ಬೆಂಗಳೂರು: ಪ್ರಕೃತಿ ವಿಕೋಪಕ್ಕೆ ಒಳಗಾಗಿ ಪ್ರವಾಹದಿಂದಾಗಿ ತತ್ತರಿಸಿರುವ ಕೊಡಗು ಜಿಲ್ಲೆಯ ಜನರ ಪುನರ್ವಸತಿ ಮತ್ತು ಪರಿಹಾರ ಕಾರ್ಯಕ್ಕೆ 100 ಕೋಟಿ ರೂಪಾಯಿ ನೆರವು ನೀಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಧಾನ ಮಂತ್ರಿಯವರು ಕೇರಳ ರಾಜ್ಯಕ್ಕೆ 500 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ ನಾವು ಕೊಡಗಿಗೆ ಕನಿಷ್ಠ 100 ಕೋಟಿಯನ್ನಾದರೂ ಬಿಡುಗಡೆ ಮಾಡಬೇಕೆಂದು ಕೇಳುತ್ತೇವೆ. ಕೇಂದ್ರಕ್ಕೆ ಈ ಕುರಿತು ಮನವಿ ಸಲ್ಲಿಸಲಾಗುವುದು, ರಸ್ತೆ ಸಂಪರ್ಕ ಕಲ್ಪಿಸಬೇಕಾಗಿದೆ. ಅದಕ್ಕಾಗಿ ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ಸಹಾಯವನ್ನು ಪಡೆಯುತ್ತಿದ್ದೇವೆ ಎಂದು ಹೇಳಿದರು.
ನಾವು ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು ಕೊಡಗುದಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದೇವೆ, ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು, 12 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ, 845 ಮನೆಗಳು ಹಾನಿಗೊಳಗಾಗಿದ್ದು ಅದರಲ್ಲಿ 773 ಮನೆಗಳು ಭಾಗಶಃ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ 41 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 09 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 6620 ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿದ್ದಾರೆ. ಪರಿಹಾರ ಕೇಂದ್ರಗಳಿಗೆ ಹಾಲು, ಕುಡಿಯುವ ನೀರು ವ್ಯವಸ್ಥೆಯನ್ನು ಮಾಡಲಾಗಿದೆ. ನೆರವಿಗಾಗಿ ಒದಗಿ ಬರುತ್ತಿರುವ ಪರಿಹಾರ ಸಾಮಗ್ರಿಗಳನ್ನು ಮಡಿಕೇರಿಯಲ್ಲಿರುವ ಎಪಿಎಂಸಿ ಯಾರ್ಡ್ನಲ್ಲಿ ಸಂಗ್ರಹಿಸಿ ಪಂಚಾಯತಿಗಳ ಮೂಲಕ ಜನರಿಗೆ ವಿತರಣೆ ಮಾಡಲಾಗುತ್ತಿದೆ. ಐದು ವಿಶೇಷ ವೈದ್ಯಕೀಯ ತಂಡಗಳು, 10 ರೆವಿನ್ಯೂ ಅಧಿಕಾರಿಗಳ ತಂಡಗಳನ್ನು ಪರಿಹಾರ ಕಾಮಗಾರಿಗಳಿಗಾಗಿ ವಿಶೇಷವಾಗಿ ನಿಯೋಜಿಸಲಾಗಿದೆ ಎಂದರು.