ಪುನೀತ್ ರಾಜ್​ಕುಮಾರ್ ಸಾವಿನ ಬಗ್ಗೆ ಅನುಮಾನ: ತನಿಖೆಗೆ ಆಗ್ರಹಿಸಿ ದೂರು ನೀಡಿದ ಅಭಿಮಾನಿ

ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ಮನನೊಂದಿರುವ ಅಭಿಮಾನಿಯೊಬ್ಬರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Written by - Puttaraj K Alur | Last Updated : Nov 5, 2021, 12:55 PM IST
  • ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ಮನನೊಂದ ಅಭಿಮಾನಿ
  • ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ದೂರು ನೀಡಿದ ಅರುಣ್ ಪರಮೇಶ್ವರ್
  • ‘ಅಪ್ಪು’ ಸಾವಿನ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ದೂರು ನೀಡಿರುವ ಅಭಿಮಾನಿ
ಪುನೀತ್ ರಾಜ್​ಕುಮಾರ್ ಸಾವಿನ ಬಗ್ಗೆ ಅನುಮಾನ: ತನಿಖೆಗೆ ಆಗ್ರಹಿಸಿ ದೂರು ನೀಡಿದ ಅಭಿಮಾನಿ   title=
ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ದೂರು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ದಿಢೀರ್ ಸಾವು(Puneeth Rajkumar Dead) ಕೋಟ್ಯಂತರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಭಾರತೀಯ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ‘ಅಪ್ಪು’ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ನೀಡುತ್ತಿರುವ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಸಾವಿನ ಕೊನೆಯ ಕ್ಷಣದವರೆಗೂ ನಗುನಗುತ್ತಲೇ ಇದ್ದ ಪುನೀತ್ ರಾಜ್ ಕುಮಾರ್ ಹೇಗೆ ಸಾವನ್ನಪ್ಪಿದರು ಎಂಬುದರ ಬಗ್ಗೆ ಸಾಕಷ್ಟು ಮಂದಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ತಲೆಕೆಡಿಸಿಕೊಂಡಿರುವ ಅಭಿಮಾನಿಗಳು ಸ್ವಲ್ಪ ಪ್ರಯತ್ನಪಟ್ಟಿದ್ದರೂ ‘ಅಪ್ಪು’ ಪ್ರಾಣ ಉಳಿಯುತ್ತಿತ್ತು ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಈ ಬಗ್ಗೆ ನಟ ಶಿವರಾಜ್ ಕುಮಾರ್(Shivarajkumar) ಮಾತನಾಡಿದ್ದು, ‘ದೇವರು ಕೇವಲ 10 ನಿಮಿಷ ಸಮಯ ಕೊಟ್ಟಿದ್ದರೂ ಪುನೀತ್ ರನ್ನು ಉಳಿಸಬಹುದಿತ್ತು. ಯಾರ್ಯಾರಿಗೋ ಟೈಮ್ ನೀಡುವ ದೇವರು ನನ್ನ ತಮ್ಮನಿಗೆ ಸಮಯ ಕೊಡಲಿಲ್ಲ. ನನ್ನ ತಮ್ಮನೇ ಸಾವನ್ನಪ್ಪಿರುವಾಗ ಪೊಲೀಸರಿಗೆ ದೂರು ಕೊಟ್ಟು ಏನು ಪ್ರಯೋಜನ’ ಅಂತಾ ಹೇಳಿದ್ದಾರೆ. ಆದರೂ ನಟ ಪುನೀತ್ ಅವರ ಸಾವು ಅನೇಕರಿಗೆ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಈ ಮಧ್ಯೆ ನಟ ಪುನೀತ್ ರಾಜ್ ಕುಮಾರ್(Puneeth Rajkumar) ಅಕಾಲಿಕ ನಿಧನದಿಂದ ಮನನೊಂದಿರುವ ಅಭಿಮಾನಿಯೊಬ್ಬರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪುನೀತ್ ಅವರ ಸಾವಿನ ಬಗ್ಗೆ ಸಂಪೂರ್ಣ ತನಿಖೆ ಆಗಬೇಕೆಂದು ಆಗ್ರಹಿಸಿ ಅರುಣ್ ಪರಮೇಶ್ವರ್ ಎಂಬುವರು ದೂರು ನೀಡಿದ್ದಾರೆ. ಪುನೀತ್ ಅವರ ಎಲ್ಲಾ ಸಿನಿಮಾಗಳನ್ನು ವೀಕ್ಷಿಸಿರುವ ಅರುಣ್ ಪರಮೇಶ್ವರ್ ತಮ್ಮ ನೆಚ್ಚಿನ ನಟನ ಅಕಾಲಿಕ ಸಾವಿನಿಂದ ನೊಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: Vijay Sethupathi : ಬೆಂಗಳೂರು ಏರ್ಪೋರ್ಟ್ ನಲ್ಲಿ ತಮಿಳು ನಟ ವಿಜಯ್ ಸೇತುಪತಿ ಸಹಾಯಕನ ಮೇಲೆ ಹಲ್ಲೆ, Video ವೈರಲ್

ಮೊದಲಿನಿಂದಲೂ ಪುನೀತ್‌ರನ್ನು ತುಂಬಾ ಇಷ್ಟಪಡುತ್ತಿದ್ದ ಅರುಣ್ ಪರಮೇಶ್ವರ್ ಅವರು ‘ಅಪ್ಪು’ ಅಭಿನಯದ ಒಂದೂ ಸಿನಿಮಾವನ್ನು ಮಿಸ್ ಮಾಡಿಲ್ಲವಂತೆ. ಪ್ರತಿವರ್ಷ ಪುನೀತ್ ಅವರ ಹುಟ್ಟುಹಬ್ಬದ ದಿನ ಬೆಂಗಳೂರಿನ ಸದಾಶಿನಗರದ ನಿವಾಸಕ್ಕೆ ಆಗಮಿಸಿ ಶುಭಾಶಯ ತಿಳಿಸುತ್ತಿದ್ದರಂತೆ. ಪುನೀತ್‌ರ ಸಿನಿಮಾ, ಸಾಮಾಜಿಕ ಕಾರ್ಯಗಳನ್ನು ಮೆಚ್ಚಿಕೊಂಡಿದ್ದ ಅರುಣ್ ಅವರಿಗೆ ನಟನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಲವಲವಿಕೆಯಿಂದಲೇ ಕಾರು ಹತ್ತಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪುನೀತ್ ಏಕೆ ಬದುಕುಳಿದಿಲ್ಲವೆಂದು ಅವರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅರುಣ್ ಪರಮೇಶ್ವರ್(Arun Parameswar), ‘ಪುನೀತ್ ರಾಜ್ ಕುಮಾರ್ ಅವರ ಸಾವಿನ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ. ‘ಅತ್ಯಂತ ಲವಲವಿಕೆಯಿಂದಲೇ ಪತ್ನಿ ಜೊತೆಗೆ ಮನೆಯಿಂದ ಹೊರಬರುವ ಪುನೀತ್ ರಾಜ್ ಕುಮಾರ್ ಅವರು ಕಾರು ಹತ್ತಿ ಆಸ್ಪತ್ರೆಗೆ ಹೋಗಿದ್ದಾರೆ. ಮನೆಯಿಂದ ಹೋಗುವಾಗ ಅವರು ಆರೋಗ್ಯವಾಗಿಯೇ ಹೋಗಿದ್ದಾರೆ. ಹಾಗಿದ್ದರೆ ಅವರಿಗೆ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಏಕೆ ತಡವಾಯಿತು? ಅವರಿಗೆ ಚಿಕಿತ್ಸೆ ನೀಡಿದರೂ ಏಕೆ ಬದುಕುಳಿಯಲಿಲ್ಲ..? ಅವರಿಗೆ ಯಾವ ರೀತಿ ತಪಾಸಣೆ ಮಾಡಲಾಯಿತು? ಈ ಎಲ್ಲಾ ವಿಚಾರಗಳ ಬಗ್ಗೆ ನನಗೆ ಅನುಮಾನಗಳಿವೆ. ರಮಣಶ್ರೀ ಆಸ್ಪತ್ರೆಯಲ್ಲಿ ಪುನೀತ್ ಬಂದಾಗಿನ ಸಿಸಿಟಿವಿ ದೃಶ್ಯವನ್ನು ರಿಲೀಸ್ ಮಾಡಿಲ್ಲ. ಅಲ್ಲಿನ ವೈದ್ಯರ ನಿರ್ಲಕ್ಷ್ಯವೇ ಪುನೀತ್ ಸಾವಿಗೆ ಕಾರಣವಾಯಿತಾ? ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ ನಲ್ಲಿ ಏಕೆ ಕಳಿಸಲಿಲ್ಲ ಎಂಬುದರ ಬಗ್ಗೆ ಗೊಂದಲಗಳಿವೆ. ಹೀಗಾಗಿ ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Puneeth RajKumar: ಅಪ್ಪು ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಕಿಡಿಗೇಡಿ ಬಂಧನ

ನಟ ಪುನೀತ್ ರಾಜ್ ಕುಮಾರ್(Puneeth Rajkumar) ನಿಧನದಿಂದ ನನಗೆ ತುಂಬಾ ಬೇಸರವಾಗಿದೆ. ನನೆಗೆ ಯಾರ ಮನಸ್ಸನ್ನು ನೋಯಿಸುವ ಉದ್ದೇಶವಿಲ್ಲ. ಸತ್ಯಾಂಶ ಹೊರಬರಬೇಕು, ಅಭಿಮಾನಿಗಳಿಗೆ ನಟನ ಸಾವಿನ ಬಗ್ಗೆ ತಿಳಿಯಬೇಕು. ನನಗೂ ಕೂಡ ತುಂಬಾ ದುಃಖವಾಗಿದೆ. ಅದಕ್ಕೆ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆಂದು ಅರುಣ್ ಪರಮೇಶ್ವರ್ ತಿಳಿಸಿದ್ದಾರೆ.         

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News