ರಾಜ್ಯ ಸರ್ಕಾರಕ್ಕೆ ಮೂರು ಬೇಡಿಕೆ ಇಟ್ಟ ಕಾಂಗ್ರೆಸ್

 ಪ್ರವೀಣ್ ಹತ್ಯೆ ಪ್ರಕರಣದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ಪಕ್ಷವು ಈಗ ಸರ್ಕಾರದ ಮುಂದೆ ಮೂರು ಬೇಡಿಕೆಗಳನ್ನು ಇರಿಸಿದೆ.

Written by - Zee Kannada News Desk | Last Updated : Jul 28, 2022, 04:41 PM IST
  • ನಿಮ್ಮ ಅಸ್ತ್ರ ನಿಮಗೆ ತಿರುಗುಬಾಣವಾಗಿದೆ.
  • ಇದೇ ಕಾರಣಕ್ಕೆ ಬಿಜೆಪಿ ತಮ್ಮ ಚಾಳಿ ಮುಂದುವರಿಸಿ, ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮೂರು ಬೇಡಿಕೆ ಇಟ್ಟ ಕಾಂಗ್ರೆಸ್  title=
Photo Courtsey: Facebook

ಬೆಂಗಳೂರು: ಪ್ರವೀಣ್ ಹತ್ಯೆ ಪ್ರಕರಣದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ಪಕ್ಷವು ಈಗ ಸರ್ಕಾರದ ಮುಂದೆ ಮೂರು ಬೇಡಿಕೆಗಳನ್ನು ಇರಿಸಿದೆ.

1. ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ಮುಕ್ತ ಹಾಗೂ ಪಾರದರ್ಶಕವಾಗಬೇಕು.

2.ಇದುವರೆಗೂ ಆಗಿರುವ ಕೋಮುಗಲಭೆ ಹಾಗೂ ಕೋಮುಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು.

3.ನಮ್ಮ ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುತ್ತಿರುವ ಎಲ್ಲಾ ಸಮುದಾಯಗಳ ಸಂಘಟನೆಗಳನ್ನು ನಿಷೇಧಿಸಬೇಕು. ಇದಕ್ಕೆ ನಾವು ಬೆಂಬಲಿಸುತ್ತೇವೆ.

ಉಳಿದಂತೆ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ಹೀಗಿದೆ...

'ಬಿಜೆಪಿ ಸರ್ಕಾರ ತನ್ನ ಒಂದು ವರ್ಷದ ಸಾಧನೆಯ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಪ್ರವೀಣ್ ಅವರ ಸಾವಿನಿಂದ ತೀವ್ರವಾಗಿ ಮನನೊಂದು ಈ ಕಾರ್ಯಕ್ರಮ ಮಾಡಲು ಮನಸ್ಸು ಒಪ್ಪುತ್ತಿಲ್ಲ ಎಂಬ ಕಾರಣ ಕೊಟ್ಟು ರದ್ದು ಮಾಡಲಾಗಿದೆ.

ಆದರೆ ಸತ್ಯಾಂಶ ಏನೆಂದರೆ, ಪ್ರವೀಣ್ ಅವರ ಹತ್ಯೆಯಾಗಿದ್ದು ಜುಲೈ 23ರಂದು, ಮುಖ್ಯಮಂತ್ರಿಗಳ ಮನಸ್ಸು ಕರಗಿದ್ದು ಜುಲೈ 28 ಬೆಳಗಿನ ಜಾವ 12:30ಕ್ಕೆ.

ಜನಾಕ್ರೋಶದಿಂದಾಗಿ ಜನೋತ್ಸವ ಕಾರ್ಯಕ್ರಮ ರದ್ದಾಗಿದೆ. ಅವರಿಗೆ ನಿಜವಾಗಿಯೂ ಜನರ ಬಗ್ಗೆ ಇಷ್ಟು ಕಾಳಜಿ ಇದ್ದಿದ್ದರೆ, ಅವರು ಗುಪ್ತಚರ ಇಲಾಖೆ ಮಾಹಿತಿ ಪಡೆದು 27ರಂದು ಕಾರ್ಯಕ್ರಮವನ್ನು ರದ್ದು ಮಾಡಬಹುದಿತ್ತು. 

ಸಚಿವರಾದ ಸುನಿಲ್ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದಿಗ್ಬಂಧನ ಮಾಡಿದಾಗ ಸರ್ಕಾರಕ್ಕೆ ಈ ಜ್ಞಾನೋದಯವಾಗಿದೆ.

ಬಿಜೆಪಿ ಯುವ ಮೋರ್ಚಾ ಹಾಗೂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ನೀಡಲು ಮುಂತಾದಾಗ ಜ್ಞಾನೋದಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಗೃಹ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಪಟ್ಟು ಹಿಡಿದು, ಬಿಜೆಪಿ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದಾದರೆ ಬಿಜೆಪಿ ಸರ್ಕಾರ ಇರಬೇಕೇ ಎಂದು ಜನ ಆಕ್ರೋಶದಿಂದ ಮಾತನಾಡಿದಾಗ ಅವರಿಗೆ ಜ್ಞಾನೋದಯವಾಗಿದೆ.

ಇದನ್ನೂ ಓದಿ: ವಿಕ್ರಾಂತ್‌ ರೋಣ ಟ್ವಿಟರ್‌ ರಿವೀವ್!‌ ಸಿನಿಮಾ ನೋಡಿದವ್ರು ಏನಂದ್ರು?

ಸರ್ಕಾರ ಅನುಕಂಪ ಹೆಸರಲ್ಲಿ ಯಾರ ಮೇಲೆ ಗೂಬೆಕೂರಿಸಲು ಪ್ರಯತ್ನಿಸುತ್ತಿದೆ? ಪ್ರವೀಣ್ ಅವರ ಪತ್ನಿಯೇ ಈ ಸರ್ಕಾರದಿಂದ ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಸರ್ಕಾರ ಇನ್ನಾದರೂ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇದ್ದಾರೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಅನುಮಾನ ವ್ಯಕ್ತವಾಗುತ್ತಿದೆ.

ಈ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೃಹ ಸಚಿವರೇ ತಮ್ಮ ಇಲಾಖೆಗೆ ಮರ್ಯಾದೆ ನೀಡದಿದ್ದಾಗ ಬೇರೆಯವರು ನೀಡಲು ಹೇಗೆ ಸಾಧ್ಯ? ಗೃಹ ಸಚಿವಾಲಯ ಅತ್ಯಂತ ಭ್ರಷ್ಟ ಇಲಾಖೆ ಎಂದು ಅವರೇ ಹೇಳಿದರು. ಪೊಲೀಸರು ಎಂಜಲು ಕಾಸು ತಿಂದು ನಾಯಿತರ ಬಿದ್ದಿರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಬೆಂಗಳೂರು ಕಮಿಷನರ್ ಸುಳ್ಳು ಹೇಳುತ್ತಾರೆಂದು ಶಾಸಕರು ಟೀಕೆ ಮಾಡಿದಾಗ ಗೃಹಸಚಿವರು  ಸುಮ್ಮನೆ ಇದ್ದರು. ಸರ್ಕಾರದ ದುರಾಡಳಿತ ಬಗ್ಗೆ ಟೀಕೆ ಮಾಡಿದರೆ ಕಾಂಗ್ರೆಸ್ ನವರೇ ರೇಪ್ ಮಾಡುತ್ತಿದ್ದಾರೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. 

ಇದೇ ಕಾರಣಕ್ಕೆ ಬಿಜೆಪಿಯ ಶಾಸಕರಾದ ಯತ್ನಾಳ್ ಅವರು 'ಕರ್ನಾಟಕಕ್ಕೆ ಬಲಿಷ್ಠವಾದ ಗೃಹ ಸಚಿವರು ಬೇಕು' ಎಂದು ಹೇಳಿದ್ದಾರೆ.

ಆಳಂದದಲ್ಲಿ ಕೋಮುಗಲಭೆ ಆಗುವ ಸಾಧ್ಯತೆ ಇತ್ತು. ಇದೇ ಮುಖ್ಯಮಂತ್ರಿ,  ಗೃಹ ಸಚಿವರು ಸೆಕ್ಷನ್ 144 ಜಾರಿ ಮಾಡಿದ್ದರು. ಆದರೆ ಇದೇ ಬಿಜೆಪಿಯ ಸಂಸದರಾದ ಉಮೇಶ್ ಜಾಧವ್ ಅವರು ಸೆಕ್ಷನ್ 144  ಉಲ್ಲಂಘನೆ ಮಾಡಿದ್ದರು. ಇವರಿಗೆ ಸೆಕ್ಷನ್ 144 ಉಲ್ಲಂಘನೆ ಮಾಡಲು ಅವಕಾಶ ಕೊಟ್ಟವರು ಯಾರು? ನಿಮ್ಮ ಆದೇಶಕ್ಕೆ ನಿಮ್ಮದೇ ನಾಯಕರು ಕಿಮ್ಮತ್ತು ನೀಡುತ್ತಿಲ್ಲ.

ಶಿವಮೊಗ್ಗ ಬಿಜೆಪಿಯ ಕೇಂದ್ರ ಸ್ಥಾನವಾದರೂ ಹರ್ಷ ಕೊಲೆ ಪ್ರಕರಣದಲ್ಲಿ ಸರ್ಕಾರ ಸೆಕ್ಷನ್ 144 ಜಾರಿ ಮಾಡಿತ್ತು. ಅದನ್ನು ಉಲ್ಲಂಘನೆ ಮಾಡಿದ್ದು ಸಚಿವರಾಗಿದ್ದ ಈಶ್ವರಪ್ಪ ಹಾಗೂ ಸಂಸದರಾಗಿದ್ದ ರಾಘವೇಂದ್ರ ಅವರು.

ಅವರದೇ ಪಕ್ಷದ ನಾಯಕರು ಅವರೇ ಪಕ್ಷದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದರೆ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಎಷ್ಟು ಬೆಲೆ ನೀಡುತ್ತಿದ್ದಾರೆ ಎಂದು ತಿಳಿಯುತ್ತದೆ.

ಈಗಲೂ ಕೂಡ ದಕ್ಷಿಣ ಕನ್ನಡದಲ್ಲಿ ಸೆಕ್ಷನ್ 144 ಜಾರಿಯಾಗಿದ್ದು, ಈಗ ಪ್ರವೀಣ್ ಅವರಿಗೆ ನ್ಯಾಯ ಕೊಡಿಸಲು ಯಾಕೆ ಬಿಜೆಪಿ ನಾಯಕರು ಹೋಗುತ್ತಿಲ್ಲ? ಹರ್ಷ ಅವರಿಗೆ ನ್ಯಾಯ ಕೊಡಿಸಲು ಇರುವ ಕಾಳಜಿ ಪ್ರವೀಣ್ ಅವರಿಗೆ ನ್ಯಾಯ ಕೊಡಿಸಲು ಯಾಕೆ ಇಲ್ಲ. ಅಲ್ಲಿ ಒಂದು ನ್ಯಾಯ, ಇಲ್ಲಿ ಒಂದು ನ್ಯಾಯ ಯಾಕೆ? 

 ನಿಮ್ಮ ಅಸ್ತ್ರ ನಿಮಗೆ ತಿರುಗುಬಾಣವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ತಮ್ಮ ಚಾಳಿ ಮುಂದುವರಿಸಿ, ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. 

ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಕೇವಲ ಹೆಸರಿಗಷ್ಟೇ ತೇಜಸ್ವಿ. ಅವರು ಅವಿವೇಕದ ಪರಮಾವಧಿ. ಅವರು ನಿನ್ನೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಹಿಂದೂ ಕಾರ್ಯಕರ್ತರ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ ಇದು ನಿಲ್ಲುವುದು ಯಾವಾಗ? ಎಂದು  ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ: Box Office Analysis: ಹೈ ಬಜೆಟ್ ಆಕ್ಷನ್ ಅಡ್ವೆಂಚರ್ ಸಿನಿಮಾ ವಿಕ್ರಾಂತ್ ರೋಣ

ಎಂಟು ವರ್ಷ ಕೇಂದ್ರದಲ್ಲಿ ಮೋದಿ ಆಡಳಿತ ಹಾಗೂ ರಾಜ್ಯದಲ್ಲಿ ಮೂರು ವರ್ಷ ನಿಮ್ಮದೇ ಆಡಳಿತ ನಡೆದಿದೆ ಆದರೂ ಕೂಡ ನೀವೇ ಹಿಂದುಗಳ ಹತ್ಯೆ ಕಡಿಮೆಯಾಗಿಲ್ಲ ಎಂದು ಹೇಳುತ್ತಿದ್ದೀರಿ. ಆಮೂಲಕ ನಿಮ್ಮ ಮುಖ್ಯಮಂತ್ರಿಗಳು, ಗೃಹ ಸಚಿವರು ಅಸಮರ್ಥರು ಎಂದು ನೀವೇ ಹೇಳುತ್ತಿದ್ದೀರಿ. ಇದು ನಿಲ್ಲುವುದು ಯಾವಾಗ? ಈ ಪ್ರಶ್ನೆಯನ್ನು ನಿಮ್ಮ ಕಾರ್ಯಕರ್ತರೇ ಕೇಳುತ್ತಿದ್ದು ಅದಕ್ಕೆ ಉತ್ತರಿಸಿ.

ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ ಎಂದು ತೇಜಸ್ವಿ ಅವರು ಅಮಾನವೀಯ ಹೇಳಿಕೆ ನೀಡಿದ್ದೀರಿ. ನಿಜ, ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ ಆದರೆ ಜನಸಾಮಾನ್ಯರಲ್ಲಿ ಖಾಕಿ ನೋಡಿದರೆ ಎರಡು ರೀತಿಯ ಭಾವನೆ ಬರುತ್ತದೆ. ತಪ್ಪು ಮಾಡಿದವರಿಗೆ ಖಾಕಿ ಕಂಡರೆ ಗೌರವ ಇರುತ್ತದೆ. ಆದರೆ ತಪ್ಪು ಮಾಡಿದವರಿಗೆ ಭಯ ಇರುತ್ತದೆ. ಆದರೆ ನಿಮ್ಮ ಸರ್ಕಾರದಲ್ಲಿ ಖಾಕಿಗೆ ನೀವೇ ಗೌರವ ನೀಡುತ್ತಿಲ್ಲ. ನೀವೇ ಕಳ್ಳರನ್ನು ಸಾಕುತ್ತಿದ್ದೀರಿ.

40 ಪರ್ಸೆಂಟ್ ಕಮಿಷನ್ ಸರ್ಕಾರದಲ್ಲಿ ಪೊಲೀಸ್ ಎಂದರೆ ಯಾರಿಗೂ ಭಯವಿಲ್ಲ. ವರ್ಗಾವಣೆ ದಂದೆ ಮೂಲಕ ಪೊಲೀಸ್ ಅಧಿಕಾರಿಗಳನ್ನು ನಿಯಂತ್ರಿಸುತ್ತಿದ್ದಾರೆ. ಅಧಿಕಾರಿ ಹಣಕೊಟ್ಟು ಹುದ್ದೆಗೆ ಬಂದಾಗ ತಾನು ಹಾಕಿದ ಹಣವನ್ನು ಹಿಂಪಡೆಯುವ ಬಗ್ಗೆ ಗಮನಹರಿಸುತ್ತಾರೆ ಹೊರತು ಕಾನೂನು ವ್ಯವಸ್ಥೆ ಕಾಪಾಡಿ ಸಮಾಜದಲ್ಲಿ ಶಾಂತಿ ನೆಲೆಸಲು ಅಲ್ಲ. ಇಂತಹ ಸಂದರ್ಭದಲ್ಲಿ ಖಾಕಿಗೆ ಯಾರು ಗೌರವ ನೀಡುತ್ತಾರೆ. ಹೊಸದಾಗಿ ಬರುವ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕರಾಗಿರುತ್ತಾರೆ ಎಂದರೆ ಅದರಲ್ಲೂ ಅಕ್ರಮ ಮಾಡಿ ಭ್ರಷ್ಟರನ್ನು ನೇಮಕ ಮಾಡಿಕೊಳ್ಳುತ್ತಿದ್ದೀರಿ.

ಇಂತಹ ಪರಿಸ್ಥಿತಿಯಲ್ಲಿ ಎಲ್ಲರಿಗೂ ರಕ್ಷಣೆ ನೀಡಲು ಹೇಗೆ ಸಾಧ್ಯ? ನಿಮ್ಮ ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿದೆಯೇ? ನಿಮ್ಮ ಕಾರ್ಯಕರ್ತರ ಬಗ್ಗೆ ನೀವೇ ಹೀಗೆ ಮಾತನಾಡುತ್ತಿರುವುದರಿಂದ ನಿಮ್ಮ ಕಾರ್ಯಕರ್ತರು ಈ ರೀತಿ ರೊಚ್ಚಿಗೆದ್ದಿದ್ದಾರೆ.

ತೇಜಸ್ವಿ ಅವರು ಕಾಂಗ್ರೆಸ್ ಸರ್ಕಾರ ಇದ್ದಾಗ ಮತಾಂಧರ 1500 ಪ್ರಕರಣಗಳನ್ನು ಹಿಂಪಡೆದಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಈಗ ನಾನು ಅವರಿಗೆ ಒಂದು ಸವಾಲು ಹಾಕುತ್ತೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಕೋಮು ಗಲಭೆಯಲ್ಲಿ ಬಂಧಿತರಾದ ಯಾವುದೇ ಪ್ರಕರಣ ಹಿಂಪಡೆಯಲಾಗಿಲ್ಲ. ನಮ್ಮ ಸರ್ಕಾರ ಪ್ರಕರಣ ಹಿಂಪಡೆದಿದ್ದು, ಕೇವಲ ಪ್ರಗತಿಪರು, ಹೋರಾಟ ಮಾಡಿದ ರೈತರ ಮೇಲೆ ಹಾಕಿದ ಪ್ರಕರಣಗಳನ್ನು ಮಾತ್ರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News