Karnataka Assembly Election 2023: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ಮೊಟ್ಟ ಮೊದಲ ಬಾರಿಗೆ ದಿವ್ಯಾಂಗರು ಮತ್ತು 80 ವರ್ಷಗಳಿಗಿಂತ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮನೆಯಿಂದಲೇ ವೋಟ್ ಮಾಡುವ ಅವಕಾಶ ನೀಡಿದೆ. ಚುನಾವಣಾ ಆಯೋಗದ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡಿರುವ ಬೆಳಗಾವಿ ಜಿಲ್ಲೆಯ ಶತಾಯುಷಿಯೊಬ್ಬರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಇತರರಿಗೆ ಮಾದರಿಯಾದ ಶತಾಯುಷಿ:
ಹೌದು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ವಯೋವೃದ್ಧರೂ ಹಾಗೂ ದಿವ್ಯಾಂಗರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ 103 ವರ್ಷ 4 ತಿಂಗಳ ವಯೋವೃದ್ಧರಾದ ಮಹಾದೇವ ಮಹಾಲಿಂಗ ಮಾಳಿ ಎಂಬುವವರು ಮೊನ್ನೆ ಸೋಮವಾರ (ಮೇ 01) ದಂಡು ಮನೆಯಿಂದಲೇ ಮತದಾನವನ್ನು ಮಾಡಿ ಇತರರಿಗೆ ಮಾದರಿ ಆಗಿದ್ದಾರೆ.
ಇನ್ನು ಶತಾಯುಷಿ ಆಗಿದ್ದರೂ ಕೂಡ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ಮಹಾದೇವ ಮಹಾಲಿಂಗ ಮಾಳಿ ಅವರ ಉತ್ಸಾಹವನ್ನು ಗುರುತಿಸಿದ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ರಾಜೀವ್ ಕುಮಾರ್, ನಿನ್ನೆ, ಮಂಗಳವಾರ (ಮೇ 02) ಸ್ವತಃ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ವೇಳೆ ಚುನಾವಣೆ ಎಂಬ ಪ್ರಜಾಪ್ರಭುತ್ವದ ಹಬ್ಬದಲ್ಲಿ ಈ ಇಳಿ ವಯಸ್ಸಿನಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಹಾದೇವ ಮಹಾಲಿಂಗ ಮಾಳಿ ಅವರು ಭಾರತದ ಬುನಾದಿಯನ್ನು ಗಟ್ಟಿಗೊಳಿಸಿದ್ದಾರೆ. ಇದರೊಂದಿಗೆ ಇಂದಿನ ಯುವ ಪೀಳಿಗೆಗೆ, ನಗರದಲ್ಲಿ ನೆಲೆಸಿರುವ ಮತದಾರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಅಮೂಲ್ಯ:
ಇನ್ನು 103 ವರ್ಷ ವಯಸ್ಸಾಗಿದ್ದರೂ ಸಹ ತಮ್ಮ ಉತ್ಸಾಹದಿಂದ ಜವಾಬ್ದಾರಿಯುತವಾಗಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಮಹಾದೇವ ಮಹಾಲಿಂಗ ಮಾಳಿ ಅವರು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಎಷ್ಟು ಅಮೂಲ್ಯ ಎಂಬುದನ್ನು ಪ್ರತಿಯೊಬ್ಬರಿಗೂ ತೋರಿಸಿಕೊಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ಭಾರತದ ಚುನಾವಣಾ ಆಯೋಗ ಕೂಡ ಮತದಾನ ಪ್ರಕ್ರಿಯೆಯಲ್ಲಿ ಪ್ರತಿ ವ್ಯಕ್ತಿಯ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತದೆ. ಮತದಾನದಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿರುವುದಾಗಿ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಪ್ರತಿಯೊಬ್ಬರಿಗೂ ತಮ್ಮ ವೋಟ್ ಮಾಡುವ ಹಕ್ಕನ್ನು ಚಲಾಯಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಲು ಸಾಧ್ಯವಾದ ಪ್ರಜೆಗಳಿಗಾಗಿ ಅವರ ಮನೆ ಬಾಗಿಲಿಗೆ ಮತಗಟ್ಟೆಗಳನ್ನು ಕೊಂಡೊಯ್ಯಲು ನಾವು ಬದ್ಧವಾಗಿದ್ದೇವೆ. ಈ ಹಿನ್ನಲೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ವಯೋವೃದ್ಧರು ಹಾಗೂ 40% ಮತ್ತು ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಇದೇ ಮೊಟ್ಟ ಮೊದಲ ಬಾರಿಗೆ ಮನೆಯಿಂದಲೇ ವೋಟ್ ಮಾಡುವ ಐಚ್ಛಿಕ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ- ಕಾಂಗ್ರೆಸ್ ನವರು ಮೋದಿ ಅವರನ್ನು ಬೈದಷ್ಟು ಕಮಲ ಹೆಚ್ಚು ಅರಳಲಿದೆ- ಗೃಹ ಸಚಿವ ಅಮಿತ್ ಶಾ
ಗಮನಾರ್ಹವಾಗಿ, ಪ್ರಸಕ್ತ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 7362 ಮಂದಿ 80ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 1708 ಜನ ವಿಕಲಚೇತನರು ಮನೆಯಿಂದಲೇ ಮತದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಇದೇ 29 ಏಪ್ರಿಲ್ 2023ರಿಂದ ಆರಂಭಗೊಂಡಿರುವ ಮನೆಯಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 6975 ಹಿರಿಯ ನಾಗರೀಕರು ಹಾಗೂ 1661 ಮಂದಿ ವಿಕಲಚೇತನರು ಮತ ಚಲಾವಣೆ ಮಾಡಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತರು ಮಾಹಿತಿ ಹಂಚಿಕೊಂಡಿದ್ದಾರೆ.
ಆಯೋಗಕ್ಕೆ ಕೃತಜ್ಞತೆ ಸಲ್ಲಿಸಿದ ಶತಾಯುಷಿ ಮಹಾದೇವ ಮಹಾಲಿಂಗ ಮಾಳಿ:
ಇನ್ನು ತಮ್ಮಂತಹ ಹಿರಿಯರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಮಾಡಿಕೊಟ್ಟು ಈಗ ಸ್ವತಃ ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರೇ ಕರೆ ಮಾಡಿ ಮಾತನಾಡಿರುವುದು ತಮಗೆ ಬಹಳ ಸಂತಸಮಯವಾದ ಕ್ಷಣ ಎಂದು ಮಹಾದೇವ ಮಹಾಲಿಂಗ ಮಾಳಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಇದೇ ಪ್ರಥಮ ಬಾರಿಗೆ ತಮ್ಮಂತಹ ಹಿರಿಯ ನಾಗರೀಕರಿಗೆ ಮನೆಯಿಂದಲೇ ಮತ ಹಾಕಲು ಅನುವು ಮಾಡಿಕೊಟ್ಟ ಆಯುಕ್ತರಿಗೆ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರತಿಯೊಬ್ಬರ ಹಕ್ಕು. ಈ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ನಾಗರೀಕರೂ ತಪ್ಪದೆ ಕಡ್ಡಾಯವಾಗಿ ಮತ ಹಾಕಿ ಎಂದು ಅವರು ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.