CORONAVIRUS EFFECT: ಚೀನಾಗೆ ನಿಬ್ಬೇರಗಾಗಿಸುವ ಸುದ್ದಿ ನೀಡಿದ NASA

ಈ ಕುರಿತು ಬರೆದುಕೊಂಡಿರುವ NASA, ಪರಿಸರ ಮಾಲಿನ್ಯದ ಮೇಲೆ ನಿಗಾವಹಿಸುವ ಉಪಗ್ರಹಗಳು ಚೀನಾದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದ್ದು, ಈ ಬದಲಾವಣೆ ಕೊರೊನಾ ವೈರಸ್ ನ ಪ್ರಕೋಪದ ಬಳಿಕ ಬಂದ ಆರ್ಥಿಕ ಸಂಕಷ್ಟಕ್ಕೆ ಎತ್ತಿ ಹಿಡಿದ ಕನ್ನಡಿಯಾಗಿದೆ ಎಂಬುದನ್ನು ಸೂಚಿಸುತ್ತಿವೆ ಎಂದು ಹೇಳಿದೆ.

Last Updated : Mar 3, 2020, 02:19 PM IST
CORONAVIRUS EFFECT: ಚೀನಾಗೆ ನಿಬ್ಬೇರಗಾಗಿಸುವ ಸುದ್ದಿ ನೀಡಿದ NASA title=

ನವದೆಹಲಿ:ಯಾವುದೇ ಒಂದು ನಾಣ್ಯಕ್ಕೆ ಎರಡು ಮುಖಗಳಿರುತ್ತವೆ ಎಂದು ಹೇಳಲಾಗುತ್ತದೆ. ಒಂದೆಡೆ ಕೆಟ್ಟ ಸಂಗತಿಗಳು ಇರುತ್ತವೆ ಎನ್ನಲಾಗುತ್ತಿದ್ದರೆ, ಇನ್ನೊಂದೆಡೆ ಒಳ್ಳೆಯ ಸಂಗತಿಗಳೂ ಕೂಡ ಇರುತ್ತವೆ. ಇದು ಕೊರೊನಾವೈರಸ್ ಪಾಲಿಗೂ ಕೂಡ ನಿಜ ಎಂಬುದು ಸಾಬೀತಾಗಿದೆ. ಮಾರಣಾಂತಿಕ ಕರೋನಾ ವೈರಸ್ ಒಂದೆಡೆ ಹಾನಿಯನ್ನುಂಟುಮಾಡುತ್ತಿದೆ, ಆದರೆ ಅದರ ಪ್ರಭಾವವು ಭೂಮಿಯ ಮೇಲಿನ ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಅದರಲ್ಲೂ ವಿಶೇಷವಾಗಿ ವಾಯುಮಾಲಿನ್ಯದಲ್ಲಿ ಗಮನಾರ್ಹ ಇಳಿಕೆಯಾಗಿದೆ.

ನ್ಯಾಷನಲ್ ಏರೋನಾಟಿಕಲ್ ಅಂಡ್ ಸ್ಪೇಸ್ ಮ್ಯಾನೇಜ್‌ಮೆಂಟ್ (ನಾಸಾ) ಚೀನಾದ ಇತ್ತೀಚಿನ ಫೋಟೋವೊಂದನ್ನು ಬಿಡುಗಡೆ ಮಾಡಿದ್ದು, ಇದು ಕೊರೊನಾ ವೈರಸ್ ಪ್ರಭಾವದಿಂದ ಚೀನಾ ಮೇಲಿರುವ ಆಕಾಶ ಇದೀಗ ಸ್ಪಷ್ಟವಾಗಿದೆ ಎಂದು ಬಹಿರಂಗಪಡಿಸಿದೆ. ಚೀನಾದ ಮೇಲೆ ಸಂಗ್ರಹವಾಗಿರುವ ವಾಯುಮಾಲಿನ್ಯದ ಪದರುಗಳಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.

ನಾಸಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಚೀನಾದ ಫೋಟೋಗಳನ್ನು ಹಂಚಿಕೊಂಡಿದ್ದು, ಮಾಲಿನ್ಯದ ಮೇಲೆ ನಿಗಾ ವಹಿಸಿರುವ ಉಪಗ್ರಹಗಳು ಚೀನಾದ ಸಾರಜನಕ ಡೈಆಕ್ಸೈಡ್‌ನಲ್ಲಿ ಭಾರಿ ಇಳಿಕೆ ಕಂಡುಬಂದಿದೆ ಎಂದು ಬರೆದುಕೊಂಡಿದೆ. ಈ ಬದಲಾವಣೆ ಕೊರೊನಾ ವೈರಸ್ ಪ್ರಕೋಪದ ನಂತರದ ಆರ್ಥಿಕ ಖಿನ್ನತೆಗೆ ಸಂಬಂಧಿಸಿದೆ ಎಂಬುದರ ಪುರಾವೆಯಾಗಿದೆ ಎಂದು ಹೇಳಿದೆ.

ನಾಸಾ ಚೀನಾದ ಒಟ್ಟು ಎರಡು ಫೋಟೋಗಳನ್ನು ಬಿಡುಗಡೆ ಮಾಡಿದೆ. ಈ ಚಿತ್ರಗಳಲ್ಲಿ ಒಂದು ಜನವರಿ 1, 2020 ದಿನಾಂಕಕ್ಕೆ ಸಂಬಂಧಿಸಿದ್ದಾಗಿದ್ದು, ಈ ಚಿತ್ರದಲ್ಲಿ ಚೀನಾದ ದೊಡ್ಡ ಪ್ರದೇಶದಲ್ಲಿ ಹಳದಿ ಚುಕ್ಕೆಗಳು ಕಂಡುಬರುತ್ತಿವೆ, ಇದು ಅಲ್ಲಿನ ಗಾಳಿಯಲ್ಲಿನ  ಸಾರಜನಕ ಡೈಆಕ್ಸೈಡ್‌ನ ಮಾಲಿನ್ಯವನ್ನು ಎತ್ತಿ ತೋರಿಸುತ್ತಿದೆ. ಎರಡನೇ ಚಿತ್ರ ಫೆಬ್ರವರಿ 25ಕ್ಕೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿ ಅದೇ ಸಾರಜನಕ ಡೈಆಕ್ಸೈಡ್ ಸಂಪೂರ್ಣವಾಗಿ ಕಾಣೆಯಾಗಿರುವುದು ಗಮನಿಸಬಹುದಾಗಿದೆ.

ಕೈಗಾರಿಕೆಗಳು ಮುಚ್ಚಿಹೋದ ಬಳಿಕ ಸ್ಪಷ್ಟವಾದ ಆಗಸ
ಕರೋನಾದ ಹಾನಿಯಿಂದಾಗಿ ಚೀನಾದ ಆರ್ಥಿಕತೆ ಬಹುತೇಕ ಕುಸಿದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಮುಚ್ಚಿಹೋಗಿವೆ. ಆದರೆ, ಸದ್ಯ ಕೆಲ ಕೈಗಾರಿಕೆಗಳಲ್ಲಿ ಮತ್ತೆ ಕೆಲಸ ಆರಂಭಗೊಂಡಿವೆ. ಒಂದು ಕಾಲದಲ್ಲಿ ಬೀದಿಗಳಲ್ಲಿ ನಿರವ ಮೌನವಿತ್ತು. ಮಾರುಕಟ್ಟೆ ಮುಚ್ಚಲ್ಪಟ್ಟಿದ್ದವು. ಚೀನಾಗೆ ಬರುತ್ತಿದ್ದ ಹೊರದೇಶದ ವಿಮಾನಗಳನ್ನು ನಿಷೇಧಿಸಲಾಗಿತ್ತು. ಹಲವಾರು ದಿನಗಳ ಕಾಲ ಕಾರ್ಖಾನೆಗಳಿಗೆ ಬೀಗ ಜಡಿಯಲಾಗಿತ್ತು. ಉತ್ಪಾದನೆಯ ನಿಶ್ಚಲತೆಯಿಂದಾಗಿ, ಮಾಲಿನ್ಯ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ಕೊರೊನಾ ವೈರಸ್ ನ ಮಾರಕ ದಾಳಿಗೆ ಇದುವರೆಗೆ 2,943 ಮಂದಿ ಬಲಿಯಾಗಿದ್ದಾರೆ
ಚೀನಾದಲ್ಲಿ ಇದುವರೆಗೆ ಸುಮಾರು 2,943 ಜನರು ಕರೋನವೈರಸ್‌ ಸೋಂಕಿಗೆ ಬಲಿಯಾಗಿದ್ದು, ಸೋಂಕಿತ ಪ್ರಕರಣಗಳ ಸಂಖ್ಯೆ 80,151 ಕ್ಕೆ ತಲುಪಿದೆ. ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಎಲ್ಲ ಸಾವುಗಳು ಹುಬೈ ಪ್ರಾಂತ್ಯದಲ್ಲಿ ಸಂಭವಿಸಿವೆ. ಈ ವೈರಸ್‌ನ ಪ್ರಭಾವವು ಹುಬೈನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ರೋಗಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸುಮಾರು 40,651 ಜನರನ್ನು ವೈದ್ಯಕೀಯ ನಿಗರಾಣೆಯಲ್ಲಿ ಇರಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಸೋಮವಾರ, 7,650 ಜನರನ್ನು ವೈದ್ಯಕೀಯ ನಿಗರಾಣೆಯಿಂದ ಬಿಡುಗಡೆ ಮಾಡಲಾಗಿದೆ.

ಅಮೆರಿಕಾದಲ್ಲಿ ಮಾರಕ ಕೊರೊನಾ ವೈರಸ್ ದಾಳಿಗೆ ಆರು ಬಲಿ
ಕರೋನಾ ವೈರಸ್ ಸಧ್ಯ ಚೀನಾದ ಹೊರಗೆ ತನ್ನ ಪ್ರಭಾವವನ್ನು ತೋರಿಸಲು ಆರಂಭಿಸಿದ್ದು. ಅಮೆರಿಕಾದಲ್ಲಿ ಕರೋನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಸೋಮವಾರ ಆರಕ್ಕೆ ತಲುಪಿದೆ, ಆದರೆ, ದೇಶಾದ್ಯಂತ ಇದುವರೆಗೆ ಸುಮಾರು 90 ಕ್ಕೂ ಹೆಚ್ಚು ಮಂದಿಗೆ ಈ ಸೋಂಕು ತಗುಲಿದೆ ಎನ್ನಲಾಗಿದೆ.

ಏತನ್ಮಧ್ಯೆ ಸೋಮವಾರ ಈ ಕುರಿತು ಶ್ವೇತ ಭವನದಲ್ಲಿ ಸಭೆ ನಡೆಸಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪರಾಷ್ಟ್ರಪತಿ ಪೆನ್ಸ್, ದೇಶದ ಉನ್ನತ ಆರೋಗ್ಯ ಅಧಿಕಾರಿಗಳು ಹಾಗೂ ಔಷಧಿ ತಯಾರಿಕಾ ಕಂಪನಿಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ್ದು, ದೇಶದಲ್ಲಿನ ಪರಿಸ್ಥಿತಿಯ ಸಮೀಕ್ಷೆ ನಡೆಸಿದ್ದಾರೆ.

ಬೇಸಿಗೆ ಈ ವೈರಸ್ ನ ಉಪಚಾರಕ್ಕೆ ಉತ್ತಮ ಮದ್ದು
ಈ ವರ್ಷದ ಬೇಸಿಗೆ ಕಾಲದವರೆಗೆ ಈ ವೈರಸ್ ನ ಉಪಚಾರಕ್ಕೆ ಔಷಧಿ ಲಭ್ಯವಿರಲಿದೆ ಎಂದು ಅಮೆರಿಕಾದ ಉಪರಾಷ್ಟ್ರಪತಿ ಮೈಕ್ ಪೆನ್ಸ್ ಹೇಳಿದ್ದಾರೆ. ಆದರೆ, ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದವರೆಗೆ ಈ ರೋಗದ ಲಸಿಕೆ ಮಾರುಕಟ್ಟೆಗೆ ಬರುವುದು ಕಷ್ಟ ಸಾಧ್ಯ ಎಂದು ಅವರು ಹೇಳಿದ್ದಾರೆ. ಆದರೆ ಕರೋನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಜನರ ಚಿಕಿತ್ಸೆಗಾಗಿ, ಈ ಬೇಸಿಗೆ ಅಥವಾ ಶರತ್ಕಾಲದವರೆಗೆ ಔಷಧಿಗಳು ಲಭ್ಯವಿರುವ ಸಾಧ್ಯತೆ ಇದೆ ಎಂದು ಅವರು ಉಲ್ಲೇಖಿಸಿದ್ದಾರೆ.

Trending News