35 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಸಮಗ್ರ ಸಮೀಕ್ಷೆಗೆ ಮುಂದಾದ ರಾಜ್ಯ ಸರ್ಕಾರ

 

Written by - Zee Kannada News Desk | Last Updated : Dec 27, 2022, 07:22 PM IST
  • - ರಾಜ್ಯ ಧಾರ್ಮಿಕ ಪರಿಷತ್ತಿನ ಮಹತ್ವದ ನಿರ್ಧಾರ
    - ಆಸ್ತಿಗಳ ಸಂರಕ್ಷಣೆ ಹಾಗೂ ದೇವಸ್ಥಾನಗಳ ಸಮಗ್ರ ಮಾಹಿತಿ ಕಲೆ ಹಾಕುವ ಗುರಿ
    - ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಎಲ್ಲಾ ದೇವಸ್ಥಾನಗಳ ಸಮೀಕ್ಷೆಯ ಕಾರ್ಯ
    - ಡಿಜಿಟಲ್‌ ತಂತ್ರಾಂಶ ಬಳಸಲು ನಿರ್ಧಾರ
35 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಸಮಗ್ರ ಸಮೀಕ್ಷೆಗೆ ಮುಂದಾದ ರಾಜ್ಯ ಸರ್ಕಾರ  title=

ಬೆಳಗಾವಿ: ರಾಜ್ಯ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 35 ಸಾವಿರಕ್ಕೂ ಹೆಚ್ಚಿನ ದೇವಸ್ಥಾನಗಳ ಆಸ್ತಿ ಸಂರಕ್ಷಣೆಯ ಪ್ರಮುಖ ಉದ್ದೇಶದಿಂದ, ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳು ಮತ್ತು ಅವುಗಳ ಆಸ್ತಿವಿವರಗಳನ್ನ ಸಮಗ್ರ ಸಮೀಕ್ಷೆ ಮಾಡಲು ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ನಿರ್ಧರಿಸಲಾಗಿದೆ ಎಂದು ಮಾನ್ಯ ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯ ಸಂಸ್ಥೆಗಳ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ತಿಳಿಸಿದರು.

ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ನಂತರ ಸಚಿವರು ಮಾತನಾಡಿ, ರಾಜ್ಯದಲ್ಲಿ  ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಎ, ಬಿ ಮತ್ತು ಸಿ ದರ್ಜೆಯ 35 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಿವೆ. ಇವು ನಮ್ಮ ಗೆಜೆಟ್‌ನ ಪಟ್ಟಿಯಲ್ಲಿ ನಮೂದಾಗಿವೆ. ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಆಸ್ತಿ ಸಂರಕ್ಷಣೆ, ದೇವಾಲಯಗಳ ಸಮಗ್ರ ಮಾಹಿತಿಯನ್ನ ಕಲೆ ಹಾಕುವುದು ಹಾಗೂ ಅವುಗಳ ವಾಸ್ತವಿಕ ಸಮೀಕ್ಷೆ ನಡೆಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಗತ್ಯವಾದ ವಿಶೇಷ ಅನುದಾನವನ್ನ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು ಎಂದು ಸಚಿವರು ತಿಳಿಸಿದರು. 

ಇದನ್ನೂ ಓದಿ : ಕುತೂಹಲ ಮೂಡಿಸಿದೆ ‘ಜೂಲಿಯೆಟ್ 2’ ಚಿತ್ರದ ಫಸ್ಟ್ ಲುಕ್

ಡಿಜಿಟಲ್‌ ತಂತ್ರಜ್ಞಾನದ ಮೂಲಕ ಸಮಗ್ರ ಸಮೀಕ್ಷೆ:

ದೇವಸ್ಥಾನಗಳ ಸಮಗ್ರ ಸಮೀಕ್ಷೆಯನ್ನು ಆಧುನಿಕ ಡಿಜಿಟಲ್‌ ತಂತ್ರಜ್ಞಾನದ ಮೂಲಕ ಮಾಡಲಾಗುವುದು. ನಮ್ಮ ಪಟ್ಟಿಯಲ್ಲಿರುವ ದೇವಸ್ಥಾನಗಳ ಬಳಿ ತೆರಳುವುದು, ಅವುಗಳ ವಾಸ್ತವಿಕ ಚಿತ್ರಣವನ್ನು ಡಿಜಿಟಲ್‌ ಆಗಿ ನಮೂದಿಸುವುದು ಹಾಗೂ ಅವುಗಳಲ್ಲಿರುವ ಆಸ್ತಿಗಳ ವಾಸ್ತವಿಕ ಸ್ಥಿತಿ ಗತಿಯ ಬಗ್ಗೆ ಮಾಹಿತಿ ಕಲೆ ಹಾಕುವುದನ್ನ ಮಾಡಲಾಗುವುದು. 

ದೇವಸ್ಥಾನಗಳ ಫೋಟೋ, ಅವುಗಳ ಆದಾಯ, ಅವುಗಳಲ್ಲಿನ ನಿರ್ವಹಣೆಯ ಮಾಹಿತಿ ಹೀಗೆ ಹತ್ತು ಹಲವು ವಿಷಯಗಳನ್ನು ಕಲೆ ಹಾಕುವುದು ಹಾಗೂ ಅವುಗಳನ್ನ ಡಿಜಿಟಲ್‌ ರೂಪದಲ್ಲಿ ಜನ ಸಾಮಾನ್ಯರಿಗೂ ಸುಲಭವಾಗಿ ಸಿಗುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ. 

ರಾಜ್ಯದ ವಿವಿಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚಿಸಲು ಪರಿಷತ್‌ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಅಲ್ಲದೇ, ಉತ್ತರ ಕರ್ನಾಟಕದ ಪ್ರಮುಖ ದೇವಸ್ಥಾನದಲ್ಲಿ ಒಂದಾಗಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ದಿಗೆ ರಚಿಸಲಾಗುತ್ತಿರುವ ಯೋಜನೆಗಳ ಬಗ್ಗೆ ವಿಸ್ತ್ರತ ಚರ್ಚೆಯನ್ನು ನಡೆಸಲಾಯಿತು. ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಹಾಗೂ ಅಭಿವೃದ್ದಿ ಕಾರ್ಯಕ್ರಮಗಳ ಯೋಜನೆ ಅಂತಿಮಗೊಳಿಸಲು ನಿರ್ಧರಿಸಲಾಯಿತು. 

ಇದನ್ನೂ ಓದಿ : ಮಿಡ್‍ನೈಟ್ ಎಲಿಮಿನೇಷನ್, ‘ಬಿಗ್ ಬಾಸ್’ ಮನೆಯಿಂದ ಗುರೂಜಿ ಔಟ್!

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಎನ್‌ ಜಯರಾಂ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರುಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News