ಬೆಂಗಳೂರು: ಬಿಬಿಎಂಪಿ ಹಾಗೂ ಬಿಡಿಎಗಳ ಆಸ್ತಿಗಳು ಜನರ ಸೇವೆಗೆ ಬಳಕೆಯಾಗಬೇಕು. ಸರ್ಕಾರದ ಆಸ್ತಿಗಳಾದ ವಾಣಿಜ್ಯ ಸಂಕೀರ್ಣಗಳು ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಿರಿಸದೇ, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕರ ಸೇವೆಗೆ ಮೀಸಲಿಡುವುದು ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್ ಐಡಿಎಲ್ ವತಿಯಿಂದ ನಿರ್ಮಾಣವಾಗುತ್ತಿರುವ ವಾಣಿಜ್ಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬೆಂಗಳೂರು ನಾಲ್ಕೂ ದಿಕ್ಕುಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ, ಇಂಜಿನಿಯರ್ಸ್, ಜಂಟಿಆಯುಕ್ತರನ್ನೂ ನೇಮಿಸಲಾಗುತ್ತಿದೆ. ಆದರೆ ಈ ಅಧಿಕಾರಿಗಳಿಗೆ ಸ್ಥಳದ ಅಭಾವದಿಂದ ಮುಖ್ಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಪ್ರತಿ ವರ್ಷ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಸರ್ಕಾರ ಹಣ ವ್ಯಯಿಸುತ್ತದೆ. ಕೆಲವೊಮ್ಮೆ ಸ್ಥಳದ ಅಭಾವ ವಿರುತ್ತದೆ. ಸರ್ಕಾರದ ಅಧೀನದ ಕೆಆರ್ ಡಿ ಎಲ್ ಸಂಸ್ಥೆ ಮುಖಾಂತರ ಇಂದು ಶಂಕುಸ್ಥಾಪನೆಗೊಂಡಿರುವ ವಾಣಿಜ್ಯ ಸಂಕೀರ್ಣದ ಮಾದರಿಯಲ್ಲಿಯೇ ವಾಣಿಜ್ಯ ಚಟುವಟಿಕೆ ಹಾಗೂ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಬಹುದಾದ ರಾಜ್ಯದ ಹಲವೆಡೆ ಕಟ್ಟಡಗಳ ನಿರ್ಮಾಣಕ್ಕೆ ತೀರ್ಮಾನವನ್ನು ಕೈಗೊಳ್ಳಲಾಗುವುದು. ಬಿಜಾಪುರ ಮತ್ತು ಮಂಗಳೂರಿನಲ್ಲಿ ಇಂತಹುದೇ ಯೋಜನೆಯನ್ನು ಈಗಾಗಲೇ ಕೈಗೆತ್ತಿಗಕೊಂಡಿದ್ದು, ಈ ಯೋಜನೆಯನ್ನು ಕೆಆರ್ ಡಿ ಎಲ್ ಸಂಸ್ಥೆ ರಾಜ್ಯದ ಉಳಿದ ಜಿಲ್ಲಾ ಕೇಂದ್ರಗಳಲ್ಲಿಯೂ ನಿರ್ಮಿಸಬೇಕು ಎಂದರು.
ಇದನ್ನೂ ಓದಿ : ಮದುವೆಗೆ ಹಣವಿಲ್ಲದೇ ಚಿಂತೆಗೀಡಾಗಿದ್ದೀರಾ? ಇಲ್ಲಿದೆ ಸರಳ ವಿಧಾನ
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ ತನ್ನದೇ ಆದ ಆಸ್ತಿಗಳ ಸೃಜನೆ ಹಾಗೂ ತನ್ನದೇ ಆದ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದೆ. ವಾಣಿಜ್ಯ ಸಂಕೀರ್ಣವೂ ಸರ್ಕಾರದ ಆಸ್ತಿಯಾಗುತ್ತದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ, ಪ್ರತಿ ವರ್ಷವೂ ಈ ಸರ್ಕಾರದ ಆಸ್ತಿಯಿಂದ ಆದಾಯ ಪಡೆಯಬಹುದಾಗಿದ್ದು, 91 ಕೋಟಿ ರೂ. ವೆಚ್ಚದಲ್ಲಿ 9 ಮಹಡಿಗಳ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈ ಭಾಗದ ಜನರಿಗೆ ಬಹಳ ಅವಶ್ಯಕತೆಯಿತ್ತು. ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ವಹಿಸಿಕೊಡಲಾಗುತ್ತದೆ.. ಖಾಸಗಿ ಸಹಭಾಗಿತ್ವದಲ್ಲಿ ಇಂತಹ ಕಟ್ಟಡಗಳನ್ನು ನಿರ್ಮಿಸಿದರೆ ಸರ್ಕಾರದ ಲಾಭ ಬರುವುದಿಲ್ಲ ಎಂದರು.
ಬೆಂಗಳೂರು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ. ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಿನನಿತ್ಯವೂ ಬರುತ್ತಾರೆ. ಭಾರತದಲ್ಲಿ ನವದೆಹಲಿಯಂತೆ ಬೆಂಗಳೂರಿಗೂ ದೊಡ್ಡ ಸಂಖ್ಯೆಯಲ್ಲಿ ವಿದೇಶಿಯರು ಭೇಟಿ ನೀಡುತ್ತಾರೆ. ಪ್ರತಿ ದಿನ 5000 ಕ್ಕಿಂತ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತವೆ. ನಗರದಲ್ಲಿ 1.30 ಕೋಟಿ ಜನಸಂಖ್ಯೆಯಿದ್ದು, 1.56 ಕೋಟಿ ವಾಹನ ಸಂಖ್ಯೆಯಿದೆ. ಅಂತರಾಷ್ಟ್ರೀಯ ನಗರಗಳಲ್ಲಿ ಜನದಟ್ಟಣೆ ಇದ್ದೇ ಇರುತ್ತದೆ. ಈ ಜನದಟ್ಟಣೆಯ ಸವಾಲನ್ನು ಎದುರಿಸಲು ಹತ್ತು ಹಲವಾರು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. 12 ಹೈ ಡೆನ್ಸಿಟಿ ರಸ್ತೆ ನಿರ್ಮಾಣಕ್ಕೆ 280 ಕೋಟಿ ರೂ.ಗಳಿಗೆ ಮಂಜೂರಾತಿ ನೀಡಲಾಗಿದೆ. ಇವುಗಳು ದೇಶದ ವಿವಿಧ ಪ್ರಮುಖ ನಗರಗಳನ್ನು ಬೆಂಗಳೂರಿಗೆ ಸಂಪರ್ಕಿಸುವ ರಸ್ತೆಗಳಾಗಿವೆ. ನಗರೋತ್ಥಾನ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಸುಮಾರು 8000 ಕೋಟಿ ರೂ.ಗಳನ್ನು ವಿವಿಧ ಯೋಜನೆಗಳಡಿ ನೀಡಲಾಗಿದೆ ಎಂದರು.
ಇದನ್ನೂ ಓದಿ : ನಿಷ್ಕ್ರಿಯತೆ ಮತ್ತು ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ: ಕಾಂಗ್ರೆಸ್ ಆಕ್ರೋಶ
ನಗರದಲ್ಲಿ ವಾಹನ ದಟ್ಟಣೆಯ ನಿರ್ವಹಣೆಗಾಗಿ ವಿಶೇಷ ಆಯುಕ್ತರನ್ನು ನೇಮಿಸಲಾಗಿದೆ. ವಿಶೇಷ ಸಾರಿಗೆ ಆಯುಕ್ತರ ಕಚೇರಿಯನ್ನು ಹಾಗೂ ನೂತನ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು. ಹೆಚ್ಚಿನ ವಾಹನ ಸಂದಣಿಯಿರುವ ಪ್ರದೇಶಗಳಿಗೆ ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ನಿರ್ಮಾಣಕ್ಕೆ ಅನುಮೋದನೆ ಪಡೆಯಲು ಬೆಂಗಳೂರಿನ ನಗರ ಆಯುಕ್ತರಿಗೆ ಸೂಚಿಸಲಾಗಿದೆ. ನಗರದಲ್ಲಿ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಮೂಲಸೌಕರ್ಯವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ನಿರ್ಭಯಾ ಯೋಜನೆಯಡಿ ನಗರದಾದ್ಯಂತ 7500 ಇಂಟೆಲಿಜೆನ್ಸ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ತಡೆರಹಿತ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಬೆಂಗಳೂರಿನಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ವ್ಯವಸ್ಥಿತಗೊಳಿಸಲು ಮಾಸ್ಟರ್ ಪ್ಲಾನ್ ನ್ನು ರೂಪಿಸಲಾಗುವುದು. ರಾಜಾ ಕಾಲುವೆ ಹಾಗೂ ಉಪಕಾಲುವೆಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದಕ್ಕೆ ಬೇಕಾದ ಅನುದಾನವನ್ನು ನೀಡಲಾಗಿದೆ. ಮೇಲಿನ ಎಲ್ಲಿನ ಯೋಜನೆಗಳಿಂದ ಬೆಂಗಳೂರು ನಗರವನ್ನು ಅಭಿವೃದ್ಧಿ ಪಥದಲ್ಲಿ ಸರ್ಕಾರ ಕೊಂಡೊಯ್ಯಲಿದೆ ಎಂದರು ತಿಳಿಸಿದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿಯವರು ಜನಪ್ರಿಯ ಶಾಸಕರು ಮಾತ್ರವಲ್ಲ ಜನೋಪಯೋಗಿ ಶಾಸಕರಾಗಿದ್ದಾರೆ. ಜನರ ಸಮಸ್ಯೆಗಳನ್ನು ಅರಿತು, ಪರಿಹಾರವನ್ನು ನೀಡಿ, ಜನಸಾಮಾನ್ಯರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. 80 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಈ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಾಯಕರಾಗಿದ್ದಾರೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.