ಮಡಿಕೇರಿ: ರಾಜ್ಯದ ಕೃಷಿಕರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ (BC Patil) ವಿವರಿಸಿದರು.
ಕೊಡಗು ಜಲ್ಲಾ ಕೇಂದ್ರದಲ್ಲಿ ಜಿಲ್ಲೆಯ ಸಮಗ್ರ ಕೃಷಿ ಚಟುವಟಿಕೆಗಳ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಆತ್ಮಹತ್ಯೆಗಳನ್ನು ತಡೆಗಟ್ಟುವ ದಿಶೆಯಲ್ಲಿ ರೈತ(Farmers)ರಿಗೆ ಆನುಕೂಲಕರವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಲಾಗಿದೆ. ರಾಜ್ಯ ಸರ್ಕಾರ ಎಲ್ಲ ಹಂತಗಳಲ್ಲಿಯೂ ಕೃಷಿಕರ ಜೊತೆ ಇದೆ ಎಂದು ಹೇಳಿದ ಅವರು ಜಾರಿಯಲ್ಲಿರುವ ಯೋಜನೆಗಳು, ಸದ್ಯದಲ್ಲಿಯೇ ಜಾರಿಯಾಗಲಿರುವ ಯೋಜನೆಗಳ ವಿವರಗಳನ್ನು ನೀಡಿದರು.
ಈಗಾಗಲೇ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ಕಂತಿನಲ್ಲಿ ಎರಡು ಸಾವಿರ ರೂಪಾಯಿಗಳಂತೆ ಐದು ಕಂತುಗಳ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ. ರಾಜ್ಯ ಸರ್ಕಾರವೂ ತನ್ನ ಪಾಲಿನ ಹಣ ನೀಡಿದೆ. ಬಡ್ಡಿ ರಹಿತ ಸಾಲದ ಅವಧಿ ಇದೇ ವರ್ಷದ ಮಾರ್ಚ್ ತಿಂಗಳಿಗೆ ಮುಕ್ತಾಯವಾಗಬೇಕಿತ್ತು. ರೈತರ ಹಿತದೃಷ್ಟಿಯಿಂದ ಅದನ್ನು ಜೂನ್ ತಿಂಗಳ ತನಕ ವಿಸ್ತರಣೆ ಮಾಡಲಾಗಿದೆ ಎಂದು ವಿವರಿಸಿದರು.
ಕೃಷಿ ಕ್ಷೇತ್ರಕ್ಕೆ ಈಗ ಸ್ವರ್ಣಯುಗ ಆರಂಭವಾಗಿದೆ: ಬಿ.ಸಿ. ಪಾಟೀಲ್
ರಾಷ್ಟ್ರಾದ್ಯಂತ ಕೊರೊನಾ ಕೋವಿಡ್ 19 (Covid-19) ಕಾರಣ ಲಾಕ್ ಡೌನ್ ಇದ್ದರೂ ಕೃಷಿ ಚಟುವಟಿಕೆ ನಿಲ್ಲದಂತೆ ನೋಡಿಕೊಳ್ಳಲಾಗಿದೆ. ಕೃಷಿ ಉತ್ಪನ್ನಗಳ ಸಾಗಣೆಗಾಗಿ ಅಂತರ ಜಿಲ್ಲೆ, ಅಂತರ ರಾಜ್ಯಗಳ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ಕೃಷಿಕರೇ ನೇರವಾಗಿ ಮಾರಾಟ ಮಾಡುವಂಥ ವ್ಯವಸ್ಥೆಗೆ ಕೃಷಿ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದರು.
ಕೃಷಿ ಚಟುವಟಿಕೆ ಗರಿಗೆದರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಸಹಕಾರ ಇಲಾಖೆ 1,200 ( ಒಂದು ಸಾವಿರದ ಇನ್ನೂರು ಕೋಟಿ) ರೂ.ಗಳನ್ನು ಬಿಡುಗಡೆ ಮಾಡಿದೆ. ಇವೆಲ್ಲದರಿಂದಾಗಿ ಕೃಷಿಕರಿಗೆ ಸಾಕಷ್ಟು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊಡಗಿನಲ್ಲಿ ಸಾಂಪ್ರದಾಯಿಕ ಬೆಳಗಳಾದ ಕಾಫಿ, ಕಿತ್ತಳೆ ಜೊತಗೆ ಭತ್ತ, ಮೆಕ್ಕೆಜೋಳವನ್ನು ಸಹಿತ ಬೆಳೆಯುತ್ತಾರೆ. ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಸಿದ್ಧತೆಗಳು ಆರಂಭವಾಗಿವೆ. ಅವಶ್ಯಕತೆಯಿರುವ ಬಿತ್ತನೆಬೀಜಗಳು - ಗೊಬ್ಬರಗಳ ದಾಸ್ತಾನಿದೆ. ರೈತರು ನಿರಾತಂಕವಾಗಿ ಕೃಷಿ ಚಟುವಟಿಕೆ ನಡೆಸಬೇಕು ಎಂದರು.
ಕೊರೊನಾ ತೊಂದರೆ ಉಂಟಾದ ನಂತರ ಕೃಷಿ ಚಟುವಟಿಕೆ ಕುಸಿಯದಂತೆ ನೋಡಿಕೊಳ್ಳಲು, ರೈತರಲ್ಲಿ ಆತ್ಮವಿಶ್ವಾಸ ತುಂಬಲು ಕಳೆದ ಏಪ್ರಿಲ್ 4ರಿಂದ ಜಿಲ್ಲಾ ಪ್ತವಾಸ ಆರಂಭ ಮಾಡಿ, ಕೃಷಿ ಪ್ರಗತಿ ಪತಿಶೀಲನೆ ನಡೆಸಿದೆ. ಮೇ 5ರಂದು ಕೊಡಗು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ. ಇದು ಭೇಟಿ ನೀಡುತ್ತಿರುವ 30ನೇ ಜಿಲ್ಲೆ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ. ಅವರು ನೀಡಿದ ಸಲಹೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.