ಅಹಮದಾಬಾದ್: ಗುಜರಾತ್ ಮೂಲದ 50 ವರ್ಷ ವಯಸ್ಸಿನ ಮೀನುಗಾರನೊಬ್ಬ ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮೃತ ಮೀನುಗಾರನನ್ನು ಗುಜರಾತ್ ಕರಾವಳಿ ಭಾಗದಲ್ಲಿರುವ ಗಿರ್-ಸೋಮನಾಥ್ ಜಿಲ್ಲೆಯ ಉನಾ ತಾಲ್ಲುಕಿನ ಪಾಲ್ಡಿ ಗ್ರಾಮದ ಭಿಕಾಭಾಯ್ ಬಂಭಿನಿಯಾ ಎಂದು ಗುರುತಿಸಲಾಗಿದೆ.
ಗುರುವಾರ ಪಾಕಿಸ್ತಾನಿ ನಾಗರಿಕನೊಬ್ಬ ಅಮೃತಸರದ ಜೈಲಿನಲ್ಲಿ ಸಾವನ್ನಪ್ಪಿದ್ದ ಸುದ್ದಿ ತಿಳಿದ ಬೆನ್ನಲ್ಲೇ ಪಾಕಿಸ್ತಾನದ ಜೈಲಿನಲ್ಲಿ ಭಾರತೀಯ ಮೀನುಗಾರ ಸಾವನ್ನಪ್ಪಿರುವ ಬಗ್ಗೆ ಗುರುವಾರ ಸಂಜೆ ತಿಳಿದುಬಂದಿದೆ.
"ಬಂಧಿತ ಮೀನುಗಾರ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಮಾರ್ಚ್ 4ರಂದು ಮೃತಪಟ್ಟಿರುವುದಾಗಿ ಗುರುವಾರ ಸಂಜೆ ಮಾಹಿತಿ ಬಂದಿದೆ. ಮೀನುಗಾರನ ಮೃತದೇಹವನ್ನು ಭಾರತಕ್ಕೆ ತರುವ ಪ್ರಕ್ರಿಯೆ ತ್ವರಿತಗೊಳಿಸಲು ಈಗಾಗಲೇ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿಯೇ ಮೃತನ ಪಾರ್ಥಿವ ಶರೀರ ಭಾರತಕ್ಕೆ ತಲುಪಲಿದೆ ಎಂಬ ಭರವಸೆಯಿದೆ ಎಂದು ಪಾಕಿಸ್ತಾನ-ಭಾರತ ಪೀಸ್ ಫೋರಮ್ ಮತ್ತು ಡೆಮಾಕ್ರಸಿ ಕಾರ್ಯಕಾರಿ ಸದಸ್ಯ ಜೀವನ್ ಜುಂಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.