ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ವಿಧಿವಶರಾಗಿ ಒಂದು ದಿನವೂ ಕಳೆದಿಲ್ಲ, ಈಗಾಗಲೇ ಗೋವಾ ಸಿಎಂ ಗಾದಿಗೆ ಕಸರತ್ತು ಪ್ರಾರಂಭವಾಗಿದೆ. ಒಂದೆಡೆ ಪರಿಕರ್ ಅನಾರೋಗ್ಯಕ್ಕೀಡಾದ ಸಂದರ್ಭದಿಂದಲೂ ಅಧಿಕಾರಕ್ಕಾಗಿ ಅವಣಿಸುತ್ತಿರುವ ಕಾಂಗ್ರೆಸ್ ತನ್ನ ಕಸರತ್ತು ಮುಂದುವರೆಸಿದ್ದರೆ, ಇನ್ನೊಂದೆಡೆ, ಬಿಜೆಪಿ ಮುಖಂಡರು ಮತ್ತು ಅದರ ಮಿತ್ರಪಕ್ಷಗಳ ನಡುವಿನ ಮನಸ್ತಾಪ ತೀವ್ರವಾಗಿದ್ದು, ಬಿಜೆಪಿ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದೆ.
ಗೋವಾದಲ್ಲಿ ಸರ್ಕಾರ ರಚನೆಗೆ ತನ್ನ ಕಸರತ್ತು ಮುಂದುವರೆಸಿರುವ ಕಾಂಗ್ರೆಸ್, ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಪತ್ರವೊಂದನ್ನು ಬರೆದಿದ್ದು, ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷಗಳು ಪರಿಕರ್ ಅವರಿಗೆ ಬೆಂಬಲ ನೀಡಿದ್ದವೆಯೇ ಹೊರತು ಬಿಜೆಪಿಗಲ್ಲ ಎಂದು ಹೇಳಿದೆ.
"ಮನೋಹರ್ ಪರ್ರಿಕರ್ ಅವರ ನಿಧನಕ್ಕೆ ಕಾಂಗ್ರೆಸ್ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದ್ದು, ಈ ದುರದೃಷ್ಟಕರ ಬೆಳವಣಿಗೆಯಲ್ಲಿ ಸರ್ಕಾರ ರಚನೆ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ರಾಜ್ಯಪಾಲರಲ್ಲಿ ಮನವಿ" ಮಾಡಲಾಗಿದೆ.
"ಗೋವಾದಲ್ಲಿ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿರುವುದರಿಂದ ಸರ್ಕಾರ ರಚಿಸಲು ಆಹ್ವಾನಿಸುವಂತೆ" ಕಾಂಗ್ರೆಸ್ ಪತ್ರದಲ್ಲಿ ಕೋರಿಕೆ ಸಲ್ಲಿಸಿದೆ.
ಏತನ್ಮಧ್ಯೆ, ಗೋವಾದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಭಾನುವಾರ ತುರ್ತು ಸಭೆ ನಡೆಸಿದ್ದರು ಆದರೆ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಮಿತ್ರ ಪಕ್ಷಗಳು ತಮ್ಮ ಅಭ್ಯರ್ಥಿ ಮುಖ್ಯಮಂತ್ರಿಯಾಗಬೇಕೆಂದು ಪಟ್ಟು ಹಿಡಿದಿರುವುದಾಗಿ ಮೂಲಗಳು ತಿಳಿಸಿವೆ.