ರಷ್ಯಾ ಮತ್ತು ಉಕ್ರೇನ್ ಮಧ್ಯದ ಕದನ ಆರಂಭವಾದ ಬಳಿಕ, ಈ ಯುದ್ಧ ಭಾರತೀಯ ಸೇನೆಯೂ ಸೇರಿದಂತೆ, ಜಗತ್ತಿನ ವಿವಿಧ ಸೇನಾಪಡೆಗಳಿಗೆ ಹಲವು ಪಾಠಗಳನ್ನು ಕಲಿಸಿದೆ. ಈ ಯುದ್ಧದ ಪರಿಣಾಮವಾಗಿ, ಕದನದ ಕುರಿತಾದ ಹಲವು ಸಾಂಪ್ರದಾಯಿಕ ನೋಟಗಳನ್ನು ಮರುಪರಿಶೀಲನೆ ನಡೆಸಬೇಕಾದ ಅಗತ್ಯವಿದೆ. ಅದರೊಡನೆ, ಭವಿಷ್ಯದಲ್ಲಿ ಯುದ್ಧಗಳು ಯಾವ ರೀತಿ ಜರುಗುತ್ತವೆ ಎನ್ನುವುದನ್ನೂ ಆಲೋಚಿಸಬೇಕಿದೆ. ಡ್ರೋನ್‌ಗಳ ಸಾಮರ್ಥ್ಯಗಳು, ಮಿಲಿಟರಿ ಶಕ್ತಿಗಳ ಕುರಿತೂ ಯೋಚಿಸಬೇಕಾಗುತ್ತದೆ.
ರಷ್ಯಾ ಉಕ್ರೇನ್ ಕದನದ ಪರಿಣಾಮ ಎಷ್ಟು ತೀವ್ರವಾಗಿದೆ ಎಂದರೆ, ಜರ್ಮನಿಯಂತಹ ಐರೋಪ್ಯ ರಾಷ್ಟ್ರಗಳು ತಮ್ಮ ಪ್ರದೇಶದಲ್ಲಿ ಯುದ್ಧ ಸಂಭವಿಸುವುದಿಲ್ಲ ಎಂಬ ಯೋಚನೆಗಳಿಂದ ತಕ್ಷಣವೇ ಎಚ್ಚರಗೊಂಡಂತೆ ಕಂಡುಬರುತ್ತಿವೆ. ಜರ್ಮನಿಯಂತೂ ತನ್ನ ರಕ್ಷಣಾ ವೆಚ್ಚವನ್ನು 100% ಹೆಚ್ಚಿಸಿದೆ.
ಇದನ್ನೂ ಓದಿ: Amitabh Bachchan ಜೊತೆ ಕುಳಿತ ಈ ಮಗು ಈಗ ಸೂಪರ್ ಸ್ಟಾರ್: ಯಾರೆಂದು ಗೆಸ್ ಮಾಡಿ ನೋಡೋಣ!
ತನ್ನ ರಕ್ಷಣಾ ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಿದೆ ಭಾರತ:
ಮಿಲಿಟರಿಯ ಆಂತರಿಕ ವಿಶ್ಲೇಷಕರ ಪ್ರಕಾರ, ರಷ್ಯಾ ಉಕ್ರೇನ್‌ಗಳ ನಡುವಿನ ಸಮರದಿಂದ ಕಲಿಯಬೇಕಾದ ಪ್ರಮುಖ ಪಾಠವೆಂದರೆ ಭಾರತ ತನ್ನ ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಸ್ವಾವಲಂಬನೆ ಸಾಧಿಸುವುದು.
ವಿಶ್ಲೇಷಕರು ರಕ್ಷಣೆಗಾಗಿ ಒಂದು ಸ್ವತಂತ್ರ ವ್ಯವಸ್ಥೆಯನ್ನು ನಿರ್ಮಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದು, ಆ ಮೂಲಕ ರಕ್ಷಣಾ ಪೂರೈಕೆ ನಿರಂತರವಾಗಿ ನಡೆಯಲು ಸಾಧ್ಯವಾಗುತ್ತದೆ. ಕದನದ ಸಂದರ್ಭದಲ್ಲಿ ಆಯುಧ ಪೂರೈಕೆಗಾಗಿ ಇನ್ನೊಂದು ರಾಷ್ಟ್ರದ ಮೇಲೆ ಅವಲಂಬಿತವಾಗಿರುವುದು ಸರಿಯಲ್ಲ ಎನ್ನುವುದು ಅವರ ವಾದವಾಗಿದೆ.
ರಷ್ಯಾ ತಾನಾಗಿಯೇ ಈ ಯುದ್ಧವನ್ನು ಆರಂಭಿಸಿದ್ದರೂ, ಅದರ ಬಳಿ ಇದ್ದ ಆಯುಧ ಪೂರೈಕೆ ಖಾಲಿಯಾಗುತ್ತಾ ಬಂದಿದೆ. ಪ್ರಸ್ತುತ ರಷ್ಯಾ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಗೆ ಮಾತ್ರವಲ್ಲದೆ, ತನಗೆ ಬೇಕಾದ ಗುಂಡುಗಳು, ಬೂಟುಗಳಿಗೂ ವಿದೇಶಗಳನ್ನು ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ ಎಂದು ರಕ್ಷಣಾ ವಲಯದೊಳಗಿನ ವ್ಯಕ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ. ಅವರು ರಕ್ಷಣಾ ವಿಚಾರದಲ್ಲಿ ಸ್ವಾವಲಂಬನೆ ಅತ್ಯಗತ್ಯ ಎಂದು ಒತ್ತಿ ಹೇಳಿದ್ದಾರೆ.
ಉಕ್ರೇನ್ ರಷ್ಯಾದ ದಾಳಿಯನ್ನು ತಡೆಯಲು, ಎದುರಿಸಲು ಅಗತ್ಯ ಸಂಪನ್ಮೂಲಗಳಿಗಾಗಿ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲ ಎದುರು ನೋಡುತ್ತಿದೆ.
ಇನ್ನು 2016ರ ಉರಿ ಉಗ್ರಗಾಮಿ ದಾಳಿಯ ಬಳಿಕ, ಭಾರತೀಯ ಸೇನಾಪಡೆಗಳು ಜಗತ್ತಿನಾದ್ಯಂತ ಆಯುಧಗಳಿಗಾಗಿ ಹುಡುಕಾಟ ನಡೆಸಬೇಕಾಯಿತು. ಸಂಭಾವ್ಯ ಯುದ್ಧಕ್ಕಾಗಿ ತಯಾರಿ ನಡೆಸಲು ತನ್ನ ಟಿ-90 ಟ್ಯಾಂಕ್‌ಗಳಿಗೆ ಅಗತ್ಯವಿದ್ದ ಶೆಲ್‌ಗಳಿಗಾಗಿ ಭಾರತ ಹುಡುಕಾಡಬೇಕಾಯಿತು.
ಭಾರತದ ಖರೀದಿ ಪಟ್ಟಿಯಲ್ಲಿ ತನ್ನ ಮುಂಚೂಣಿ ಯುದ್ಧ ವಿಮಾನವಾದ ಸು-30 ಎಂಕೆಐ ಮತ್ತು ಬೋಫೋರ್ಸ್ ಫಿರಂಗಿಗಳಿಗೆ ಬೇಕಾದ ಆಯುಧಗಳೂ ಸೇರಿದ್ದವು. 2019ರಲ್ಲಿ, ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ಕೆಲವು ಮಾಧ್ಯಮಗಳೊಡನೆ ಮಾತನಾಡುತ್ತಾ, ಭಾರತೀಯ ಸೇನಾಪಡೆಗಳ ಬಳಿ ಒಂದು ವೇಳೆ ಪಾಕಿಸ್ತಾನದೊಡನೆ ಯುದ್ಧ ನಡೆದರೆ ಹತ್ತು ದಿನಗಳ ಕಾಲ ತೀವ್ರ ಕದನಕ್ಕೆ ಅಗತ್ಯವಿರುವ ಆಯುಧಗಳ ಪೂರೈಕೆ ಇದೆ ಎಂದಿದ್ದರು. ಭಾರತದ ಗುರಿ ತನ್ನ ಉತ್ತರ ಮತ್ತು ಪೂರ್ವ ಗಡಿಗಳಲ್ಲಿ ಯುದ್ಧ ಸಂಭವಿಸಿದರೆ ಅದಕ್ಕಾಗಿ 30 ದಿನಗಳ ಅಗತ್ಯಗಳಿಗೆ ತಕ್ಕಷ್ಟು ಆಯುಧ ಸಂಗ್ರಹಿಸುವುದು ಎಂದಿದ್ದರು.
ಪ್ರಸ್ತುತ ಯುದ್ಧದಲ್ಲಿ ಉಕ್ರೇನಿನ ಮಿಲಿಟರಿ ಉಪಕರಣಗಳು ಹಾನಿಗೊಳಗಾಗಿದ್ದು, ಅವುಗಳ ನಿರ್ವಹಣೆ ಉಕ್ರೇನ್‌ಗೆ ಕಷ್ಟಕರವಾಗಿದೆ. ಅವುಗಳ ಶೀಘ್ರ ದುರಸ್ತಿಗಾಗಿ ಉಕ್ರೇನ್ ವಿದೇಶೀ ನೆರವನ್ನು ಎದುರು ನೋಡುತ್ತಿದೆ.
ಹಲವು ಮೂಲಗಳು ಭಾರತೀಯ ಸೇನೆ ನಿರಂತರವಾಗಿ ಆಯುಧ ಪೂರೈಕೆ ಮಾಡುವ ಸರಪಳಿಯನ್ನು ಹೊಂದುವ ಅಗತ್ಯತೆಯಿದ್ದು, ವಿವಿಧ ಉಪಕರಣಗಳು ಹಾಗೂ ಆಯುಧಗಳನ್ನು ದೇಶೀಯವಾಗಿ ತಯಾರಿಸಲು ಕ್ರಮ ಕೈಗೊಂಡಿರುವುದು ಒಂದು ಧನಾತ್ಮಕ ಬೆಳವಣಿಗೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭವಿಷ್ಯದ ಸಂಘರ್ಷಗಳು ಶೀಘ್ರವಾಗಿ ಮತ್ತು ನಿರ್ಣಾಯಕವಾಗಿ ಕೊನೆಯಾಗುವುದು ಅನುಮಾನ:
ರಷ್ಯಾ ಮತ್ತು ಉಕ್ರೇನ್ ಕದನವನ್ನು ಗಮನಿಸಿದಾಗ, ಭಾರತೀಯ ಸೇನೆಗೂ ಭವಿಷ್ಯದ ಸಮರಗಳು ದೀರ್ಘಕಾಲದ ತನಕ ಮುಂದುವರಿಯಬಹುದು ಎನ್ನುವುದು ಅರಿವಾಗಿದೆ. ಈ ಬೆಳವಣಿಗೆ ಭವಿಷ್ಯದ ಯುದ್ಧಗಳು ಸಣ್ಣ ಅವಧಿಯದ್ದಾಗಿದ್ದು, ವೇಗವಾಗಿ ಜರುಗಲಿವೆ ಎಂಬ ನಂಬಿಕೆಗಳಿಗೆ ವಿರುದ್ಧವಾಗಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಭಾರತೀಯ ಸೇನೆ ದೀರ್ಘಾವಧಿಯ ಯುದ್ಧದಲ್ಲಿ ಭಾಗಿಯಾಗಬೇಕಾದ ಸಾಧ್ಯತೆಗಳನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ ಎನ್ನುತ್ತವೆ ಮೂಲಗಳು.
ಅವರ ಪ್ರಕಾರ, ಸೇನಾಪಡೆಗಳು ಸಣ್ಣ ಅವಧಿಯ ಯುದ್ಧಗಳಿಗೆ ತಯಾರಿ ನಡೆಸಿದ್ದು, ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಣಾಂತಿಕವಲ್ಲದ ಸೈಬರ್ ಯುದ್ಧವೂ ಸೇರಿಕೊಂಡಿದೆ.
ಭಾರತೀಯ ಸೇನೆ ಸಣ್ಣ ಅವಧಿಯ, ತೀವ್ರ ಕದನಕ್ಕೆ ತಯಾರಿ ನಡೆಸಿದ್ದು, ಅದು ಸೇನಾಪಡೆಗಳ ಕೋಲ್ಡ್ ಸ್ಟಾರ್ಟ್ ಡಾಕ್ಟ್ರಿನ್ ಮೂಲಕ ಆರಂಭಗೊಂಡು, ಬಳಿಕ ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್‌ಗಳ ರಚನೆ ಹಾಗೂ ಯುದ್ಧ ಸಂಪನ್ಮೂಲಗಳ ಸಂಗ್ರಹದೊಡನೆ ಮುಂದುವರಿಯುವಂತಿತ್ತು.
ಇನ್ನೊಂದು ಮೂಲದ ಪ್ರಕಾರ, 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧ ಕ್ಷಿಪ್ರಗತಿಯ ಯುದ್ಧವಾಗಿದ್ದು, ಬೃಹತ್ ಪ್ರಮಾಣದಲ್ಲಿ ಜರುಗಿತ್ತು. ಆದರೆ ಇನ್ನೊಂದೆಡೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ರೀತಿಯಿಂದಾಗಿ ಹೆಚ್ಚು ಗಮನ ಸೆಳೆದಿತ್ತು. ಅದು ಕೇವಲ ಒಂದು ಕಾರ್ಗಿಲ್ ವಲಯಕ್ಕೆ ಮಾತ್ರವೇ ಸೀಮಿತವಾಗಿತ್ತು.
ಪಾಕಿಸ್ತಾನದ ಜೊತೆ ಏನಾದರೂ ಭಾರತ ಸಾಂಪ್ರದಾಯಿಕ ಯುದ್ಧ ನಡೆಸಬೇಕಾದರೆ, ಆ ಯುದ್ಧ ದೀರ್ಘಕಾಲ ನಡೆಯುವುದಿಲ್ಲ. ಆದರೆ ಒಂದು ವೇಳೆ ಉತ್ತರ ಅಥವಾ ಪೂರ್ವದ ಗಡಿಯಲ್ಲಿ ಭಾರತದೊಡನೆ ಕದನಕ್ಕಿಳಿದರೆ, ಅದು ದೀರ್ಘಕಾಲ ನಡೆಯಬಹುದು. ಅದರ ತೀವ್ರತೆ ಕಾಲದಿಂದ ಕಾಲಕ್ಕೆ ಬದಲಾಗಬಹುದು.
ಹಾಗೇನಾದರೂ ಒಂದು ವೇಳೆ ದೀರ್ಘಕಾಲದ ಕದನ ನಡೆಯುತ್ತದೆಂದರೆ, ಭಾರತ ದೀರ್ಘಾವಧಿಗೆ ಸಾಕಷ್ಟು ಮಿಲಿಟರಿ ಸಂಗ್ರಹವನ್ನು ಇಟ್ಟುಕೊಳ್ಳುವುದು ಸೂಕ್ತವಾಗುತ್ತದೆ.
ಸಾಂಪ್ರದಾಯಿಕ ಆಯುಧಗಳು ಹಾಗೂ ಭೌತಿಕ ಉಪಸ್ಥಿತಿಯ ಪ್ರಾಮುಖ್ಯತೆ:
ಭಾರತವೂ ಸೇರಿದಂತೆ, ಜಾಗತಿಕವಾಗಿ ಹಲವು ಮಿಲಿಟರಿ ವೃತ್ತಿಪರರು ಸಾಂಪ್ರದಾಯಿಕ ಆಯುಧಗಳಾದ ಮಿಲಿಟರಿ ಟ್ಯಾಂಕ್‌ಗಳು ಮತ್ತು ಯುದ್ಧ ವಿಮಾನಗಳು ನಿರುಪಯುಕ್ತವಾಗುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
2020ರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಎಂ ಎಂ ನರವಣೆ ಅವರು ಸಂಗೀತ ಕೇಳಲು ಬಳಕೆಯಾಗುತ್ತಿದ್ದ ಸೋನಿ ವಾಕ್‌ಮನ್ ಹೇಗೆ ಹೊಸ ತಂತ್ರಜ್ಞಾನ ಬಂದಾಗ ಮರೆಯಾಯಿತೋ, ಅದೇ ರೀತಿ 20 ಶತಮಾನದ ಮಿಲಿಟರಿಯ ಪ್ರಮುಖ ಆಯುಧಗಳು ಹಳೆಯವಾಗುತ್ತಿವೆ ಎಂದಿದ್ದರು.
ಆದರೆ ಈಗ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಕದನದಲ್ಲಿ ಎರಡೂ ರಾಷ್ಟ್ರಗಳೂ ಸಾಂಪ್ರದಾಯಿಕ ಆಯುಧಗಳನ್ನು ಬಳಸುತ್ತಿವೆ. ಆದ್ದರಿಂದ ಸಾಂಪ್ರದಾಯಿಕ ಆಯುಧಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಾಬೀತಾಗುತ್ತಿದೆ.
ಭವಿಷ್ಯದ ಯುದ್ಧಗಳಲ್ಲಿ ಸೈಬರ್ ಸ್ಪೇಸ್ ಹಾಗೂ ಬಾಹ್ಯಾಕಾಶಗಳೂ ಭಾಗಿಯಾಗಲಿವೆ. ಆದರೂ, ಮುಂದಿನ ಕನಿಷ್ಠ ಇಪ್ಪತ್ತು ವರ್ಷಗಳ ಕಾಲ ಸಾಂಪ್ರದಾಯಿಕ ಯುದ್ಧೋಪಕರಣಗಳ ಪ್ರಸ್ತುತತೆ ಮುಂದುವರಿಯಲಿದೆ. ರಾಷ್ಟ್ರಗಳೂ ಎಲ್ಲ ಅಂಶಗಳ ಸಮತೋಲಿತ ಸಂಯೋಜನೆಯನ್ನು ಹೊಂದಬೇಕಾಗುತ್ತದೆ. ಈಗಲೇ ಸಾಂಪ್ರದಾಯಿಕ ಆಯುಧಗಳನ್ನು ದೂರ ಮಾಡುವುದು ಅವಿವೇಕದ ನಿರ್ಧಾರವಾಗಲಿದೆ ಎಂದು ಇನ್ನೊಂದು ಮೂಲ ಹೇಳುತ್ತದೆ.
ಇಂದಿಗೂ ಪೂರ್ಣ ಪ್ರಮಾಣದಲ್ಲಿ ತರಬೇತಿ ಪಡೆದ ಸೈನಿಕರು ಯಾವುದೇ ಯುದ್ಧದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ಅಧಿಕೃತ ವ್ಯಕ್ತಿಯೊಬ್ಬರು, ಮುಂದಿನ ದಿನಗಳಲ್ಲಿ ಯುದ್ಧಗಳೇನೋ ಪಾರಂಪರಿಕ ಟ್ರೆಂಚ್ ವಿಧಾನದಲ್ಲಿ ನಡೆಯದಿರಬಹುದು. ಆದರೆ ಭವಿಷ್ಯದಲ್ಲಿ ಬೃಹತ್ ಪ್ರಮಾಣದ ಆರ್ಟಿಲರಿ ದಾಳಿ ನಡೆಸಿದ ಬಳಿಕ ವೈರಿ ನೆಲವನ್ನು ಆಕ್ರಮಿಸಿಕೊಳ್ಳಲು ಸಾಕಷ್ಟು ಪ್ರಮಾಣದ ಸೈನಿಕರು ಬೇಕಾಗುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದರು.
ಡ್ರೋನ್ ಬಳಕೆಯ ಅನುಕೂಲಗಳು ಮತ್ತು ಮಿತಿಗಳು:
ಅಜರ್‌ಬೈಜಾನ್ ಹಾಗೂ ಅರ್ಮೇನಿಯಾಗಳ ನಡುವಿನ ಕದನ ಯುದ್ಧದ ಗತಿ ಬದಲಿಸುವಲ್ಲಿ ಡ್ರೋನ್‌ಗಳ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಆರಂಭಿಕ ಹಂತದಲ್ಲಿ ಉಕ್ರೇನ್ ಡ್ರೋನ್‌ಗಳನ್ನು ಬಳಸಿ ರಷ್ಯಾದ ಟ್ಯಾಂಕ್‌ಗಳು ಮತ್ತು ಆರ್ಟಿಲರಿಗಳ ಮೇಲೆ ದಾಳಿ ನಡೆಸಿತು. ಆಗ ಹಲವು ತಜ್ಞರು ಮುಂದಿನ ದಿನಗಳಲ್ಲಿ ಯುದ್ಧ ವಿಮಾನಗಳು ಪ್ರಸ್ತುತತೆ ಕಳೆದುಕೊಳ್ಳಲಿವೆ ಎಂದರು.
ಆದರೆ ರಷ್ಯಾ ಉಕ್ರೇನ್ ಯುದ್ಧ ಅರಂಭವಾಗಿ ಹನ್ನೆರಡು ತಿಂಗಳುಗಳು ಉರುಳಿವೆ. ಡ್ರೋನ್‌ಗಳು ಕಡಿಮೆ ವೆಚ್ಚದಾಯಕ ಮತ್ತು ಶತ್ರುಗಳ ಪ್ರದೇಶದ ಮೆಲೆ ಯಶಸ್ವಿಯಾಗಿ ದಾಳಿ ನಡೆಸಬಲ್ಲವಾದರೂ, ಅತ್ಯಂತ ತೀವ್ರ ವಾಯು ರಕ್ಷಣೆ ಹೊಂದಿರುವ ಪ್ರದೇಶಗಳಲ್ಲಿ ಅವುಗಳ ಉಪಯುಕ್ತತೆ ಪ್ರಶ್ನಾರ್ಹವಾಗಿದೆ.
ಟರ್ಕಿ ನಿರ್ಮಾಣದ ಬೇರಕ್ಟರ್ ಟಿಬಿ2 ಡ್ರೋನ್‌ಗಳು ಉಕ್ರೇನ್ ಬಳಸಿದ ಅತ್ಯಂತ ಅಸಾಧಾರಣ ಆಯುಧ ಎಂದು ಪರಿಗಣಿಸಲ್ಪಟ್ಟಿವೆ. ಅದನ್ನು ಗಮನಿಸಿದ ರಷ್ಯನ್ನರೂ ಕ್ಷಿಪ್ರವಾಗಿ ಇರಾನ್‌ನಿಂದ ಡ್ರೋನ್‌ಗಳನ್ನು ಖರೀದಿಸಿ, ಇದೇ ಉದ್ದೇಶಗಳಿಗೆ ಬಳಸಿಕೊಂಡರು.
ಆದರೆ ರಷ್ಯಾ ಮತ್ತು ಉಕ್ರೇನ್ ಎರಡೂ ತಮ್ಮ ಕಾರ್ಯತಂತ್ರಗಳಲ್ಲಿ ಬದಲಾವಣೆ ತಂದುಕೊಂಡಿದ್ದು, ಪ್ರಸ್ತುತ ಟರ್ಕಿಯ ಡ್ರೋನ್‌ಗಳು ಮತ್ತು ಇರಾನಿನ ಡ್ರೋನ್‌ಗಳು ನಿರುಪಯುಕ್ತವಾಗಿವೆ.
ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ (ಯುಎವಿ) ಅಥವಾ ಲಾಯ್ಟರಿಂಗ್ ಮ್ಯುನಿಷನ್‌ಗಳಿಗೆ ಭಾರತ, ಚೀನಾ ಅಥವಾ ಪಾಕಿಸ್ತಾನದಂತಹ ಸ್ಪರ್ಧಾತ್ಮಕ ವಾತಾವರಣದಲ್ಲಿ ಪರಿಣಾಮಕಾರಿಯಾಗುವುದು ಕಷ್ಟಕರ. ಈ ರೀತಿಯ ಡ್ರೋನ್‌ಗಳು ಅವುಗಳಿಗೆ ವಿರೋಧ ಇಲ್ಲದಿರುವಲ್ಲಿ ಮಾತ್ರವೇ ಯಶಸ್ವಿಯಾಗಬಲ್ಲವು. ಆದ್ದರಿಂದ ಅಮೆರಿಕನ್ನರು ಅಫ್ಘಾನಿಸ್ತಾನದಲ್ಲಿ ಡ್ರೋನ್‌ಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದರು.
ಆದರೆ, ಗುಂಪಾಗಿ ಬರುವ, ಎದುರಾಳಿಗಳ ರಕ್ಷಣೆಯನ್ನು ಭೇದಿಸುವ ಸಾಮರ್ಥ್ಯ ಹೊಂದಿರುವ ಡ್ರೋನ್ ಸ್ವಾರ್ಮ್‌ಗಳನ್ನು ತಡೆಯುವುದು ನಿಜಕ್ಕೂ ಸವಾಲಾಗಿದೆ.
ಗಡಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಮತ್ತು ಚಟುವಟಿಕೆಗಳ ಮೇಲೆ ಕಣ್ಣಿಡಲು ಡ್ರೋನ್‌ಗಳು ಸೂಕ್ತವಾಗಿವೆ. ಆದರೆ ಅವುಗಳು ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಅವುಗಳು ಯುದ್ಧ ವಿಮಾನಗಳಂತೆ ಗಡಿಯೊಳಗೆ ಪ್ರವೇಶಿಸಿ ದಾಳಿ ನಡೆಸಲೂ ಸಾಧ್ಯವಿಲ್ಲ. ರಷ್ಯಾ ಮತ್ತು ಉಕ್ರೇನ್‌ಗಳು ಬಳಸಿದ ಬಹುತೇಕ ಡ್ರೋನ್‌ಗಳು ಈಗ ನಾಶವಾಗಿವೆ.
ಒಂದು ಲೆಕ್ಕಾಚಾರದ ಪ್ರಕಾರ, ಒಂದು ಡ್ರೋನನ್ನು ಹೊಡೆದುರುಳಿಸಲು ಕ್ಷಿಪಣಿ ಪ್ರಯೋಗಿಸುವುದೆಂದರೆ ಡ್ರೋನ್ ಪ್ರಯೋಗಿಸುವುದರ ಏಳು ಪಟ್ಟು ಹೆಚ್ಚು ವೆಚ್ಚದಾಯಕವಾಗಿರುತ್ತದೆ.
ಯುದ್ಧಕ್ಕೆ ಬೇಕಿದೆ ಏಕೀಕೃತ ಮತ್ತು ಅಂತರ್ ಸಂಪರ್ಕಿತ ವಿಧಾನ:
ಹಲವು ತಜ್ಞರ ಪ್ರಕಾರ, ರಷ್ಯಾದ ಕಾರ್ಯತಂತ್ರದಲ್ಲಿದ್ದ ಬಹುದೊಡ್ಡ ತೊಂದರೆ ಎಂದರೆ ರಷ್ಯಾದ ಸೇನಾಪಡೆಗಳ ನಡುವಿನ ಸಹಕಾರ ಹಾಗೂ ಸಮನ್ವಯದ ಕೊರತೆ.
ರಷ್ಯಾದ ದಾಳಿಯ ಆರಂಭಿಕ ವೈಫಲ್ಯಕ್ಕೆ ಕಾರಣವೆಂದರೆ, ಶಸ್ತ್ರಸಜ್ಜಿತ ಪಡೆಗಳು, ಸೈನಿಕರು, ಸ್ವಯಂಚಾಲಿತ ಆಯುಧಗಳು, ವಾಯು ರಕ್ಷಣೆ, ವೈಮಾನಿಕ ಹಾಗೂ ಪೂರೈಕೆ ಸರಣಿಗಳು ಪರಸ್ಪರ ಸಹಕರಿಸುತ್ತಿರಲಿಲ್ಲ.
ರಷ್ಯಾದ ಸೇನಾಪಡೆಗಳ ಅಂಗಗಳು ಯುದ್ಧರಂಗದಲ್ಲಿ ಒಂದಕ್ಕೊಂದು ಪೂರಕವಾಗಿರಲಿಲ್ಲ. ರಷ್ಯಾದ ವಾಯುಪಡೆ ಅಮಾಯಕ ನಾಗರಿಕರ ಪ್ರಾಣಹಾನಿ ಆಗಬಹುದು ಎಂದು ಉಕ್ರೇನಿನ ಪ್ರವೇಶ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಲು ಹಿಂಜರಿಯುತ್ತಿತ್ತು. ಈ ನಡೆಯಿಂದಾಗಿ ಸೇನಾಪಡೆಗಳು ಮುಂದೊತ್ತಲು ಕಷ್ಟಕರವಾಗಿತ್ತು. ಅದರೊಡನೆ, ಪದಾತಿದಳ ಸಶಸ್ತ್ರ ಪಡೆಗಳಿಗೆ ಪೂರಕ ಬೆಂಬಲ ನೀಡಲು ಸಾಧ್ಯವಾಗದೆ, ಅವರು ಮುಂದೆ ಸಾಗಲು ಕಷ್ಟಕರವಾಯಿತು. ಇದು ರಷ್ಯನ್ನರು ಯುದ್ಧದಲ್ಲಿ ಮಾಡಿದ ಪ್ರಮಾದಗಳಾಗಿದ್ದವು.
ಆರಂಭಿಕ ದಾಳಿಗಳು ವಿಫಲವಾದ ಪರಿಣಾಮವಾಗಿ, ರಷ್ಯಾದ ಸೈನಿಕರು ಸ್ಫೂರ್ತಿ ಕಳೆದುಕೊಂಡಿದ್ದರು. ಶಕ್ತಿಶಾಲಿ ರಷ್ಯಾದ ಪಡೆಗಳನ್ನು ಹಿಮ್ಮೆಟ್ಟಿಸಿದ ಉಕ್ರೇನ್ ಸೇನೆ ಹೆಚ್ಚು ಉತ್ಸಾಹ ಗಳಿಸಿಕೊಂಡಿತು.
ಯುದ್ಧದ ಸಂದರ್ಭದಲ್ಲಿ ಸೇನೆಯ ಎಲ್ಲ ಅಂಗಗಳೂ ಒಂದಕ್ಕೊಂದು ಪೂರಕವಾಗಿ ಕಾರ್ಯಾಚರಿಸಬೇಕು. ಭೂಸೇನೆ, ನೌಕಾಪಡೆ, ಹಾಗೂ ವಾಯುಪಡೆಗಳು ಒಂದಕ್ಕೊಂದು ಸಂಪರ್ಕ ಹೊಂದಿರಬೇಕು.
ಇದನ್ನೂ ಓದಿ: IND vs AUS: ಇಂದೋರ್ ಟೆಸ್ಟ್’ನಲ್ಲಿ ಸಿಗುತ್ತಾ ಚ್ಯಾನ್ಸ್! ರೋಹಿತ್-ದ್ರಾವಿಡ್ ಕೈಯಲ್ಲಿದೆ ಈ ಇಬ್ಬರು ಆಟಗಾರರ ಭವಿಷ್ಯ
1971ರ ಯುದ್ಧದಲ್ಲಿ ಭಾರತದ ಜಯದ ಹಿಂದಿನ ಪ್ರಮುಖ ಕಾರಣಗಳೆಂದರೆ, ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಗಳ ನಡುವೆ ಇದ್ದ ಜಂಟಿ ಪ್ರಯತ್ನಗಳು. ಅಮೆರಿಕಾ ಸಹ ಇದೇ ರೀತಿಯ ಕಾರ್ಯತಂತ್ರವನ್ನು ಸಮರ ರಂಗದಲ್ಲಿ ಬಳಸಿಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.