ನವದಹೆಲಿ: ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ಪಾತ್ರವನ್ನು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಫರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ. 40 ಸಿಆರ್ಪಿಎಫ್ ಯೋಧರ ಸಾವಿಗೆ ಕಾರಣವಾದ ಆತ್ಮಾಹುತಿ ಉಗ್ರ ದಾಳಿಯನ್ನು ಜೈಶ್-ಎ-ಮಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ನಡೆಸಿರುವುದನ್ನು ಒಪ್ಪಿಕೊಂಡಿರುವ ಫರ್ವೇಜ್ ಮುಷರಫ್, ಈ ದಾಳಿಗೂ ಪಾಕಿಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಖಾಸಗಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಪಾಕಿಸ್ಥಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ಮೇಲೆ ಕಿಡಿಕಾರಿದ್ದು, ಇದೊಂದು ಭಯಾನಕ ಘಟನೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. 'ಜೈಶ್ ಪಡೆಗಳು ನನ್ನ ಮೇಲೆಯೂ ದಾಳಿ ನಡೆಸಿದ್ದವು ಎಂದು ತಿಳಿಸಿದ ಮುಷರಫ್ ಈಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೂ ಸಹ ಜೈಶ್ ಕುರಿತಾಗಿ ಮೃದು ಧೋರಣೆ ಹೊಂದಿದ್ದಾರೆ ಎಂದು ನನಗನಿಸುವುದಿಲ್ಲ’ ಎಂದರು.
ಆದಾಗ್ಯೂ, ದಾಳಿಯಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ ಎಂದು ಅವರು ದೃಢವಾಗಿ ಸಮರ್ಥಿಸಿಕೊಂಡರು. ಮೌಲಾನ ಮಸೂದ್ ಈ ದಾಳಿಯನ್ನು ನಡೆಸಿದ್ದು, ಈ ವಿಷಯದಲ್ಲಿ ಪಾಕಿಸ್ತಾನ ಸರ್ಕಾರವನ್ನು ದೂಷಿಸಬೇಡಿ ಎಂದು ಹೇಳುವ ಮೂಲಕ ಪಾಕಿಸ್ತಾನ ಸರ್ಕಾರದ ಪರವಾಗಿ ಮಾತನಾಡಿದ್ದಾರೆ. ಈ ದಾಳಿ ಕುರಿತಂತೆ ಜಂಟಿ ತನಿಖಾ ತಂಡ ರಚಿಸಿ, ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
"ಪಾಕಿಸ್ತಾನದ ಸರ್ಕಾರ ಇಂತಹ ಕೃತ್ಯ ಮಾಡಲಿದೆ ಎಂದು ನಾನು ಭಾವಿಸುವುದಿಲ್ಲ" ಎಂದ ಮುಷರಫ್ ದೇಶ ಸದ್ಯ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಲ್ಲಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಲಾರದು ಎಂದು ತನ್ನ ದೇಶವನ್ನು ಸಮರ್ಥಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಜೈಶ್ ಸಂಘಟನೆಯನ್ನು ನಿಷೇಧಿಸಬೆಕೆಂದೂ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.