ಬೆಂಗಳೂರು: ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯೆ ಪ್ರವೇಶಿಸಬೇಕು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಬಳಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿರುವ ಮಹದಾಯಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ, ಕಳಸಾ-ಬಂಡೂರಿ ರಾಜಕೀಯ ಸ್ವರೂಪ ಪಡೆಯುತ್ತಿರುವುದನ್ನು ಖಂಡಿಸಿದರು.
ಈ ಯೋಜನೆ ಉತ್ತರ ಕರ್ನಾಟಕ ಭಾಗದ ಜನರ ಜೀವನ್ಮರಣದ ಪ್ರಶ್ನೆ. ಇದು ರಾಜಕೀಯ ಸ್ವರೂಪ ಪಡೆಯುತ್ತಿರುವುದು ಅತ್ಯಂತ ವಿಷಾದದ ಸಂಗತಿ. ರಾಜಕೀಯ ಮುಖಂಡರ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ವಾಟಾಳ್ ಕಿಡಿಕಾರಿದರು.
ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಅತಿ ಹೆಚ್ಚು ಬಿಜೆಪಿ ಸಂಸದರಿದ್ದಾರೆ. ಗೋವಾ ಮುಖ್ಯಮಂತ್ರಿಯಿಂದ ಪತ್ರ ಬರೆಸಿಕೊಂಡು ಓದುವುದಕ್ಕಿಂತ ಎಲ್ಲಾ ಸಂಸದರು ಪ್ರಧಾನಿ ಅವರ ಮೇಲೆ ಒತ್ತಡ ತಂದು ಅವರ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿತ್ತು ಎಂದರು.
ಅದೇ ರೀತಿ ರಾಜ್ಯ ಸರ್ಕಾರ ಕೂಡ ಮೇಕೆದಾಟು ಯೋಜನೆಯನ್ನು ಕೂಡಲೇ ಆರಂಭಿಸಬೇಕು. ಜೊತೆಗೆ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ, ನಾಳೆ ನಗರದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಕರಾಳ ದಿನ ಆಚರಿಸಲಾಗುವುದು. ಅಲ್ಲದೆ, ಜ. 10ರಂದು ಮಹದಾಯಿ ಕುರಿತು ಮಹಾಸಮ್ಮೇಳನ ನಡೆಸಲಾಗುವುದು ಎಂದು ತಿಳಿಸಿದರು.