ನಸುಕಿನಲ್ಲಿ ಸುಪ್ರಭಾತ & ಅಲ್ಲಾಹ್ ಕೂಗುವ ಪರಿಪಾಠ ಇಂದು-ನಿನ್ನೆಯದಲ್ಲ: ಎಚ್‌ಡಿಕೆ

ದೇವಾಲಯಗಳಲ್ಲಿ ಮಹಾ ಮಂಗಳಾರತಿ ಸಂದರ್ಭಗಳಲ್ಲಿ ಢಮರುಗ, ಜಾಗಟೆ, ಘಂಟೆ ಇತ್ಯಾದಿಗಳನ್ನು ಭಾರಿಸುವ ಸಂಪ್ರದಾಯ ಇದ್ದೇ ಇದೆ. ಶಿವನಿಗೆ ಪ್ರಿಯವಾದ ಢಮರುಗ ಯಾರಿಗಾದರೂ ಕಿರಿಕಿರಿ ಮಾಡಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Written by - Zee Kannada News Desk | Last Updated : Apr 5, 2022, 04:44 PM IST
  • ಸುಪ್ರಭಾತ, ಅಲ್ಲಾಹ್ ಕೂಗುವುದನ್ನು ನಾನು ಬಾಲ್ಯದಿಂದಲೂ ಕೇಳಿಕೊಂಡೇ ಬೆಳೆದಿದ್ದೇನೆ
  • ದೈವಕ್ಕೆ ಪ್ರಿಯವಾದ ಆ ಘಂಟೆಯ ಸದ್ದು ಯಾರಿಗೂ ಕಿರಿಕಿರಿ ಉಂಟು ಮಾಡಿಲ್ಲ
  • ಇನ್ನೊಂದು ಧರ್ಮದ ನಂಬಿಕೆಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸೋಣವೆಂದು ಎಚ್‍ಡಿಕೆ ಮನವಿ
ನಸುಕಿನಲ್ಲಿ ಸುಪ್ರಭಾತ & ಅಲ್ಲಾಹ್ ಕೂಗುವ ಪರಿಪಾಠ ಇಂದು-ನಿನ್ನೆಯದಲ್ಲ: ಎಚ್‌ಡಿಕೆ title=
ಢಮರುಗ ಯಾರಿಗಾದರೂ ಕಿರಿಕಿರಿ ಮಾಡಿದೆಯೇ?

ಬೆಂಗಳೂರು: ನಸುಕಿನಲ್ಲಿ ಸುಪ್ರಭಾತ & ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ-ಇಂದಿನದಲ್ಲ. ಅನಾದಿ ಕಾಲದಿಂದಲೂ, ಧರ್ಮಗಳು ಹುಟ್ಟಿದಾಗಿನಿಂದಲೂ ನಡೆದುಕೊಂಡೇ ಬಂದಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ. ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆ ವಿವಾದ ವಿಚಾರವಾಗಿ ಮಂಗಳವಾರ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

‘ದೇವಾಲಯಗಳಲ್ಲಿ ಸೂರ್ಯೋದಯಕ್ಕೆ ಮುನ್ನವೇ ಸುಪ್ರಭಾತ ಕೇಳಿಸುವುದು, ಮಸೀದಿಗಳಲ್ಲಿ(Mosques) ಅಲ್ಲಾಹ್ ಕೂಗುವುದನ್ನು ನಾನು ಬಾಲ್ಯದಿಂದಲೂ ಕೇಳಿಕೊಂಡೇ ಬೆಳೆದಿದ್ದೇನೆ. ನಮ್ಮ ಊರಿನಲ್ಲಿ ನಿತ್ಯವೂ ನಾನು ಕೇಳುತ್ತಿದ್ದ ಸದ್ದುಗಳಾಗಿದ್ದವು ಇವು. ಅದೇರೀತಿ ಊರಿನ ಸಿನಿಮಾ ಟೆಂಟಿನಲ್ಲಿ ರಾತ್ರಿಯ ಸೆಕೆಂಡ್ ಶೋ ಆರಂಭಕ್ಕೆ ಮುನ್ನ ಘಂಟಸಾಲ ಅವರು ಭಕ್ತಿಪರವಶರಾಗಿ  ಹಾಡಿರುವ ‘ನಮೋ ವೆಂಕಟೇಶ..ʼ ಎನ್ನುವ ಶ್ರೀ ವೆಂಕಟೇಶ್ವರ ಸ್ವಾಮಿಯವರ ಕೀರ್ತನೆಯನ್ನು ಧ್ವನಿವರ್ಧಕದಲ್ಲಿ ಕೇಳಿಸುತ್ತಿದ್ದನ್ನು ನನ್ನಂತೆಯೇ ಅನೇಕರು ಕೇಳಿರುತ್ತಾರೆ’ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಿಷೇಧಿತ ಸಮಯದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಸಿದ್ರೆ ಕಾನೂನು ಕ್ರಮ: ಕಮಲ್‌ ಪಂತ್

‘ಸಂಜೆಯಾದರೆ ಇಡೀ ಊರಿನ ಜನರೆಲ್ಲ ಗುಡಿಯಲ್ಲಿ ಸೇರಿ ಭಜನೆ ಮಾಡುತ್ತಿದ್ದದ್ದು, ಕರತಾಳ ಹಿಡಿದು ರಾತ್ರಿ ಹತ್ತು ಗಂಟೆವರೆಗೂ ಭಗವಂತನ ಭಜನೆಯಲ್ಲಿ ಲೀನವಾಗುತ್ತಿದ್ದ ದಿನಗಳು ಇನ್ನೂ ನನ್ನ ಸ್ಮೃತಿಪಟಲದಲ್ಲಿ ಹಚ್ಚಹಸಿರಾಗಿವೆ. ನಾನೂ ಬಹಳ ಶ್ರದ್ಧೆಯಿಂದ  ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ನಮ್ಮ ಮನೆಗಳಲ್ಲೂ ಬೆಳಗ್ಗೆಯೇ ಪೂಜೆ ನೆರೆವೇರಿಸಿ ಮಂಗಳಕರವಾದ ಘಂಟೆ ಭಾರಿಸುವುದನ್ನು ನಿತ್ಯವೂ ಕೇಳುತ್ತೇವೆ. ದೈವಕ್ಕೆ ಪ್ರಿಯವಾದ ಆ ಘಂಟೆಯ ಸದ್ದು ಯಾರಿಗೂ ಕಿರಿಕಿರಿ ಉಂಟು ಮಾಡಿಲ್ಲ. ಅದೂ ಅನಾದಿ ಕಾಲದಿಂದಲೂ ನಡೆದುಕೊಂಡೇ ಬಂದಿದೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ದೇವಾಲಯಗಳಲ್ಲಿ ಮಹಾ ಮಂಗಳಾರತಿ ಸಂದರ್ಭಗಳಲ್ಲಿ ಢಮರುಗ, ಜಾಗಟೆ, ಘಂಟೆ ಇತ್ಯಾದಿಗಳನ್ನು ಭಾರಿಸುವ ಸಂಪ್ರದಾಯ ಇದ್ದೇ ಇದೆ. ಶಿವನಿಗೆ ಪ್ರಿಯವಾದ ಢಮರುಗ ಯಾರಿಗಾದರೂ ಕಿರಿಕಿರಿ ಮಾಡಿದೆಯೇ? ಇಲ್ಲವಲ್ಲ. ಹಿಂದುಗಳಾದ ನಾವು ನಮ್ಮ ದೇವರಿಗೆ ಭಕ್ತಿಯಿಂದ ಸಲ್ಲಿಸುವ ಸೇವೆಗಳಿಗೆ ಮುಸ್ಲೀಮರು ಸೇರಿ ಅನ್ಯ ಧರ್ಮದ ಯಾರಿಂದಲೂ ಆಕ್ಷೇಪ ಇಲ್ಲದಿರುವಾಗ ಮಸೀದಿಗಳ ಧ್ವನಿವರ್ಧಕಗಳ(Azaan on Loudspeakers) ಬಗ್ಗೆ ತಕರಾರು ತೆಗೆಯುವುದು ಏಕೆ? ಅಗತ್ಯಬಿದ್ದರೆ ಶಬ್ದದ ಪ್ರಮಾಣವನ್ನು ವೈಜ್ಞಾನಿಕವಾಗಿ ಚಿಂತಿಸಿ ಕಡಿಮೆ ಮಾಡಲಿ. ಆ ಬಗ್ಗೆ ಮುಸ್ಲಿಂ ಧರ್ಮಗುರುಗಳೂ ಆಲೋಚನೆ ಮಾಡಲಿ’ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಏರಿಕೆಯಾಗಲಿದೆ ರಾಜ್ಯ ಸರ್ಕಾರಿ ನೌಕರರ ವೇತನ ! DA ಹೆಚ್ಚಿಸಲು ಸಿಎಂ ಬೊಮ್ಮಾಯಿ ನಿರ್ಧಾರ

‘ಭಾರತೀಯ ಸಂವಿಧಾನವು ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ. ಅದರಲ್ಲಿ ಅಡಕವಾಗಿರುವ ಸಹಿಷ್ಣುತೆಯ ಆಶಯಕ್ಕೆ ಧಕ್ಕೆ ತರುವುದು ಬೇಡ. ಸಂಸತ್ತಿನಲ್ಲಿರುವ ಸಂವಿಧಾನ ಪ್ರತಿಗೆ ಶಿರಬಾಗಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಆಶಯವನ್ನು ಹಿಂದೂ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ನಾಯಕರು ಮೋದಿ ಅವರ ಮೇಲ್ಪಂಕ್ತಿಯನ್ನು ಗೌರವಿಸಬೇಕು’ ಎಂದು ಹೇಳಿದ್ದಾರೆ.

‘ದೇವಾಲಯಗಳಲ್ಲಿ ನಡೆಯುತ್ತಿದ್ದ ನಿತ್ಯ ಭಜನೆ, ಸುಪ್ರಭಾತ ವೇಳೆ ಕೇಳಿಬರುತ್ತಿದ್ದ ಶ್ಲೋಕ, ಕೀರ್ತನೆ, ಭಜನೆಗಳು ಕ್ರಮೇಣ ಕಣ್ಮರೆಯಾಗಿವೆ. ನಾವೆಲ್ಲರೂ ಸೇರಿ ಅವುಗಳ ಪುನರುದ್ಧಾರ ಮಾಡೋಣ. ಮಕ್ಕಳಲ್ಲಿ ಸಾತ್ವಿಕ ಸಂಸ್ಕಾರವನ್ನು ಬೆಳೆಸೋಣ. ಮಕ್ಕಳಲ್ಲಿ ಸಾತ್ವಿಕ ಸಂಸ್ಕಾರವನ್ನು ಬೆಳೆಸೋಣ. ಅದರ ಹೊರತಾಗಿ ಇನ್ನೊಂದು ಧರ್ಮದ ನಂಬಿಕೆಗಳ ಮೇಲೆ ದಾಳಿ(Loudspeakers Ban) ಮಾಡುವುದನ್ನು ನಿಲ್ಲಿಸೋಣ’ವೆಂದು ಎಚ್‍ಡಿಕೆ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News