ನವದೆಹಲಿ: ರೈತರ ಪಾಲಿಗೆ ಮರಣಶಾಸನವಾಗಿರುವ 3 ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳುವ ವಿಚಾರ ಇನ್ನಷ್ಟು ಕಗ್ಗಂಟಾಗಿದ್ದು ಇಂದಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರವಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಕೃಷಿ ಕಾನೂನುಗಳಿಗೆ ತಂದಿರುವ ತಿದ್ದುಪಡಿಯಿಂದ ಕೃಷಿ ಸಮುದಾಯಕ್ಕೆ ಹಿಂದೆಂದೂ ಆಗದ ಅನ್ಯಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದಲೇ ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳು 'ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋಅರ್ಡಿನೇಷನ್ ಕಮಿಟಿ' (All India Kisan Coordination Committee) ಮಾಡಿಕೊಂಡು ನವೆಂಬರ್ 26ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿವೆ. ದೇಶಾದ್ಯಂತ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಪ್ರತಿಭಟನೆಗಳಾಗುತ್ತಿದ್ದರೂ 'ಸಂಯುಕ್ತ ಕಿಸಾನ್ ಮೋರ್ಚಾ' (Samyukta Kisan Morcha)ದ ಅಡಿ ದೆಹಲಿಯ ಸಿಂಘು ಗಡಿಯಲ್ಲಿ ತೀವ್ರವಾದ ಹೋರಾಟ ಆಗುತ್ತಿದೆ.
ಈ ನಡುವೆ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ 5 ಸಭೆಗಳಾಗಿವೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Sha) 'ಅನೌಪಚಾರಿಕ ಮಾತುಕತೆ' ನಡೆಸಿದ್ದಾರೆ. ಆದರೆ ರೈತರ ಪಾಲಿಗೆ ಮರಣಶಾಸನವಾಗಿರುವ 3 ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳಬೇಕೆಂಬ ರೈತರ ಬೇಡಿಕೆಗೆ ಪೂರಕವಾದ ಸ್ಪಂದನೆ ಸಿಕ್ಕಿಲ್ಲ. ಇದೇ ಹಿನ್ನೆಲೆಯಲ್ಲಿ ರೈತರು ಡಿ. 9ರಂದು ನಿಗಧಿಯಾಗಿದ್ದ 6ನೇ ಸಭೆಯನ್ನು ಬಹಿಷ್ಕರಿಸಿದ್ದಾರೆ. ಬದಲಿಗೆ ಹೋರಾಟದ ಮೂಲಕವೇ ಕೇಂದ್ರ ಸರ್ಕಾರವನ್ನು ಮಣಿಸಬೇಕೆಂದು ನಿರ್ಧರಿಸಿದ್ದಾರೆ. ಹಾಗಾಗಿ ಇಂದಿನಿಂದ ಪ್ರತಿಭಟನೆ ತೀವ್ರವಾಗುವ ಸಾಧ್ಯತೆ ಇದೆ.
ಪ್ರತಿಭಟನೆಯ ನಡುವೆ ರಾಜ್ಯ ಸರ್ಕಾರದಿಂದ ರೈತರಿಗೆ 'ಶುಭ ಸುದ್ದಿ'
ಇಂದು ರೈತರು ದೇಶದ ಎಲ್ಲಾ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲಿದ್ದಾರೆ. ನವೆಂಬರ್ 26ರಿಂದ ಈವರೆಗೆ ಪಂಜಾಬ್, ಹರಿಯಾಣಗಳಿಂದ ದೆಹಲಿಗೆ ಬರುವ ಸಿಂಘು ಗಡಿಯಲ್ಲಿ ಮಾತ್ರ ಹೆದ್ದಾರಿ ಮುಚ್ಚಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಇಂದಿನಿಂದ ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಿಂದ ದೆಹಲಿ ತಲುಪುವ ರಸ್ತೆಗಳನ್ನೂ ಮುಚ್ಚಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ. ಜೊತೆಗೆ ಬಿಜೆಪಿ ನಾಯಕರ ಮನೆ ಮತ್ತು ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಲಾಗುತ್ತದೆ.
ಹಂತಹಂತವಾಗಿ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿರುವ ರೈತರು (Farmers) ಡಿಸೆಂಬರ್ 14ರಂದು ದೇಶದ ಜಿಲ್ಲಾ ಕೇಂದ್ರಗಳಲ್ಲಿ ಶಾಂತಯುತವಾದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅಂದು ಬಿಜೆಪಿ ನಾಯಕರಿಗೆ ಘೆರಾವ್ ಹಾಕುವ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಇಷ್ಟಾದರೂ ಕೇಂದ್ರ ಸರ್ಕಾರ ತನ್ನ ಮೊಂಡುತನ ಮುಂದುವರೆಸಿದರೆ ಶೀಘ್ರದಲ್ಲೇ ದೇಶಾದ್ಯಂತ ರೈಲು ಸಂಚಾರಕ್ಕೆ ಅಡ್ಡಿ ಪಡಿಸುವ ಚಳವಳಿಯನ್ನು ಹಮ್ಮಿಕೊಳ್ಳಲು ತೀರ್ಮಾನ ಮಾಡಲಾಗಿದೆ.
PM Kisan: ಪಟ್ಟಿಯಿಂದ 2 ಕೋಟಿ ರೈತರ ಹೆಸರನ್ನು ಕೈಬಿಟ್ಟ ಸರ್ಕಾರ
ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು (Agriculture laws) ಹಿಂಪಡೆಯಲೇಬೇಕು. ರೈತರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಜೊತೆಗೆ ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂಬುದು ರೈತರ ಬೇಡಿಕೆಗಳಾಗಿವೆ. ಕೇಂದ್ರ ಸರ್ಕಾರ ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಪದ್ದತಿ ಮುಂದುವರೆಸಲು ಕ್ರಮ ಕೈಗೊಳ್ಳುವುದಾಗಿ ಮೌಖಿಕವಾಗಿ ತಿಳಿಸಿದೆ. ಈ ಪ್ರಸ್ತಾಪಗಳಿಗೆ ಒಪ್ಪದ ರೈತ ಮುಖಂಡರು ಪ್ರತಿಭಟನೆ ಮುಂದುವರೆಸಿದ್ದಾರೆ.