ನವದೆಹಲಿ: ರಾಜಸ್ಥಾನದ ಮುಖ್ಯ ಚುನಾವಣಾಧಿಕಾರಿ ಬಿಜೆಪಿ ಸಂಸದ ರಾಮಚಂದ್ರನ್ ಬೋಹ್ರಾ ಮತ್ತು ಕಾಂಗ್ರೆಸ್ ನಾಯಕ ಸುನಿಲ್ ಶರ್ಮಾ ಅವರಿಗೆ ಚುನಾವಣಾ ಆಯೋಗದ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕೆ ಈಗ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಚುನಾವಣಾ ಆಯೋಗದ ನಿಯಮದ ಪ್ರಕಾರ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮಿಲಿಟರಿ ಸಿಬ್ಬಂದಿಯ ಫೋಟೋಗಳನ್ನು ಬಳಸುವ ಹಾಗಿಲ್ಲ.ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಈ ನಿಯಮವನ್ನು ಉಲ್ಲಂಘನೆ ಮಾಡಿದ್ದಕೆ ನೋಟಿಸ್ ನ್ನು ಚುನಾವಣಾ ಆಯೋಗ ಜಾರಿ ಮಾಡಿದೆ.
ಜೈಪುರದಲ್ಲಿ ಮಿಲಿಟರಿ ಸಿಬ್ಬಂದಿಗಳ ಫೋಟೋವನ್ನು ಪೋಸ್ಟರ್ ನಲ್ಲಿ ಬಳಸಿದ್ದಕ್ಕೆ ಚುನಾವಣಾ ಆಯೋಗವು ಮಾರ್ಚ್ 12 ರಂದು ನೋಟಿಸ್ ನೀಡಿದೆ.ಅಲ್ಲದೆ ಶರ್ಮಾ ಹಾಗೂ ಬೋಹ್ರಾ ಇಬ್ಬರಿಗೂ ಕೂಡ ಮುಂದಿನ ಮೂರು ದಿನಗಳ ಒಳಗಾಗಿ ಉತ್ತರ ನೀಡುವಂತೆ ಅದು ಸೂಚಿಸಿದೆ.
ಮಾರ್ಚ್ 9 ರಂದು ಚುನಾವಣಾ ಆಯೋಗವು ಮಿಲಿಟರಿ ಸಿಬ್ಬಂದಿ ಪೋಟೋಗಳನ್ನು ಬಳಸುವುದಕ್ಕೆ ನಿಷೇಧ ಹೇರಿತ್ತು. ಈ ಹಿನ್ನಲೆಯಲ್ಲಿ ಈಗ ಚುನಾವಣಾ ಆಯೋಗವು ಕ್ರಮವನ್ನು ತೆಗದುಕೊಂಡಿದೆ.