ನವದೆಹಲಿ: ಪ್ರಚೋದನಾಕಾರಿ ಭಾಷಣ ಮಾಡಿ ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ 72 ಗಂಟೆಗಳ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಗೆ 48 ಗಂಟೆಗಳ ಚುನಾವಣಾ ಪ್ರಚಾರದಿಂದ ನಿಷೇಧ ಹೇರಲಾಗಿದೆ. ಈ ನಿರ್ಬಂಧ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಜಾರಿಯಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಏಪ್ರಿಲ್ 7ರಂದು ಮೇರಠ್ ಮತ್ತು ದೇವ್ಬಂದ್ನಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಮತೀಯ ವಿಚಾರವನ್ನು ಪ್ರಸ್ತಾಪಿಸಿ ಪ್ರಚೋದನಾಕಾರಿ ಭಾಷಣ ಮಾಡಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಸಿಎಂ ಮಾಯಾವತಿ ಅವರನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ.
ಉತ್ತರ ಪ್ರದೇಶದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಗಳಲ್ಲಿ ಯೋಗಿ ಆದಿತ್ಯನಾಥ ಭಾರತೀಯ ಸೇನೆಯನ್ನು ಮೋದಿ ಅವರ ಸೇನೆ ಎಂದೂ, ಕಾಂಗ್ರೆಸ್-ಬಿಎಸ್ಪಿ-ಎಸ್ಪಿ ಪಕ್ಷಗಳಿಗೆ ಅಲಿಯಲ್ಲಿ ನಂಬಿಕೆ ಇದ್ದರೆ ನಮಗೆ ಬಜರಂಗಬಲಿಯಲ್ಲಿ ನಂಬಿಕೆ ಇದೆ ಎಂದು ಹೇಳುವ ಮೂಲಕ ಮತೀಯವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಇವರಂತೆ ಮಾಯಾವತಿ ಕೂಡ ಶಹರನ್ಪುರ್ ಮತ್ತು ಬರೇಲಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಮತ ವಿಭಜನೆಯಾಗದಂತೆ ಮುಸ್ಲಿಮರು ಎಚ್ಚರಿಕೆ ವಹಿಸಬೇಕು. ಮಹಾಘಟಬಂಧನ್ ಗೆ ಮತ ಹಾಕಬೇಕು. ಇಲ್ಲವಾದಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಚುನಾವಣಾ ಆಯೋಗಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು.