ನವದೆಹಲಿ: ಜನಪ್ರಿಯ 'ಕಾಫಿ ವಿತ್ ಕರಣ್' ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತ ಅವಹೇಳನಕಾರಿ ಹೇಳಿಕೆಗಾಗಿ ಭಾರತದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್ ಅವರಿಗೆ ತಲಾ 20 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತನಿಖಾಧಿಕಾರಿ ಡಿ.ಕೆ. ಜೈನ್ ಹೇಳಿದ್ದಾರೆ.
ಅಧಿಕೃತ ಬಿ.ಸಿ.ಸಿ.ಐ ವೆಬ್ಸೈಟ್ನಲ್ಲಿ ಪ್ರಕಟವಾದ ಆದೇಶದಲ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್‌ಗೆ ತಲಾ 20 ಲಕ್ಷ ರೂ. ದಂಡ ವಿಧಸಲಾಗಿದೆ. ಈಗಾಗಲೇ ತಾತ್ಕಾಲಿಕ ಅಮಾನತ್ತಿನಲ್ಲಿರುವ ಪಾಂಡ್ಯ ಮತ್ತು ರಾಹುಲ್ ಮಹಿಳೆಯರ ಬಗೆಗೆಗಿನ ಅವಹೇಳನಕಾರಿ ಹೇಳಿಕೆಗೆ ಬೇಷರತ್ತಾದ ಕ್ಷಮೆ ಕೇಳಿರುವುದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಜೈನ್ ತಿಳಿಸಿದ್ದಾರೆ.
ಬದಲಾಗಿ, 'ಭಾರತ್ ಕೆ ವೀರ್ ಆಪ್' ಮೂಲಕ ಅವರು ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ 10 ಅರೆಸೇನಾ ಪಡೆ ಪೇದೆಗಳ ಕುಟುಂಬಕ್ಕೆ ಒಂದೊಂದು ಲಕ್ಷ ನೀಡುವಂತೆ ಹಾಗೂ ಉಳಿದ 10 ಲಕ್ಷ ರೂ.ವನ್ನು ಅಂಧರ ಕ್ರಿಕೆಟ್ ಸಂಸ್ಥೆಗೆ ನೀಡಬೇಕು. ಏಪ್ರಿಲ್ 19, 2019ರಂದು ಈ ಆದೇಶ ನೀಡಲಾಗಿದ್ದು, ಆದೇಶದ ದಿನಾಂಕದಿಂದ ನಾಲ್ಕು ವಾರಗಳೊಳಗೆ ದಂಡದ ಮೊತ್ತವನ್ನು ಪಾವತಿಸುವಂತೆ ಜೈನ್ ಸೂಚನೆ ನೀಡಿದ್ದಾರೆ.