ಶಿವಮೊಗ್ಗ: ಸಾಗರದ ಪ್ರಸಿದ್ಧ ಮಾರಿಕಾಂಬ ದೇವಿಯ ಜಾತ್ರೆ ರಂಗೇರಿದೆ. ಜನರು ಭಕ್ತಿಯ ಸಾಗರದಲ್ಲಿ ಮಿಂದೇಳುತ್ತಿದ್ದಾರೆ. ಜನಪದ ಶಾಸ್ತ್ರೀಯ ವಿಧಿವಿಧಾನದಂತೆ ಹಬ್ಬಕ್ಕೆ ಚಾಲನೆ ದೊರೆತಿದೆ. ಜಾತಿ-ಮತ ಬೇಧ-ಭಾವವಿಲ್ಲದೆ ನಡೆಯುವ ಜಾತ್ರೆಯಲ್ಲಿ ಹರಕೆಗಳನ್ನು ಕಟ್ಟುವುದೇ ವಿಶೇಷ.
ನಾಡಿನಲ್ಲಿಯೇ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಲ್ಲೆ ಸಾಗರದ ಮಾರಿಕಾಂಬ ಜಾತ್ರೆ ಪ್ರತಿ 3 ವರ್ಷಕ್ಕೊಮ್ಮೆ ನಡೆಯುತ್ತದೆ. ಮೊದಲ ದಿನ ಮಾರಿಕಾಂಬ ದೇವಿಗೆ ಮಾಂಗಲ್ಯ ತರುವ ಶಾಸ್ತ್ರ ನಡೆಯಿತು. ಬ್ರಾಹ್ಮಿ ಮಹೂರ್ತದಲ್ಲಿ ತವರುಮನೆ ದೇವಸ್ಥಾನದಲ್ಲಿ ಮಾರಿಕಾಂಬ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಆರಂಭಿಸಲಾಯತು. ದೇವಿಯ ಜಾತ್ರೆ ಅಂಗವಾಗಿ ರಾಜಬೀದಿ ಉತ್ಸವ ಹಾಗೂ ದೇವಿಯ ದಂಡಿನ ಮೆರವಣಿಗೆ ರಾತ್ರಿಯಿಂದ ಬೆಳಗಿನ ಜಾವದವರೆಗೆ ವಿಜ್ರಂಭಣೆಯಿಂದ ನಡೆಯಿತು. ಪೋತರಾಜನಿಂದ ಚಾಟಿ ಸೇವೆ, ನಂತರ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಅಸಾದಿಯರು ದೇವಿಯನ್ನು ಹೊರಡಿಸಲು ಬೇಗುಳ ಹೇಳುವ ಶಾಸ್ತ್ರ ನೇರವೆರಿಸಿದರು.
ಇದನ್ನೂ ಓದಿ: ಹುಡುಗಿ ಅಂತಾ ಹೇಳಿಕೊಂಡು ಚಾಟಿಂಗ್ : ವಿಷಯ ತಿಳಿದ ಯುವತಿ ಅಣ್ಣನಿಂದ ಯುವಕನಿಗೆ ಚಾಕು ಇರಿತ..!
ರಾತ್ರಿಪೂರ್ತಿ ನಡೆದ ಉತ್ಸವದಲ್ಲಿ ವಿವಿಧ ಜನಪದ ಕಲಾಪ್ರಕಾರಗಳು ಮೆರವಣಿಗೆಗೆ ಮೆರಗು ನೀಡಿದವು. ದೇವಿಯ ವಿಗ್ರಹವನ್ನು ರಥಕ್ಕೆ ಏರಿಸುತ್ತಿದ್ದಂತೆ ಹರಕೆ ಹೊತ್ತ ಭಕ್ತರು ಕೋಳಿಗಳನ್ನು ಹಾರಿಸುವ ಮೂಲಕ ಹರಕೆ ತೀರಿಸಿದರು. ದೇವಿಯು ಗಂಡನ ಮನೆ ಪ್ರವೇಶಿಸುತ್ತಿದ್ದಂತೆ ಉಪ್ಪಾರ ಹಾಗೂ ಕುರುಬ ಸಮಾಜದ ಘಟೇವುಗಳ ಆಗಮನವಾಯಿತು. ನಂತರ ದೇವಿಯನ್ನು ಮನೆ ತುಂಬಿಕೊಳ್ಳುವ ಹಾಗೂ ಚರಗ ಬೀರುವ ಶಾಸ್ತ್ರ ನಡೆದು ಪೂಜಾ ಕಾರ್ಯಕ್ರಮ ನಡೆಯುತ್ತದೆ. ತುಲಾಭಾರ ಸೊಪ್ಪಿನುಡಿಗೆ ಸೇವೆ ಸೇರಿದಂತೆ ಭಕ್ತರು ವಿವಿಧ ರೀತಿಯ ಹರಕೆ ತೀರಿಸಿದರು.
ಮಾರಿ ಹಬ್ಬದಲ್ಲಿ ವಿಶೇಷವಾಗಿ ಎಲ್ಲಾ ಸಮಾಜದವರಿಂದಲೂ ಪೂಜಾ ಕಾರ್ಯಗಳು ನಡೆಯುವುದು ವಿಶೇಷ. ಗಂಡನ ಮನೆಯಲ್ಲಿ ಪ್ರತಿಷ್ಟಾಪಿಸಲ್ಪಟ್ಟ ದೇವಿಗೆ ಮಡಿವಾಳ ಸಮಾಜದವರಿಂದ ಮೇಲ್ಕಟ್ಟು ಕಟ್ಟಲಾಗುತ್ತದೆ. ಗುಡಿಗಾರರಿಂದ ಕೋರೆಹಲ್ಲು ಹಚ್ಚಲ್ಪಡುತ್ತದೆ. ಈ ಹಿಂದೆ ಉಪ್ಪಾರರ ಮನೆಯಲ್ಲಿ ಪ್ರತಿಷ್ಟಾಪಿಸಿ, ಪೂಜಿಸಿದ 9 ಘಟೇವುಗಳನ್ನು ಮೆರವಣಿಗೆಯಲ್ಲಿ ತಂದು ಶ್ರೀದೇವಿಯ ಎದುರಿನಲ್ಲಿ ಪ್ರತಿಷ್ಟಾಪಿಸಿ ದೇವಿಯ ಮುಂಭಾಗದಲ್ಲಿ ಕಟ್ಟಿದ ಪರಧೆಯನ್ನು ತೆಗೆಯುವುದರ ಮೂಲಕ ಶ್ರೀದೇವಿಗೆ ದೀಪದ ಜ್ವಾಲೆ ಬೀಳುವುದರ ಮೂಲಕ ಜೀವಕಳೆ ತುಂಬಲಾಗುತ್ತದೆ. ಈ ದೀಪ ಮುಂದೆ ದೇವಿಯನ್ನು ಬಿಡುವವರೆಗೂ ಇರಬೇಕೆಂಬುದು ಪ್ರತೀತಿ. ಛಲವಾದಿ ಮತ್ತು ಅಸಾದಿ ಸಮಾಜದವರು ತರುವ ಕುಂಬ ದೀಪವನ್ನು ಈ ಮೊದಲು ಪ್ರತಿಷ್ಟಾಪಿಸಿದೆ.
ಇದನ್ನೂ ಓದಿ: ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ನಿರ್ಲಕ್ಷ್ಯ ಮಾಡಿದ್ರೆ ಜೀವಕ್ಕೆ ಆಪತ್ತು ಫಿಕ್ಸ್!
ಉಪ್ಪಾರರು ತರುವ ಬಲಿಯನ್ನು ಛಲವಾದಿ ಸಮಾಜದವರು ದೇವಿಯ ರಥ ಬಂದ ದಾರಿಯುದ್ದಕ್ಕೂ ಬೀರುವ ಸಂಪ್ರದಾಯ ನಡೆಯುತ್ತದೆ. 9ನೇ ದಿನ ದೇವಿಯನ್ನು ವನಕ್ಕೆ ಬಿಟ್ಟ ಸಂದರ್ಭದಲ್ಲಿ ಸಮಗಾರ ಸಮಾಜದವರು ದೀವಟಿಗೆ ಮತ್ತು ಕುರುಬ ಸಮಾಜದವರು ಚೌಟಿಕೆಗಳನ್ನು ತರುತ್ತಾರೆ. ಕಂಚುಗಾರರು ಮೊಸರನ್ನ ನೈವೇದ್ಯ ಮಾಡುತ್ತಾರೆ. ಭೋವಿ ಸಮಾಜದವರು ದೇವಿಯ ವಿಗ್ರಹವನ್ನು ಕಳಚುವುದು ಮಾರಿಹಬ್ಬದ ಸಂಪ್ರದಾಯದಲ್ಲಿ ಒಂದಾಗಿದೆ. 9 ದಿನಗಳ ಕಾಲ ನಡೆಯುವ ಜಾತ್ರೆ ಉತ್ಸವದಲ್ಲಿ ಭಕ್ತರು ಹರಕೆ ಕಟ್ಟಿಕೊಳ್ಳುವುದು ಹಾಗೂ ಹರಕೆ ತೀರಿಸುವುದು ಸಾಮಾನ್ಯ. ಇಲ್ಲಿ ಹೊತ್ತ ಹರಕೆಗಳು ಈಡೆರುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಮಾರಿ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಾಗಿರದೆ ಅಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಭಾವೈಕ್ಯತೆ ಮತ್ತು ಭಾಂದವ್ಯಗಳ ಬೆಸುಗೆಯಾಗಿದೆ. ಸತತವಾಗಿ 9 ದಿನ ನಡೆಯುವ ಈ ಜಾತ್ರೆ ಒಂದು ರೀತಿಯ ವಿಶಿಷ್ಟವಾದ ಪರಂಪರೆಯನ್ನು ಬಿಂಬಿಸುತ್ತದೆ. ಜಾತಿ-ಮತ ಭೇದದ ಚೌಕಟ್ಟನ್ನು ಮೀರಿ ಮಾನವತಾವಾದವನ್ನು ಎತ್ತಿ ಹಿಡಿಯುವಂತ ಜಾತ್ರೆ ಇದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.