"ಲಂಚದ ವಿಚಾರದಲ್ಲಿ ಧಮ್ ಇಲ್ಲ, ಬಡವರ ಬದುಕಿನಲ್ಲಿ ಬದಲಾವಣೆ ತರುವ ಧಮ್ ಇದೆ"

ಇಂದು ನಾವು ಒಂದು ಉದ್ದೇಶ ಮನದಲ್ಲಿಟ್ಟುಕೊಂಡು ನಿಮ್ಮ ಮುಂದೆ ಬಂದಿದ್ದೇವೆ, ಕರ್ನಾಟಕ ರಾಜ್ಯದ ಜನರ ನೋವು, ಸಮಸ್ಯೆ, ಭಾವನೆ, ಅಭಿಪ್ರಾಯಗಳನ್ನು ಶೇಖರಿಸಿ, ನಿಮಗೆ ಶಕ್ತಿ ನೀಡುವುದೇ ಪ್ರಜಾಧ್ವನಿ ಯಾತ್ರೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಹೊಸಪೇಟೆ, ಕೊಪ್ಪಳ, ಗದಗ ಮುಗಿಸಿ ಇಲ್ಲಿಗೆ ಬಂದಿದ್ದೇವೆ. 

Written by - Zee Kannada News Desk | Last Updated : Jan 19, 2023, 04:57 PM IST
  • ನಾವು ಕಲ್ಯಾಣ ಕರ್ನಾಟಕದಲ್ಲಿ ಆರ್ಥಿಕ ನೀತಿ ಹಾಗೂ 5 ಸಾವಿರ ಕೋಟಿ ಅನುದಾನ ಘೋಷಿಸಿದ್ದೇವೆ.
  • ರಾಜ್ಯದ ಮುಖ್ಯಮಂತ್ರಿಗಳು ಈ ಜಿಲ್ಲೆಯವರು.
  • ಇತ್ತೀಚೆಗೆ ಅವರು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದರು.
"ಲಂಚದ ವಿಚಾರದಲ್ಲಿ ಧಮ್ ಇಲ್ಲ, ಬಡವರ ಬದುಕಿನಲ್ಲಿ ಬದಲಾವಣೆ ತರುವ ಧಮ್ ಇದೆ"  title=

ಹಾವೇರಿ: ಬೊಮ್ಮಾಯಿ ಅವರು ನಮ್ಮ ಧಮ್ಮು ತಾಕತ್ತಿನ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಬರಲಿ, ನನಗೆ, ಸಿದ್ದರಾಮಯ್ಯ, ಹೆಚ್.ಕೆ ಪಾಟೀಲ್ ಅವರಿಗೆ ಎಷ್ಟು ಧಮ್ ಇದೆ ಎಂದು ತೋರಿಸುತ್ತೇವೆ. ನಿಮ್ಮ ಲಂಚದ ವಿಚಾರದಲ್ಲಿ ನಮ್ಮ ಧಮ್ ಇಲ್ಲ, ಬಡವರ ಬದುಕಿನಲ್ಲಿ ಬದಲಾವಣೆ ತರುವ ಧಮ್ ಇದೆ. ಜನರಿಗೆ ನೆರವಾಗಲು ನಮ್ಮ ಬಳಿ ಧಮ್ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅವರು ಹಾವೇರಿ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 

ಇಂದು ನಾವು ಒಂದು ಉದ್ದೇಶ ಮನದಲ್ಲಿಟ್ಟುಕೊಂಡು ನಿಮ್ಮ ಮುಂದೆ ಬಂದಿದ್ದೇವೆ, ಕರ್ನಾಟಕ ರಾಜ್ಯದ ಜನರ ನೋವು, ಸಮಸ್ಯೆ, ಭಾವನೆ, ಅಭಿಪ್ರಾಯಗಳನ್ನು ಶೇಖರಿಸಿ, ನಿಮಗೆ ಶಕ್ತಿ ನೀಡುವುದೇ ಪ್ರಜಾಧ್ವನಿ ಯಾತ್ರೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಹೊಸಪೇಟೆ, ಕೊಪ್ಪಳ, ಗದಗ ಮುಗಿಸಿ ಇಲ್ಲಿಗೆ ಬಂದಿದ್ದೇವೆ. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಹಾವೇರಿಯಲ್ಲಿ ಬಹಳ ದೊಡ್ಡ ಮಟ್ಟದ ಜನ ಸೇರಿದ್ದೀರಿ. ಎಲ್ಲ ಕಡೆಗಳಲ್ಲಿ ನಮಗೆ ಉತ್ತಮ ಜನ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್ ಮಹಾ ಅಲೆಯನ್ನು ನೀವೆಲ್ಲರೂ ಆರಂಭಿಸಿದ್ದೀರಿ.

ನೀವು ಬಿಜೆಪಿಗೆ ಯಾಕೆ ಬೆಂಬಲ ನೀಡಬೇಕು? ಈ ಸರ್ಕಾರ 40% ಕಮಿಷನ್ ಪಡೆದಿದ್ದಕ್ಕಾ, ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಲು ಹಣ ಪಡೆದಿದ್ದಕ್ಕಾ, ಹೊಟೇಲ್ ಗಳಲ್ಲಿ ತಿಂಡಿಗಳಿಗೆ ಬೆಲೆ ನಿಗದಿ ಮಾಡಿದಂತೆ ಒಂದೊಂದು ಹುದ್ದೆಗೂ ಹಣ ನಿಗದಿ ಮಾಡಿರುವುದಕ್ಕಾ, ಕೋವಿಡ್ ಸಮಯದಲ್ಲಿ ಜನ ಸತ್ತಿದ್ದಾಕ್ಕಾ?ಅವರ ಬದುಕು ನಿರ್ನಾಮ ಮಾಡಿದ್ದಕ್ಕಾ, ರೈತರ ಆದಾಯ ಡಬಲ್ ಮಾಡದಿರುವುದಕ್ಕೆ ಬಿಜೆಪಿಗೆ ಬೆಂಬಲ ನೀಡಬೇಕಾ?

ಇದನ್ನೂ ಓದಿ: ದಂಡ ವಸೂಲಿಗೆ ಮನೆ ಬಾಗಿಲಿಗೆ ಬರಲಿದೆ ವಸೂಲಿ ವಾಹನ: ಪಾಲಿಕೆ ಮತ್ತೊಂದು ನಿರ್ಧಾರ...!

ನಾವು ಕಲ್ಯಾಣ ಕರ್ನಾಟಕದಲ್ಲಿ ಆರ್ಥಿಕ ನೀತಿ ಹಾಗೂ 5 ಸಾವಿರ ಕೋಟಿ ಅನುದಾನ ಘೋಷಿಸಿದ್ದೇವೆ. ರಾಜ್ಯದ ಮುಖ್ಯಮಂತ್ರಿಗಳು ಈ ಜಿಲ್ಲೆಯವರು. ಇತ್ತೀಚೆಗೆ ಅವರು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದರು. ಇದರಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಬರಲಿದೆ ಎಂದರು. ಬೊಮ್ಮಾಯಿ ಅವರೇ, ನೀವು ಸಿಎಂ ಆಗಿದ್ದೀರಿ, ನಿಮ್ಮ ಜಿಲ್ಲೆಗೆ ಯಾರು ಎಷ್ಟು ಬಂಡವಾಳ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿ.

ಯಾವುದಾದರೂ ಒಂದು ಕಾರ್ಖಾನೆ ಬಂದಿದೆಯಾ? ನಮ್ಮ ಅವಧಿಯಲ್ಲಿ ಗಾಳಿಯಲ್ಲಿ ವಿದ್ಯುತ್ ಶಕ್ತಿ ಉತ್ಪಾದನೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ 10 ಸಾವಿರ ಮೆ.ವ್ಯಾ. ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಅನ್ನು 21 ಸಾವಿರ ಮೆ.ವ್ಯಾ ಗೆ ಹೆಚ್ಚಿಸಿದ್ದೇವೆ. ವಿಂಡ್ ಮಿಲ್, ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆ ಹೆಚ್ಚಿಸಿದ್ದೇವೆ. ಪಾವಗಡದಲ್ಲಿ ರೈತರ ಜತೆ ಒಡಂಬಡಿಕೆ ಮಾಡಿಕೊಂಡು ಅವರಿಂದ ಭೂಮಿ ಖರೀದಿ  ಮಾಡದೇ, ಅವರ ಒಡೆತನದಲ್ಲೇ ಉಳಿಸಿ 14 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದು ಕಾಂಗ್ರೆಸ್ ಕಾರ್ಯಕ್ರಮ.

ನಾವು ಗೃಹಜ್ಯೋತಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲು ನಿರ್ಧಾರಿಸಿದ್ದೇವೆ. 200 ಯುನಿಟ್ ಗೆ ಈಗಿನ ದರದಲ್ಲಿ 1500 ರೂ. ಆಗುತ್ತದೆ. ನೀವು 200 ಯುನಿಟ್ ವರೆಗೂ ವಿದ್ಯುತ್ ಬಿಲ್ ಪಾವತಿ ಮಾಡುವಂತಿಲ್ಲ. ಇದು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆ. ಈ ಯೋಜನೆ ಬಗ್ಗೆ ಅಶೋಕ್ ಹಾಗೂ ಸಚಿವ ಸುನೀಲ್ ಅವರು ಈ ವಿದ್ಯುತ್ ಎಲ್ಲಿಂದ ತರುತ್ತಾರೆ ಎಂದು ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ, ಯಾರಾದರೂ ಯಾವುದೇ ಮಾಧ್ಯಮ ವೇದಿಕೆ ಅಥವಾ ಬಹಿರಂಗ ವೇದಿಕೆಯಲ್ಲಿ ಚರ್ಚೆಗೆ ಬರಲಿ, ವಿದ್ಯುತ್ ಹೇಗೆ ನೀಡುತ್ತೇವೆ ಎಂದು ವಿವರಿಸುತ್ತೇವೆ. ನಾವು ಕನಕದಾಸರು, ಬಸವಣ್ಣ, ಶಿಶುನಾಳ ಶರೀಫರ ನಾಡಿನಲ್ಲಿ ಬದುಕುತ್ತಿರುವ ಜನ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ.

ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ. ನಾವು ಎಷ್ಟೇ ದೊಡ್ಡವರಾದರೂ ತಾಯಿ, ಪತ್ನಿ, ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತೇವೆ. ಈ ಭೂಮಿಗೆ ತಾಯಿ ಎಂದು ಪೂಜಿಸುತ್ತೇವೆ. ಭಾಷೆಯನ್ನು ಮಾತೃಭಾಷೆ ಎನ್ನುತ್ತೇವೆ. ಈ ಹೆಣ್ಣು ಅಡುಗೆ ಅನಿಲ, ಅಡುಗೆ ಎಣ್ಣೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತತ್ತರಿಸುತ್ತಿದ್ದಾರೆ. ಕೋವಿಡ್ ನಿಂದ ಮೃತಪಟ್ಟವರಿಗೆ ಆಸ್ಪತ್ರೆ ಬಿಲ್ ನೀಡುವುದಾಗಿ ಹೇಳಿದ್ದರು. ಆದರೆ ನೀಡಲಿಲ್ಲ. ಆದರೆ ಶ್ರೀನಿವಾಸ ಮಾನೆ ಅವರು ಆಪದ್ಬಾಂದವ ಎಂಬ ಕಾರ್ಯಕ್ರಮ ಮಾಡಿ ಕೋವಿಂಡ್ ಸಂತ್ರಸ್ತರಿಗೆ ನೆರವು ನೀಡಿದರು. ನೀವು ಅವರಿಗೆ ಬೆಂಬಲ ನೀಡಿದ್ದೀರಿ. ಜನ ಕಷ್ಟದಲ್ಲಿದ್ದಾಗ ಕಣ್ಣು ತೆರೆಯದೇ, ಈಗ ನಾವು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ನೀಡುವುದಾಗಿ ಘೋಷಿಸಿದ ನಂತರ ಇವರು ಮುಂದಿನ ಬಜೆಟ್ ನಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದ್ದಾರೆ.. ನಿಮ್ಮ ಚೇರು ಖಾಲಿ ಆಗುತ್ತಿರುವ ಸಮಯದಲ್ಲಿ ನೀವು ನೀಡುತ್ತೀರಾ? ನಿಮ್ಮ ಸ್ಥಾನ ಕೇವಲ 2 ತಿಂಗಳು, ಆನಂತರ ನೀವು ಮಾಜಿ ಮುಖ್ಯಮಂತ್ರಿಗಳು. ಈ ವೇದಿಕೆ ಮೇಲೆ ಕೂತಿರುವವರ ಸರ್ಕಾರ ಬರಲಿದೆ.

ಪ್ರಧಾನಮಂತ್ರಿಗಳು ರಾಜ್ಯಕ್ಕೆ ಬಂದಿದ್ದು, ಅವರು ಗುತ್ತಿಗೆದಾರರ ಸಂಘದ ಅದ್ಯಕ್ಷ ಕೆಂಪಣ್ಣ ಅವರು 40% ಕಮಿಷನ್ ವಿಚಾರವಾಗಿ ನೀಡಿದ ದೂರಿನ ಬಗ್ಗೆ ಉತ್ತರ ನೀಡಬೇಕು. ತಾಂಡಾಗಳಿಗೆ ಸರ್ಟಿಫಿಕೇಟ್ ನೀಡಲು ಬಂದಿದ್ದಾರೆ. ತಾಂಡಾ ಗಳನ್ನು ನಿರ್ಮಿಸಿ ಕಂದಾಯ ತಾಂಡ ಎಂದು ಪರಿವರ್ತನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನೀವು ಇಂದು ಕೇವಲ ಸರ್ಟಿಫಿಕೇಟ್ ನೀಡುತ್ತಿದ್ದೀರಿ. ಆದರೆ ಈ ತಾಂಡಾಗಳನ್ನು ಮಾಡಿದ್ದು ಕಾಂಗ್ರೆಸ್. ಉಳುವವನಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್.

ಭಾರತ ಜೋಡೋ ಪಾದಯಾತ್ರೆ ವೇಳೆ ಈ ಭಾಗದ ಜನರೂ ಭಾಗವಹಿಸಿದ್ದರು. ಈ ಸಮಯದಲ್ಲಿ ಹಿರಿಯ ಮಹಿಳೆ ಬಂದು ಸೌತೇಕಾಯಿ ತಂದು ರಾಹುಲ್ ಗಾಂಧಿ ಅವರಿಗೆ ಕೊಟ್ಟರು. ಆಗ ಆ ಮಹಿಳೆ ಇದು ನಿಮ್ಮ ಅಜ್ಜಿ ಇಂದಿರಾ ಗಾಂಧಿ ಅವರು ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೇಕಾಯಿ ಎಂದು ಕೊಟ್ಟರು. ರೈತರಿಗೆ ಜಮಮೀನು, ಬಗರ್ ಹುಕುಂ ಸಾಗುವಳಿ, ನಿವೇಶನ, ಮನೆ, ಪಿಂಚಣಿ, ಅಂಗನವಾಡಿ ಕಾರ್ಯಕ್ರಮ, 7 ಕೆ.ಜಿ ಅಕ್ಕಿ, ಶೂ, ಹಾಲಿಗೆ ಪ್ರೋತ್ಸಾಹ ಧನ ನೀಡಿದ್ದು ಕಾಂಗ್ರೆಸ್. ಇದನ್ನು ಯಡಿಯೂರಪ್ಪ ಅಥವಾ ಬೊಮ್ಮಾಯಿ ಕೊಟ್ಟಿದ್ದಾರಾ? ಯಡಿಯೂರಪ್ಪನವರು ಒಂದು ಸೈಕಲ್ ಹಾಗೂ ಒಂದು ಸೀರೆ ಕೊಟ್ಟಿದ್ದು ಬಿಟ್ಟರೆ ಬೇರೆ ಏನು ಕೊಟ್ಟಿದ್ದಾರೆ?

ಇದನ್ನೂ ಓದಿ: Suttur Jatra Mahotsav: ಇಂದಿನಿಂದ 6 ದಿನಗಳ ಕಾಲ ಅದ್ದೂರಿ ಸುತ್ತೂರು ಜಾತ್ರಾ ಮಹೋತ್ಸವ

ಆದರೆ ಕಾಂಗ್ರೆಸ್ ಪಕ್ಷ ನಿಮಗೆ ವಿದ್ಯುತ್ ಮೂಲಕ ವರ್ಷಕ್ಕೆ 18 ಸಾವಿರ, ಮಹಿಳೆಯರ ಭತ್ಯೆಗಾಗಿ ವರ್ಷಕ್ಕೆ 24 ಸಾವಿರ ನೀಡಲಿದೆ. ನಮ್ಮದು ಜನಧನ್ ಖಾತೆಯಂತೆ ಆಗುವುದಿಲ್ಲ. ನಿಮ್ಮ ಮನೆಯೊಡತಿಯ ಖಾತೆಗೆ ನೇರವಾಗಿ ಹಣ ಸೇರಲಿದೆ. ಬಸವಣ್ಣ, ತಾಯಿ ಭುವನೇಶ್ವರಿ, ಕನಕದಾಸರು, ಶಿಶುನಾಳ ಶರೀಫರು, ಕುವೆಂಪು ಅವರ ಆಣೆಗೂ ನಮ್ಮ ಕಾರ್ಯಕ್ರಮವನ್ನು ಜಾರಿ ಮಾಡುತ್ತೇವೆ.

ರೈತರ ಬದುಕು ಹಸನಾಗಿಸಲು ನೀರಾವರಿ ಯೋಜನೆ ಪೂರ್ಣಗೊಳಿಸಲು ಐದು ವರ್ಷಗಳಲ್ಲಿ 2 ಸಾವಿರ ಕೋಟಿಯನ್ನು ಮೀಸಲಿಡುವುದಾಗಿ ಮಾತು ಕೊಟ್ಟಿದ್ದೇವೆ. ನಿಮ್ಮ ಅಂತರ್ಜಲ ಹೆಚ್ಚಳ, ನೀರಾವರಿ ಹೆಚ್ಚಳ ಮಾಡಬೇಕು ಎಂದು ಕಾರ್ಯಕ್ರಮ ರೂಪಿಸಿದ್ದೇವೆ.

ಬಿಜೆಪಿ ಕೇವಲ ಆಶ್ವಾಸನೆ ನೀಡುತ್ತದೆ. ಬೊಮ್ಮಾಯಿ ಅವರೇ ಕಳೆದ ಬಜೆಟ್ ನಲ್ಲಿ ನೀವು ಘೋಷಣೆ ಮಾಡಿದರಲ್ಲಿ ಶೇ.50ರಷ್ಟು ಹಣವನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಒಬ್ಬರಿಗೆ ಉದ್ಯೋಗ ನೀಡಲಿಲ್ಲ. ಕೇವಲ ಲಂಚದಲ್ಲಿ ಲೂಟಿ ಮಾಡಿದ್ದೀರಿ. ವಿಧಾನಸೌಧದಿಂದ ಸರ್ಕಾರಿ ಕಚೇರಿವೆರೆಗೂ ಎಲ್ಲ ಕಡೆ ಲಂಚ. ನಿಮ್ಮ ತಾಲೂಕು ಕಚೇರಿಗಳಲ್ಲಿ ಕಾಸಿಲ್ಲದೇ ಯಾವುದಾದರೂ ಕೆಲಸ ಆಗುತ್ತದಾ? ನೀವು ಈ ಬೊಮ್ಮಾಯಿ ಸರ್ಕಾರವನ್ನು ಕಿತ್ತೊಗೆಯಬೇಕು. ಬೊಮ್ಮಾಯಿ ಅವರು ನಮ್ಮ ಧಮ್ಮು ತಾಕತ್ತಿನ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಬರಲಿ, ನನಗೆ, ಸಿದ್ದರಾಮಯ್ಯ, ಹೆಚ್.ಕೆ ಪಾಟೀಲ್ ಅವರಿಗೆ ಎಷ್ಟು ಧಮ್ ಇದೆ ಎಂದು ತೋರಿಸುತ್ತೇವೆ. ನಿಮ್ಮ ಲಂಚದ ವಿಚಾರದಲ್ಲಿ ನಮ್ಮ ಧಮ್ ಇಲ್ಲ, ಬಡವರ ಬದುಕಿನಲ್ಲಿ ಬದಲಾವಣೆ ತರುವ ಧಮ್ ಇದೆ. ಜನರಿಗೆ ನೆರವಾಗಲು ನಮ್ಮ ಬಳಿ ಧಮ್ ಇದೆ.

ನಾವು ಇಲ್ಲಿಗೆ ಬರುವ ಮುನ್ನ ಬಿಜೆಪಿಯ ಪಾಪದ ಪುರಾಣ ಮಾಡಿದ್ದೇವೆ. ಈ ಪಾಪದ ಪುರಾಣವನ್ನು ನಿಮಗೆ ಕಳಿಹಿಸಿಕೊಡುತ್ತೇವೆ. ಇದನ್ನು ಮನೆ ಮನೆಗೂ ತಲುಪಿಸಬೇಕು. ಜತೆಗೆ ನಾವು ಅರ್ಜಿಯನ್ನು ಕೊಡುತ್ತೇವೆ. ಯಾರಿಗೆ ಉಚಿತ ವಿದ್ಯುತ್ ಹಾಗೂ ಮನೆಯೊಡತಿಗೆ ಪ್ರೋತ್ಸಾಹ ಧನ ಬೇಕೋ ಅವರಿಂದ ಅರ್ಜಿ ತುಂಬಿಸಿ, ಸಹಿ ಸಂಗ್ರಹಿಸಿ. ಆ ಮೂಲಕ ನಮ್ಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು.

ಈಗ ಬಿಜೆಪಿಯವರು ಬಜೆಟ್ ನಲ್ಲಿ ನಾವು ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಹೇಳುತ್ತಿದ್ದಾರೆ. ಅಲ್ಲಮಪ್ರಭುಗಳು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆ ಏರಲಾಗದೇ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ. ಅದೇ ರೀತಿ ಅಧಿಕಾರ ಇದ್ದಾಗ ಜನಪರ ಕಾರ್ಯಕ್ರಮ ನೀಡದ ಬಿಜೆಪಿ ಸರ್ಕಾರ ಅಧಿಕಾರ ಅಂತ್ಯವಾಗುವ ಸಮಯದಲ್ಲಿ ಕಾರ್ಯಕ್ರಮ ಘೋಷಣೆ ಮಾಡುತ್ತಿದೆ.

ಯತ್ನಾಳ್, ವಿಶ್ವನಾಥ್, ನಿರಾಣಿ, ಯೋಗೇಶ್ವರ್ ಅವರು ಹೇಳಿಕೆಗಳನ್ನು ನೀಡಿರುವ ಬಗ್ಗೆ ಉತ್ತರವನ್ನು ನೀಡಲಿಲ್ಲ, ಅವರ ವಿರುದ್ಧ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಿಲ್ಲ. ಇದು ಬಿಜೆಪಿ ಸಾಧನೆ. ಈ ದೊಂಬರಾಟವನ್ನು ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ.

ಸಿದ್ದರಾಮಯ್ಯ ಅವರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿದಾಗ ನಾನು ಡಿವಿಜಿ ಅವರ ಸಾಲುಗಳನ್ನು ಸದನದಲ್ಲಿ ಹೇಳಿದ್ದೆ. ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।

ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ।।

ಉದ್ಧರಿಸುವೆನು ಜಗವನೆನ್ನುತಿಹ ಸಖನೆ,

ನಿನ್ನುದ್ಧಾರವೆಷ್ಟಾಯ್ತೊ? – ಮಂಕುತಿಮ್ಮ ।।’

ಅದೇ ರೀತಿ ಬೊಮ್ಮಾಯಿ, ಈಶ್ವರಪ್ಪ, ಕಟೀಲ್ ಅವರೇ ನಿಮ್ಮ ಉದ್ಧಾರ ಎಷ್ಟಾಯ್ತು? ಮುಂದೆ ಕಾಂಗ್ರೆಸ್ 140 ಸೀಟುಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ. ಜನರಿಗೆ ಅಧಿಕಾರ ಸಿಗಲಿದೆ. ಹಾವೇರಿಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು. ಯು.ಬಿ ಬಣಕಾರ್ ಅವರು ಸುಮ್ಮನೆ ಕಾಂಗ್ರೆಸ್ ಸೇರಲು ದಡ್ಡಾರಾ? ಬಿಜೆಪಿಯಿಂದ ಕಾಂಗ್ರೆಸ್ ಸೇರಲು ಎಷ್ಟು ಮಂದಿ ಸಿದ್ಧರಿದ್ದಾರೆ ಗೊತ್ತಾ? ಶಾಸಕರುಗಳೇ ಸಿದ್ಧರಿದ್ದಾರೆ. ನನ್ನ ಹತ್ತಿರ ಜಾಗ, ಕುರ್ಚಿ ಇಲ್ಲ, ಸ್ವಲ್ಪ ಕಾಲ ಕಾಯಿರಿ ಎಂದು ನಾನೇ ತಡೆದಿದ್ದೇನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

 

Trending News