ಸಿಎಂ ಸಿದ್ದರಾಮಯ್ಯ ಮೇಲೆ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆ

ವರುಣಾ ಕ್ಷೇತ್ರವನ್ನು ನಿಮ್ಮ ಮಗನಿಗೆ ಹೊರಗುತ್ತಿಗೆ ಕೊಟ್ಟಿದ್ದೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ನೀವು ಮತ್ತು ನಿಮ್ಮ ಮಗ ಫೋನ್ ನಲ್ಲಿ ಮಾತನಾಡಿದ್ದು ವರ್ಗಾವಣೆ ದಂಧೆಯ ಬಗ್ಗೆ ಎಂಬುದು ಸತ್ಯ ಎಂದು ಆರೋಪಿಸಿದ್ದಾರೆ.  

Written by - Prashobh Devanahalli | Edited by - Savita M B | Last Updated : Nov 19, 2023, 06:53 PM IST
  • ವರುಣಾ ಕ್ಷೇತ್ರವನ್ನು ನಿಮ್ಮ ಮಗನಿಗೆ ಹೊರಗುತ್ತಿಗೆ ಕೊಟ್ಟಿದ್ದೀರಾ?
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿರುವ ಮಾಜಿ ಮುಖ್ಯಮಂತ್ರಿ
  • ನೀವು ಮತ್ತು ನಿಮ್ಮ ಮಗ ಫೋನ್ ನಲ್ಲಿ ಮಾತನಾಡಿದ್ದು ವರ್ಗಾವಣೆ ದಂಧೆಯ ಬಗ್ಗೆ ಎಂಬುದು ಸತ್ಯ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೇಲೆ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆ title=

ಬೆಂಗಳೂರು: ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳ ಕರ್ತವ್ಯ ಹಂಚಿಕೆ ಪಟ್ಟಿಯನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವ ಅವರು; ವಿಡಿಯೋದಲ್ಲಿ ನಿಮ್ಮ ಮಗ ಡಾ.ಯತೀಂದ್ರ ಅವರು ಮತನಾಡಿದ ಆರ್.ಮಹದೇವು ಅವರಿಗೂ ವರುಣಾ ಕ್ಷೇತ್ರ, ಶಿಕ್ಷಣ ಇಲಾಖೆ ಹಾಗೂ ಸಿಎಸ್ ಬಗ್ಗೆ ಅವರಿಗೆ ಸಂಬಂಧ ಇಲ್ಲ ಎಂದು ಕುಟುಕಿದ್ದಾರೆ.

ಅಲ್ಲದೆ, ಕ್ಯಾಶ್ ಫಾರ್ ಪೋಸ್ಟಿಂಗ್ ಹ್ಯಾಷ್ ಟ್ಯಾಗ್ ಜತೆ ಸಿಎಸ್ ಆರ್ ಎಂದರೆ ʼಕರಪ್ಟ್ ಸನ್ ಆಫ್ ಸಿದ್ದರಾಮಯ್ಯʼ ಎಂದು ಹೇಳಿದ್ದಾರೆ.

ಸಚಿವರೋ, ನಿಮ್ಮ ಗಸ್ತಿಗೆ ನಿಂತ ಬೌನ್ಸರುಗಳೋ??
ಸನ್ಮಾನ್ಯ ಮುಖ್ಯಮಂತ್ರಿಗಳೇ, ವಿಡಿಯೋ ವಿಷಯ ವಿಷಯಾಂತರ ಮಾಡಬೇಡಿ. ನಾನು ಕೇಳಿದ್ದೇನು? ನೀವು ಹೇಳುತ್ತಿರುವುದೇನು? ತಿರುಚುವ, ವಕ್ರೀಕರಿಸುವ ಚಾಳಿ ಬಿಡಿ. ನೀವು ಈ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ ಮತ್ತು ಉತ್ತರದಾಯಿ. ಉತ್ತರ ಕೊಡಿ ಸಿದ್ದರಾಮಯ್ಯನವರೇ? ಒಂದು ವಿಡಿಯೋ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಮಗೆ, ನಿಮ್ಮ ಸಂಪುಟಕ್ಕೆ ನಿದ್ದೆಯೇ ಹಾರಿ ಹೋಗಿದೆ. ಕೆಲಸ ಬಿಟ್ಟು ನಿಮಗೆ ಸುವ್ವಿಸುವ್ವಾಲೆ ಹಾಡುತ್ತಿದೆ. ಅವರು ಸಚಿವರೋ, ನಿಮ್ಮ ಗಸ್ತಿಗೆ ನಿಂತ ಬೌನ್ಸರುಗಳೋ?? ಸಚಿವರನ್ನು ಗುಂಪು ಗುಂಪಾಗಿ ಛೂ ಬಿಟ್ಟರೆ ಕುಮಾರಸ್ವಾಮಿ ಹೆದರಿ ಓಡುತ್ತಾರೆಂದು ಭಾವಿಸಿದರೆ ಅದು ನಿಮ್ಮ ಪೆದ್ದುತನವಷ್ಟೇ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ-ಅವಕಾಶ ವಂಚಿತರಿಗೆ ಶಕ್ತಿ ತುಂಬುವುದೇ ನಿಜವಾದ ಸ್ವಾತಂತ್ರ್ಯದ ಅರ್ಥ: ಸಿಎಂ ಸಿದ್ದರಾಮಯ್ಯ 

ನಿಮ್ಮ ಪುತ್ರನಿಗೆ ವರುಣಾ ಹೊರ ಗುತ್ತಿಗೆ ನೀಡಿದ್ದೀರಾ?
ವರುಣಾದ ಜನ ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನೀವೇ ಅವರ ಕೆಲಸ ಮಾಡಬೇಕು. ನಿಮ್ಮ ಪುತ್ರನಿಗೆ ಕ್ಷೇತ್ರದ 'ಹೊರಗುತ್ತಿಗೆ' (Out source) ಯಾಕೆ? ಸಿಎಂ ಆಗಿದ್ದಾಗ ನಾನು ನನ್ನ ಮಗನಿಗೆ ಕ್ಷೇತ್ರದ ಹೊರಗುತ್ತಿಗೆ ನೀಡಿದ್ದಿಲ್ಲ. ನೀವು ಮಗನಿಗೆ ವರುಣಾದ ಹೊರಗುತ್ತಿಗೆ ನೀಡಿದ್ದೀರಿ. ಅಷ್ಟೇ ಅಲ್ಲ, ನಿಮ್ಮ ಪುತ್ರ ಮಹಾಶಯರನ್ನು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ, ಅವರ ನೇತೃತ್ವದಲ್ಲಿ ಕೆ.ಡಿ.ಪಿ ಸಭೆ ನಡೆಸಲು ಹಾಗೂ ಸರಕಾರಿ ಅಧಿಕಾರಿಗಳ ಸಭೆ ನಡೆಸಿ ದರ್ಬಾರ್‌ ಮಾಡಲು ಅನುವು ಮಾಡಿಕೊಟ್ಟಿದ್ದೀರಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ? ಇದ್ದರೆ ತಿಳಿಸಿ ಎಂದು ಪ್ರಶ್ನೆ ಮಾಡಿದ್ದಾರೆ.

ನನಗೆ ತಿಳಿದಮಟ್ಟಿಗೆ ಈವರೆಗೆ ಯಾವ ಸಿಎಂ ಕೂಡ ಸ್ವಕ್ಷೇತ್ರದ ಹೊರಗುತ್ತಿಗೆ ಮಕ್ಕಳಿಗೆ ಕೊಟ್ಟಿದ್ದಿಲ್ಲ. ನೀವು ಕೊಟ್ಟು ಮೇಲ್ಪಂಕ್ತಿ ಹಾಕಿದ್ದೀರಿ. ಹಿಂಬಾಗಿಲಿನಿಂದ ಮಗನಿಗೆ ಅಧಿಕಾರ ಕೊಡಲು ಕೆ.ಡಿ.ಪಿ ಪಟ್ಟ ಕಟ್ಟಿದ್ದೀರಿ!  ಸಂವಿಧಾನದಲ್ಲಿ ಇದಕ್ಕೆ ಅವಕಾಶವಿರುವ ಯಾವುದಾದರೂ ವಿಧಿ-ವಿಧಾನ ಇದೆಯಾ? ಇದ್ದರೆ ತಿಳಿಸಿ ಎಂದು ಒತ್ತಾಯ ಮಾಡಿದ್ದಾರೆ.

ʼಕರಪ್ಟ್ ಸನ್ ಆಫ್ ಸಿದ್ದರಾಮಯ್ಯʼ:
ನನಗೆ ತಿಳಿದಂತೆ CSR ಎಂದರೆ, ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಲಿಟಿ (Corporate social responsibility). ಈಗ ಅದು ʼಕರಪ್ಟ್ ಸನ್ ಆಫ್ ಸಿದ್ದರಾಮಯ್ಯʼ (Corrupt Son Of Siddaramaiah) ಆಗಿದೆ! ರಾಜ್ಯದಲ್ಲಿ CSR ಕಲೆಕ್ಷನ್ ಮಾಡಲು ನಿಮ್ಮ ಸುಪುತ್ರನಿಗೆ ಹೊರಗುತ್ತಿಗೆಯನ್ನು ನೀವೇ ಕೊಟ್ಟಿದ್ದೀರಾ, ಹೇಗೆ? 224 ಕ್ಷೇತ್ರಗಳ CSR ಉಸ್ತುವಾರಿ ಅವರದ್ದೇನಾ? 2% CSR ಮೇಲೂ ನಿಮ್ಮ ಕಾಕದೃಷ್ಟಿ ಬಿದ್ದಂತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ ಕುಮಾರಸ್ವಾಮಿ ಅವರು.

ಮಹದೇವು ಜವಾಬ್ದಾರಿಗೆ ದಾಖಲೆ ಕೊಟ್ಟ ಮಾಜಿ ಸಿಎಂ:
ನಿಮ್ಮ ಸಚಿವಾಲಯದ ಅಧಿಕಾರಿಗಳ ಕರ್ತವ್ಯ ಹಂಚಿಕೆ ಪಟ್ಟಿ ಪ್ರಕಾರ; ವಿಶೇಷ ಕರ್ತವ್ಯಾಧಿಕಾರಿ ಆರ್.‌ಮಹದೇವುಗೆ ಶಿಕ್ಷಣ ಇಲಾಖೆ ಹೊಣೆ ಇಲ್ಲ. ಜಂಟಿ ಕಾರ್ಯದರ್ಶಿ ಎಂ.ರಾಮಯ್ಯಗೆ ಆ ಹೊಣೆ ಇದೆ. ವರುಣಾ ಹೊಣೆ ಇನ್ನೊಬ್ಬ ವಿಶೇಷ ಕರ್ತವ್ಯಾಧಿಕಾರಿ ಕೆ.ಎನ್.‌ವಿಜಯ್‌ ರದ್ದು. ಇದು ಸತ್ಯಸ್ಥಿತಿ. ಅಪರ ಸತ್ಯಹರಿಶ್ಚಂದ್ರರಾದ ನೀವೇ ಸುಳ್ಳು ಹೇಳೋದೇ? ಎಂದು ಸಿಎಂಗೆ ಕೇಳಿರುವ ಅವರು; ಯತೀಂದ್ರರು ಶಿಕ್ಷಣದ ಕುರಿತು ಎಂ.ರಾಮಯ್ಯ ಜತೆ, ವರುಣಾ ಬಗ್ಗೆ ಕೆ.ಎನ್.ವಿಜಯ್‌ ಜತೆ ಚರ್ಚಿಸದೆ, ಇವೆರಡಕ್ಕೂ ಸಂಬಂಧವಿಲ್ಲದವೇ 'ಸಿಆಸು' ಸಚಿವರ ಆಪ್ತಶಾಖೆ, ವರ್ಗಾವಣೆ -ಸೇವಾ ಹೊಣೆಯ ಮಹದೇವು ಜತೆ ಫೋನ್‌ ಚರ್ಚೆ ನಡೆಸಿದ್ದೇಕೆ?CSRಗೂ ಅವರಿಗೂ ಸಂಬಂಧವೇನು?CSR ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಮಧು ಬಂಗಾರಪ್ಪ ಕೂಡ ಹೇಳಿದ್ದಾರೆ! ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ-ಕುಮಾರಣ್ಣ ಬುದ್ದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ರಾಜ್ಯದ ಮುಖ್ಯಮಂತ್ರಿಯನ್ನೇ 'ಟೆಲಿಫೋನ್‌ ಆಪರೇಟರ್‌' ಮಾಡಿದ ಸುಪುತ್ರ:

ಜನಹಿತಕ್ಕಾಗಿ ದನಿಯೆತ್ತಿದ ನನ್ನನ್ನು; ತಂದೆ, ಅಣ್ಣ, ಮಗನನ್ನು ಎಳೆತಂದು ಕಟ್ಟಿ ಹಾಕಲು ಸಾಧ್ಯವಿಲ್ಲ ಸಿದ್ದರಾಮಯ್ಯನವರೇ? ಕಷ್ಟದಲ್ಲಿರುವ ಜನ 'ಎಲ್ಲಿದ್ದೀಯಪ್ಪ ಕುಮಾರಣ್ಣ?' ಎಂದರೆ ಓಡಿ ಹೋಗುತ್ತೇನೆ. ಸತ್ಯಕ್ಕೆ ಸಮಾಧಿ ಕಟ್ಟಲು ನೀವು ಸೃಷ್ಟಿಸುತ್ತಿರುವ ಸುಳ್ಳಿನಸೌಧದ ಅಡಿಪಾಯವೇ ಈಗ ಕುಸಿಯುತ್ತಿದೆ. ಮಾಡದ ತಪ್ಪಿಗೆ ವಿದ್ಯುತ್‌ ಪ್ರಕರಣದಲ್ಲಿ ದಂಡ ತೆತ್ತಿದ್ದೇನೆ, ವಿಷಾದಿಸಿದ್ದೇನೆ. ಈಗ ನಿಮ್ಮ ಪ್ರತಿಷ್ಠೆ ಮೂರಾಬಟ್ಟೆಯಾಗಿದ್ದು ಇರಲಿ, ರಾಜ್ಯದ ಮುಖ್ಯಮಂತ್ರಿಯನ್ನೇ 'ಟೆಲಿಫೋನ್‌ ಆಪರೇಟರ್‌' ಮಾಡಿದ ನಿಮ್ಮ ಪುತ್ರನನ್ನು ಇನ್ನೂ ಸಮರ್ಥನೆ ಮಾಡುತ್ತಿದ್ದೀರಲ್ಲಾ? ಛೀ..! ಟೆಲಿಫೋನ್ ಆಪರೇಟರ್ ಗಳ ಬಗ್ಗೆ ನನಗೆ ಗೌರವವಿದೆ ಎಂದು ಅವರು ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದ್ದಾರೆ.

ನಿಮ್ಮ, ನಿಮ್ಮ ಪುತ್ರನಿಂದ ಇಡೀ ಕರ್ನಾಟಕ ತಲೆ ತಗ್ಗಿಸುವಂತೆ ಆಗಿದೆ. ಕಾಸಿಗಾಗಿ ಹುದ್ದೆ ದಂಧೆಯಿಂದ ಕರುನಾಡನ್ನು ಕುಖ್ಯಾತಗೊಳಿಸಿದ್ದೀರಿ. ಹೋದ ಮಾನ ವಾಪಸ್‌ ಪಡೆಯಲಿಕ್ಕೇನು ಮಾಡುತ್ತೀರಿ? ವಿಧಾನಸೌಧದ ಮುಂದೆ ತಲೆತಗ್ಗಿಸಿ ನಿಂತು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೀರಾ? ಅಷ್ಟು ನೈತಿಕ ಧೈರ್ಯ ನಿಮಗೆ ಉಂಟೇ? ಎಂದು ಸವಾಲು ಹಾಕಿರುವ ಅವರು ಕುಮಾರಸ್ವಾಮಿ; ಪೆನ್‌'ಡ್ರೈವ್‌ ಇದೆ, ಕಳೆದಿಲ್ಲ. ಅದನ್ನು ತೋರಿಸಿದೊಡನೆ ನನ್ನಲ್ಲಿಗೆ ಓಡಿ ಬಂದವರ ಪಟ್ಟಿ ಕೊಡಲೇ? ಸಿಎಂ ಸಾಹೇಬರೇ, 'ಸಿಂಹ ಸಿಂಗಲ್ಲಾಗಿ ಬೇಟೆಯಾಡುತ್ತದೆ, ------ ಗುಂಪಾಗಿ ಬರುತ್ತವೆ.' ಬಿಟ್ಟಸ್ಥಳ ಭರ್ತಿ ಮಾಡಿಸುವ ಕೆಲಸ ನನ್ನಿಂದ ನೀವು ಮಾಡಿಸುವುದಿಲ್ಲ ಎಂದು ನಂಬಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ನನ್ನ ಮಾನಸಿಕ ಸ್ವಾಸ್ಥ್ಯ ಇರಲಿ. ನಿಮ್ಮ ಅಧಿಕಾರದ ಅಂಟುರೋಗಕ್ಕೆ ಮದ್ದೇನು? ನಿಮಗಿರುವ ಧನದಾಹ ಜಾಡ್ಯಕ್ಕೆ ಚಿಕಿತ್ಸೆ ಪಡೆಯಬಾರದೇ? ಮಾನಸಿಕ ಅಸ್ವಾಸ್ಥ್ಯಕ್ಕಿಂತ ಇದು ಮಾರಕ ಮನೋರೋಗವಲ್ಲವೇ? ಮುಖ್ಯಮಂತ್ರಿಯೇ ಇಂಥ ವಿನಾಶಕಾರಿ ಕಾಯಿಲೆಗೆ ತುತ್ತಾದರೆ ನಾಡಿನ ಪಾಡೇನು? ತುರ್ತುಚಿಕಿತ್ಸೆ ನಿಮಗೆ ಅಗತ್ಯವಿದೆ ಎಂದು ಸಿಎಂಗೆ ಪ್ರತ್ಯುತ್ತರ ಕೊಟ್ಟಿದ್ದಾರೆ ಕುಮಾರಸ್ವಾಮಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News