“ಸರ್ಕಾರದಲ್ಲಿ ಮಾನವೀಯತೆ ಹಣ ಕೊಟ್ಟವರಿಗೆ ಮಾತ್ರ”

ಈ ಸರ್ಕಾರ ಮಾನವೀಯತೆಯನ್ನು ಕಳೆದುಕೊಂಡಿದೆ. ಇಂತಹ ಗಂಭೀರ ಪ್ರಕರಣಲ್ಲಿ ಯಾರೇ ಆದರೂ ಮಾನವೀಯತೆ ಮೆರೆಯಬೇಕು. ಆದರೆ ಸರ್ಕಾರದಲ್ಲಿ ಮಾನವೀಯತೆ ಹಣ ಕೊಟ್ಟವರಿಗೆ ಮಾತ್ರ ಎಂದು  ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

Written by - Zee Kannada News Desk | Last Updated : Nov 5, 2022, 09:53 PM IST
  • ಹಣ ಕೊಟ್ಟವರಿಗೆ ಪೋಸ್ಟಿಂಗ್ ನೀಡಲಾಗುತ್ತದೆ.
  • ಹೀಗಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಮಾನವೀಯತೆ ಮರೆತು ಹಣ ಗಳಿಸುವ ಬಗ್ಗೆ ಗಮನಹರಿಸಿದ್ದಾರೆ.
  • ಇತ್ತೀಚೆಗೆ ಕೆಲವು ಪಿಎಸ್ಐ ಅಭ್ಯರ್ಥಿಗಳು ಗೃಹ ಸಚಿವರ ಬಳಿ ಅಳಲು ತೋಡಿಕೊಳ್ಳಲು ಹೋದರೆ ಡಿವೈಎಸ್ ಪಿ ಕಪಾಳಕ್ಕೆ ಹೊಡೆಯುತ್ತಾರೆ.
“ಸರ್ಕಾರದಲ್ಲಿ ಮಾನವೀಯತೆ ಹಣ ಕೊಟ್ಟವರಿಗೆ ಮಾತ್ರ” title=

ಬೆಂಗಳೂರು: ಈ ಸರ್ಕಾರ ಮಾನವೀಯತೆಯನ್ನು ಕಳೆದುಕೊಂಡಿದೆ. ಇಂತಹ ಗಂಭೀರ ಪ್ರಕರಣಲ್ಲಿ ಯಾರೇ ಆದರೂ ಮಾನವೀಯತೆ ಮೆರೆಯಬೇಕು. ಆದರೆ ಸರ್ಕಾರದಲ್ಲಿ ಮಾನವೀಯತೆ ಹಣ ಕೊಟ್ಟವರಿಗೆ ಮಾತ್ರ ಎಂದು  ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಹಣ ಕೊಟ್ಟವರಿಗೆ ಪೋಸ್ಟಿಂಗ್ ನೀಡಲಾಗುತ್ತದೆ. ಹೀಗಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಮಾನವೀಯತೆ ಮರೆತು ಹಣ ಗಳಿಸುವ ಬಗ್ಗೆ ಗಮನಹರಿಸಿದ್ದಾರೆ. ಇತ್ತೀಚೆಗೆ ಕೆಲವು ಪಿಎಸ್ಐ ಅಭ್ಯರ್ಥಿಗಳು ಗೃಹ ಸಚಿವರ ಬಳಿ ಅಳಲು ತೋಡಿಕೊಳ್ಳಲು ಹೋದರೆ ಡಿವೈಎಸ್ ಪಿ ಕಪಾಳಕ್ಕೆ ಹೊಡೆಯುತ್ತಾರೆ. ಇಲ್ಲಿ ಮಹಿಳೆ ಗಂಭೀರ ಪ್ರಕರಣ ಇದೆ ಎಂದು ಗೊತ್ತಿದ್ದರೂ ಕಾರ್ಡ್ ಕೊಡಿ, ಹಣ ಕೊಡಿ ಎಂದು ಹೇಳಿ ಚಿಕಿತ್ಸೆ ನೀಡಿಲ್ಲ. ಇದು ಸರ್ಕಾರದ ಪ್ರಾಯೋಜಿತ ಹತ್ಯೆ.  ಇದಕ್ಕೆ ಕಾರಣ ಯಾರು? ಅಮಾನತು ಗೊಳಿಸಿದರೆ ಸಾಕೆ? ಅವರ ಪರವಾನಿಗೆ ರದ್ದು ಮಾಡಬೇಕು. ವೈದ್ಯರು ವೃತ್ತಿ ಆರಂಭಿಸುವಾಗ ಮಾನವೀಯತೆ ಆಧಾರದ ಮೇಲೆ ಪ್ರತಿಜ್ಞೆ ಮಾಡಿರುತ್ತಾರೆ. ಅದನ್ನು ಮರೆತು ಇಂದು ಈ ರೀತಿ ಚಿಕಿತ್ಸೆ ತಿರಸ್ಕರಿಸಿದರೆ. ಈ ಸರ್ಕಾರಕ್ಕೆ ಜೀವಕ್ಕೆ ಬೆಲೆ ಎಷ್ಟಿದೆ ಎಂದು ತಿಳಿಯುತ್ತದೆ.

ಇದನ್ನೂ ಓದಿ: ದೆಹಲಿಯ ಇಂಡಿಯಾ ಗೇಟ್ ನಲ್ಲಿ ಕಾಂತಾರ ತಂಡದ ಭರ್ಜರಿ ಪ್ರೊಮೋಷನ್....!

ಈ ಪೋಸ್ಟಿಂಗ್ ಹಣಕ್ಕೆ ಮಾರಾಟವಾಗುತ್ತಿರುವುದರಿಂದ ಹಣ ಗಳಿಸುವುದರ ಬಗ್ಗೆ ಗಮನ ಹರಿಸಿ ಮಾನವೀಯತೆ ಮರೆಯುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆ ಆಸ್ಪತ್ರೆ ಸಾವಿನ ಪ್ರಕರಣದಲ್ಲಿ ಸಚಿವರು ಬೇಜವಾಬ್ದಾರಿಯಿಂದ ವಿರೋಧ ಪಕ್ಷದ ನಾಯಕರಿಗೆ ಪ್ರಶ್ನೆ ಮಾಡಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ' ಈ ಸರ್ಕಾರ ರಚನೆ ಆಗಿರುವುದೇ ದುಡ್ಡಿನ ಮೇಲೆ. ಇದೇ ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಜನ ಸತ್ತಾಗ, ಯಾರು ಸತ್ತೇ ಇಲ್ಲ ಎಂದರು. ಲೋಕಸಭೆಯಲ್ಲಿ ಮಾಹಿತಿ ಕೇಳಿದಾಗ ಈ ಬಗ್ಗೆ ಸರ್ಕಾರಕ್ಕೂ ಮಾಹಿತಿ ಇಲ್ಲ. ಆದರೂ ಇವರು ನಿರಾಕರಿಸುವ ಮನಸ್ಥಿತಿಯಲ್ಲಿದೆ. ದುಡ್ಡಿನ ಮೇಲೆ ರಚನೆಯಾದ ಸರ್ಕಾರ 40% ಭ್ರಷ್ಟಚಾರದಲ್ಲಿ ಮುಳುಗಿದ್ದು, ಇದರಿಂದ ಮಾನವೀಯತೆ ನಿರೀಕ್ಷಿಸಲು ಸಾಧ್ಯವೇ? ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಸಾವು ಆರಂಭವಾಗಿದೆ. ಈ ಬಗ್ಗೆ ಸರ್ಕಾರ ಏನಾದರೂ ಮಾಡಿದೆಯಾ? ಜನ ಯಾಕೆ ಸಾಯುತ್ತಿದ್ದಾರೆ ಎಂದು ಕೇಳಿದರೆ, ನಿಮ್ಮ ಸರ್ಕಾರದಲ್ಲಿ ರಸ್ತೆ ಗುಂಡಿ ಇರಲಿಲ್ಲವೇ ಎಂದು ಕೇಳುತ್ತಿದ್ದಾರೆ. ರಸ್ತೆ ಗುಂಡಿಗೆ 21 ಬಲಿಯಾಗಿದ್ದು, ಆ ಬಗ್ಗೆ ಮಾತನಾಡಿ ಎಂದರೆ ಹಳೆ ಸರ್ಕಾರದ ಬಗ್ಗೆ ಮಾತನಾಡುತ್ತಾರೆ.

ಸಿದ್ದರಾಮಯ್ಯ ಅವರ ಕಾಲದ ಅಕ್ರಮ ತನಿಖೆ ಮಾಡುತ್ತೇವೆ ಎಂದರು. ಅದು ಏನಾಯ್ತು? ನಿರುದ್ಯೋಗಿ ಯುವಕರು ದಿನನಿತ್ಯ ಕಣ್ಣೀರು ಹಾಕುತ್ತಿದ್ದರೂ ಅವರಿಗೆ ಮಾನವೀಯತೆ ತೋರಲು ಆಗುತ್ತಿಲ್ಲ. ಅವರದೇ ಶಾಸಕರು ಶಾಸಕರ ಭವನದಲ್ಲಿ ಡೀಲ್ ಮಾಡುತ್ತಿದ್ದಾರೆ.ಈ ಸರ್ಕಾರ ಹಣದಿಂದ, ಹಣಕ್ಕಾಗಿ, ಹಣ ಗಳಿಸಲಿಕೊಸ್ಕರ ಸರ್ಕಾರವಾಗಿದೆ' ಎಂದು ತಿರುಗೇಟು ಕೊಟ್ಟರು.

ಇದನ್ನೂ ಓದಿ: ವಕೀಲರಿಗೆ ಬಿಡಿಎ ಫ್ಲಾಟ್ ಗಳನ್ನು ಖರೀದಿಸಲು ಶೇ.10ರಷ್ಟು ರಿಯಾಯಿತಿ!

ಸಚಿವ ಸುಧಾಕರ್ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ, ಅವರಿಗೆ ವಿಮ್ಸ್ ಪ್ರಕರಣ, ಆಕ್ಸಿಜನ್ ಕೊರತೆ ಪ್ರಕರಣ, ಕೋವಿಡ್ ನಿರ್ವಹಣೆ ವೈಫಲ್ಯ ಆದಾಗಲೇ ರಾಜೀನಾಮೆ ನೀಡಬೇಕಿತ್ತು. ಆಗ ರಾಜೀನಾಮೆ ನೀಡದವರಿಂದ ಈಗ ನಿರೀಕ್ಷೆ ಮಾಡಲು ಸಾಧ್ಯವೇ? ಈ ಸರ್ಕಾರಕ್ಕೆ ಭ್ರಷ್ಟಾಚಾರ ಸೋಂಕು ತಗುಲಿ ಸೋಂಕಿತ ಸರ್ಕಾರವಾಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟರೆ ನಾನು ರಾಜೀನಾಮೆ ನೀಡುತ್ತೇನೆ ಎಂಬುದು ಅವರ ಸಮರ್ಥನೆಯೇ? ಮಾತೆತ್ತಿದರೆ ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುತ್ತಾರಲ್ಲ. ಹಾಗಾದರೆ ಕೊರೋನಾ ಸಮಯದಲ್ಲಿ ರೋಗಿಗಳನ್ನು ದಾಖಲಿಸಿಕೊಂಡ ಆಸ್ಪತ್ರೆ ಕಟ್ಟಿಸಿದವರು ಯಾರು? ಬಿಜೆಪಿಯವರೇ? ಕೇಂದ್ರದಲ್ಲಿ 8 ವರ್ಷಗಳಿಂದ ಮೋದಿ ಸರ್ಕಾರ, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ನಿಮ್ಮ ಸರ್ಕಾರದ ಕೊಡುಗೆ ಏನು? ಈಗಲೂ ಕಾಂಗ್ರೆಸ್ ಮೇಲೆ ಗೂಬೇ ಕೂರಿಸಿದರೆ ಜನ ನಿಮಗೆ ತಕ್ಕ ಉತ್ತರ ನೀಡುತ್ತಾರೆ ' ಎಂದು ಕಿಡಿಕಾರಿದರು.

ಶಾಸಕ ಸಂಗಮೇಶ್ ಅವರಿಗೆ ನಾನು ಹಣ ಕೊಟ್ಟು ಪಕ್ಷಕ್ಕೆ ಆಹ್ವಾನ ಮಾಡಿದ ಬಗ್ಗೆ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ' ಅದರಲ್ಲಿ ಯಾವುದೇ ಅಚ್ಚರಿ ಇಲ್ಲ. ಅವರು ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಿದ್ದಾರೆ. ಅವರ ಪ್ರಕರಣ ಏನಾಯ್ತು? ಅವರ ಮನೆ ಮೇಲೆ ಐಟಿ ದಾಳಿ ಆದಾಗ ಹಣ ಎಣಿಕೆ ಯಂತ್ರ ಸಿಕ್ಕಿತ್ತು. ಅವರ ಬಳಿ ಹಣ ಇತ್ತಾ? ಅವರು ವ್ಯಂಗ್ಯವಾಗಿ ಮಾತನಾಡಿದ್ದರೆ, ರಾಜ್ಯದಲ್ಲಿ ಆಪರೇಶನ್ ಕಮಲ ಆಗಿಲ್ಲವೇ? ಪಕ್ಷ ಬಿಟ್ಟು ಹೋದವರು ತತ್ವ ಸಿದ್ಧಾಂತದ ಮೇಲೆ ಹೋಗಿದ್ದಾರಾ? ಇವರೆಲ್ಲ ಹಣ ಪಡೆದು ಹೋಗಿದ್ದಾರೆ. ಟಿಆರ್ ಎಸ್ ಶಾಸಕರ ಖರೀದಿ ಸಮಯದಲ್ಲಿ ಅವರು ರಾಜ್ಯದ ಆಪರೇಶನ್ ಕಮಲದ ಪ್ರಸ್ತಾಪ ಆಗಿದೆ. ಈಶ್ವರಪ್ಪ ಅವರ ಮೇಲಿನ ಐಟಿ ಇಡಿ ಕೇಸ್ ಏನಾಯ್ತು? ಯಾಕೆ ಕೇಂದ್ರ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಆ ಪ್ರಕರಣ ಸರ್ಕಾರದ ಬಳಿಯೇ ಬಾಕಿ ಉಳಿದಿದೆ. ಇಂತಹ ಹೇಳಿಕೆ ಕೊಟ್ಟಾಗ ಐಟಿ, ಸಿಬಿಐ ನಿದ್ರೆ ಮಾಡುತ್ತಿದೆಯೇ? ಕಾಂಗ್ರೆಸ್ ನಾಯಕರು ಈ ಹೇಳಿಕೆ ಕೊಟ್ಟಿದ್ದಾರೆ ಇಷ್ಟು ಹೊತ್ತಿಗೆ  ದಾಳಿ ಆಗುತ್ತಿರಲಿಲ್ಲವೇ. 500 ಕೋಟಿ ಕೊಡದಿದ್ದರೂ 50 ಕೋಟಿ ಕೊಟ್ಟು ಆಪರೇಶನ್ ಕಮಲ ಮಾಡಿಲ್ಲವೇ? ಯಡಿಯೂರಪ್ಪ ಹಾಗೂ ದಿವಂಗತ ಅನಂತ್ ಕುಮಾರ್ ಅವರು ಮಾಧ್ಯಮದ ಮುಂದೆ ಕಪ್ಪ ಕೊಡುವ ಬಗ್ಗೆ ಮಾತನಾಡಿದ್ದರು. ಯತ್ನಾಳ್ ಅವರು ಸಿಎಂ ಹುದ್ದೆಗೆ 2500 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಯಡಿೂರಪ್ಪನವರ ಮಗ ವಿಜಯೇಂದ್ರ ಭ್ರಷ್ಟಾಚಾರದ ಪರಮಾವಧಿ ಎಂದು ಯತ್ನಾಳ್ ಅವರು ಹೇಳಿದ್ದು, ಪಿಎಸ್ಐ ಹಗರಣದಲ್ಲಿ ಅವರೂ ಭಾಗಿ ಎಂದಿದ್ದಾರೆ. ಇಂತಹ ಸಮಯದಲ್ಲಿ ಸಿಬಿಐ, ಇಡಿ ಇಲಾಖೆ ಎಲ್ಲಿ ಹೋಗುತ್ತವೆ. ಇವು ಕೇವಲ ಕಾಂಗ್ರೆಸ್ ಹಾಗೂ ವಿರೋಧ ಪಕ್ಷದವರ ಬಾಯಿ ಮುಚ್ಚಿಸಲು ಮಾತ್ರವೇ ' ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಉಕ್ರೇನ್ - ರಷ್ಯಾ ಯುದ್ಧ ಪರಿಣಾಮ: ರಾಜ್ಯದಲ್ಲಿ ಗರಿಗೆದರಿದ ಹಸಿರು ಇಂಧನ ಕ್ಷೇತ್ರದಲ್ಲಿನ ಹೂಡಿಕೆ

ಸರ್ಕಾರದ ಉಡಾಫೆ ನಡೆ ಬಗ್ಗೆ ಕೇಳಿದಾಗ, ' ಮುಖ್ಯಮಂತ್ರಿಗಳು ಯಾವಾಗ ಸರ್ಕಾರದ ನಿಯಂತ್ರಣ ಹೊಂದಿರುತ್ತಾರೋ ಆಗ ಸ್ಪಂದಿಸಬಹುದು. ಈ ಸರ್ಕಾರ ಬೊಮ್ಮಾಯಿ ಅವರ ನಿಯಂತ್ರಣದಲ್ಲಿ ಇಲ್ಲ. ಕೇಶವ ಕೃಪದಿಂದ ಬರುವ ಆದೇಶ ಪಾಲನೆ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಅವರು ಕ್ರಮ ಕೈಗೊಳ್ಳದೇ ಇರಲು ಸಾಧ್ಯವೇ? ಅವರು ಕೋಮು ಗಲಭೆ ಆದಾಗಲೂ ಸುಮ್ಮನೆ ಕೂತಿದ್ದರು. ಬೆಂಗಳೂರಿನಲ್ಲಿ ಮಳೆ ಅವಾಂತರ, ಅತಿವೃಷ್ಟಿಯಿಂದ ಊರಿಗೆ ಊರೇ ಮುಳುಗಿದಾಗ ವರದಿ ನೀಡಿ ಎಂದು ಜಿಲ್ಲಾ ಸಚಿವರಿಗೆ ಹೇಳಿದರೆ ಒಬ್ಬರೂ ಹೋಗಲಿಲ್ಲ. ಕಡೆಗೆ ಇವರೇ ಹೋದರು. ಈಗ ಇಷ್ಟೆಲ್ಲಾ ಆದರೂ ಸುಮ್ಮನೆ ಇದ್ದಾರೆ. ಇವರು ಸರ್ಕಾರದ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರಾ? ಅವರಿಗೆ ಸರ್ಕಾರ, ಸಚಿವ ಸಂಪುಟದ ಮೇಲೆ ನಿಯಂತ್ರಣ ಇಲ್ಲ. ಅವರು ಆರ್ ಎನ್ ಎಸ್ ಕೈಗೊಂಬೆಯಾಗಿದ್ದಾರೆ ' ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News