ಬೆಂಗಳೂರು: ಇಂದು ಬೆಳಗಾವಿ ಲೋಕಸಭೆ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ (By Election) ಮತದಾನ ನಡೆಯುತ್ತಿದೆ. ಜೆಡಿಎಸ್ (JDS) ನೆಪಮಾತ್ರಕ್ಕೆ ಕಣದಲ್ಲಿದ್ದು ಆಡಳಿತಾರೂಢ ಬಿಜೆಪಿ (BJP) ಮತ್ತು ಪ್ರತಿಪಕ್ಷ ಕಾಂಗ್ರೆಸ್ (Congress) ನಡುವೆ ನೇರಾ ಹಣಾಹಣಿ ಇದೆ.
ಮೂರು ಕ್ಷೇತ್ರಗಳಲ್ಲೂ ಮೂರು ರಾಜಕೀಯ ಪಕ್ಷಗಳು ತಮ್ಮದೇಯಾದ ರೀತಿಯ ತಂತ್ರ ಅನುಸರಿಸಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವಿಗಾಗಿ ಬೆವರು ಹರಿಸಿದರೆ ಜೆಡಿಎಸ್ ಎಂದಿನಂತೆ ಸೋಲಿಸುವುದರಲ್ಲಿ ಸುಖ ಕಾಣಲೊರಟಿದೆ. ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಇದೇ ಬಿಜೆಪಿ ತನ್ನ ಅಧಿಕಾರವನ್ನು ಕಿತ್ತುಕೊಂಡಿದ್ದರೂ ಜೆಡಿಎಸ್ ಗೆ ಕಾಂಗ್ರೆಸ್ ಪಕ್ಷವೇ ಮುಖ್ಯ ಶತ್ರುವಾದಂತೆ ಕಾಣುತ್ತಿದೆ.
ಉಪ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಜೆಡಿಎಸ್ ಪರವಾಗಿ ಪ್ರಚಾರ ಮಾಡಿದ್ದಾರಾದರೂ ಈಗಾಗಲೇ ಹೇಳಿದಂತೆ ಅದು ಜೆಡಿಎಸ್ ಅನ್ನು ಗೆಲುವಿನ ದಡ ಮುಟ್ಟಿಸುವುದಕ್ಕಾಗಿ ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕಹಿ ಉಣಿಸಬೇಕೆಂದು.
ಇದನ್ನೂ ಓದಿ - BS Yediyurappa: 'ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಲಾಕ್‌ಡೌನ್ ಇಲ್ಲ'
ಬಿಜೆಪಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಚುನಾವಣೆ ಎದುರಿಸಿದೆ. ಅವರ ಇಡೀ ಸರ್ಕಾರ ಕೊರೊನಾವನ್ನು ಕ್ಷಣಕಾಲ ಮರೆತು ಉಪ ಚುನಾವಣೆಗೆ ದುಡಿದಿದೆ. ಅವರ ಪುತ್ರ ಬಿ.ವೈ. ವಿಜಯೇಂದ್ರಗೆ ಮಸ್ಕಿ ಉಪಚುನಾವಣೆಯ 'ಉಸ್ತುವಾರಿ' ನೀಡಲಾಗಿದೆ. ಆದರೆ ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ಈಗ ತುಂಬಾ ಅಸಮಾಧಾನ ಇದ್ದು 'ಯಾವ್ಯಾವ ನಾಯಕರು ಯಾವ್ಯಾವ ರೀತಿಯಲ್ಲಿ ಒಳೇಟು ನೀಡಿದ್ದಾರೆ' ಎಂಬುದನ್ನು ಊಹಿಸುವುದು ಕಷ್ಟವಾಗಿದೆ.
ಇನ್ನು ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) 'ಜೋಡೆತ್ತುಗಳಂತೆ' ಉಪ ಚುನಾವಣೆ ಕಣದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇದು ಉಪ ಚುನಾವಣೆ ಆಗಿರುವುದರಿಂದ ಆಡಳಿತ ಪಕ್ಷದ 'ಶಕ್ತಿ' ಎದುರು ಇವರ ಕರಾಮತ್ತು ನಡೆದಿರುವ ಸಾಧ್ಯತೆ ವಿರಳ ಎನ್ನಲಾಗುತ್ತಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರ :
ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ (Suresh Angadi) ಅವರು ಕಳೆದ ವರ್ಷ ಕೊರೊನಾ (Corona) ರೋಗದಿಂದ ಸಾವನ್ನಪ್ಪಿದ್ದರಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಈ ಕ್ಷೇತ್ರದಿಂದ ಬಿಜೆಪಿಯು ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಹಿರಿಯ ನಾಯಕ ಹಾಗೂ ಜಿಲ್ಲೆಯಲ್ಲಿ ತನ್ನದೇಯಾದ ಪ್ರಭಾವ ಹೊಂದಿರುವ ಸತೀಶ್ ಜಾರಕಿಹೊಳಿ ಅವರನ್ನು ಅಖಾಡಕ್ಕಿಳಿಸಿದೆ. ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನೇ ಹಾಕಿಲ್ಲ. ಹಾಗಾಗಿ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನೇರಾವಾದ ಹೋರಾಟ ನಡೆಯುತ್ತಿದೆ.
ಇದನ್ನೂ ಓದಿ - "ಬಿಜೆಪಿ ಸರಕಾರದ ವೈಫಲ್ಯವೇ ಕಾಂಗ್ರೆಸ್ ಪಕ್ಷದ ಯಶಸ್ಸು"
ಮಸ್ಕಿ :
ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್ ಆಪರೇಶನ್ ಕಮಲ (Opporation Lotus)ಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮಸ್ಕಿ ವಿಧಾನಸಭಾ ಕ್ಷೇತ್ರ ಖಾಲಿಯಾಗಿತ್ತು. ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್ ಈಗ ಬಿಜೆಪಿಯ ಹುರಿಯಾಳು. ಕಳೆದ ಬಾರಿ ಅವರೆದು ಕಮಲ ಪಕ್ಷದ ಅಭ್ಯರ್ಥಿಯಾಗಿದ್ದ ಆರ್. ಬಸನಗೌಡ ತುರ್ವಿಹಾಳ ಈಗ ಕಾಂಗ್ರೆಸ್ ಕಲಿ. ಜೆಡಿಎಸ್ ಪಕ್ಷ ಇಲ್ಲಿಯೂ ಸಹ ತಟಸ್ಥ ನಿಲುವು ತೆಳೆದಿದೆ. ಅದರಿಂದಾಗಿ ಮಸ್ಕಿಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ.
ಬಸವಕಲ್ಯಾಣ :
ಸುರೇಶ್ ಅಂಗಡಿಯವರ ರೀತಿಯಲ್ಲಿ ಶಾಸಕರಾದ ನಾರಾಯಣ್ ರಾವ್ ಅವರನ್ನು ಮಾರಕ ಕೋವಿಡ್ (Covid) ಬಲಿ ತೆಗೆದುಕೊಂಡ ಪರಿಣಾಮ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಇಲ್ಲೀಗ ದಿವಂಗತ ನಾರಾಯಣ್ ರಾವ್ ಅವರ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕರೆಂದು ಬಿಜೆಪಿ ಶರಣು ಸಲಗಾರ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ಅಲ್ಪಸಂಖ್ಯಾತ ಮತಗಳೂ ಗಣನೀಯವಾಗಿರುವ ಕಾರಣ ಜೆಡಿಎಸ್ ಸೈಯದ್ ಯಸ್ರಾಬ್ ಅಲಿ ಖಾದ್ರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ವಿಶೇಷವೆಂದರೆ ಈ ಮೂವರು ಕೂಡ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.
ಮೂರು ಕ್ಷೇತ್ರಗಳನ್ನೂ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಿದ್ದು ಶತಾಯಗತಾಯ ಗೆಲ್ಲಲೇಬೇಕೆಂದು ಪ್ರಯತ್ನಪಟ್ಟಿದ್ದಾರೆ. ಇಂದು ಮತದಾರರು ಯಾರ ಪರ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ಮೇ 2ರಂದು ಫಲಿತಾಂಶ ಪ್ರಕಟವಾದಾಗ ತಿಳಿಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.