ಬೆಂಗಳೂರು: ಟೈಪ್-1ಮಧುಮೇಹ ಸಮಸ್ಯೆಗೆ ಹೆಲ್ತ್ ಮಿಷನ್ ಅಡಿಯಲ್ಲಿ ಇನ್ಸುಲಿನ್ ಕೊಡಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ(Dr. CN Ashwathnarayana) ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಮಧುಮೇಹ ಜಾಗೃತಿ ಫೌಂಡೇಷನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ ಡಾ. ಅಶ್ವತ್ಥನಾರಾಯಣ, “ಟೈಪ್ 1 ಮಧುಮೇಹ(Diabetes) ಕುರಿತಂತೆ ಇನ್ನಷ್ಟು ಪರಿಣಾಮಕಾರಿ ಸರ್ವೇ ಕಾರ್ಯಗಳು ನಡೆದು ಮಾಹಿತಿ ಸಂಗ್ರಹಿಸುವ ಕೆಲಸ ಆಗಬೇಕಿದೆ. ಮಾಹಿತಿ ಸಂಗ್ರಹಿಸಿ ಡಿಜಿಟಲೀಕರಣಗೊಳಿಸಬೇಕು. ಅದರ ಆಧಾರದ ಮೇಲೆ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಪ್ರಸ್ತುತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಇದು ಬಾರದ ಕಾರಣ ಆರೋಗ್ಯ ಮಿಷನ್ ಅಡಿಯಲ್ಲಿ ಸೇರಿಸುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು,” ಎಂದರು.
“ಮಧುಮೇಹ ಎಂಬುದು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿದೆ. ಈ ಕುರಿತು ಚಿಕಿತ್ಸೆಗೂ ಹೆಚ್ಚಾಗಿ ಜಾಗೃತಿಗೆ ಆದ್ಯತೆ ನೀಡಬೇಕು. ಜಾಗೃತಿ ಜತೆಗೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಕಾರ ನೀಡಿ ಅವರ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಕೊಡಿಸುವುದರ ಜತೆಗೆ ಆ ಸಮಸ್ಯೆಯಿಂದ ನೊಂದ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಆಗಬೇಕಿದ್ದು, ಈ ನಿಟ್ಟಿನಲ್ಲಿ ಸರ್ಕಾರೇತರ ಸಂಘಟನೆಗಳು ಕೆಲಸ ಮಾಡಬೇಕು,” ಎಂದು ಹೇಳಿದರು.
“ಮಧುಮೇಹಕ್ಕೆ ಸಾಕಷ್ಟು ಔಷಧ ಇದ್ದರೂ ಅದರಿಂದ ಪೂರ್ಣ ಗುಣಮುಖರಾಗುವತ್ತ ಸಂಶೋಧನೆಗಳು ಆಗಬೇಕಿದೆ. ವಿದೇಶಗಳಲ್ಲಿ ಮಾತ್ರವಲ್ಲ, ದೇಶೀಯ ಸಂಶೋಧನೆಗಳೂ ಈ ನಿಟ್ಟಿನಲ್ಲಿ ನಡೆಯಬೇಕು. ಅದಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು,” ಎಂದು ಅವರು ತಿಳಿಸಿದರು.