ನವದೆಹಲಿ: ಮಾರುಕಟ್ಟೆಗೆ ರಿಲಯನ್ಸ್ ಜಿಯೋ ಎಂಟ್ರಿ ನೀಡಿದ ಬಳಿಕ ಮೊಬೈಲ್ ಬಳಕೆದಾರರಿಗೆ ದೇಶದ ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪನಿಗಳು ಉಚಿತ ಡೇಟಾ, ಉಚಿತ ಕಾಲಿಂಗ್ ಪ್ಲ್ಯಾನ್ ಗಳನ್ನು ಘೋಷಿಸಲು ಆರಂಭಿಸಿವೆ. ಮಾರುಕಟ್ಟೆಯಲ್ಲಿ ಅಂದಿನಿಂದ ಆರಂಭವಾಗ ಈ ಟೆಲಿಕಾಂ ಸಮರ ಇಂದಿಗೂ ಸಹ ಮುಂದುವರೆದಿದೆ ಹಾಗೂ ಪ್ರತಿನಿತ್ಯ ಗ್ರಾಹಕರಿಗೆ 1-2 ಜಿಬಿ ಉಚಿತ ಡೇಟಾ ಸಿಗುತ್ತಿದೆ ಆದರೆ, ಇದೀಗ ಭಾರತೀಯ ದೂರಸಂಚಾರ ನಿಯಂತ್ರಣ ಪ್ರಾಧಿಕಾರ ಹೊಸ ನಿಯಮವೊಂದನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಒಂದು ವೇಳೆ TRAIನ ಈ ಹೊಸ ನಿಯಮ ಜಾರಿಗೆ ಬಂದಲ್ಲಿ ಉಚಿತ ಸೇವೆ ಅಥವಾ ಕಡಿಮೆ ಬೆಲೆಯ ಪ್ಲ್ಯಾನ್ ಗಳು ನಿಮ್ಮ ಕೈತಪ್ಪಲಿವೆ. ಟೆಲಿಕಾಂ ಕಂಪನಿಗಳ ಟ್ಯಾರಿಫ್ ಬಳಲಾವಣೆಗೆ TRAI ಸಮಾಲೋಚನಾ ಪತ್ರ (Consultation Paper) ಬಿಡುಗಡೆ ಮಾಡಿದೆ. ಇದರಡಿ TRAI ಮೊಬೈಲ್ ಕರೆ ಹಾಗೂ ಡೇಟಾಗಳಿಗಾಗಿ ಕನಿಷ್ಠ ದರ ನಿಗದಿಪಡಿಸಲಿದೆ. ಈ ಪ್ರಸ್ತಾವಿತ ವ್ಯವಸ್ಥೆ ಜಾರಿಗೊಂಡರೆ, ಉಚಿತ ಕಾಲ್ ಹಾಗೂ ಅಗ್ಗದ ಡೇಟಾ ನೀಡುವ ಅವಧಿ ಮುಕ್ತಾಯಗೊಳ್ಳಲಿದೆ.
ಝೀ ಬಿಸಿನೆಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಟೆಲಿಕಾಂ ಕಂಪನಿಗಳು ಟ್ಯಾರಿಫ್ ರೆಗ್ಯೂಲೆಶನ್ ಗಾಗಿ TRAIಗೆ ಪತ್ರ ಬರೆದಿವೆ. ಆದರೆ, ಮೊದಲು ಇದಕ್ಕೆ ವಿರೋಧಿಸಿರುವ TRAI, ಟ್ಯಾರಿಫ್ ನಿರ್ಧರಿಸುವುದು ಕಂಪನಿಗಳ ಸ್ವಾಯತ್ತ ಅಧಿಕಾರವಾಗಿರಬೇಕು ಎಂದಿತ್ತು.
ಜನವರಿ 17ರವರೆಗೆ ಸಲಹೆಗಳನ್ನು ಕೋರಿರುವ ಪ್ರಾಧಿಕಾರ
ಕನಿಷ್ಠ ಬೆಲೆ ನಿಗದಿಗಾಗಿ ಜನೆವರಿ 17ರವರೆಗೆ ಕಂಪನಿಗಳು ತಮ್ಮ ಸಲಹೆಗಳನ್ನು ನೀಡಬಹುದಾಗಿದೆ ಎಂದು TRAI ಪ್ರಕಟಿಸಿದೆ. ಭಾರ್ತಿ ಏರ್ಟೆಲ್ ಈ ಕ್ಷೇತ್ರದಲ್ಲಿ ವ್ಯವಹಾರ ನಡೆಸಲು ಕನಿಷ್ಠ ಟ್ಯಾರಿಫ್ ಗಾಗಿ ಮೊದಲಿನಿಂದಲೂ ಕೂಡ ಬೇಡಿಕೆ ಸಲ್ಲಿಸುತ್ತಿದೆ. ಆದೆ, ರಿಲಯನ್ಸ್ ಜಿಯೋ ಘೋಷಿಸಿರುವ ಉಚಿತ ಡೇಟಾ ಹಾಗೂ ಉಚಿತ ಕರೆ ಆಫರ್ ನಿಂದ ಪೈಪೋಟಿ ನೀಡುವ ಕಂಪನಿಗಳ ಮಾರ್ಜಿನ್ ಮೇಲೆ ಪರಿಣಾಮ ಉಂಟಾಗಿದೆ
ಷೇರು ಮಾರುಕಟ್ಟೆಯಲ್ಲಾಗುವ ಏರಿಳಿತಕ್ಕೆ ಬ್ರೇಕ್ ಬೀಳಲಿದೆ
ಉಚಿತ ಕಾಲಿಂಗ್ ಹಾಗೂ ಉಚಿತ ಡೇಟಾ ನೀಡುವ ಪ್ರಕರಣದಲ್ಲಿ ಕೆಲ ದೊಡ್ಡ ಕಂಪನಿಗಳು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿ ಕೂಡ ಗ್ರಾಹಕರಲ್ಲಿ ಪಾಪ್ಯುಲ್ಯಾರಿಟಿ ಗಿಟ್ಟಿಸಿಕೊಳ್ಳುತ್ತವೆ. ಅವುಗಳ ಬಳಿ ಹೆಚ್ಚಿನ ಬಂಡವಾಳವಿರುವ ಕಾರಣ ಇದು ಸಾಧ್ಯವಾಗುತ್ತದೆ. ಆದರೆ, ಈ ಒತ್ತಡಕ್ಕೆ ಒಳಗಾಗುವ ಇತರ ಕಂಪನಿಗಳೂ ಕೂಡ ತಮ್ಮ ಪ್ಲ್ಯಾನ್ ಗಳಲ್ಲಿ ಬದಲಾವಣೆ ಮಾಡಲು ಮುಂದಾಗುತ್ತವೆ. ಈ ಕುರಿತು ಹೇಳಿಕೆ ನೀಡಿರುವ TRAI ಅಧ್ಯಕ್ಷ ಆರ್.ಎಸ್.ಶರ್ಮಾ ಕನಿಷ್ಠ ಟೆಲಿಕಾಂ ಶುಲ್ಕ ಒಂದು ವೇಳೆ ನಿಗದಿಯಾದರೆ ಮಾರುಕಟ್ಟೆಯಲ್ಲಿ ಸಮಾನತೆ ಬರಲಿದ್ದು, ಟೆಲಿಕಾಂ ಕಂಪನಿಗಳ ಸ್ವೇಚ್ಛಾಚಾರಕ್ಕೆ ತಡೆಬೀಳಲಿದೆ ಎಂದಿದ್ದಾರೆ. ಸದ್ಯ ಪ್ರಾಧಿಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಪ್ರಾಧಿಕಾರ ಗ್ರಾಹಕರ ಸಂರಕ್ಷಣೆ, ಸ್ಪರ್ಧೆ ಹಾಗೂ ಟೆಲಿಕಾಂ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತದೆ ಎಂದು ಶರ್ಮಾ ಹೇಳಿದ್ದಾರೆ.
2017ರಲ್ಲಿಯೂ ಸಹ ಕೇಳಿ ಬಂದಿತ್ತುಈ ಬೇಡಿಕೆ
ಈ ಹಿಂದೆ 2017ರಲ್ಲಿಯೂ ಕೂಡ TRAIಗೆ ಪತ್ರಬರೆದಿದ್ದ ಟೆಲಿಕಾಂ ಕಂಪನಿಗಳು, ಮಿನಿಮಮ್ ಟ್ಯಾರಿಫ್ ನಿಗದಿಪಡಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಆಗ ಈ ಪ್ರಸ್ತಾವನೆಗೆ ಒಮ್ಮತ ಮೂಡಿ ಬಂದಿರಲಿಲ್ಲ.