"ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿ ಪರಿವಾರದವರು ರಾಷ್ಟ್ರೀಯವಾದಿಗಳಾಗಲು ಹೇಗೆ ಸಾಧ್ಯ?"

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾಗಿ, ಜೈಲು ಸೇರಿದ ಕಾಂಗ್ರೆಸ್ಸಿನವರೇ ನಿಜವಾದ ರಾಷ್ಟ್ರೀಯವಾದಿಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ಪಿ ತಪ್ಪಿಯೂ ಭಾಗವಹಿಸದ ಜನಸಂಘ ಮತ್ತು ಬಿಜೆಪಿ ಪರಿವಾರದವರು ರಾಷ್ಟ್ರೀಯವಾದಿಗಳಾಗಲು ಹೇಗೆ ಸಾಧ್ಯ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Written by - Zee Kannada News Desk | Last Updated : Feb 21, 2024, 07:13 PM IST
  • ಈಗ ಡಾಲರ್ ನ ಬೆಲೆ 83.09 ರೂ. ಆಗಿದ್ದು, ಹಿಂದೆ ಮನಮೊಹನ್ ಸಿಂಗ್ ರ ಅವಧಿಯಲ್ಲಿ 58.50 ರೂ. ಇತ್ತು.
  • ಈ ಹಣದುಬ್ಬರ ಜಾಸ್ತಿಯಾಗಲು ಕಾರಣವೇನು? ಇದಕ್ಕೂ ಕಾಂಗ್ರೆಸ್ ಕಾರಣನಾ?
  • ಮನಮೋಹನ್ ಸಿಂಗ್ ಅವರೇ ಈಗಲೂ ಕಾರಣರಾ?
"ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿ ಪರಿವಾರದವರು ರಾಷ್ಟ್ರೀಯವಾದಿಗಳಾಗಲು ಹೇಗೆ ಸಾಧ್ಯ?" title=
file photo

ಬೆಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾಗಿ, ಜೈಲು ಸೇರಿದ ಕಾಂಗ್ರೆಸ್ಸಿನವರೇ ನಿಜವಾದ ರಾಷ್ಟ್ರೀಯವಾದಿಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ಪಿ ತಪ್ಪಿಯೂ ಭಾಗವಹಿಸದ ಜನಸಂಘ ಮತ್ತು ಬಿಜೆಪಿ ಪರಿವಾರದವರು ರಾಷ್ಟ್ರೀಯವಾದಿಗಳಾಗಲು ಹೇಗೆ ಸಾಧ್ಯ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪರಿಷತ್‌ನಲ್ಲಿ ಹೇಳಿದ್ದಿಷ್ಟು..

ದೇಶದ ಸ್ವಾತಂತ್ರ್ಯಕ್ಕಾಗಿ ಜೈಲು ಸೇರಿದವರು, ಹುತಾತ್ಮರಾದವರು, ಬ್ರಿಟಿಷರಿಂದ ಹಿಂಸೆ ಅನುಭವಿಸಿದವರು ಕಾಂಗ್ರೆಸ್ಸಿನವರು. ಬಿಜೆಪಿ ಪರಿವಾರದವರಿಗೆ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೇ ಇಲ್ಲ. ಅವರು ದೇಶಕ್ಕಾಗಿ ಹೋರಾಡಿದ ಚರಿತ್ರೆಯೇ ಇಲ್ಲ. ನಮ್ಮ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಈಗ ಇವರು ರಾಷ್ಟ್ರೀಯವಾದಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಭಾರತದ ಇತಿಹಾಸ ಮತ್ತು ಚರಿತ್ರೆಯಲ್ಲಿ ಯಾರು ನಿಜವಾದ ರಾಷ್ಟ್ರೀಯವಾದಿಗಳು ಎನ್ನುವುದು ದಾಖಲಾಗಿದೆ.

ರಾಜ್ಯಗಳು ಸುಭದ್ರವಾಗಿದ್ದರೆ ಮಾತ್ರ ದೇಶ ಸುಭದ್ರ. ರಾಜ್ಯಗಳನ್ನು ಕೇಂದ್ರ ದುರ್ಬಲಗೊಳಿಸಬಾರದು. ನಮ್ಮ ಸಂವಿಧಾನ ನಮ್ಮದು ಒಕ್ಕೂಟ ವ್ಯವಸ್ಥೆ ಎಂದು ರೂಪಿಸಿದೆ. ಇದನ್ನು ಇಡೀ ದೇಶ ಒಪ್ಪಿಕೊಂಡಿದೆ. ಆದರೆ ಈ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡಬಾರದು. ನರೇಂದ್ರ ಮೋದಿಯವರು ‘ಕೋ ಆಪರೇಟಿವ್ ಫೆಡರಿಲಿಸಂ’ ಎಂದು ಹೇಳುತ್ತಾರೆ. ಆದರೆ ಅವರ ಮತ್ತು ಕೇಂದ್ರ ಸರ್ಕಾರದ ನಡವಳಿಕೆಯಲ್ಲಿ ಇದು ಕಾಣುತ್ತಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಅನ್ಯಾಯ ಆಗುತ್ತಿದೆ.

ಇದನ್ನೂ ಓದಿ: ಸಿದ್ಧಗಂಗಾ ಮಠದಿಂದ BCM ಹಾಸ್ಟೆಲ್‌ಗಳಿಗೆ ಅಕ್ಕಿ ಸಾಲ ಕೇಸ್‌

ರಾಜ್ಯದಿಂದ ವಾರ್ಷಿಕ 4.30 ಲಕ್ಷ ಕೋಟಿ ತೆರಿಗೆ ಹೋಗುತ್ತಿದೆ. ತೆರಿಗೆ ಹಂಚಿಕೆಯಲ್ಲಿ 2023-24ಕ್ಕೆ 37,252 ಕೋಟಿ ರೂ. ಬರುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಂದ ರೂ.13,005 ಕೋಟಿ, ಒಟ್ಟು ರೂ.50,257 ಕೋಟಿ ಮಾತ್ರ ಬರುತ್ತಿದೆ. ಕೇಂದ್ರದ ಬಜೆಟ್ ಗಾತ್ರ ಹೆಚ್ಚಾದ ಹಾಗೆ ರಾಜ್ಯದ ಪಾಲು ಕೂಡ ನಿಯಮಬದ್ಧವಾಗಿ ಹೆಚ್ಚಾಗಬೇಕು. ಆದರೆ, ಕೇಂದ್ರದ ಬಜೆಟ್ ಗಾತ್ರ ಹೆಚ್ಚಾಗುತ್ತಾ ಹೋದಂತೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲು, ಕನ್ನಡಿಗರ ಹಕ್ಕಿನ ತೆರಿಗೆ ಮತ್ತು ಅನುದಾನದ ಪಾಲು ಕಡಿಮೆ ಆಗುತ್ತಿದೆ.

ಕನ್ನಡಿಗರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ರಾಜ್ಯ ಬಲಿಷ್ಠವಾದರೆ, ಕೇಂದ್ರ ಬಲಿಷ್ಠವಾಗುತ್ತದೆ. ರಾಜ್ಯಕ್ಕೆ ಮತ್ತು ರಾಜ್ಯದ ಜನತೆಯ ಪಾಲಿಗೆ ಆಗುತ್ತಿರುವ ಅನ್ಯಾಯವನ್ನು ನಾವು ಪ್ರಶ್ನಿಸಿದರೆ, ಪ್ರಧಾನಿ ಮೋದಿ ಅವರು ದೇಶ ವಿಭಜನೆಯ ಮಾತಾಡುತ್ತೇವೆ ಎನ್ನುತ್ತಾರೆ.

ಕೇಂದ್ರದಲ್ಲಿ UPA ಸರ್ಕಾರ ಇದ್ದಾಗ ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಮೋದಿಯವರು, ಯುಪಿಎ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಬೆದರಿಕೆಯಂತಿದೆ ಎಂದು ಹೇಳಿದ್ದರು.

ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷುಕರಲ್ಲ. ಗುಜರಾತ್ ರಾಜ್ಯದಿಂದ ಸಂಗ್ರಹ ಆಗುವ ತೆರಿಗೆಯಲ್ಲಿ ಶೇ.50 ರಷ್ಟು ವಾಪಾಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಗುಜರಾತ್ ರಾಜ್ಯದ ತೆರಿಗೆಯನ್ನು ನಾವು ಕೇಂದ್ರಕ್ಕೆ ಕೊಡುವುದಿಲ್ಲ ಎನ್ನುವ ಮಾತನ್ನೂ ಮೋದಿ ಅವರು ಆಡಿದ್ದರು. ಆದರೆ ಈಗ ಅದೇ ಮೋದಿ ಅವರು ಪ್ರಧಾನಿ ಆಗಿರುವಾಗ ಕರ್ನಾಟಕ ರಾಜ್ಯಕ್ಕೆ ವಾಪಾಸ್ ಕೊಡುತ್ತಿರುವುದು ಶೇ 12-13 ರಷ್ಟು ಮಾತ್ರ. ಮೋದಿ ಅವರು ಆಗೊಂದು ಮಾತು ಈಗೊಂದು ರೀತಿ ಮಾತನಾಡಿದ್ದಾರೆ. ಇದನ್ನು ಪ್ರಸ್ತಾಪಿಸಿದರೆ ನಿಮಗೇಕೆ ಸಿಟ್ಟು? ಎಂದು ಪ್ರಶ್ನಿಸಿದರು.

ನಾವು ಕೊಡುವ ಪ್ರತಿ 100 ರೂಪಾಯಿಗೆ ಕೇವಲ 12 ರೂ. ವಾಪಾಸ್ ಕೊಟ್ಟರೆ ರಾಜ್ಯದ ಅಭಿವೃದ್ಧಿ ಆಗಲು ಹೇಗೆ ಸಾಧ್ಯ? ಇಷ್ಟು ಕಡಿಮೆ ಪಾಲು ನಮಗೆ ಕೊಟ್ಟರೆ ರಾಜ್ಯದ ಶೂದ್ರರು, ದಲಿತರು, ಆದಿವಾಸಿಗಳು, ದುಡಿಯುವವರು, ಶ್ರಮಿಕರು, ಯುವಕರು, ಮಹಿಳೆಯರ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಕಿಡಿ ಕಾರಿದರು.

ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಹಣದ ಪಾಲಿನಲ್ಲಿ ಅನ್ಯಾಯವಾಗುತ್ತಿದೆ. 2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ ರೂ.24,44,213 ಕೋಟಿ ಇತ್ತು. ಅಂದು ರಾಜ್ಯಕ್ಕೆ ರೂ.51,000 ಕೋಟಿ ಮಾತ್ರ ಬಂತು. 2020-21ನೇ ಸಾಲಿನಲ್ಲಿ ಕೇಂದ್ರದ ಬಜೆಟ್ ಗಾತ್ರ ರೂ.30,42,243 ಕೋಟಿ ಇದ್ದರೆ ನಮಗೆ ಬಂದಿದ್ದು ರೂ.31,734 ಕೋಟಿ, 2021-22 ರಲ್ಲಿ ರೂ.34,83,236 ಕೋಟಿ ಗಾತ್ರದ ಬಜೆಟ್ ಗೆ, ರಾಜ್ಯಕ್ಕೆ ರೂ.48,589 ಕೋಟಿ ಬಂತು. 2022-23ರಲ್ಲಿ ಕೇಂದ್ರದ ಬಜೆಟ್ ರೂ. 41,81,232 ಕೋಟಿ, ರಾಜ್ಯಕ್ಕೆ ರೂ.53,510 ಕೋಟಿ ಮಾತ್ರ ಬಂತು. 2023-24ರಲ್ಲಿ ರೂ.45,03,007 ಕೋಟಿ ಕೇಂದ್ರದ ಬಜೆಟ್ ಗಾತ್ರ. ರಾಜ್ಯಕ್ಕೆ ಬಂದಿದ್ದು ರೂ.50,257 ಕೋಟಿ ಮಾತ್ರ. 2024-25ರಲ್ಲಿ ರಾಜ್ಯಕ್ಕೆ ರೂ.59,785 ಕೋಟಿ ಬರುತ್ತದೆ.

ಇದನ್ನೂ ಓದಿ: ಪ್ರಧಾನಮಂತ್ರಿ ಮೋದಿಯವರಿಂದ ಗಂಗಾವತಿ ಕೇಂದ್ರಿಯ ವಿದ್ಯಾಲಯ ಲೋಕಾರ್ಪಣೆ

ಈ ರೀತಿ ಬಜೆಟ್ ಗಾತ್ರ ದೊಡ್ಡದಾದರೂ, ನಮಗೆ ಬರುತ್ತಿರುವ ಪಾಲು ಕಡಿಮೆಯಾಗುತ್ತಿದೆ.

ಪ್ರಧಾನಿ ಅವರು ರಾಷ್ಟ್ರಪತಿಗಳ ಭಾಷಣದ ಚರ್ಚೆಗೆ ಉತ್ತರಿಸುತ್ತಾ ರಾಜ್ಯದ ತೆರಿಗೆ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ‘ದೇಶದ ಐಕ್ಯತೆಗೆ ಅಪಾಯವೊಡ್ಡುತ್ತದೆ’ ಎಂದಿದ್ದಾರೆ. ಅದೇ ಪ್ರಧಾನಮಂತ್ರಿಗಳು ಗುಜರಾತಿನ ಸಿಎಂ ಆಗಿದ್ದಾಗ 2012 ರಲ್ಲಿ ಗುಜರಾತಿಗೆ ಬರುತ್ತಿರುವ ಆರ್ಥಿಕ ಪಾಲನ್ನು ವಿರೋಧಿಸಿದ್ದರು. ಗುಜರಾತ್ ರಾಜ್ಯ 'ನಾವು ಭಿಕ್ಷುಕ ರಾಜ್ಯವೇ, ನಾವು ಭಿಕ್ಷುಕರೆ, ನಾವು ಕೇಂದ್ರದ ಕರುಣೆಯ ಮೇಲೆ ಬದುಕಬೇಕೆ?' ಎಂದಿದ್ದರು.

ಕೇಂದ್ರದ ಯುಪಿಎ ಸರ್ಕಾರಕ್ಕೆ ‘ಗುಜರಾತಿನಿಂದ ತೆರಿಗೆ ತೆಗೆದುಕೊಳ್ಳಬೇಡಿ, ಅದನ್ನು ನಾವೇ ಬಳಸಿಕೊಳ್ಳುತ್ತೇವೆ’ ಎಂದು ಮೋದಿ ಅವರು ಅಂದಿದ್ದರು. ಇದು ಸಂವಿಧಾನ, ಒಕ್ಕೂಟ ವ್ಯವಸ್ಥೆಗೆ ವಿರೋಧವಲ್ಲವೇ? ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ನಮ್ಮ ಹಣ ವಾಪಾಸ್ ಕೊಡಿಸಿ. ನಿಮಗೆ ನೂರು ಕೋಟಿ ನಮಸ್ಕಾರ ಹಾಕ್ತೀನಿ.

ನೂತನ ಪಾರ್ಲಿಮೆಂಟಿನ ಉದ್ಘಾಟನೆಗೆ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಆಹ್ವಾನಿಸದೇ ಇದ್ದದ್ದು ರಾಷ್ಟ್ರಪತಿಗಳಿಗೆ, ರಾಷ್ಟ್ರಪತಿ ಹುದ್ದೆಗೆ ಮಾಡಿದ ಅವಮಾನ ಅಲ್ಲವೇ?

ಅಂಕಿಅಂಶಗಳಿಲ್ಲದೇ ನಾನು ಯಾವುದೇ ಮಾತನ್ನು ಹೇಳುವುದಿಲ್ಲ. ವಿರೋಧ ಪಕ್ಷದವರ ಟೀಕೆ ಸರಿಯಾಗಿದ್ದರೆ, ಸರಿಪಡಿಸಿಕೊಳ್ಳಲು ಬದ್ಧರಾಗಿದ್ದೇವೆ.

15ನೇ ಹಣಕಾಸು ಆಯೋಗದಲ್ಲಿ 3.64℅ ರಾಜ್ಯಕ್ಕೆ ಬಂದಿತು. 14 ರಿಂದ 15ನೇ ಹಣಕಾಸು ಆಯೋಗಕ್ಕೆ ಹೋಲಿಸಿದಾಗ 1.07% ಕಡಿಮೆಯಾಯಿತು. ಇದರಿಂದ 100 ರೂ. ನಲ್ಲಿ ಕೇವಲ 13 ರೂ. ರಾಜ್ಯಕ್ಕೆ ಮರಳಿ ಬರುತ್ತಿದೆ.

15ನೇ ಹಣಕಾಸು ಆಯೋಗದಲ್ಲಿ ಮಧ್ಯಂತರ ವರದಿಯಲ್ಲಿ ರೂ.5,495 ಕೋಟಿ ನೀಡಬೇಕಿತ್ತು. ಆದರೆ ಅಂತಿಮ ವರದಿಯಲ್ಲಿ ಪಿ.ಆರ್.ಆರ್ ಮತ್ತು ಕೆರೆಗಳ ಅಭಿವೃದ್ಧಿ, ವಿಶೇಷ ಅನುದಾನ ಸೇರಿದಂತೆ ಒಟ್ಟು 11,495 ಕೋಟಿ ರೂಪಾಯಿ ರಾಜ್ಯಕ್ಕೆ ಬರಬೇಕಿತ್ತು. ಈ ಅನುದಾನ ರಾಜ್ಯಕ್ಕೆ ನೀಡಲು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಲಿಲ್ಲ.

2023-24ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಗೆ 5,300 ಕೋಟಿ ರೂಪಾಯಿ ಕೊಡುವುದಾಗಿ ತಿಳಿಸಿದ್ದರೂ, ಅನುದಾನ ನೀಡಿಲ್ಲ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ‘ಭದ್ರಾ ಮೇಲ್ದಂಡೆ ಯೋಜನೆ ಕೇಂದ್ರದ ಆಯವ್ಯಯದಲ್ಲಿ ರಾಷ್ಟ್ರೀಯ ಯೋಜನೆಯಾಗುವ ಹಿನ್ನೆಲೆಯಲ್ಲಿ ರೂ.5,300 ಕೋಟಿ ನೀಡಿದೆ' ಎಂದಿದ್ದರು. ಅದರಲ್ಲಿ ಇವತ್ತು ಫೆಬ್ರವರಿ 21 ರವರೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ.

ಈ ಯೋಜನೆಗೆ ಸಂಬಂಧಿಸಿದಂತೆ, ನಾನು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್, ನಮ್ಮ ಸರ್ಕಾರದ ಸಚಿವರು ಕೇಂದ್ರ ಸರ್ಕಾರದ ಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ಬಿಜೆಪಿಯವರು ಕೇಂದ್ರದಿಂದ ಈ ಅನುದಾನ ಪಡೆಯಲು ನಮ್ಮ ಜೊತೆ ಸಹಕರಿಸಲಿ.

11,495 ಕೋಟಿ ರೂ.ಗಳನ್ನು ಬಿಜೆಪಿಯವರ ನಾಯಕತ್ವದಲ್ಲಿಯೇ ಕೇಂದ್ರವನ್ನು ಕೇಳೋಣ, ನಾಡಿನ ಜನರಿಗೆ ಒಳಿತು ಮಾಡುವುದಷ್ಟೇ ನಮ್ಮ ಉದ್ದೇಶ.

ಬರಗಾಲ ಪರಿಸ್ಥಿತಿಯಲ್ಲಿ 20-10-2023ರಲ್ಲಿ ಮತ್ತು 16-11-2023 ರಲ್ಲಿ ಬರಪರಿಹಾರ ಮನವಿಗಳನ್ನು ನೀಡಲಾಗಿದೆ. 48 ಲಕ್ಷ ಹೆಕ್ಟೆರ್ ಬೆಳೆ ನಷ್ಟವಾಗಿದೆ. 35 ಸಾವಿರ ಕೋಟಿ ರೂಪಾಯಿ ಮೊತ್ತದ ಬೆಳೆ ಹಾನಿಯಾಗಿದ್ದು, ಎನ್‌ಡಿಆರ್‌ಎಫ್ ಪ್ರಕಾರ 18,171 ಕೋಟಿ ರೂ.ಗಳನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ.

ಕುಡಿಯುವ ನೀರಿಗಾಗಿ 324 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿ, ರೂ.867.87 ಕೋಟಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ರಾಜ್ಯ ಸರ್ಕಾರ 3,39,000 ರೈತರಿಗೆ 628.05 ಕೋಟಿ ರೂ.ಗಳಿಗೆ ತಾತ್ಕಾಲಿಕ ಪರಿಹಾರವಾಗಿ 2000 ರೂ. ಗಳನ್ನು ನೀಡಲಾಗಿದೆ.

ರಾಜ್ಯದಲ್ಲಿ ಈ ವರ್ಷ 111 ಲಕ್ಷ ಟನ್ ಆಹಾರ ಉತ್ಪಾದನೆಯ ಅಂದಾಜಿಸಲಾಗಿತ್ತು. ಆದರೆ ಈಗ ಬರದ ನಡುವೆ 93 ಲಕ್ಷ ಟನ್ ಆಹಾರ ಉತ್ಪಾದನೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಗ್ಯಾರಂಟಿಗಳು ಜನರ ನೆರವಿಗೆ ನಿಂತಿವೆ.

ಜೂನ್ 11 ರಿಂದ ಶಕ್ತಿ ಯೋಜನೆ ಜಾರಿಯಾಯಿತು. ಇಲ್ಲಿಯವರೆಗೆ 160 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ.

ಜುಲೈನಿಂದ ಗೃಹಜ್ಯೋತಿ ಯೋಜನೆಯಡಿ 1.60 ಕೋಟಿ ಕುಟುಂಬಗಳಿಗೆ ಲಾಭವಾಗುತ್ತಿದೆ. ಅನ್ನಭಾಗ್ಯದಡಿ ರಾಜ್ಯ ಹಸಿವುಮುಕ್ತ ಆಗಬೇಕೆನ್ನುವ ಉದ್ದೇಶದಿಂದ 1.38 ಕೋಟಿ ಕುಟುಂಬಗಳಿಗೆ ಅಕ್ಕಿ ನೀಡಲಾಗುತ್ತಿದೆ. ಕೇಂದ್ರದವರು ಅಕ್ಕಿ ಕೊಡಲು ಒಪ್ಪದೇ ಇದ್ದರೂ, 5 ಕೆಜೆ ಅಕ್ಕಿಯ ಬದಲಾಗಿ 170 ರೂ. ನೀಡುತ್ತಿದ್ದೇವೆ.

ಗೃಹಲಕ್ಷ್ಮಿಯಡಿ 1.21 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, 1.17 ಕೋಟಿ ಮಹಿಳೆಯರ ಖಾತೆಗೆ ಮಾಸಿಕ 2,000 ರೂ. ಜಮೆಯಾಗುತ್ತಿದೆ. ಮಹಿಳೆಯರಿಗೆ ಆರ್ಥಿಕ ಬಲ ತುಂಬಲಾಗುತ್ತಿದೆ.

ಯುವನಿಧಿಯಡಿ 2022-23 ರಲ್ಲಿ ಪದವಿ, ಡಿಪ್ಲೊಮಾದಲ್ಲಿ ತೇರ್ಗಡೆಯಾಗಿರುವ ನಿರುದ್ಯೋಗಿ ಯುವಕರಿಗೆ ಕ್ರಮವಾಗಿ 3,000 ರೂ. ಹಾಗೂ 1500 ರೂ.ಗಳನ್ನು ನೀಡುವ ಯೋಜನೆಗೆ ವಿವೇಕಾನಂದರ ಜನ್ಮದಿನದಂದು ಚಾಲನೆ ನೀಡಿ, ಇಲ್ಲಿಯವರೆಗೆ 7.34 ಲಕ್ಷ ರೂ. ಹಣವನ್ನು ನೋಂದಾಯಿತ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.

ಗ್ಯಾರಂಟಿಗಳನ್ನು ಜಾರಿಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದ ಪ್ರಧಾನಿಯವರು, ಈಗ ಮೋದಿ ಗ್ಯಾರಂಟಿ ಎಂದು ಹೇಳಿಕೊಳ್ಳುತ್ತಿದ್ದಾರೆ.

ಈಗ ಡಾಲರ್ ನ ಬೆಲೆ 83.09 ರೂ. ಆಗಿದ್ದು, ಹಿಂದೆ ಮನಮೊಹನ್ ಸಿಂಗ್ ರ ಅವಧಿಯಲ್ಲಿ 58.50 ರೂ. ಇತ್ತು. ಈ ಹಣದುಬ್ಬರ ಜಾಸ್ತಿಯಾಗಲು ಕಾರಣವೇನು? ಇದಕ್ಕೂ ಕಾಂಗ್ರೆಸ್ ಕಾರಣನಾ? ಮನಮೋಹನ್ ಸಿಂಗ್ ಅವರೇ ಈಗಲೂ ಕಾರಣರಾ?

ಕನ್ಸ್ಯೂಮರ್ ಕಾನ್ಫಿಡೆನ್ಸ್ ಇಂಡೆಕ್ಸ್ ಪ್ರಕಾರ ಮಾಸಿಕ ರೂ.5,000 ಆದಾಯಕ್ಕಿಂತ ಕಡಿಮೆಯಿರುವವರು 61.6% ಜನಸಂಖ್ಯೆಯಿದ್ದು, ಹಿಂದಿನ ವರ್ಷಗಳಿಗಿಂತ ಈ ಪರಿಸ್ಥಿತಿ ಹಾಳಾಗಿದೆ ಎಂದು ಆರ್ ಬಿ ಐ ವರದಿ ಹೇಳುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯವರ ಹಸಿವಿನ ಇಂಡೆಕ್ಸ್ ನಲ್ಲಿ 2023 ರಲ್ಲಿ 125 ದೇಶಗಳ ಪಟ್ಟಿಯಲ್ಲಿ ಭಾರತ 115 ಸ್ಥಾನದಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News