ಬೆಂಗಳೂರು: ತಂತ್ರಜ್ಞಾನ ಮಾನವನ ಅಭಿವೃದ್ಧಿಗೆ ಸಾಧನವಾಗಿದೆ. ಅಂತರಗಳನ್ನು ಕಡಿಮೆ ಮಾಡಿ ಜೀವನಮಟ್ಟ ಸುಧಾರಣೆ, ಸುಸ್ಥಿರ ಅಭಿವೃದ್ಧಿಯನ್ನು ಪ್ರೇರೇಪಿಸುವ ಶಕ್ತಿಯನ್ನು ಇದು ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಬೆಂಗಳೂರು ಟೆಕ್ ಸಮ್ಮಿಟ್ ಅಂಗವಾಗಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಂತ್ರಜ್ಞಾನದ ಅಭಿವೃದ್ಧಿ ಎಲ್ಲರನ್ನು ಒಳಗೊಂಡು ಎಲ್ಲರಿಗೂ ದೊರೆಯುವಂತೆ ಮಾಡುವುದು ನಮ್ಮ ಜವಾಬ್ದಾರಿ. ದೇಶದ ಡಿಜಿಟಲ್ ಭವಿಷ್ಯವನ್ನು ಕರ್ನಾಟಕ ಮುನ್ನಡೆಸಲು ಸಾಧ್ಯವಿದೆ. ನಾವೀನ್ಯತಾ ತಂತ್ರಜ್ಞಾನ ಹಾಗೂ ಪ್ರಗತಿಯೆಡೆಗೆ ನಮ್ಮ ಬದ್ಧತೆಗೆ ಬೆಂಗಳೂರು ಟೆಕ್ ಸಮ್ಮಿಟ್ ಸಾಕ್ಷಿಯಾಗಿದೆ. ತಂತ್ರಜ್ಞಾನದಲ್ಲಿ ನಮ್ಮ ಸಾಧನೆಯನ್ನು ಮಾತ್ರವಲ್ಲದೇ ನಮ್ಮ ರಾಜ್ಯದ ಅದಮ್ಯ ಚೇತನವನ್ನು ವಾಖ್ಯಾನಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನಕ್ಕೆ ಇನ್ನಷ್ಟು ವೇಗವನ್ನು ನೀಡಲು ನಮಗಿರುವ ಅಚಲ ಬದ್ಧತೆಯನ್ನು ಟೆಕ್ ಸಮ್ಮಿಟ್ ಪ್ರತಿನಿಧಿಸುತ್ತದೆ ಎಂದರು.
ರಾಜಕೀಯ ವ್ಯವಸ್ಥೆಯಲ್ಲಿ ಸದಾ ಸ್ಥಿರತೆ:
80ರ ದಶಕದ ಅಂತ್ಯ ಹಾಗೂ 90 ರ ದಶಕದಲ್ಲಿಯೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ದೂರದೃಷ್ಟಿಯಂತೆ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಐಟಿ/ಬಿಟಿ ಗೆ ಭದ್ರ ಬುನಾದಿಯನ್ನು ಹಾಕಿತ್ತು. ನೀತಿ ನಿರೂಪಣೆ, ತಂತ್ರಜ್ಞಾನ ಹಾಗೂ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲಾಯಿತು. ಕರ್ನಾಟಕದ ಮೊತ್ತಮೊದಲ ಐಟಿ ನೀತಿಯನ್ನು ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ 1992 ರಲ್ಲಿ ರೂಪಿಸಿತು. ಈ ನೀತಿಯು ದೇಶಕ್ಕೇ ಮಾದರಿ ಐಟಿ ನೀತಿಯಾಗಿ ಹೊರಹೊಮ್ಮಿತು. ಕಾಂಗ್ರೆಸ್ ಸರ್ಕಾರ ರಾಜಕೀಯ ವ್ಯವಸ್ಥೆಯಲ್ಲಿ ಸದಾ ಸ್ಥಿರತೆಯನ್ನು ತಂದುಕೊಟ್ಟಿದ್ದು, ಆಡಳಿತದಲ್ಲಿ ಸುಸ್ಥಿರತೆ ತರಲು ಹಾಗೂ ದೀರ್ಘಾವಧಿ ಹೂಡಿಕೆಗಳನ್ನು ಕೈಗೊಳ್ಳಲು ಶ್ರಮಿಸಿದೆ ಎಂದರು.
ಇದನ್ನೂ ಓದಿ- Tumakuru: ವೈದ್ಯರ ನಿರ್ಲಕ್ಷ್ಯಕ್ಕೆ ಗೃಹಿಣಿ ಬಲಿ, ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ!
ವಿಶ್ವದಲ್ಲಿಯೇ ಮೊದಲ ಸ್ಥಾನಕ್ಕೇರಲು ಸಮರ್ಥ:
ಬೆಂಗಳೂರು ಐಟಿ ರಾಜಧಾನಿಯಾಗಿದ್ದು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದೆ. ಬೆಂಗಳೂರು ಐಟಿ/ಬಿಟಿ ರಫ್ತಿನಲ್ಲಿ ಮುಂಚೂಣಿಯಲ್ಲಿದ್ದು , ವಿಶ್ವದಲ್ಲಿಯೇ ಮೊದಲ ಸ್ಥಾನಕ್ಕೇರಲು ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದು ನಮ್ಮ ಸರ್ಕಾರ ಈ ಗುರಿಯನ್ನು ಸಾಧಿಸಲು ಹಿಂದೆ ಬೀಳುವುದಿಲ್ಲ ಎಂದರು. ನಾವೀನ್ಯತಾ ವಲಯಗಳು ಬೆಂಗಳೂರಿನಲ್ಲಿ ನೆಲೆಸಿರುವುದು ಅತ್ಯಂತ ಸೂಕ್ತವಾಗಿದೆ ಐಒಟಿ, ಕೃತಕ ಬುದ್ದಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಮುಂತಾದವುಗಳಲ್ಲಿಯೂ ಮುಂಚೂಣಿಯಲ್ಲಿದೆ. ಜಾಗತಿಕ ಹೂಡಿಕೆ ಹಾಗೂ ಪ್ರತಿಭೆಗಳನ್ನು ಕರ್ನಾಟಕಕ್ಕೆ ಆಕರ್ಷಿಸಲು ಇದು ಸಹಾಯಕವಾಗಿದೆ. ನಾವು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಉತ್ಕೃಷ್ಟತಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಕೌಶಲ್ಯ ಮಂಡಳಿ ರಚನೆ:
ಉದ್ಯಮಶೀಲತೆ ಹಾಗೂ ಶಿಕ್ಷಣವನ್ನು ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ರೂಪಸಿ ಭವಿಷ್ಯದ ಬೇಡಿಕೆಗಳನ್ನು ಪರಿಣಾಮಕಾರಿಯಾಗಿ ಪೂರೈಸುವಂತೆ ಮಾಡಲಾಗಿದೆ. ಕೌಶಲಾಭಿವೃದ್ಧಿಗೆ ಪ್ರತ್ಯೇಕ ಇಲಾಖೆಯನ್ನು ರಚಿಸಿದ ಮೊದಲ ರಾಜ್ಯ ಕರ್ನಾಟಕ. ಸಂಬಂಧಪಟ್ಟ ಎಲ್ಲಾ ಪಾಲುದಾರರ ಸಹಯೋಗದೊಂದಿದೆ ಕೌಶಲ್ಯ ಮಂಡಳಿ ರಚನೆಯತ್ತಲೂ ನಮ್ಮ ರಾಜ್ಯ ಕಾರ್ಯನಿರ್ವಹಿಸುತ್ತಿದೆ. ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇದೊಂದು ದೊಡ್ಡ ಮೈಲಿಗಲ್ಲಾಗಲಿದೆ ಎಂದರು. ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರದ ಸಹಯೋಗದಲ್ಲಿ ಭವಿಷ್ಯಕ್ಕೆ ಸಿದ್ದರಾಗಿರುವ ಕಾರ್ಯಪಡೆಯನ್ನು ಸಿದ್ಧಪಡಿಸುವಲ್ಲಿ ನೆರವಾಗಲಿದೆ. ಜಾಗತಿಕ ತಾಪಮಾನ, ಹಾವಾಮಾನ ಬದಲಾವಣೆ, ಸೈಬರ್ ಸೆಕ್ಯೂರಿಟಿ ಮುಂತಾದ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ನಮ್ಮ ಶಕ್ತಿಯನ್ನು ಬಳಸಲು ನಾವು ಬದ್ಧರಾಗಿದ್ದೇವೆ ಎಂದರು.
ನಾವೀನ್ಯತಾ ವಲಯದಲ್ಲಿ ಸ್ಟಾರ್ಟ್ ಅಪ್ ಹಾಗೂ ಯುವ ಸಂಸ್ಥೆಗಳು ಜೀವನಾಡಿಯಾಗಿವೆ. ಈ ವಲಯದ ಬೆಳವಣಿಗೆಗೆ ಅಗತ್ಯವಿರುವ ಅನುದಾನ ಹಾಗೂ ನೆರವನ್ನು ಒದಗಿಸಲು ನಮ್ಮ ಸರ್ಕಾರ ಸಿದ್ಧವಿದೆ. ತಂತ್ರಜ್ಞಾನ ನಾಯಕತ್ವದಲ್ಲಿ ರಾಷ್ಟ್ರೀಯ ಯೋಜನೆಯನ್ನು ಸಿದ್ಧಪಡಿಸಿ, ನಾವೀನ್ಯತೆ ಹಾಗೂ ಸುಸ್ಥಿರ ಐಟಿ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಗುರಿ. ಈ ಕುರಿತಂತೆ ಸಲಹೆ ಹಾಗೂ ಸಂವಾದಗಳನ್ನು ಕೈಗೊಳ್ಳಲು ಕರ್ನಾಟಕಕ್ಕಿಂತಲೂ ಉತ್ತಮವಾದ ರಾಜ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ- ರೀಲ್ಸ್ ಮಾಡುವ ಆಂಟಿಯರೇ ಟಾರ್ಗೆಟ್: ಫೇಕ್ ಐಡಿಯಲ್ಲಿ ಪಟಾಯಿಸಿ ಚಕ್ಕಂದವಾಡ್ತಿದ್ದ ಖದೀಮ ಅಂದರ್
ಮೂಲಸೌಕರ್ಯ ಅಭಿವೃದ್ಧಿ:
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯ ಸುಧಾರಣೆ ಹಾಗೂ ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸಲಾಗುವುದು. ಮೆಟ್ರೋ ಸಂಪರ್ಕ ಜಾಲವನ್ನು ಶೀಘ್ರವಾಗಿ ವಿಸ್ತರಿಸಲಾಗುತ್ತಿದ್ದು, ವಿಮಾನನಿಲ್ದಾಣಕ್ಕೆ ಮೆಟ್ರೋ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.
ದೇವನಹಳ್ಳಿ ಪ್ರದೇಶದಲ್ಲಿ ತೈವಾನ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಫಾಕ್ಸ್ಕಾನ್ ಸದ್ಯದಲ್ಲಿಯೇ ತನ್ನ ಉತ್ಪಾದನಾ ಘಟಕವನ್ನು ತೆರೆಯುವುದಾಗಿ ಘೋಷಿಸಿದೆ. ಆನೇಕಲ್, ದೊಡ್ಡಬಳ್ಳಾಪುರ ಮತ್ತಿತತರ ನಗರಗಳು ಹೂಡಿಕೆಯ ವಿಸ್ತರಣೆಗೆ ಅವಕಾಶಗಳನ್ನು ಹೊಂದಿದ್ದು ಬೆಂಗಳೂರು ನಗರಕ್ಕೆ ಹತ್ತಿರವಿರುವುದರಿಂದ ಪ್ರಯೋಜನಕಾರಿಯಾಗಿದೆ ಎಂದರು. ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಈಗಾಗಲೇ ವಿವಿಧ ಸಂಸ್ಥೆಗಳು ಆಸಕ್ತಿ ಹೊಂದಿವೆ. ಇದಕ್ಕಾಗಿ ಈಗಾಗಲೇ ಇರುವ ಹೆದ್ದಾರಿಗಳ ಸುಧಾರಣೆ ಹಾಗೂ ಹೊಸ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.