ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ಹಾಗೂ ಗಡುವು ಮೀರಿ ಓಪನ್ ಇರುವ ಕ್ಲಬ್-ಪಬ್ ಹಾಗೂ ಇಸ್ಟೀಟ್ ಅಡ್ಡೆಗಳನ್ನು ಮುಲಾಜಿಲ್ಲದೆ ಮುಚ್ಚುವಂತೆ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಡಕ್ ಸೂಚನೆ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಅಪರಾಧ ಪ್ರಕರಣಗಳ ಪ್ರಗತಿ ಪರಿಶೀಲನೆ ಪರಾಮರ್ಶೆ ಸಭೆ ನಡೆಸಿದರು. ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಟ್ರಾಫಿಕ್ ಸ್ಪೆಷಲ್ ಕಮೀಷನರ್ ಎಂ.ಎ.ಸಲೀಂ ಹಾಗೂ ಹಿರಿಯ ಅಧಿಕಾರಿಗಳು, ಡಿಸಿಪಿಗಳು, ಎಸಿಪಿ ದರ್ಜೆ ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ನಗರದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಬ್, ಪಬ್ ಹಾಗೂ ಇಸ್ಟೀಟ್ ಅಡ್ಡೆಗಳಿದ್ದರೆ ಅಂತಹವುಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಸುವಂತೆ ಸೂಚಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಕ್ಯೂ ಆರ್ ಕೋಡ್ ಮೂಲಕ ಲಂಚ ಸ್ವೀಕಾರ ಸೇರಿದಂತೆ ಆರೋಪಿಗಳೊಡನೆ ಪೊಲೀಸರು ಕೈ ಜೋಡಿಸುತ್ತಿದ್ದು,ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.ಯಾರನ್ನು ತಿಪ್ಪೆಸಾರಿಸುವ ಕೆಲಸ ಮಾಡುವುದಿಲ್ಲ ಎಂದರು.
ಇದನ್ನೂ ಓದಿ : R Ashok : 'ಡಿಕೆ ಶಿವಕುಮಾರ್ ಮೊದಲು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು'
ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಪೊಲೀಸರು ಸೇರಿ 107 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಮ್ರಿತ್ ಪಾಲ್ ಮಗಳು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು,ಐಪಿಎಸ್ ಅಧಿಕಾರಿ ಅಮ್ರಿತ್ ಪಾಲ್ ನಮಗೇನು ದಾಯಾದಿಯಲ್ಲ. ಅವರ ವಿರುದ್ಧ ಸಾಕ್ಷ್ಯಾಧಾರ ಕಂಡುಬಂದಿದ್ದರಿಂದ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಯಾರೇ ಪ್ರಭಾವಿಗಳು ಭಾಗಿಯಾಗಿರುವುದು ಸಾಕ್ಷ್ಯ ಲಭಿಸಿದರೆ ಅವರನ್ನ ಬಂಧಿಸಲಾಗುವುದು. ಅಲ್ಲದೆ ಅಮ್ರಿತ್ ಪಾಲ್ ನಿರಾಪರಾಧಿ ಎಂದು ನಿರೂಪಿಸುವ ದಾಖಲೆಗಳಿದ್ದರೆ ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಲಿ ಎಂದರು.
ಚಿಲುಮೆ ಕೇಸ್ ನಲ್ಲಿ ಈಗಾಗಲೇ 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ನಮ್ಮ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಅವರನ್ನು ಹಳದಿ ಕಣ್ಣಿನಲ್ಲಿ ನೋಡುವುದಿಲ್ಲ ಎಂದರು.ಈ ವರ್ಷ 22 ರೌಡಿಗಳನ್ನು ಹಾಗೂ 8 ಮಂದಿ ಮಾದಕ ವಸ್ತುಗಳ ವ್ಯಾಪಾರಿಗಳನ್ನು ಬಂಧಿಸಲಾಗಿದೆ. 2022ರಲ್ಲಿ 77 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. 69 ವಿದೇಶಿಯರನ್ನು ಗಡಿಪಾರು ಮಾಡಲಾಗಿದೆ. ಪೊಲೀಸ್ ಬಲವರ್ಧನೆಗಾಗಿ 4 ಸಂಚಾರ ಠಾಣೆ, ಎರಡು ಹೊಸ ಕಾನೂನು ಸುವ್ಯವಸ್ಥೆ ಉಪವಿಭಾಗಳನ್ನು ತೆರೆಯಲಾಗಿದೆ.
ಇದನ್ನೂ ಓದಿ : ಕುಕ್ಕರ್ ಬಾಂಬ್ ಸ್ಫೋಟದ ಅನುಮಾನ, ಅಲ್ಪಸಂಖ್ಯಾತರ ಓಟಿಗಾಗಿ ಡಿಕೆಶಿಯಿಂದ ಓಲೈಕೆ ರಾಜಕಾರಣ'
ಸೇಫ್ ಸಿಟಿ ಯೋಜನೆಯಡಿ 657 ಕೋಟಿ 4 ಸಾವಿರ ಕ್ಯಾಮರಾ ಅಳವಡಿಕೆ ಕಾರ್ಯ ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗುವುದು. ಮೊಬೈಲ್ ಫಾರೆನ್ಸಿಕ್ ವ್ಯಾನ್ ಮತ್ತು ಎಫ್ ಎಸ್ಎಲ್ ಬಲವರ್ಧನೆಗೊಳಿಸಲಾಗುತ್ತಿದೆ. ಡಿಜಿಟಲ್ ನಿಸ್ತಂತು 23 ಕೋಟಿ ವೆಚ್ಚದಲ್ಲಿ ಜನವರಿ 2023ಯೊಳಗೆ ಕಾರ್ಯಗತಗೊಳಿಸಲಾಗುವುದು ಎಂದರು.
ಐಟಿಎಂಎಸ್ ನಡಿ 20 ಕೋಟಿ ವೆಚ್ಚದಲ್ಲಿ 50 ಜಂಕ್ಷನ್ ಗಳಲ್ಲಿ 250 ಕ್ಯಾಮರ ಮತ್ತು 80 ಆರ್ ಎಲ್ ವಿಡಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಿಗ್ನಲ್ ಸಿಂಕ್ರನೈಜೇಷನ್ ನಡಿ 58 ಕೋಟಿ ವೆಚ್ಚದಲ್ಲಿ 200 ಜಂಕ್ಷನ್ ಗಳಲ್ಲಿ 7 ಹೈ ಡೆನ್ಸಿಟಿ ಕಾರಿಡಾರ್ ಗಳಲ್ಲಿ ಕಾರ್ಯಗತಗೊಳಿಸಲಾಗಿದೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.