ಅಹಮದಾಬಾದ್ : ಗುಜರಾತಿನ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನಿತಿನ್ ಪಟೇಲ್ ಅವರು ತಮಗೆ ವಹಿಸಿರುವ ಖಾತೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್, ನಿತಿನ್ ಪಟೇಲ್ ಅವರಿಗೆ ಕ್ಯಾಬಿನೆಟ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರುವಂತೆ ಹೇಳಿದ್ದಾರೆ.
"ಒಂದು ವೇಳೆ ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು 10 ಬೆಂಬಲಿತ ಶಾಸಕರೊಂದಿಗೆ ಬಿಜೆಪಿ ತ್ಯಜಿಸಲು ಸಿದ್ಧವಿದ್ದರೆ, ಕಾಂಗ್ರೆಸ್ ನಲ್ಲಿ ಉನ್ನತ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ನಾನು ಮಾತುಕತೆ ನಡೆಸುತ್ತೇನೆ. ನಿತಿನ್ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಗೌರವ ಸಿಗುತ್ತಿಲ್ಲ ಎಂದಾದರೆ ಅವರು ಪಕ್ಷ ತ್ಯಜಿಸುವುದೇ ಒಳಿತು" ಎಂದು ಹಾರ್ದಿಕ್ ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಿತಿನ್ ಪಟೇಲ್ ಅವರು ಹಣಕಾಸು ಮತ್ತು ನಗರಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಆದರೆ ಪ್ರಸ್ತುತ ಸರ್ಕಾರದಲ್ಲಿ ರಸ್ತೆ ಸಾರಿಗೆ, ಕಟ್ಟಡ ನಿರ್ಮಾಣ ಮತ್ತು ಆರೋಗ್ಯ ಖಾತೆಗಳನ್ನು ನೀಡಲಾಗಿದೆ.
ಈ ಎರಡು ಖಾತೆಗಳ ಹೊರತಾಗಿ, ಅವರು ಡಿಸೆಂಬರ್ 28 ರಂದು ವೈದ್ಯಕೀಯ ಶಿಕ್ಷಣ, ನರ್ಮದಾ, ಕಲ್ಪ್ಸರ್ ಮತ್ತು ಬಂಡವಾಳ ಯೋಜನೆ ಸಂಬಂಧಿಸಿದ ಖಾತೆಗಳನ್ನೂ ನೀಡಲಾಗಿದೆ.
ಹಣಕಾಸು ಸಚಿವ ಖಾತೆಯನ್ನು ಸೌರಭ್ ಪಟೇಲ್ಗೆ ನೀಡಲಾಗಿದ್ದು, ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ನಗರಾಭಿವೃದ್ಧಿ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಹಣಕಾಸು ಖಾತೆಯನ್ನು ಹೊಂದಿದವರು ಮಾತ್ರ ಕ್ಯಬಿನ್ತ್ನ ಎರಡನೇ ಸ್ಥಾನದಲ್ಲಿರುತ್ತಾರೆ ಎಂಬ ಅಭಿಪ್ರಾಯ ಸತ್ಯಕ್ಕೆ ದೂರವಾದುದು. ನಿತಿನ್ ಪಟೇಲ್ ಅವರು ನಮ್ಮ ಪಕ್ಷದ ಹಿರಿಯ ಮುಖಂಡರಾಗಿದ್ದು ಎರಡನೇ ಸ್ಥಾನದಲ್ಲಿದ್ದಾರೆ ಎಂದಿದ್ದಾರೆ.