BrahMos : ನಿಮಗಿದು ಗೊತ್ತೆ..! ʼಬ್ರಹ್ಮೋಸ್ ಕ್ಷಿಪಣಿʼ ಶ್ರೀರಾಮನ ಬಿಲ್ಲಿನ ಹಾಗೆ ಗುರಿ ತಪ್ಪಲ್ಲ

ಬ್ರಹ್ಮೋಸ್ ಕ್ಷಿಪಣಿಯ ಇತ್ತೀಚಿನ ಆವೃತ್ತಿ ಶಬ್ದದ ವೇಗಕ್ಕಿಂತ ಏಳು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಆದ್ದರಿಂದ ಅದರ ಗುರಿಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬ್ರಹ್ಮೋಸ್ ಭಾರತ ಮತ್ತು ರಷ್ಯಾದ ಜಂಟಿ ಉದ್ಯಮವಾಗಿದ್ದು, ಇದು ಇಂತಹ ಅದ್ಭುತ ಆಯುಧವಾಗಿದ್ದರೂ, ರಷ್ಯನ್ ಸೇನೆ ಇನ್ನೂ ಬ್ರಹ್ಮೋಸ್ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆಗೊಳಿಸಿಲ್ಲ. ಪ್ರಸ್ತುತ ಭಾರತ ಮಾತ್ರವೇ ಬ್ರಹ್ಮೋಸ್ ಅನ್ನು ಉಪಯೋಗಿಸುತ್ತಿದೆ. ಯಾಕೆ ಹೀಗೆ? ನಾವು ಬ್ರಹ್ಮೋಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತಾ, ಕ್ರೂಸ್ ಕ್ಷಿಪಣಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ಗಮನಿಸೋಣ.

Written by - Zee Kannada News Desk | Edited by - Krishna N K | Last Updated : Dec 30, 2022, 03:41 PM IST
  • ರಷ್ಯನ್ ಸೇನೆ ಇನ್ನೂ ಬ್ರಹ್ಮೋಸ್ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆಗೊಳಿಸಿಲ್ಲ.
  • ಪ್ರಸ್ತುತ ಭಾರತ ಮಾತ್ರವೇ ಬ್ರಹ್ಮೋಸ್ ಅನ್ನು ಉಪಯೋಗಿಸುತ್ತಿದೆ.
  • ಬ್ರಹ್ಮೋಸ್ ಕ್ಷಿಪಣಿಯ ಇತ್ತೀಚಿನ ಆವೃತ್ತಿ ಶಬ್ದದ ವೇಗಕ್ಕಿಂತ ಏಳು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ.
BrahMos : ನಿಮಗಿದು ಗೊತ್ತೆ..! ʼಬ್ರಹ್ಮೋಸ್ ಕ್ಷಿಪಣಿʼ ಶ್ರೀರಾಮನ ಬಿಲ್ಲಿನ ಹಾಗೆ ಗುರಿ ತಪ್ಪಲ್ಲ title=

BrahMos missile : ಬ್ರಹ್ಮೋಸ್ ಕ್ಷಿಪಣಿಯ ಇತ್ತೀಚಿನ ಆವೃತ್ತಿ ಶಬ್ದದ ವೇಗಕ್ಕಿಂತ ಏಳು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಆದ್ದರಿಂದ ಅದರ ಗುರಿಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬ್ರಹ್ಮೋಸ್ ಭಾರತ ಮತ್ತು ರಷ್ಯಾದ ಜಂಟಿ ಉದ್ಯಮವಾಗಿದ್ದು, ಇದು ಇಂತಹ ಅದ್ಭುತ ಆಯುಧವಾಗಿದ್ದರೂ, ರಷ್ಯನ್ ಸೇನೆ ಇನ್ನೂ ಬ್ರಹ್ಮೋಸ್ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆಗೊಳಿಸಿಲ್ಲ. ಪ್ರಸ್ತುತ ಭಾರತ ಮಾತ್ರವೇ ಬ್ರಹ್ಮೋಸ್ ಅನ್ನು ಉಪಯೋಗಿಸುತ್ತಿದೆ. ಯಾಕೆ ಹೀಗೆ? ನಾವು ಬ್ರಹ್ಮೋಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತಾ, ಕ್ರೂಸ್ ಕ್ಷಿಪಣಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ಗಮನಿಸೋಣ.

ನಾವೆಲ್ಲರೂ ರಾಮನ ಬಿಲ್ಲಿನ ಬಗ್ಗೆ ಕೇಳಿದ್ದೇವೆ. ಭಗವಂತ ಶ್ರೀರಾಮ ಪ್ರಯೋಗಿಸಿದ ಬಾಣಗಳು ಶತ್ರುಗಳು ಬಚ್ಚಿಟ್ಟುಕೊಂಡಿದ್ದರೂ ಅವರನ್ನು ನಾಶಪಡಿಸಿ, ಬಳಿಕ ರಾಮನ ಬತ್ತಳಿಕೆಗೆ ಮರಳಿ ಬರುತ್ತಿದ್ದವಂತೆ. ಈ ಪುರಾಣ ಕಥೆ ಈಗ ನಿಜವಾದರೆ ಹೇಗಿರುತ್ತದೆ? ಕ್ರೂಸ್ ಕ್ಷಿಪಣಿಗಳು ಇದಕ್ಕಾಗಿಯೇ ನಿರ್ಮಿತವಾಗಿರುತ್ತವೆ. ಆದರೆ ಉಡಾವಣೆಗೊಳಿಸಿದ ಕ್ಷಿಪಣಿಗಳು ಮರಳಿ ಮೂಲಸ್ಥಾನಕ್ಕೆ ಬರಲಾಗುವುದಿಲ್ಲ ಅಷ್ಟೇ.

ಪ್ರಸ್ತುತ ಎರಡು ಮಾದರಿಯ ಕ್ಷಿಪಣಿಗಳಿದ್ದು, ಕ್ರಮವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಕ್ರೂಸ್ ಕ್ಷಿಪಣಿಗಳಾಗಿವೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳು ಪ್ರಯೋಗಿಸಿದ ಬಾಣಗಳಂತೆ ಕಾರ್ಯ ನಿರ್ವಹಿಸುತ್ತವೆ. ಅದನ್ನು ಭೂಮಿಯ ಮೇಲ್ಮೈಗೆ ಪ್ರಯೋಗಿಸಿದ ಬಳಿಕ ಸಿಡಿತಲೆ ಬ್ಯಾಲಿಸ್ಟಿಕ್ ಕ್ಷಿಪಣಿ ರಾಕೆಟ್‌ನಿಂದ ಕಳಚಲ್ಪಟ್ಟು ತನ್ನ ಗುರಿಯ ಕಡೆ ಸಾಗುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಖಂಡಾಂತರ ಚಲನೆ ನಡೆಸಿ, ಗುರಿಯನ್ನು ನಾಶಪಡಿಸುವ ಸಾಮರ್ಥ್ಯವಿದೆ. ಆದರೆ ಬ್ಯಾಲಿಸ್ಟಿಕ್ ಕ್ಷಿಪಣಿಗೆ ತನ್ನ ಪೂರ್ವ ನಿರ್ಧರಿತ ಗುರಿಯಿಂದ ಬೇರೆಡೆಗೆ ಚಲಿಸುವ ಸಾಮರ್ಥ್ಯವಿಲ್ಲ. ಆದ್ದರಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಟೂ ಡೈಮೆನ್ಷನಲ್ (ಎರಡು ಆಯಾಮದ) ಕ್ಷಿಪಣಿ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Good News: ಜಿಯೋ ಬಳಕೆದಾರರಿಗೆ ಭಾರಿ ಗುಡ್ ನ್ಯೂಸ್ ನೀಡಿದ ಮುಕೇಶ್ ಅಂಬಾನಿ

ಇನ್ನೊಂದೆಡೆ ಕ್ರೂಸ್ ಕ್ಷಿಪಣಿಗಳು ಪೂರ್ವ ನಿರ್ಧರಿತ ಗುರಿಯೆಡೆಗೆ ಸಾಗುವುದು ಮಾತ್ರವೇ ಅಲ್ಲದೆ, ಅವುಗಳನ್ನು ಅಟ್ಟಿಸಿಕೊಂಡು ಹೋಗಿ ನಾಶಪಡಿಸಬಲ್ಲವು. ಈ ಮೂರು ಆಯಾಮದ ಚಲನೆ ಒಂದು ಏರ್‌ಕ್ರಾಫ್ಟ್ ಪ್ರೊಪಲ್ಷನ್ ವ್ಯವಸ್ಥೆಯ ಮೂಲಕ ಸಾಧ್ಯವಾಗುತ್ತದೆ. ಅದರ ಏರೋಡೈನಾಮಿಕ್ ನಿಯಂತ್ರಣಕ್ಕಾಗಿ ಸಂಕೀರ್ಣವಾದ ಮಾರ್ಗದರ್ಶನ ವ್ಯವಸ್ಥೆ ಮತ್ತು ಸಣ್ಣ ರೆಕ್ಕೆಗಳೂ ಇರುತ್ತವೆ. ಸರಳವಾಗಿ ಹೇಳುವುದಾದರೆ, ಕ್ರೂಸ್ ಕ್ಷಿಪಣಿಗಳು ಪೈಲಟ್ ಇಲ್ಲದ ಸಣ್ಣ ವಿಮಾನ ಇದ್ದಂತಿರುತ್ತದೆ.

ಭಾರತ 1980ರ ದಶಕದಲ್ಲಿ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ತನ್ನ ಕ್ಷಿಪಣಿ ಕಾರ್ಯಕ್ರಮಗಳನ್ನು ಆರಂಭಿಸಿತು. ಅವರು ಆ ಬಳಿಕ ಭಾರತದ ಮಿಸೈಲ್ ಮ್ಯಾನ್ ಎಂದೇ ಪ್ರಸಿದ್ಧರಾದರು. ಭಾರತದ ಮೊದಲ ಸ್ವದೇಶಿ ಕ್ಷಿಪಣಿ, ಪೃಥ್ವಿ 1 ಇದೇ ಕಾರ್ಯಕ್ರಮದ ಅಂಗವಾಗಿ ನಿರ್ಮಾಣಗೊಂಡಿತು. ಪೃಥ್ವಿ ಕ್ಷಿಪಣಿಯನ್ನು ಮೂಲವಾಗಿಟ್ಟುಕೊಂಡು ಭಾರತ ಬೇರೆ ಬೇರೆ ವರ್ಗಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳ ನಿರ್ಮಾಣ ನಡೆಸಿತು. 1990ರ ದಶಕದ ಕೊಲ್ಲಿ ಯುದ್ಧ ಭಾರತಕ್ಕೆ ಕ್ರೂಸ್ ಕ್ಷಿಪಣಿಗಳ ಮಹತ್ವವನ್ನು ಅರ್ಥ ಮಾಡಿಸಿತು.

ಸಮುದ್ರದಲ್ಲಿದ್ದ ಅಮೆರಿಕಾದ ಯುದ್ಧ ನೌಕೆಗಳು ಇರಾಕ್ ಮೇಲೆ ಕ್ಷಿಪಣಿ ದಾಳಿ ನಡೆಸಿದವು. ಇರಾಕಿನ ಕ್ಷಿಪಣಿ ವ್ಯವಸ್ಥೆಗಳು, ನಿಯಂತ್ರಣ ಕೇಂದ್ರಗಳು, ವಿದ್ಯುಚ್ಛಕ್ತಿ ಕೇಂದ್ರಗಳು, ಅಧ್ಯಕ್ಷರ ಅರಮನೆ ಎಲ್ಲವನ್ನೂ ಅಮೆರಿಕಾದ ಟೋಮಹಾಕ್ ಕ್ರೂಸ್ ಕ್ಷಿಪಣಿಗಳು ನಾಶಪಡಿಸಿದವು. ಈ ಕ್ಷಿಪಣಿಗಳು ನೆಲಮಟ್ಟದಿಂದ ಕೆಲವು ಮೀಟರ್‌ಗಳಷ್ಟೇ ಮೇಲ್ಮಟ್ಟದಲ್ಲಿ ಹಾರಾಟ ನಡೆಸುವುದರಿಂದ ಅವುಗಳನ್ನು ಸಾಮಾನ್ಯ ರೇಡಾರ್ ಮೂಲಕ ಗುರುತಿಸಲು ಸಾಧ್ಯವಿರಲಿಲ್ಲ. ಇರಾಕಿನ ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದ ಅಮೆರಿಕಾ ಯುದ್ಧದಲ್ಲಿ ಅಗತ್ಯ ಮೇಲುಗೈ ಸಂಪಾದಿಸಿತು. ಈ ಕಾರ್ಯತಂತ್ರ ಭಾರತಕ್ಕೂ ಕ್ರೂಸ್ ಕ್ಷಿಪಣಿ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಪ್ರೇರೇಪಿಸಿತು.

ಇದನ್ನೂ ಓದಿ: Huge Discount.! ಕೇವಲ 12,699 ರೂಪಾಯಿಗೆ ಖರೀದಿಸಿ Laptop.!

ಇದಕ್ಕಾಗಿ ಭಾರತ ತನ್ನ ಮಿತ್ರ ರಷ್ಯಾದ ಸಹಕಾರ ಕೇಳಿತು. ಆ ಅವಧಿಯಲ್ಲಿ ರಷ್ಯಾ ಹೊಂದಿದ್ದ ಅತ್ಯಾಧುನಿಕ ಕ್ರೂಸ್ ಕ್ಷಿಪಣಿಗಳೆಂದರೆ ಪಿ 800 ಒನಿಕ್ಸ್/ಯಾಖೊಂತ್. ಈ ಕ್ಷಿಪಣಿಗಳನ್ನು ನೇರವಾಗಿ ಖರೀದಿಸುವ ಬದಲು, ಭಾರತ ಕ್ರೂಸ್ ಕ್ಷಿಪಣಿಯ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಆಸಕ್ತಿ ಹೊಂದಿತ್ತು. ಸೋವಿಯತ್ ಒಕ್ಕೂಟ ಪತನ ಹೊಂದಿದ ಬಳಿಕ, ರಷ್ಯಾ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು. ಆಗ ರಷ್ಯಾಗೆ ಭಾರತದ ಸಹಕಾರದ ಅಗತ್ಯವಿತ್ತು.

ಇದರ ಪರಿಣಾಮವಾಗಿ ಭಾರತ ಮತ್ತು ರಷ್ಯಾಗಳು ಜಂಟಿ ಸಹಯೋಗದೊಂದಿಗೆ ಬ್ರಹ್ಮೋಸ್ ಏರೋಸ್ಪೇಸ್ ಆರಂಭಿಸಿದವು. ಇದರ ಗುರಿ ಪಿ 800 ಗಿಂತಲೂ ಆಧುನಿಕವಾದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ನಿರ್ಮಾಣಗೊಳಿಸುವುದಾಗಿತ್ತು. ಬ್ರಹ್ಮೋಸ್ ಎಂಬ ಹೆಸರು ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೋಸ್ಕೋವಾ ನದಿಗಳ ಹೆಸರಿನಿಂದ ಬಂದಿತ್ತು. ರಷ್ಯಾ ಬ್ರಹ್ಮೋಸ್‌ನ ಪ್ರೊಪಲ್ಷನ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದರೆ, ಭಾರತ ಅದರ ಗೈಡೆನ್ಸ್ ವ್ಯವಸ್ಥೆ ಅಭಿವೃದ್ಧಿ ಪಡಿಸಿತು.

ಬ್ರಹ್ಮೋಸ್ ಕ್ಷಿಪಣಿಯ ಮೊದಲ ಪರೀಕ್ಷಾ ಪ್ರಯೋಗ 2001ರಲ್ಲಿ ನಡೆಯಿತು. ಅದು ಅಧಿಕೃತವಾಗಿ 2006ರಲ್ಲಿ ಸೇನೆಗೆ ಸೇರ್ಪಡೆಗೊಂಡಿತು. ಆ ಸಂದರ್ಭದಲ್ಲಿ ಭಾರತ ಎಂಟಿಸಿಆರ್‌ನ ಭಾಗವಾಗಿರಲಿಲ್ಲ. ಆದ್ದರಿಂದ ಕ್ಷಿಪಣಿಯ ಕಾರ್ಯ ವ್ಯಾಪ್ತಿ ಕೇವಲ 290 ಕಿಲೋಮೀಟರ್‌ಗೆ ಸೀಮಿತವಾಗಿತ್ತು. ಎಂಟಿಸಿಆರ್ ನಿಯಮಗಳ ಪ್ರಕಾರ ಸದಸ್ಯನಲ್ಲದ ರಾಷ್ಟ್ರ 300 ಕಿಲೋಮೀಟರ್‌ಗಿಂತ ಹೆಚ್ಚಿನ ವ್ಯಾಪ್ತಿ ಹೊಂದಿರುವ ಕ್ಷಿಪಣಿ ಪಡೆಯುವಂತಿರಲಿಲ್ಲ. ಇದು 2016ರಲ್ಲಿ ಭಾರತ ಎಂಟಿಸಿಆರ್ ಸದಸ್ಯನಾದ ಬಳಿಕ ಬದಲಾಯಿತು.

ಇಂದು ಭಾರತ 600 ಕಿಲೋಮೀಟರ್‌ಗಿಂತ ಹೆಚ್ಚು ವ್ಯಾಪ್ತಿ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಹೊಂದಿದೆ. ಈ ಕ್ಷಿಪಣಿಗಳು 8.4 ಮೀಟರ್ ಉದ್ದವಾಗಿದ್ದು, 60 ಸೆಂಟಿಮೀಟರ್ ಅಗಲ ಮತ್ತು 3 ಟನ್ ತೂಕ ಹೊಂದಿವೆ. ಇವುಗಳು ಶಬ್ದದ ವೇಗದ ಎರಡು ಪಟ್ಟು ಹೆಚ್ಚು ವೇಗದಲ್ಲಿ ಚಲಿಸಬಲ್ಲವು. 200-300 ಕೆಜಿ ತೂಕದ ನ್ಯೂಕ್ಲಿಯರ್ ಸಿಡಿತಲೆಗಳನ್ನೂ ಹೊತ್ತು ಸಾಗಬಲ್ಲವು. ಈಗ ಭಾರತದ ಬಳಿ ಭೂಮಿ, ಸಾಗರ ಮತ್ತು ಗಾಳಿಯಿಂದ ಉಡಾಯಿಸಬಲ್ಲ ಬ್ರಹ್ಮೋಸ್ ಕ್ಷಿಪಣಿಯ ಆವೃತ್ತಿಗಳಿವೆ.

ಈಶಾನ್ಯ ಭಾರತ, ಅದರಲ್ಲೂ ಅರುಣಾಚಲ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರತೀಯ ಸೇನೆ ತನ್ನ ಬಹುತೇಕ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಿದೆ. ಭಾರತೀಯ ವಾಯುಪಡೆ ತನ್ನ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳನ್ನು ಸುಖೋಯಿ ಯುದ್ಧ ವಿಮಾನಗಳಿಗೆ ಅಳವಡಿಸಿದೆ. ಬ್ರಹ್ಮೋಸ್ ಕ್ಷಿಪಣಿ ಮತ್ತು ಸುಖೋಯಿ ಯುದ್ಧ ವಿಮಾನಗಳು ಅತ್ಯಂತ ಪ್ರಬಲ ಸಂಯೋಜನೆಯಾಗಿವೆ. ಭಾರತೀಯ ನೌಕಾಪಡೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಯುದ್ಧ ನೌಕೆಗಳು ಮತ್ತು ಸಬ್‌ಮರೀನ್ ಗಳಿಂದ ಉಡಾಯಿಸಲು ಸಮರ್ಥವಾಗಿದೆ.

ಇಂದು ಇದು ಜಗತ್ತಿನ ಅತ್ಯಾಧುನಿಕ ಮತ್ತು ಅತ್ಯಂತ ವೇಗದ ಆ್ಯಂಟಿ ಶಿಪ್ ಕ್ರೂಸ್ ಕ್ಷಿಪಣಿಯಾಗಿದೆ. ಸಬ್‌ಮರೀನ್ ನಿಂದ ಉಡಾವಣೆಗೊಳಿಸಬಲ್ಲ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಹೊಂದಿರುವ ಏಕೈಕ ರಾಷ್ಟ್ರ ಭಾರತವಾಗಿದೆ. ಬ್ರಹ್ಮೋಸ್ ಕ್ಷಿಪಣಿಗಳು ಅತ್ಯಂತ ಸಮರ್ಥವಾಗಿದ್ದರೂ, ರಷ್ಯನ್ ಸೇನೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ, ಬ್ರಹ್ಮೋಸ್ ಕ್ಷಿಪಣಿಯ ತಂತ್ರಜ್ಞಾನ ರಷ್ಯಾದ ಸ್ವಂತ ಪಿ 800 ಓನಿಕ್ಸ್ ಕ್ಷಿಪಣಿಯ ಆಧಾರಿತವಾಗಿದೆ. ರಷ್ಯಾ ಭಾರತಕ್ಕೆ ಸಹಾಯ ಮಾಡುವ ಉದ್ದೇಶದಿಂದ ಈ ಜಂಟಿ ಉದ್ಯಮಕ್ಕೆ ಒಪ್ಪಿಗೆ ಸೂಚಿಸಿತ್ತು.

ಒಂದು ವೇಳೆ ಅದು ಭಾರತದಿಂದಲೇ ಆದರೂ, ರಷ್ಯಾದಂತಹ ಪ್ರಮುಖ ಆಯುಧ ರಫ್ತುದಾರ ರಾಷ್ಟ್ರಕ್ಕೆ ತನ್ನದೇ ತಂತ್ರಜ್ಞಾನದ ಆಧಾರಿತ ಕ್ಷಿಪಣಿಯನ್ನು ಆಮದು ಮಾಡಿಕೊಳ್ಳುವುದು ಸೂಕ್ತವಾಗಿರುವುದಿಲ್ಲ. ಪ್ರಸ್ತುತ ಭಾರತ ಬ್ರಹ್ಮೋಸ್ ಕ್ಷಿಪಣಿಯ ಹೈಪರ್‌ಸಾನಿಕ್ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದ್ದು, ಕ್ಷಿಪಣಿ ಇನ್ನಷ್ಟು ಪ್ರಾಮುಖ್ಯತೆ ಪಡೆಯಲಿದೆ. ಭಾರತ ಶಬ್ದದ ವೇಗದ ಏಳು ಪಟ್ಟು ಹೆಚ್ಚಿನ ವೇಗದಲ್ಲಿ ಸಾಗಬಲ್ಲ ಈ ಕ್ಷಿಪಣಿಯ ಅಂತಿಮ ಹಂತದ ನಿರ್ಮಾಣ ಕಾರ್ಯಗಳನ್ನು ನಡೆಸುತ್ತಿದೆ.

ಭಾರತದ ಬಳಿ ಈಗಾಗಲೇ ಆಧುನಿಕ ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಶೌರ್ಯ (ಮ್ಯಾಕ್ 7.5) ಇದೆ. ಆದರೆ ಅದು ಭೂಮಿಯಿಂದ ಭೂಮಿಗೆ ದಾಳಿ ನಡೆಸಬಲ್ಲದಾಗಿದ್ದು, ಭೂಸೇನೆಗೆ ಮಾತ್ರ ಬಳಕೆಯಾಗುತ್ತದೆ. ಇಂದು ಭಾರತಕ್ಕೆ ಬ್ರಹ್ಮೋಸ್ ಕೇವಲ ಇನ್ನೊಂದು ಆಯುಧವಲ್ಲ. ಅದು ಚೀನಾದ ಆಕ್ರಮಣಶೀಲತೆಗೆ ಒಂದು ಎಚ್ಚರಿಕೆಯಾಗಿದೆ. ಇದೇ ಕಾರಣದಿಂದ ಚೀನಾದೊಡನೆ ಗಡಿ ತಕರಾರು ಹೊಂದಿರುವ ವಿಯೆಟ್ನಾಂ ಮತ್ತು ಫಿಲಿಪೈನ್ಸ್ ರಾಷ್ಟ್ರಗಳಿಗೆ ಭಾರತ ಬ್ರಹ್ಮೋಸ್ ಕ್ಷಿಪಣಿ ಒದಗಿಸುವ ಪ್ರಯತ್ನ ನಡೆಸುತ್ತಿದೆ. ಬ್ರಹ್ಮೋಸ್ ಒಂದು ಯುದ್ಧಕ್ಕೆ ಆಹ್ವಾನ ನೀಡುವ ಆಯುಧವಲ್ಲ. ಬದಲಿಗೆ ಭಾರತದ ಹಿತಾಸಕ್ತಿಗಳನ್ನು ರಕ್ಷಿಸಲು ಇರುವ ಕಾರ್ಯತಂತ್ರದ ಆಯುಧವಾಗಿದೆ. ಇದೇ ಕಾರಣದಿಂದ ಬ್ರಹ್ಮೋಸ್ ಭಾರತದ ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರ ಎಂದು ಯಾವ ಅನುಮಾನವೂ ಇಲ್ಲದೆ ಹೇಳಬಹುದು.

ರಷ್ಯಾದ ಸುದ್ದಿ ಸಂಸ್ಥೆ ಟಿಎಸಿಸಿ ಪ್ರಕಾರ, ಫಿಲಿಪೈನ್ಸ್ ಹಾಗೂ ವಿಯೆಟ್ನಾಂ ನಂತರ ಮಯನ್ಮಾರ್ ಸಹ ಬ್ರಹ್ಮೋಸ್ ಕ್ಷಿಪಣಿಯ ಆ್ಯಂಟಿ ಶಿಪ್ ಆವೃತ್ತಿಯನ್ನು ತನ್ನ ಸೇನೆಗೆ ಸೇರ್ಪಡೆಗೊಳಿಸಲು ಬಯಸುತ್ತಿದೆ. ಫಿಲಿಪೈನ್ಸ್ 3 ಬ್ರಹ್ಮೋಸ್ ಬ್ಯಾಟರಿ ಖರೀದಿಸುತ್ತಿದೆ. ಬ್ರಹ್ಮೋಸ್ ಬ್ಯಾಟರಿಯಲ್ಲಿ 4 ಮೊಬೈಲ್ ಸ್ವಾಯತ್ತ ಲಾಂಚರ್‌ಗಳಿವೆ. ಪ್ರತಿಯೊಂದರಲ್ಲೂ ಮೂರು ಕ್ಷಿಪಣಿಗಳಿರಲಿದ್ದು, 30 ಸೆಕೆಂಡುಗಳ ಅವಧಿಯಲ್ಲಿ 12 ಗುರಿಗಳ ಮೇಲೆ 12 ಕ್ಷಿಪಣಿಗಳನ್ನು ಉಡಾಯಿಸಲು ಸಾಧ್ಯವಾಗುತ್ತದೆ.

ಭಾರತ ನೂತನ ಬ್ರಹ್ಮೋಸ್ 2 ಆವೃತ್ತಿಯ ಮೇಲ್ದರ್ಜೆಗೇರಿಸಲು ಉದ್ದೇಶಿಸಿದ್ದು, ಇದು ಒಂದು ಹೈಪರ್‌ಸಾನಿಕ್ ಕ್ಷಿಪಣಿಯಾಗಿದ್ದು, ಸ್ಕ್ರಾಮ್ ಜೆಟ್ ಇಂಜಿನ್ ಜೊತೆಗೆ ಮ್ಯಾಕ್ 7 (ಗಂಟೆಗೆ 8575 ಕಿಲೋಮೀಟರ್) ವೇಗದಲ್ಲಿ ಚಲಿಸಲಿದೆ. ಇದನ್ನು ನೆಲದಿಂದ, ನೌಕೆಯಿಂದ ಮತ್ತು ಸಬ್‌ಮರೀನ್ ನಿಂದ ಉಡಾಯಿಸಬಹುದು. ಪ್ರಸ್ತುತ ಬ್ರಹ್ಮೋಸ್ ಕ್ಷಿಪಣಿಯನ್ನು ರಾಮ್ ಜೆಟ್ ಇಂಜಿನ್ ಹೊಂದಿರುವ ಸು 30 ಎಂಕೆಐ ವಿಮಾನದಿಂದ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಇದು ಅತ್ಯಂತ ವೇಗ, ನಿಖರ ಮತ್ತು ವಿಧ್ವಂಸಕ ಕ್ಷಿಪಣಿ ಎನ್ನುವುದು ಸಾಬೀತಾಗಿದೆ.

ಸಮುದ್ರದಿಂದ ಉಡಾಯಿಸಬಲ್ಲ ಬ್ರಹ್ಮೋಸ್ ಕ್ಷಿಪಣಿಯ ನಾಲ್ಕು ಆವೃತ್ತಿಗಳಿವೆ.

  1. ಆ್ಯಂಟಿ ಶಿಪ್ ಆವೃತ್ತಿಯನ್ನು ಯುದ್ಧ ನೌಕೆಗಳಿಂದ ಉಡಾಯಿಸಬಹುದು.
  2. ಯುದ್ಧ ನೌಕೆಗಳಿಂದ ಭೂಮಿಯ ಮೇಲಿನ ದಾಳಿಗೆ ಪ್ರಯೋಗಿಸುವ ಆವೃತ್ತಿ.

ಈ ಎರಡೂ ಆವೃತ್ತಿಗಳನ್ನು ಈಗಾಗಲೇ ಭಾರತೀಯ ನೌಕಾಪಡೆ ಉಪಯೋಗಿಸುತ್ತಿದೆ.

  1. ಸಬ್‌ಮರೀನ್ ನಿಂದ ಪ್ರಯೋಗಿಸುವ ಆ್ಯಂಟಿ ಶಿಪ್ ಆವೃತ್ತಿ.
  2. ಸಬ್‌ಮರೀನ್ ನಿಂದ ಪ್ರಯೋಗಿಸುವ, ಭೂಮಿಯ ಮೇಲಿನ ದಾಳಿ ನಡೆಸುವ ಆವೃತ್ತಿ.

ಭಾರತೀಯ ನೌಕಾಪಡೆ ಐಎನ್ಎಸ್ ರಣವೀರ್ ಮತ್ತು ಐಎನ್ಎಸ್ ರಣ್‌ವಿಜಯ್ ನಲ್ಲಿ 8 ಕ್ಷಿಪಣಿ ಲಾಂಚರ್‌ಗಳನ್ನು ಅಳವಡಿಸಿದೆ. ತಲ್ವಾರ್ ಕ್ಲಾಸ್ ಫ್ರಿಗೇಟ್‌ಗಳಾದ ಐಎನ್ಎಸ್ ತೇಜ್, ಐಎನ್ಎಸ್ ತರ್ಕಾಶ್ ಹಾಗೂ ತರಿಕಂಡ್‌ಗಳಲ್ಲಿ 8 ಕ್ಷಿಪಣಿ ಲಾಂಚರ್‌ಗಳಿವೆ. ಒಂದು ಶಿವಾಲಿಕ್ ಕ್ಲಾಸ್ ಫ್ರಿಗೇಟ್‌ನಲ್ಲೂ ಬ್ರಹ್ಮೋಸ್ ಕ್ಷಿಪಣಿ ಅಳವಡಿಸಲಾಗಿದ್ದು, ಐಎನ್ಎಸ್ ವಿಶಾಖಪಟ್ಟಣಂ ಮೂಲಕವೂ ಯಶಸ್ವಿ ಪರೀಕ್ಷಾ ಪ್ರಯೋಗ ನಡೆಸಲಾಗಿದೆ.

ಸದ್ಯದಲ್ಲೇ ನೀಲಗಿರಿ ಕ್ಲಾಸ್ ಫ್ರಿಗೇಟ್‌ಗಳಲ್ಲೂ ಈ ಸ್ವದೇಶಿ ನಿರ್ಮಾಣದ ಕ್ಷಿಪಣಿ ಅಳವಡಿಸಲಾಗುತ್ತದೆ. ಯುದ್ಧನೌಕೆಗಳಿಂದ ಪ್ರಯೋಗಿಸಲ್ಪಡುವ ಬ್ರಹ್ಮೋಸ್ ಕ್ಷಿಪಣಿ 200 ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದು. ಈ ಕ್ಷಿಪಣಿ ಗರಿಷ್ಠ 3.5 ಮ್ಯಾಕ್ (ಗಂಟೆಗೆ 4,321 ಕಿಲೋಮೀಟರ್) ವೇಗದಲ್ಲಿ ಚಲಿಸಬಲ್ಲದು. ಇದರಲ್ಲಿ ಎರಡು ಹಂತದ ಪ್ರೊಪಲ್ಷನ್ ವ್ಯವಸ್ಥೆಯಿದ್ದು, ಮೊದಲನೇ ಹಂತದಲ್ಲಿ ಘನ ಪ್ರೊಪಲ್ಷನ್ ಆಗಿದ್ದು, ಎರಡನೇ ಹಂತದಲ್ಲಿ ದ್ರವ ಪ್ರೊಪಲ್ಷನ್ ಇದೆ. ಎರಡನೇ ಹಂತ ರಾಮ್ ಜೆಟ್ ಇಂಜಿನ್ ಆಗಿದ್ದು, ಸೂಪರ್‌ಸಾನಿಕ್ ವೇಗ ಒದಗಿಸಿ, ಇಂಧನ ದಹನವನ್ನೂ ಕಡಿಮೆಗೊಳಿಸುತ್ತದೆ.

ಬ್ರಹ್ಮೋಸ್ ಕ್ಷಿಪಣಿ ಗಾಳಿಯಲ್ಲೇ ತನ್ನ ಪಥ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದು, ತನ್ನ ಗುರಿಯನ್ನು ನಾಶಪಡಿಸಬಲ್ಲದು. ಇವುಗಳು ನೆಲದಿಂದ ಕೇವಲ ಹತ್ತು ಮೀಟರ್ ಮೇಲ್ಮೈಯಲ್ಲಿ ಚಲಿಸಬಲ್ಲವಾಗಿದ್ದು, ಶತ್ರು ರೇಡಾರ್ ಕಣ್ಣು ತಪ್ಪಿಸಲು ಸಮರ್ಥವಾಗಿದೆ. ರೇಡಾರ್ ಮಾತ್ರವೇ ಅಲ್ಲದೆ, ಇದನ್ನು ಯಾವುದೇ ಕ್ಷಿಪಣಿ ಪತ್ತೆ ವ್ಯವಸ್ಥೆಗೂ ಗುರುತಿಸಲು ಸಾಧ್ಯವಿಲ್ಲ. ಈ ಕ್ಷಿಪಣಿ ಎಷ್ಟೊಂದು ಶಕ್ತಿಶಾಲಿಯಾಗಿದೆ ಎಂದರೆ, ನುಗ್ಗಿ ಬರುವ ಬ್ರಹ್ಮೋಸ್ ಕ್ಷಿಪಣಿಯನ್ನು ನಾಶಪಡಿಸುವುದು ಬಹುತೇಕ ಅಸಾಧ್ಯ. ಬ್ರಹ್ಮೋಸ್ ಕ್ಷಿಪಣಿ ಅಮೆರಿಕಾದ ಟೊಮಾಹಾಕ್ ಕ್ಷಿಪಣಿಯ ಎರಡು ಪಟ್ಟು ಹೆಚ್ಚು ವೇಗದಲ್ಲಿ ದಾಳಿ ನಡೆಸುತ್ತದೆ.

ಲೇಖಕರು : ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News