ರೇಪ್ ಘಟನೆಗಳನ್ನು ತಡೆಯಲು ಮೋದಿ ಸರ್ಕಾರದ ದಿಟ್ಟ ಹೆಜ್ಜೆ

ದೇಶದಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರದಂತಹ ಘಟನೆಗಳನ್ನು ತಡೆಯಲು ಮೋದಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

Updated: Dec 12, 2019 , 04:32 PM IST
ರೇಪ್ ಘಟನೆಗಳನ್ನು ತಡೆಯಲು ಮೋದಿ ಸರ್ಕಾರದ ದಿಟ್ಟ ಹೆಜ್ಜೆ

ನವದೆಹಲಿ: ಅತ್ಯಾಚಾರದಂತಹ ಘಟನೆಗಳನ್ನು ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂತಹ ಘಟನೆಗಳಲ್ಲಿ ಶೀಘ್ರದಲ್ಲೇ ನ್ಯಾಯ ದೊರಕಿಸಿಕೊಡುವ ಸಲುವಾಗಿ ದೇಶಾದ್ಯಂತ 1023 ಹೊಸ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ತೆರೆಯಲಾಗುವುದು ಎಂದು ಹೇಳಲಾಗಿದೆ.

ಅತ್ಯಾಚಾರ ಮತ್ತು ಪೋಸ್ಕೋ ಪ್ರಕರಣಗಳ ತನಿಖೆ 2 ತಿಂಗಳಲ್ಲಿ ಪೂರ್ಣಗೊಳ್ಳಬೇಕು ಮತ್ತು ಈ ಪ್ರಕರಣಗಳ ವಿಚಾರಣೆಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ವಿಚಾರಣೆಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹೈಕೋರ್ಟ್‌ಗಳ ಎಲ್ಲಾ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

ಅತ್ಯಾಚಾರ ಮತ್ತು ಪೋಸ್ಕೋ ಪ್ರಕರಣಗಳ ತನಿಖೆಯನ್ನು 2 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಕಾನೂನು ಸಚಿವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ದೇಶದಲ್ಲಿ 700 ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಿವೆ. ಇದಲ್ಲದೆ ದೇಶಾದ್ಯಂತ 1023 ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ತೆರೆಯಲಾಗುವುದು ಎಂದು ಕಾನೂನು ಸಚಿವರು ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ಹೆಚ್ಚಾಗುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ,  ಮಹಿಳಾ ಸುರಕ್ಷತೆಯೇ ತನ್ನ ಆದ್ಯತೆಯಾಗಿದೆ. ದೇಶಾದ್ಯಂತ ಮಹಿಳೆಯರ ರಕ್ಷಣೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಈ ಕುರಿತು ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು ಲೈಂಗಿಕ ಅಪರಾಧಿಗಳ ಬಗ್ಗೆ ಡೇಟಾಬೇಸ್ ಪ್ರಾರಂಭಿಸುವುದು ಸೇರಿದಂತೆ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ 2013 ಅನ್ನು ಜಾರಿಗೆ ತರಲಾಗಿದೆ. ಐದು ವರ್ಷಗಳ ನಂತರ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆಯ ನಿಬಂಧನೆ ಒದಗಿಸಲು ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ 2018 ಅನ್ನು ಜಾರಿಗೆ ತರಲಾಯಿತು. ಈ ಕಾಯಿದೆಯಲ್ಲಿ, ಎರಡು ತಿಂಗಳೊಳಗೆ ವಿಚಾರಣೆ ಮತ್ತು ತನಿಖೆಯನ್ನು ಪೂರ್ಣಗೊಳಿಸಲೇಬೇಕು ಎಂದು ಹೇಳಲಾಗಿದೆ ಎಂದರು.