ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370ನ್ನು ರದ್ದುಪಡಿಸುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ನಿರ್ಧಾರವನ್ನು ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಶ್ಲಾಘಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರ ಸಂತಸ ತಂದಿದೆ ಎಂದಿರುವ ಎಲ್.ಕೆ.ಅಡ್ವಾಣಿ ಈ ಮೂಲಕ ಜನಸಂಘದ ಕನಸು ಸಾಕಾರಗೊಂಡಿದೆ ಎಂದಿದ್ದಾರೆ. "ಇದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಸ್ತುತ ಸರ್ಕಾರ ಕೈಗೊಂಡ ಐತಿಹಾಸಿಕ ನಿರ್ಧಾರವಾಗಿದೆ. ಈ ಐತಿಹಾಸಿಕ ನಿರ್ಧಾರಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರನ್ನು ಅಭಿನಂದಿಸುತ್ತೇನೆ" ಎಂದಿದ್ದಾರೆ.
ಅಷ್ಟೇ ಅಲ್ಲದೆ, "ಇದು ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ದಿಟ್ಟ ಹೆಜ್ಜೆ ಎಂದು ನಾನು ನಂಬುತ್ತೇನೆ. ಜಮ್ಮು, ಕಾಶ್ಮೀರ ಮತ್ತು ಲಡಾಕ್ನಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ. 370 ನೇ ವಿಧಿಯನ್ನು ರದ್ದುಪಡಿಸುವುದು ಜನ ಸಂಘದ ದಿನಗಳಿಂದಲೂ ಬಿಜೆಪಿಯ ಪ್ರಮುಖ ಸಿದ್ಧಾಂತದ ಒಂದು ಭಾಗವಾಗಿದೆ" ಎಂದು ಅಡ್ವಾಣಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ವಿರೋಧಪಕ್ಷಗಳ ತೀವ್ರ ವಿರೋಧದ ನಡುವೆಯೂ ಆರ್ಟಿಕಲ್ 370ನ್ನು ರದ್ದುಪಡಿಸುವ ಬಗ್ಗೆ ಘೋಷಿಸಿದ ಗೃಹ ಸಚಿವ ಅಮಿತ್ ಶಾ, 2019ರ ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಇಂದು ಈಡೇರಿಸಿದೆ.
ಇನ್ನು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಭಾರತದ ಇತಿಹಾಸದಲ್ಲೇ ಇಂದು ಕರಾಳ ದಿನ ಎಂದಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪಾಕ್ ವಿದೇಶಾಂಗ ಸಚಿವಾಲಯ ಟೀಕಿಸಿದ್ದು, ಇದು ಅಂತಾರಾಷ್ಟ್ರೀಯ ಸಂಬಂಧಿತ ವಿಚಾರ ಆಗಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.