Vikram Sarabhai Life : ವಿಕ್ರಂ ಅಂಬಾಲಾಲ್ ಸಾರಾಭಾಯ್, ಸಾಮಾನ್ಯವಾಗಿ ವಿಕ್ರಂ ಸಾರಾಭಾಯ್ ಎಂದೇ ಭಾರತೀಯರಿಗೆ ಚಿರಪರಿಚಿತ ಹೆಸರು. ಅವರು ಭಾರತದ ಜನಪ್ರಿಯ ಭೌತಶಾಸ್ತ್ರಜ್ಞ ಮತ್ತು ಉದ್ಯಮಿಯಾಗಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ವಲಯಕ್ಕೆ ಅವರು ನೀಡಿದ ಕೊಡುಗೆಗಳಿಂದ ಅವರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಹೆಸರಾದರು. ಅವರು ಬಾಹ್ಯಾಕಾಶ, ಪರಮಾಣು ಶಕ್ತಿ, ಕಲೆ, ಶಿಕ್ಷಣ, ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆಗಳನ್ನು ಆರಂಭಿಸಿದ್ದರು. ಅವರ ಪ್ರಮುಖ ಕೊಡುಗೆಗಳಲ್ಲಿ ಬಾಹ್ಯಾಕಾಶ ಸಂಶೋಧನೆ ಮತ್ತು ಅಣುಶಕ್ತಿ ಕುರಿತ ಅಭಿವೃದ್ಧಿ ಕಾರ್ಯಗಳು ಪ್ರಮುಖವಾದವು. ಅವರು ಭಾರತ ಸರ್ಕಾರ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮಗಳಿಗೆ ಒಪ್ಪಿಗೆ ಸೂಚಿಸಲು ಮನ ಒಲಿಸುವಂತೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದರು. ಅವರು 1962ರಲ್ಲಿ ಭಾರತ ಸರ್ಕಾರ ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ (ಇನ್‌ಕೋಸ್ಪಾರ್) ಸಂಸ್ಥೆಯನ್ನು ಸ್ಥಾಪಿಸುವಂತೆ ಮಾಡಿದರು. ಅವರೇ ಸಮಿತಿಯ ಸ್ಥಾಪಕಾಧ್ಯಕ್ಷರಾಗಿದ್ದರು. ಇನ್‌ಕೋಸ್ಪಾರ್ 1969ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಂದು ಮರುನಾಮಕರಣ ಹೊಂದಿತು. ಅವರು ನೂತನ ಸಮಿತಿಯಲ್ಲೂ ಸಲಹಾಕಾರರಾಗಿದ್ದರು.
ವೈಯಕ್ತಿಕ ಜೀವನ
ವಿಕ್ರಂ ಸಾರಾಭಾಯ್ ಅವರ ತಂದೆ ಅಂಬಾಲಾಲ್ ಸಾರಾಭಾಯ್ ಓರ್ವ ಪ್ರಮುಖ ಉದ್ಯಮಿಯಾಗಿದ್ದರು. ಸಾರಾಭಾಯ್ ಅವರ ಕುಟುಂಬ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಬದ್ಧವಾಗಿತ್ತು. ಅವರು ಶ್ರಿಮಲ್ ಜೈನ್ ಸಮುದಾಯಕ್ಕೆ ಸೇರಿದವರಾಗಿದ್ದು, ಜೀವನಪರ್ಯಂತ ಜೈನ ಧರ್ಮವನ್ನು ಅನುಸರಿಸಿದ್ದರು. ಅವರು 1942ರಲ್ಲಿ ಶಾಸ್ತ್ರೀಯ ನೃತ್ಯಗಾತಿಯಾಗಿದ್ದ ಮೃಣಾಲಿನಿ ಅವರೊಡನೆ ವಿವಾಹವಾದರು. ಅವರಿಗೆ ಮಲ್ಲಿಕಾ ಎಂಬ ಮಗಳು ಮತ್ತು ಕಾರ್ತಿಕೇಯ ಸಾರಾಭಾಯ್ ಎಂಬ ಮಗ ಇದ್ದರು. ಅವರ ಪುತ್ರ ಕಾರ್ತಿಕೇಯ ವಿಜ್ಞಾನದಲ್ಲಿ ಸಕ್ರಿಯರಾಗಿದ್ದರು. ವಿಕ್ರಂ ಸಾರಾಭಾಯ್ ಡಿಸೆಂಬರ್ 30, 1971ರಂದು ಕೋವಲಮ್‌ನಲ್ಲಿ ಅಸುನೀಗಿದರು.
ಇದನ್ನೂ ಓದಿ : BrahMos : ನಿಮಗಿದು ಗೊತ್ತೆ..! ʼಬ್ರಹ್ಮೋಸ್ ಕ್ಷಿಪಣಿʼ ಶ್ರೀರಾಮನ ಬಿಲ್ಲಿನ ಹಾಗೆ ಗುರಿ ತಪ್ಪಲ್ಲ
ಶಿಕ್ಷಣ
ವಿಕ್ರಂ ಸಾರಾಭಾಯ್ ಅವರು ಆಗಸ್ಟ್ 12, 1919ರಂದು ಅಹ್ಮದಾಬಾದ್ ನಲ್ಲಿ ಜನಿಸಿದರು. ಅವರು ಅಹಮದಾಬಾದಿನ ಗುಜರಾತ್ ಕಾಲೇಜಿನಲ್ಲಿ ವ್ಯಾಸಂಗ ನಡೆಸಿದ್ದರು. 1940ರ ದಶಕದಲ್ಲಿ ಅವರು ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ನಡೆಸಿದರು. ಅಲ್ಲಿ ಅವರು ನ್ಯಾಚುರಲ್ ಸೈನ್ಸ್ ಅಧ್ಯಯನ ನಡೆಸಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅವರು ಭಾರತಕ್ಕೆ ಮರಳುವಂತಾಯಿತು. ಆದರೆ ಅವರ ಅಧ್ಯಯನದ ಆಸಕ್ತಿ ಮಾತ್ರ ಒಂದಿನಿತೂ ಕಡಿಮೆಯಾಗಿರಲಿಲ್ಲ. ಆದ್ದರಿಂದ ಅವರು ಭಾರತದಲ್ಲಿ ಕಾಸ್ಮಿಕ್ ಕಿರಣಗಳ ಕುರಿತ ಸಂಶೋಧನೆ ಆರಂಭಿಸಿದರು. ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನಲ್ಲಿ ಭೌತಶಾಸ್ತ್ರಜ್ಞ ಸರ್ ಚಂದ್ರಶೇಖರ್ ವೆಂಕಟ ರಾಮನ್ ಅವರ ಮಾರ್ಗದರ್ಶನ ಪಡೆಯುತ್ತಿದ್ದರು.
ಅವರು 1945ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪದವಿ ಪಡೆದು, "ಕಾಸ್ಮಿಕ್ ರೇ ಇನ್ವೆಸ್ಟಿಗೇಷನ್ಸ್ ಇನ್ ಟ್ರಾಪಿಕಲ್ ಲ್ಯಾಟಿಟ್ಯೂಡ್ಸ್" ಎಂಬ ಮಹಾಪ್ರಬಂಧ ರಚಿಸಿದರು. ಅವರು ಭಾರತಕ್ಕೆ ಮರಳಿದ ನಂತರ ಅಹಮದಾಬಾದ್‌ನಲ್ಲಿ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ ಆರಂಭಿಸಿದರು.
ವೃತ್ತಿಜೀವನ
ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (ಪಿಆರ್‌ಎಲ್) 1947ರಲ್ಲಿ ಅವರ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿತ್ತು. ಅಲ್ಲಿ ವಿಕ್ರಂ ಸಾರಾಭಾಯ್ ಕಾಸ್ಮಿಕ್ ಕಿರಣಗಳ ಅಧ್ಯಯನ ನಡೆಸುತ್ತಿದ್ದರು. 1947, ನವೆಂಬರ್ 11ರಂದು ಆ ಸಂಸ್ಥೆ ಎಂ ಜಿ ಸೈನ್ಸ್ ಇನ್ಸ್ಟಿಟ್ಯೂಟ್ ಎಂಬ ಹೆಸರಿನಿಂದ ಸ್ಥಾಪಿಸಲ್ಪಟ್ಟಿತು. ಅದು ಕರ್ಮಕ್ಷೇತ್ರ ಎಜುಕೇಶನ್ ಫೌಂಡೇಶನ್ ಮತ್ತು ಅಹಮದಾಬಾದ್ ಎಜುಕೇಶನ್ ಫೌಂಡೇಶನ್ ಜೊತೆ ಸಹಯೋಗ ಹೊಂದಿತ್ತು. ಸಂಸ್ಥೆ ಕಾಸ್ಮಿಕ್ ಕಿರಣಗಳ ಲಕ್ಷಣಗಳು ಮತ್ತು ಮೇಲಿನ ವಾತಾವರಣದ ಕುರಿತು ಸಂಶೋಧನೆ ನಡೆಸಿತ್ತು. ಮುಂದಿನ ದಿನಗಳಲ್ಲಿ ಸಂಶೋಧನಾ ಕೇಂದ್ರ ಸೈದ್ಧಾಂತಿಕ ಭೌತಶಾಸ್ತ್ರ ಮತ್ತು ರೇಡಿಯೋ ಭೌತಶಾಸ್ತ್ರದ ಕುರಿತು ಸಂಶೋಧನೆ ನಡೆಸಿತು. ಇದಕ್ಕಾಗಿ ಅಣು ಶಕ್ತಿ ಆಯೋಗ ಅನುದಾನ ಒದಗಿಸಿತ್ತು.
ವಿಕ್ರಂ ಸಾರಾಭಾಯ್ ಆಪರೇಶನ್ಸ್ ರಿಸರ್ಚ್ ಗ್ರೂಪ್ (ಓಆರ್‌ಜಿ) ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದ್ದರು. ಅದು ಭಾರತದ ಪ್ರಥಮ ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾಗಿತ್ತು.
ಭೌತಶಾಸ್ತ್ರಜ್ಞ ಆಗಿರುವುದರ ಜೊತೆಗೇ, ಉದ್ಯಮ ಕ್ಷೇತ್ರವೂ ವಿಕ್ರಂ ಸಾರಾಭಾಯ್ ಅವರ ಆಸಕ್ತಿಯ ಕ್ಷೇತ್ರವಾಗಿತ್ತು. ಅವರು ಅಹಮದಾಬಾದ್ ಜವಳಿ ಉದ್ಯಮದ ಸಂಶೋಧನಾ ಸಂಸ್ಥೆಯನ್ನು 1947ರಲ್ಲಿ ಆರಂಭಿಸಿದರು. ಭಾರತದಲ್ಲಿ ನಿರ್ವಹಣಾ ಶಾಸ್ತ್ರದ ಕುರಿತ ಉನ್ನತ ಶಿಕ್ಷಣ ಒದಗಿಸಬೇಕೆಂಬ ಅವರ ಕನಸಿನ ಪರಿಣಾಮವಾಗಿ ವಿಕ್ರಂ ಸಾರಾಭಾಯ್ 1962ರಲ್ಲಿ ಅಹಮದಾಬಾದ್‌ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಥಾಪಿಸಿದರು.
ಅವರು 1962ರಲ್ಲಿ ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ ಸ್ಥಾಪಿಸಲು ಮಹತ್ತರ ಪಾತ್ರ ವಹಿಸಿದ್ದರು. ಅದೇ ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಿ ರೂಪುಗೊಂಡಿದೆ. ಇಸ್ರೋ ಹೊರತುಪಡಿಸಿ, ವಿಕ್ರಂ ಸಾರಾಭಾಯ್ ತುಂಬಾ ಇಕ್ವೆಟೋರಿಯಲ್ ರಾಕೆಟ್ ಉಡಾವಣಾ ಕೇಂದ್ರದ ಸ್ಥಾಪನೆಗೂ ಕಾರಣರಾದರು.
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತಕ್ಕೆ ವಿಕ್ರಂ ಸಾರಾಭಾಯ್ ಅವರ ಬಹುದೊಡ್ಡ ಕೊಡುಗೆ. ಭಾರತದ ಅಣು ವಿಜ್ಞಾನ ಪಿತಾಮಹರಾದ ಡಾ. ಹೋಮಿ ಜಹಂಗೀರ್ ಭಾಭಾ ಅವರು ಭಾರತದಲ್ಲಿ ರಾಕೆಟ್ ಉಡಾವಣಾ ಕೇಂದ್ರದ ಸ್ಥಾಪನೆಗೆ ವಿಕ್ರಂ ಸಾರಾಭಾಯ್ ಅವರಿಗೆ ಬೆಂಬಲ ನೀಡಿದರು. ಡಾ. ಸಾರಾಭಾಯ್ ಅವರು ಅಮೆರಿಕಾದ ನಾಸಾದೊಡನೆ ನಡೆಸಿದ ಸಂವಾದದ ಪರಿಣಾಮವಾಗಿ ಸ್ಯಾಟಲೈಟ್ ಇನ್‌ಸ್ಟ್ರಕ್ಷನಲ್ ಟೆಲಿವಿಷನ್ ಎಕ್ಸ್‌ಪರಿಮೆಂಟ್ (ಎಸ್ಐಟಿಇ) ಸ್ಥಾಪನೆಯಾಯಿತು (ಜುಲೈ 1975 - ಜುಲೈ 1976).
1966ರಲ್ಲಿ ಹೋಮಿ ಭಾಭಾ ಅವರ ನಿಧನದ ಬಳಿಕ ವಿಕ್ರಂ ಸಾರಾಭಾಯ್ ಅಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು. ಅವರು ಅಣು ಶಕ್ತಿ ಸಂಶೋಧನಾ ಕ್ಷೇತ್ರದಲ್ಲಿ ಹೋಮಿ ಜಹಾಂಗೀರ್ ಭಾಭಾ ಅವರ ಸಂಶೋಧನೆಗಳನ್ನು ಮುಂದುವರಿಸಿದರು. ಅವರು ಭಾರತದಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳ ಸ್ಥಾಪನೆಯ ಹಿಂದಿನ ಶಕ್ತಿಯಾಗಿದ್ದರು. ಸಾರಾಭಾಯ್ ಅವರು ಪರಮಾಣು ತಂತ್ರಜ್ಞಾನದ ಅಭಿವೃದ್ಧಿಗಾಗಿ ರಕ್ಷಣಾ ಸಚಿವಾಲಯದೊಡನೆ ಕಾರ್ಯ ನಿರ್ವಹಿಸಿದ್ದರು.
ವಿಕ್ರಂ ಸಾರಾಭಾಯ್ ಅವರು ಉಪಗ್ರಹ ಸಂವಹನದ ಮೂಲಕ ಶಿಕ್ಷಣವನ್ನು ಭಾರತದ ಹಳ್ಳಿಗಳಿಗೂ ತಲುಪಿಸಬೇಕೆಂದು ಯೋಚಿಸಿದ್ದರು. ಅವರ ಪ್ರಯತ್ನಗಳ ಫಲವಾಗಿ ಭಾರತದ ಪ್ರಥಮ ಉಪಗ್ರಹವಾದ ಆರ್ಯಭಟದ ಉಡಾವಣೆ ನಡೆಯಿತು. ರಷ್ಯಾದ ಕೋಸ್ಮೋಡ್ರೋಮ್ ಮೂಲಕ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು.
ಇದನ್ನೂ ಓದಿ : Huge Discount.! ಕೇವಲ 12,699 ರೂಪಾಯಿಗೆ ಖರೀದಿಸಿ Laptop.!
ಸಾರಾಭಾಯ್ ಅವರ ಪ್ರಯತ್ನಗಳ ಫಲವಾಗಿ ಸ್ಥಾಪಿಸಲಾದ ಸಂಸ್ಥೆಗಳು:
1. ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (ಪಿಆರ್‌ಎಲ್), ಅಹಮದಾಬಾದ್.
2. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ), ಅಹಮದಾಬಾದ್.
3. ಕಮ್ಯುನಿಟಿ ಸೈನ್ಸ್ ಸೆಂಟರ್, ಅಹಮದಾಬಾದ್.
4. ಸ್ಪೇಸ್ ಅಪ್ಲಿಕೇಶನ್ ಸೆಂಟರ್, ಅಹಮದಾಬಾದ್.
5. ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್), ಹೈದರಾಬಾದ್.
6. ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್), ಜಾಡುಗುಡ, ಬಿಹಾರ.
7. ದರ್ಪಣ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್, ಅಹಮದಾಬಾದ್.
8. ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್, ತಿರುವನಂತಪುರಂ.
9. ಫಾಸ್ಟರ್ ಬ್ರೀಡರ್ ಟೆಸ್ಟ್ ರಿಯಾಕ್ಟರ್ (ಎಫ್‌ಬಿಟಿಆರ್), ಕಲ್ಪಾಕಂ.
10. ವೇರಿಯಬಲ್ ಎನರ್ಜಿ ಸೈಕ್ಲೋಟ್ರೋನ್ ಪ್ರಾಜೆಕ್ಟ್, ಕಲ್ಕತ್ತಾ.
ಗೌರವ ಮತ್ತು ಸನ್ಮಾನಗಳು
ಡಾ. ವಿಕ್ರಂ ಸಾರಾಭಾಯ್ ಅವರಿಗೆ ಭಾರತದ ಎರಡು ಉನ್ನತ ನಾಗರಿಕ ಪುರಸ್ಕಾರಗಳಾದ ಪದ್ಮ ಭೂಷಣ (1966) ಮತ್ತು ಪದ್ಮ ವಿಭೂಷಣ ಗೌರವಗಳನ್ನು ನೀಡಲಾಗಿದೆ. ಅವರಿಗೆ 1972ರಲ್ಲಿ ಮರಣೋತ್ತರವಾಗಿ ಪದ್ಮ ವಿಭೂಷಣ ನೀಡಲಾಯಿತು.
ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.