ಜಮ್ಮು: ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ, ವಸತಿ ಪ್ರದೇಶಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸುವ ಮೂಲಕ ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ಮತ್ತೆ ತನ್ನ ಅಟ್ಟಹಾಸ ಪ್ರದರ್ಶಿಸಿದೆ.
ಎಲ್‌ಒಸಿ ಪಕ್ಕದ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆಯು ಮತ್ತೊಮ್ಮೆ ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ರಾಜೌರಿ ಜಿಲ್ಲೆಯ ಎಲ್‌ಒಸಿ ಪಕ್ಕದಲ್ಲಿರುವ ಕೆರ್ರಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದೆ. ಈ ವಲಯದಲ್ಲಿ, ಕಳೆದ ರಾತ್ರಿಯಿಂದ ಪಾಕಿಸ್ತಾನ ನಿರಂತರವಾಗಿ ಗುಂಡಿನ ಮಳೆಗೈದಿದೆ. ಮುನ್ನೆಚ್ಚರಿಕೆಯಾಗಿ, ಕೆರ್ರಿ ವಲಯದ ಗಡಿಯ ಸುತ್ತ 3 ರಿಂದ 4 ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಸೇನೆಯು ಸೂಕ್ತ ಪ್ರತಿಕ್ರಿಯೆ ನೀಡಿದೆ.
ಆಗಸ್ಟ್ 17 ರಂದು ಪಾಕಿಸ್ತಾನವು ರಾಜೌರಿಯ ನೌಶೇರಾ ಸೆಕ್ಟರ್ ಮತ್ತು ಮೆಂಧರ್ನ ಕೃಷ್ಣ ವ್ಯಾಲಿ ಸೆಕ್ಟರ್‌ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಈ ಸಂದರ್ಭದಲ್ಲಿ ಲಾನ್ಸ್ ನಾಯಕ್ ಸಂದೀಪ್ ಥಾಪಾ ನೌಶೇರಾ ವಲಯದಲ್ಲಿ ಹುತಾತ್ಮರಾದರು.
ಪಾಕಿಸ್ತಾನದ ಶೆಲ್ ದಾಳಿಗೆ ಭಾರತೀಯ ಸೇನೆಯು ಸೂಕ್ತ ಉತ್ತರ ನೀಡಿತು ಮತ್ತು ಪಾಕಿಸ್ತಾನದ ಅನೇಕ ಚೆಕ್‌ಪೋಸ್ಟ್‌ಗಳನ್ನು ನಾಶಪಡಿಸಿತು. ಅಲ್ಲದೆ, ಭಾರತೀಯ ಸೇನೆಯ ಈ ಪ್ರತೀಕಾರದ ಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿರುವ ಬಗ್ಗೆ ವರದಿಗಳಿವೆ. ಸೇನಾ ಮೂಲಗಳ ಪ್ರಕಾರ, ಶನಿವಾರ ಬೆಳಿಗ್ಗೆ 6: 30 ಕ್ಕೆ ನೌಶೇರಾ ಸೆಕ್ಟರ್‌ನಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ. "ಈ ಅಪ್ರಚೋದಿತ ದಾಳಿಗೆ ನಾವುಸೂಕ್ತವಾದ ಉತ್ತರವನ್ನು ನೀಡುತ್ತಿದ್ದೇವೆ" ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.