ಕಟಿಹಾರ್: ಬಿಹಾರದಲ್ಲಿ ಎದುರಾಗಿರುವ ಪ್ರವಾಹದಿಂದಾಗಿ ದೂರದ ಗ್ರಾಮಗಳ ಜನರಿಗೆ ತಿನ್ನಲು ಆಹಾರವೂ ದೊರೆಯುತ್ತಿಲ್ಲ ಎಂಬುದಕ್ಕೆ ಕಟಿಹಾರ್ ಜಿಲ್ಲೆಯ ದಂಗಿ ಟೋಲಾ ಗ್ರಾಮಸ್ಥರೇ ನಿದರ್ಶನ!
ಈ ಗ್ರಾಮದ ಜನತೆ ಪ್ರವಾಹದಿಂದ ಮನೆ, ಬೆಳೆ ಎಲ್ಲವನ್ನೂ ಕಳೆದುಕೊಂಡಿದ್ದು, ಇದೀಗ ತಿನ್ನಲು ಆಹಾರ ಸಿಗದೇ ಇಲಿಗಳನ್ನು ಹಿಡಿದು ತಿನ್ನುವ ಪರಿಸ್ಥಿತಿ ಎದುರಾಗಿದೆ. ಈ ಪ್ರದೇಶದಲ್ಲಿ ವಾಸವಿದ್ದ ಸುಮಾರು 300 ಕುಟುಂಬಗಳು ಈಗ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
"ನಮ್ಮ ಮನೆ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರಣ ಇರಲು ಸೂರಿಲ್ಲ. ತಿನ್ನಲು ಸೂಕ್ತ ಆಹಾರ ಸಿಗುತ್ತಿಲ್ಲ. ಸರ್ಕಾರದಿಂದ ನಮಗೆ ಯಾವುದೇ ಸೌಲಭ್ಯಗಳೂ ದೊರೆತಿಲ್ಲ. ಹಾಗಾಗಿ ಇಲಿಗಳನ್ನು ಹಿಡಿದು ತಿನ್ನುವಂತಹ ದುಸ್ಥಿತಿ ಎದುರಾಗಿದೆ" ಎಂದು ಸ್ಥಳೀಯ ತಲ್ಲಾ ಮುರ್ಮೂರ್ ಎಎನ್ಐಗೆ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡ್ವಾ ಕ್ಷೇತ್ರದ ಬ್ಲಾಕ್ ಅಭಿವೃದ್ಧಿ ಅಧಿಕಾರಿ ರಾಕೇಶ್ ಕುಮಾರ್ ಗುಪ್ತಾ, ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಗ್ರಾಮಸ್ಥರ ಸ್ಥಿತಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಅವರು ಇಲಿಗಳನ್ನು ತಿನ್ನುತ್ತಿದ್ದರೂ ಸಹ, ಬುಡಕಟ್ಟು ಜನಾಂಗದವರಾದ್ದರಿಂದ ಅದನ್ನು ತಿನ್ನುತ್ತಿರಬಹುದು ಎಂದಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ ಶಾಸಕ ಶಕೀಲ್ ಅಹ್ಮದ್ ಖಾನ್ ಅವರು ಈ ಗ್ರಾಮದ ಜನರ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಗ್ರಾಮಸ್ಥರಿಗೆ ನೆರವು ನೀಡುವಂತೆ ಕೋರಿದ್ದಾರೆ.
ಕಳೆದ ಕೆಲ ದಿನಗಳಿಂದ ಬಿಹಾರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಏರುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಭಾರಿ ಮಳೆಯಿಂದಾಗಿ ಬಿಹಾರದ ಅರೇರಿಯಾ, ದರ್ಭಂಗಾ ಮತ್ತು ಮಧುಬನಿ ಜಿಲ್ಲೆಗಳ ಅನೇಕ ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ.