ಪುಲ್ವಾಮಕ್ಕಿಂತಲೂ ಭೀಕರ ದಾಳಿಗೆ ಜೈಶ್ ಎ ಮೊಹಮ್ಮದ್ ಸಿದ್ಧತೆ: ಗುಪ್ತಚರ ಎಚ್ಚರಿಕೆ

ಪುಲ್ವಾಮಕ್ಕಿಂತಲೂ ಭೀಕರ ದಾಳಿಗೆ ಜೈಶ್ ಎ ಮೊಹಮ್ಮದ್ ಸಿದ್ಧತೆ ನಡೆಸುತ್ತಿದೆ ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ.  

Last Updated : Feb 21, 2019, 02:26 PM IST
ಪುಲ್ವಾಮಕ್ಕಿಂತಲೂ ಭೀಕರ ದಾಳಿಗೆ ಜೈಶ್ ಎ ಮೊಹಮ್ಮದ್ ಸಿದ್ಧತೆ: ಗುಪ್ತಚರ ಎಚ್ಚರಿಕೆ title=
File Image

ಶ್ರೀನಗರ: ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ಭವಿಷ್ಯದಲ್ಲಿ ಪುಲ್ವಾಮಕ್ಕಿಂತಲೂ ಭೀಕರ ದಾಳಿಗೆ ಯೋಜಿಸುತ್ತಿದೆ ಎಂದು ಭಾರತೀಯ ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿದೆ.

ಈ ದಾಳಿ ಕೂಡ ಭಾರತೀಯ ಸೇನಾಪಡೆಯನ್ನು ಗುರಿಯಾಗಿಸಿಕೊಂಡು ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಚ್ಚರಿಕೆ ನೀಡಿರುವ ಬೇಹುಗಾರಿಕೆ ಪಡೆ ಮೂಲಗಳು, ಪಾಕಿಸ್ತಾನದಲ್ಲಿರುವ ಜೈಷ್​ ಎ ಮೊಹಮ್ಮದ್​ ಮುಖಂಡರು ಮತ್ತು ಕಾಶ್ಮೀರದಲ್ಲಿ ಅಡಗಿರುವ ಉಗ್ರರ ನಡುವಿನ ದೂರವಾಣಿ ಮಾತುಕತೆಯಿಂದ ಇದು ಖಚಿತವಾಗಿರುವುದಾಗಿ ತಿಳಿಸಿವೆ.

ಗುಪ್ತಚರ ಇಲಾಖೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಚೌಕಿಬಾಲ್ ಮತ್ತು ಟ್ಯಾಂಗ್ಧಾರ್ ಮಾರ್ಗಗಳಲ್ಲಿ ಭದ್ರತಾ ಪಡೆಗಳು ಮತ್ತು ಮಿಲಿಟರಿ ವಾಹನಗಳನ್ನು ಗುರಿಪಡಿಸಿ ದಾಳಿಯನ್ನು ನಡೆಸಲು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್ ಮತ್ತು ಹಿಜ್ಬ್-ಉಲ್ ಮುಜಾಹಿದೀನ್ ಯೋಜಿಸುತ್ತಿವೆ.

ಶೀಘ್ರದಲ್ಲೇ 'ಆತ್ಮಾಹುತಿ' ಬಾಂಬ್ ದಾಳಿ ನಡೆಸಲು ಹಸಿರು ಬಣ್ಣದ ಸ್ಕಾರ್ಪಿಯೋವನ್ನು ಬಳಸಲಾಗುತ್ತಿದೆ. ಹೊಸದಾಗಿ ನೇಮಕಗೊಂಡ ಕಾರ್ಡರನ್ನು ಪ್ರೇರೇಪಿಸುವ ಸಲುವಾಗಿ ಪುಲ್ವಾಮಾ ದಾಳಿಯ ಹೆಚ್ಚಿನ ವೀಡಿಯೊಗಳನ್ನು ಬಿಡುಗಡೆ ಮಾಡಲು ಜೆಎಂ ಯೋಜಿಸುತ್ತಿದೆ. ಇದರಿಂದಾಗಿ ಭವಿಷ್ಯದ ದಾಳಿಗಳನ್ನು ಸಂಘಟಿಸಲು ಹೊಸ ನೇಮಕಾತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂಬುದು ಜೈಷ್​ನ ನಂಬಿಕೆಯಾಗಿದೆ. ಇದರ ಮೂಲಕ ಆತ್ಮಾಹುತಿ ಬಾಂಬ್ ದಾಳಿ ಕೃತ್ಯಗಳನ್ನು ನಡೆಸಲು ಕಾಶ್ಮೀರದ ಯುವಕರನ್ನು ಪ್ರಚೋದಿಸುವುದು ಅವರ ಉದ್ದೇಶ. ಇದರಲ್ಲಿ ಸ್ಥಳೀಯ ಕಾಶ್ಮೀರಿ ಯುವಕರನ್ನು ಬಳಸಿಕೊಳ್ಳುವುದು ಅದರ ಗುರಿ. ಅದಕ್ಕಾಗಿ ಅವರನ್ನು ನೇಮಿಸಿಕೊಂಡು ತರಬೇತಿ ನೀಡುತ್ತಿವೆ ಎಂದು ಹೇಳಲಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ 50 ರಿಂದ 60 ಸ್ಥಳೀಯ ಕಾಶ್ಮೀರಿ ಯುವಕರನ್ನು ಜೆಎಂ ನೇಮಕ ಮಾಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಜೈಶ್ ಉಗ್ರರ ತಂಡ ಮೂರು ಕಡೆ ದಾಳಿಗೆ ಸಂಚು ರೂಪಿಸಿದ್ದು, ಮೂವರು ಆತ್ಮಾಹುತಿ ಬಾಂಬರ್‌ಗಳ ಸಹಿತ 21 ಜೈಶ್ ಉಗ್ರರ ತಂಡ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕಾಶ್ಮೀರದೊಳಗೆ ಪ್ರವೇಶಿಸಿದ್ದಾರೆ. ಮೂರು ದಾಳಿಗಳನ್ನು ನಡೆಸಲು ಅವರು ಉದ್ದೇಶಿಸಿದ್ದು, ಅದರಲ್ಲಿ ಎರಡು ದಾಳಿ ಕಣಿವೆ ರಾಜ್ಯದಿಂದ ಹೊರಭಾಗದಲ್ಲಿ ನಡೆಸಲು ಸಂಚು ರೂಪಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

ಹಿಜ್ಬ್-ಉಲ್-ಮುಜಾಹಿದೀನ್ ಭಯೋತ್ಪಾದಕರಿಗೆ ಸ್ಥಳೀಯ ಬೆಂಬಲವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ಮೂಲಗಳು ಎಚ್ಚರಿಕೆ ನೀಡಿದೆ.

ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಬಳಸಿದ ಸ್ಫೋಟಕಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾಯಿಸಲು ಮಹಿಳಾ ಮತ್ತು ಮಕ್ಕಳನ್ನು ನೇಮಕ ಮಾಡಲಾಗಿತ್ತು ಎಂದು ಬುಧವಾರ ಝೀ ಮೀಡಿಯಾಗೆ ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ.
 

Trending News