ಸಮ್ಮಿಶ್ರ ಸರ್ಕಾರ ಉಳಿಸಲು ಎಲ್ಲಾ ಸಚಿವರ ರಾಜೀನಾಮೆಗೆ ನಿರ್ಧಾರ: ಕೆ.ಹೆಚ್.ಮುನಿಯಪ್ಪ

ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಎರಡನೇ ಸಾಲಿನ ನಾಯಕರಿಗೆ ಸಚಿವ ಸ್ಥಾನ ನೀಡಲು ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.

Last Updated : Jul 8, 2019, 07:53 PM IST
ಸಮ್ಮಿಶ್ರ ಸರ್ಕಾರ ಉಳಿಸಲು ಎಲ್ಲಾ ಸಚಿವರ ರಾಜೀನಾಮೆಗೆ ನಿರ್ಧಾರ: ಕೆ.ಹೆಚ್.ಮುನಿಯಪ್ಪ title=
Pic Courtesy: ANI

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸುವ ಕಾರಣದಿಂದಾಗಿ ಎಲ್ಲಾ ಸಚಿವರ ರಾಜೀನಾಮೆಗೆ ನಿರ್ಧಾರ ಮಾಡಲಾಯಿತು ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಎರಡನೇ ಸಾಲಿನ ನಾಯಕರಿಗೆ ಸಚಿವ ಸ್ಥಾನ ನೀಡಲು ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಎರಡೂ ಪಕ್ಷಗಳು ಒಮ್ಮತದಿಂದ ಈ ನಿರ್ಧಾರ ಕೈಗೊಂಡಿದ್ದು, ನೂತನ ಸಚಿವ ಸಂಪುಟ ರಚನೆಯಾಗಲಿದೆ ಎಂದು ತಿಳಿಸಿದರು.

ಪಕ್ಷೇತರ ಶಾಸಕರಾದ ಹೆಚ್.ನಾಗೇಶ್ ಮತ್ತು ಆರ್.ಶಂಕರ್ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುನಿಯಪ್ಪ ಅವರು, ಪಕ್ಷೇತರರನ್ನು ನಂಬಬೇಡಿ ಎಂದು ನಾನು ಈ ಹಿಂದೆಯೇ ತಿಳಿಸಿದ್ದೆ. ಆದರೂ ನನ್ನ ಮಾತನ್ನು ಕೇಳದೆ ಸಚಿವ ಸ್ಥಾನ ನೀಡಲಾಗಿತ್ತು ಎಂದು ಹೇಳಿದರು. 

ಇದೇ ವೇಳೆ, ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಶಾಸಕರೆಲ್ಲರೂ ಹಿಂದಿರುಗಬೇಕು. ಎರಡೂ ಪಕ್ಷ ಹಿರಿಯರು ಸೇರಿ ಶಾಸಕರ ಅಸಮಾಧಾನ ಹೋಗಲಾಡಿಸಲು ಮುಂದಾಗಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಚಿಂತನೆ ನಡೆಸಲಾಗಿದೆ. ಪಕ್ಷದ ಚಿಹ್ನೆಯಿಂದ ಗೆದ್ದಿರುವ ಶಾಸಕರು ಮತ್ತೊಮ್ಮೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ನಿಮ್ಮ ಭಾವನೆಗಳಿಗೆ ನಾವು ಸ್ಪಂದಿಸುತ್ತೇವೆ. ಸೂಕ್ತ ಸ್ಥಾನಮಾನ ನೀಡುತ್ತೇವೆ. ಎಲ್ಲರೂ ವಾಪಸ್ ಬನ್ನಿ ಎಂದು ಅತೃಪ್ತ ಶಾಸಕರಿಗೆ ಮುನಿಯಪ್ಪ ಮನವಿ ಮಾಡಿದರು. 

ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸರ್ಕಾರ 5 ವರ್ಷದ ಆಡಳಿತ ಪೂರ್ಣಗೊಳಿಸಲಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಹ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಸದ್ಯ ವಿಧಾನಸಭೆಯ ಒಟ್ಟು ಶಾಸಕರ ಬಲ 210 ಇದ್ದು, ಪಕ್ಷೇತರ ಶಾಸಕ ನಾಗೇಶ್ ಬೆಂಬಲ ಸೇರಿದಂತೆ ಬಿಜೆಪಿ ಶಾಸಕರ ಬಲ 107 ಇದೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷದ ಬಲ 103ಕ್ಕೆ ಕುಸಿದಿದ್ದು, ಸರ್ಕಾರ ರಚಿಸಲು ಮ್ಯಾಜಿಕ್ ಸಂಖ್ಯೆ 106 ಶಾಸಕರ ಅಗತ್ಯವಿದೆ.

Trending News