ಮುಂಬೈ: ರಂಜಾನ್ ನಿಮಿತ್ತ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟಕ್ಕೆ ತಡೆಯುಂಟು ಮಾಡಿದ್ದ ಪಾಕ್ ಸೇನಾ ಸಿಬ್ಬಂದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಶಿವಸೇನೆ, ಪಾಕಿಸ್ತಾನ ಹೆಂಡ ಕುಡಿದ ಕೋತಿಯಂತೆ ಆಡುತ್ತಿದೆ ಎಂದಿದೆ.
ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ, ಪಾಕಿಸ್ತಾನದ ಸೇನಾ ಸಿಬ್ಬಂದಿಯ ಕೃತ್ಯವನ್ನು ತೀವ್ರವಾಗಿ ಖಂಡಿಸಿ, ಅಲ್ಲಿನ ಸರ್ಕಾರದ ವಿರುದ್ಧವೂ ಹರಿಹಾಯ್ದಿದ್ದಾರೆ. ಪಾಕ್ ಸೇನೆಯನ್ನು ಮದ್ಯಪಾನ ಮಾಡಿದ ಕೋತಿಗಳಿಗೆ ಹೋಲಿಸಿದ್ದು, ಪಾಕ್ ಕೋತಿಗಳು ಮಾಡಿದ ಈ ಅವಮಾನವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಉಗ್ರ ಮಸೂದ್ ವಿಚಾರದಲ್ಲಿ ಪಾಕಿಸ್ತಾನ ದ್ವಂದ್ವ ನೀತಿ ಪಾಲಿಸುತ್ತಿದೆ. ನಮ್ಮ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಭಿನಂದನೆ ತಿಳಿಸಿ, ಶಾಂತಿ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಜತೆಯಾಗಿ ಕೆಲಸ ಮಾಡೋಣ ಎಂದಿದ್ದಾರೆ. ಆದರೆ, ಸೇನಾ ಸಿಬ್ಬಂದಿ ಇಂತಹ ಹೀನ ವರ್ತನೆ ತೋರಿಸಿದ್ದಾರೆ. ಇದ್ಯಾವ ರೀತಿಯ ಶಾಂತಿ ಪಾಲನೆ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.