ನವದೆಹಲಿ: ಕೇಂದ್ರ ಆದಾಯ ತೆರಿಗೆ ಇಲಾಖೆ ಈ ವರ್ಷ ಫಾರ್ಮ್ 26AS ನ ಸ್ವರೂಪದಲ್ಲಿ ಬದಲಾವಣೆ ತಂದಿದೆ. ಇದೀಗ ಈ ಫಾರ್ಮ್ ನಲ್ಲಿ ತೆರಿಗೆ ಪಾವತಿದಾರರಿಗೆ ಅವರ ಮೂಲಕ ಮಾಡಲಾಗಿರುವ ಎಲ್ಲ ರೀತಿಯ ಆರ್ಥಿಕ ವಹಿವಾಟುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಈ ಫಾರ್ಮ್ ಸ್ವಯಂಪ್ರೇರಿತ ಅನುಸರಣೆ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಅನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಲ್ಲಿಸಲು ಅನುಕೂಲಕರವಾಗಲಿದೆ. ಫಾರ್ಮ್ 26 ಎಎಸ್ ವಾರ್ಷಿಕ ಸಂಯೋಜಿತ ಲೇವಾದೇವಿ ಖಾತೆಯಾಗಿದೆ.
ಆದಾಯ ತೆರಿಗೆ ಪಾವತಿದಾರರು ತಮ್ಮ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಮೂಲಕ ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಮೂಲಕ ಈ ಲೇವಾದೇವಿ ಖಾತೆಯನ್ನು ಪ್ರವೇಶಿಸಬಹುದು. ಇದಕ್ಕೂ ಮೊದಲು ಫಾರ್ಮ್26 ಎಎಸ್ ಆದಾಯದ ಮೂಲದಲ್ಲಿ ಕಡಿತಗೊಳಿಸಲಾದ ಒಂದೇ ಪ್ಯಾನ್ನ ವಿವರಗಳನ್ನು ಮತ್ತು ಆದಾಯ ಮೂಲದಲ್ಲಿ ತೆರಿಗೆ ಸಂಗ್ರಹವನ್ನು ಒಳಗೊಂಡಿರುತ್ತಿತ್ತು. ಜೊತೆಗೆ ಇತರ ತೆರಿಗೆಗಳ ಪಾವತಿ, ಮರುಪಾವತಿ ಮತ್ತು ಟಿಡಿಎಸ್ ಡೀಫಾಲ್ಟ್ಗಳಂತಹ ಹೆಚ್ಚುವರಿ ಮಾಹಿತಿ ಒಳಗೊಂಡಿರುತ್ತಿತ್ತು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಬಿಡಿಟಿ, ಆರ್ಥಿಕ ವರ್ಷ 2015-16ರಿಂದ ಉಳಿತಾಯ ಖಾತೆಗೆ ಹಣ ಜಮೆ ಮಾಡುವುದು ಹಾಗೂ ಹಿಂಪಡೆಯುವುದು, ಸ್ಥಿರಾಸ್ತಿಗಳ ಖರೀದಿ ಮತ್ತು ಮಾರಾಟ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ, ಡಿಬೆನ್ಚರ್, ವಿದೇಶಿ ಕರನ್ಸಿ, ಮ್ಯೂಚವಲ್ ಫಂಡ್, ವಸ್ತುಗಳು ಹಾಗೂ ಸೇವೆಗಳಿಗಾಗಿ ನಗದು ಹಣ ಪಾವತಿ ಇತ್ಯಾದಿಗಳ ಮಾಹಿತಿ ಬ್ಯಾಂಕ್ ಗಳು, ಮ್ಯೂಚವಲ್ ಫಂಡ್ ಕಂಪನಿಗಳು, ಬಾಂಡ್ ಜಾರಿಗೊಳಿಸುವ ಸಂಸ್ಥೆಗಳು ಇತ್ಯಾದಿಗಳಿಂದ ಲಭಿಸುತ್ತಿತ್ತು. ಆದರೆ, ಇದೀಗ ಈ ಎಲ್ಲ ಸೂಚನೆಗಳು ಫಾರ್ಮ್ 26AS ನಲ್ಲಿ ಲಭ್ಯವಿರಲಿವೆ ಎಂದು ಇಲಾಖೆ ಹೇಳಿದೆ. ವಿದೇಶಿ ಆರ್ಥಿಕ ಲೇವಾದೇವಿಯ ಕುರಿತ SFTಗೆ ಸಂಬಂಧಿಸಿದ ಈ ಸೂಚನೆಗಳು ಇದೀಗ ಫಾರ್ಮ್ 26AS ನ ಭಾಗ-ಇ ನಲ್ಲಿ ಕಾಣಿಸಿಕೊಳ್ಳಲಿವೆ ಎಂದು ಸಿಬಿಡಿಟಿ ಹೇಳಿದೆ. ಇದರಿಂದ ಸ್ವಯಂಪ್ರೇರಿತ ಅನುಸರಣೆ, ತೆರಿಗೆ ಹೊಣೆಗಾರಿಕೆ ಮತ್ತು ಇ-ರಿಟರ್ನ್ ಸಲ್ಲಿಸುವ ಸುಲಭತೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಇಲಾಖೆ ಹೇಳಿದೆ.
ತೆರಿಗೆ ಪಾವತಿದಾರರಿಗೆ ತುಂಬಾ ಲಾಭಕಾರಿಯಾಗಿದೆ ಈ ಫಾರ್ಮ್
ಸಿಬಿಡಿಟಿ ಪ್ರಕಾರ, ಇದು ತೆರಿಗೆ ಪಾವತಿದಾರರ ವಾರ್ಷಿಕ ಟ್ಯಾಕ್ಸ್ ಸ್ಟೇಟ್ ಮೆಂಟ್ ಆಗಿದೆ. ತೆರಿಗೆ ಪಾವತಿದಾರರು ತಮ್ಮ ಪ್ಯಾನ್ ಸಂಖ್ಯೆಯ ಸಹಾಯದಿಂದ ಈ ಸ್ಟೇಟ್ಮೆಂಟ್ ಅನ್ನು ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ನಿಂದ ಪಡೆಯಬಹುದು. ಯಾರಾದರೂ ತೆರಿಗೆ ಪಾವತಿದಾರರ ಆದಾಯದ ಮೇಲೆ ತೆರಿಗೆ ಪಾವತಿಸಿದ್ದರೆ ಅಥವಾ ಯಾವುದೇ ವ್ಯಕ್ತಿ / ಸಂಸ್ಥೆ ತನ್ನ ಗಳಿಕೆಯ ಮೇಲೆ ತೆರಿಗೆಯನ್ನು ಕಡಿತಗೊಳಿಸಿದ್ದರೆ, ಈ ಕುರಿತಾದ ಮಾಹಿತಿ ತೆರಿಗೆ ಪಾವತಿದಾರರಿಗೆ ಫಾರ್ಮ್ 26 ಎಎಸ್ನಲ್ಲಿ ಲಭಿಸಲಿದೆ.
ಡೌನ್ ಲೋಡ್ ಹೇಗೆ ಮಾಡಬೇಕು?
ಫಾರ್ಮ್ 26 ಎಎಸ್ ಅನ್ನು ಟ್ರೇಸಸ್ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಬಹುದು. ಫಾರ್ಮ್ 26 ಎಎಸ್ ಡೌನ್ಲೋಡ್ ಮಾಡಲು, ಆದಾಯ ತೆರಿಗೆ ಫೈಲಿಂಗ್ ವೆಬ್ಸೈಟ್ಗೆ ಲಾಗ್ ಇನ್ ಮಾಡಿ. My Account ವಿಭಾಗದಲ್ಲಿ, View Form 26AS(ತೆರಿಗೆ ಕ್ರೆಡಿಟ್) ಟ್ಯಾಬ್ ಕ್ಲಿಕ್ ಮಾಡಿ. ಇದರ ನಂತರ ನೀವು Traces ವೆಬ್ಸೈಟ್ಗೆ ತಲುಪಲಿದ್ದೀರಿ. ಅಲ್ಲಿ Assesment Year ಅನ್ನು ನಮೂದಿಸಿದ ನಂತರ ಇಲ್ಲಿ ನೀವು ನಿಮ್ಮ ಟ್ಯಾಕ್ಸ್ ಸ್ಟೇಟ್ಮೆಂಟ್ ಅನ್ನು ಡೌನ್ಲೋಡ್ ಮಾಡಬಹುದು. ತೆರಿಗೆ ಪಾವತಿದಾರರ ಜನ್ಮ ದಿನಾಂಕವನ್ನು ಫಾರ್ಮ್ 26 ಎಎಸ್ ತೆರೆಯಲು ಪಾಸ್ವರ್ಡ್ ಆಗಿ ಬಳಸಲಾಗುತ್ತದೆ.