಲ್ಲಿ ಚಂದ್ರ ಮತ್ತು ಇತರ ಗ್ರಹಗಳ ಅನ್ವೇಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ನಿರೀಕ್ಷೆಗಳಿವೆ.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ, ಡಿಎಫ್ಎಸ್ಎಆರ್ ಚಂದ್ರನ ಮೇಲ್ಮೈಯನ್ನು ನಿರಂತರವಾಗಿ ಸ್ಕ್ಯಾನ್ ಮಾಡುತ್ತಿದ್ದು, ಪ್ರಮುಖವಾಗಿ ಚಂದ್ರನ ಧ್ರುವಗಳ ಅನ್ವೇಷಣೆ ನಡೆಸುವ ಮತ್ತು ಮಹತ್ವದ ಮಾಹಿತಿಗಳನ್ನು ಭೂಮಿಗೆ ಕಳುಹಿಸುವ ಉದ್ದೇಶ ಹೊಂದಿದೆ.
ಈ ಮೊದಲು ಇಸ್ರೋ ಲ್ಯಾಂಡಿಂಗ್ ತಾಣದ ಛಾಯಾಚಿತ್ರವನ್ನು ಹಂಚಿಕೊಂಡಿದ್ದು, ಅಲ್ಲಿ ವಿಕ್ರಮ್ ಲ್ಯಾಂಡರ್ ಸಹ ಕಾಣಿಸುತ್ತಿತ್ತು. ಆ ಚಿತ್ರವನ್ನು ಚಂದ್ರಯಾನ-2ರ ಆರ್ಬಿಟರ್ ಹೊಂದಿರುವ ಹೈ ರೆಸಲ್ಯೂಷನ್ ಕ್ಯಾಮರಾ (ಒಎಚ್ಆರ್‌ಸಿ) ಕ್ಲಿಕ್ಕಿಸಿತ್ತು.
ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸುವ ಮೊದಲೇ, ಚಂದ್ರಯಾನ-2ರ ಆರ್ಬಿಟರ್ ಹಾಗೂ ಚಂದ್ರಯಾನ-3ರ ಲ್ಯಾಂಡರ್ ಮಾಡ್ಯುಲ್ ನಡುವೆ ದ್ವಿಮುಖ ಸಂವಹನವನ್ನು ಜಾರಿಗೆ ತರಲಾಗಿತ್ತು.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ, ರಕ್ಷಣಾ ವಿಶ್ಲೇಷಕರು)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.