ನವದೆಹಲಿ: ಪದುಚ್ಯುತಿಗೊಂಡಿದ್ದ ರಣಿಲ್ ವಿಕ್ರಂಸಿಂಘೆರನ್ನು ಮತ್ತೆ ಶ್ರೀಲಂಕಾದ ಪ್ರಧಾನಿಯಾಗಿ ನೇಮಕ ಮಾಡಿದ ನಡೆಯ ಬಗ್ಗೆ ಭಾರತ ಮೆಚ್ಚುಗೆ ವ್ಯಕ್ತಪಡಿಸಿದೆ.
ಕಳೆದ ಅಕ್ಟೋಬರ್ ನಲ್ಲಿ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ರಣಿಲ್ ವಿಕ್ರಂಸಿಂಘೆರನ್ನು ಪದುಚ್ಯುತಿಗೊಳಿಸಿ ಏಕಾಏಕಿ ಮಹಿಂದಾ ರಾಜಪಕ್ಸೆರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರು.ಇದು ಶ್ರೀಲಂಕಾದ ರಾಜಕೀಯದಲ್ಲಿ ಹೊಸ ಬಿಕ್ಕಟ್ಟನ್ನು ಸೃಷ್ಟಿಸಿತ್ತು.ಇನ್ನೊಂದೆಡೆಗೆ ನೆರೆಯ ಭಾರತ ಕೂಡ ಅಧ್ಯಕ್ಷರ ನಡೆಗೆ ಅಸಮಾಧಾನಗೊಂಡಿತ್ತು.ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದ ಪ್ರಧಾನಿಯನ್ನು ಏಕಾಏಕಿ ಕೆಳಗಿಳಿಸಿ ರಾಜಪಕ್ಸೆಯನ್ನು ನೇಮಕ ಮಾಡುವ ಮೂಲಕ ರಾಜಕೀಯ ಬಿಕ್ಕಟ್ಟು ಉಂಟು ಮಾಡಿತ್ತು.
ರಾಜಪಕ್ಸೆಯವರು ಚೀನಾದ ಪರ ಒಲವನ್ನು ಹೊಂದಿದವರಾಗಿದ್ದಾರೆ ರಣಿಲ್ ಭಾರತದ ಪರ ಅಭಿಪ್ರಾಯವನ್ನು ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ರಣೀಲ್ ವಿಕ್ರಂ ಸಿಂಘೆ ಪರ ಭಾರತ ಧ್ವನಿ ವ್ಯಕ್ತಪಡಿಸಿತ್ತು. ಇನ್ನೊಂದೆಡೆಗೆ ಶ್ರೀಲಂಕಾದಲ್ಲಿನ ಸುರ್ಪ್ರಿಂಕೋರ್ಟ್ ಕೂಡ ಅಧ್ಯಕ್ಷರ ನಡೆಗೆ ಕೆಂಡಾಮಂಡಲವಾಗಿತ್ತು. ರಾಜಪಕ್ಸೆಯವರನ್ನು ಪ್ರಧಾನಿ ಹುದ್ದೆಗೆ ನೇಮಕ ಮಾಡಿದಾಗ ಸುಪ್ರಿಂಕೋರ್ಟ್ ಅವರು ಯಾವುದೇ ರೀತಿಯ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಾಗಿಲ್ಲ ಎಂದು ನಿರ್ದೇಶನ ನೀಡಿತ್ತು.
ಈಗ ತಿಂಗಳುಗಳ ಕಾಲ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ಕೊನೆಗೂ ತೆರೆ ಬಿದ್ದಿರುವುದಕ್ಕೆ ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದ್ದು " ನಮ್ಮ ನೆಚ್ಚಿನ ನೆರೆಯ ಸ್ನೇಹಿತ ಶ್ರೀಲಂಕಾದಲ್ಲಿನ ರಾಜಕೀಯ ಪರಿಸ್ಥಿತಿಗೆ ಕೊನೆಗೂ ಪರಿಹಾರ ಕಂಡುಕೊಂಡಿರುವುದನ್ನು ಭಾರತ ಸ್ವಾಗತಿಸುತ್ತದೆ.ಇದು ಶ್ರೀಲಂಕಾದಲ್ಲಿನ ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ರಾಜಕೀಯ ಶಕ್ತಿಗಳು ತೋರಿಸಿದ ಪ್ರಬುದ್ಧತೆಯನ್ನು ತೋರಿಸುತ್ತದೆ" ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.