ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದಿಂದ ರಾಜ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ಮೈತ್ರಿ ಸರ್ಕಾರ ಸೇಫ್ ಆಗಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕರೆಯಲಾದ ಉಭಯ ಪಕ್ಷಗಳ ನಾಯಕರೊಂದಿಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಔಪಚಾರಿಕ ಸಭೆ ನಡೆಸಲಾಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಚುನಾವಣೆ ನಡೆದಿದ್ದು ಕೇಂದ್ರದಲ್ಲಿ ಸರ್ಕಾರ ರಚನೆಗೇ ಹೊರತು ರಾಜ್ಯಕ್ಕಲ್ಲ. ಹಾಗಾಗಿ ಲೋಕಸಭಾ ಚುನಾವಣೆ ಫಲಿತಾಂಶ ಕೇಂದ್ರಕ್ಕಷ್ಟೇ ಸೀಮಿತವಾಗಿರಲಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು, ಇನ್ನೂ 4 ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳಿಸಲು ವಿಪಕ್ಷಗಳು ಸಿದ್ಧತೆ ನಡೆಸಿದ್ದು, ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೀಗೆಯೇ ಮುಂದುವರೆಯಲಿದ್ದು, ಸಿಎಂ ಕುಮಾರಸ್ವಾಮಿ ಅವರಿಗೆ ನಮ್ಮ ಬೆಂಬಲ ಹೀಗೇ ಇರಲಿದೆ ಎಂದು ಹೇಳಿದರು.
ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ಮುಖಂಡರಿಗೆ ನಾನು ಆಭಾರಿ
ಜಂಟಿ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವುದೇ ಮಾತನಾಡದೇ ಮೌನ ವಹಿಸಿದ್ದರು. ಅವರತ್ತ ಸುದ್ದಿಗಾರರು ಪ್ರಶ್ನೆಗಳನ್ನು ಎಸೆದರಾದರೂ ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. ಆದರೆ "ಸಚಿವ ಸಂಪುಟದ ಅನೌಪಚಾರಿಕ ಸಭೆಯಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಚರ್ಚಿಸಲಾಯಿತು. ಸಂಪುಟದ ಎಲ್ಲ ಸಹೋದ್ಯೋಗಿಗಳು ನನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರಿಗೆ ಹಾಗೂ ಮಿತ್ರ ಪಕ್ಷ ಕಾಂಗ್ರೆಸ್ ನ ಎಲ್ಲ ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ" ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಸಚಿವ ಸಂಪುಟದ ಅನೌಪಚಾರಿಕ ಸಭೆಯಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಚರ್ಚಿಸಲಾಯಿತು. ಸಂಪುಟದ ಎಲ್ಲ ಸಹೋದ್ಯೋಗಿಗಳು ನನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರಿಗೆ ಹಾಗೂ ಮಿತ್ರ ಪಕ್ಷ ಕಾಂಗ್ರೆಸ್ ನ ಎಲ್ಲ ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ. pic.twitter.com/8LGmgZlBZm
— H D Kumaraswamy (@hd_kumaraswamy) May 24, 2019
ಶುಕ್ರವಾರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಬಿಜೆಪಿ 24 ಸ್ಥಾನಗಳನ್ನು ಗಳಿಸಿ ಬಹುಮತ ಪಡೆದರೆ, ಜೆಡಿಎಸ್ ಮತ್ತು ಕಾಗ್ರೆಸ್ ತಲಾ ಕೇವಲ ಒಂದು ಸ್ಥಾನವನ್ನು ಗಳಿಸಿಕೊಂಡಿವೆ.