ಕಲಿಕಾ ಚೇತರಿಕೆಗೆ ಶಿಕ್ಷಕರ ಪ್ರಯತ್ನಗಳ ಬಗ್ಗೆ ಅಜೀಂ ಪ್ರೇಮ್‌ಜಿ ವಿವಿ ಅಧ್ಯಯನ ಹೇಳುವುದೇನು?

ಶಿಕ್ಷಕರ ನಿರಂತರ ಯತ್ನಗಳು ಕಲಿಕಾ ನಷ್ಟವನ್ನು ನಿಭಾಯಿಸುವಲ್ಲಿ ಒಂದಷ್ಟು ಆರಂಭಿಕ ಯಶಸ್ಸನ್ನು ಪಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಅರಿತುಕೊಳ್ಳುವುದು ಈ ಅಧ್ಯಯನದ ಉದ್ದೇಶವಾಗಿತ್ತು.

Written by - Zee Kannada News Desk | Last Updated : Aug 12, 2022, 01:59 PM IST
  • ಕಲಿಕಾ ಚೇತರಿಕೆಯನ್ನು ನಿಭಾಯಿಸುವುದಕ್ಕಾಗಿ ಸಮಗ್ರ ಮಟ್ಟದಲ್ಲಿ ಉತ್ತಮ ಸಂಯೋಜಿತ ಮತ್ತು ಬಹುಮುಖಿ ಪ್ರಯತ್ನದ ಅಗತ್ಯವಿದೆ.
  • ಇದಕ್ಕಾಗಿ, ಶಿಕ್ಷಕರ ಸಾಮರ್ಥ್ಯ ಮತ್ತು ಅವರಿಗೆ ಬೇಕಾದ ನೆರವನ್ನು ಗಮನದಲ್ಲಿರಿಕೊಂಡ ಸಮಗ್ರ ಮತ್ತು ದೀರ್ಘಕಾಲೀನ ವಿಧಾನವನ್ನು ಅಳವಡಿಸುವ ಅಗತ್ಯವಿದೆ
ಕಲಿಕಾ ಚೇತರಿಕೆಗೆ ಶಿಕ್ಷಕರ ಪ್ರಯತ್ನಗಳ ಬಗ್ಗೆ ಅಜೀಂ ಪ್ರೇಮ್‌ಜಿ ವಿವಿ ಅಧ್ಯಯನ ಹೇಳುವುದೇನು? title=
Photo Courtsey: Azim Premji University

ಬೆಂಗಳೂರು: ಕೋವಿಡ್ ಕಾಲದಲ್ಲಿ ಶಾಲೆಗಳು ಮುಚ್ಚಿದ್ದ ಕಾರಣ ಉಂಟಾದ ಕಲಿಕಾ ನಷ್ಟದ ಚೇತರಿಕೆಯಲ್ಲಿ ಶಿಕ್ಷಕರು ವಹಿಸಿದ ಪಾತ್ರವನ್ನು ಗುರುತಿಸುವುದಕ್ಕಾಗಿ ಅಜೀಂ ಪ್ರೇಮ್‌ಜಿ ಫೌಂಡೇಷನ್ ೨೦೨೨ರ ಜನವರಿ ಮತ್ತು ಏಪ್ರಿಲ್ ನಡುವೆ ಕ್ಷೇತ್ರ ಅಧ್ಯಯನವೊಂದನ್ನು ನಡೆಸಿದ್ದು, ಇದರಲ್ಲಿ ೫ ರಾಜ್ಯಗಳ, ೪೧ ಜಿಲ್ಲೆಗಳ, ೨ರಿಂದ ೫ನೇ ತರಗತಿಯವರೆಗಿನ ೧೦೮ ಶಿಕ್ಷಕರು, ಅಷ್ಟೇ ಸಂಖ್ಯೆಯ ಶಾಲೆಗಳು ಮತ್ತು ೧೬೪೪ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೇರೆ ಬೇರೆ ತರಗತಿಗಳು ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ತೀವ್ರ ಕಲಿಕಾ ನಷ್ಟ ಉಂಟಾಗಿರುವುದನ್ನು ಈ ಹಿಂದಿನ ಹಲವಾರು ಅಧ್ಯಯನಗಳು ಸ್ಪಷ್ಟವಾಗಿ ಸಾಬೀತುಪಡಿಸಿದ್ದವು. ಶಿಕ್ಷಣದ ಕೇಂದ್ರ ಸ್ಥಾನದಲ್ಲಿರುವ ಶಿಕ್ಷಕರು ಕಲಿಕಾ ನಷ್ಟದ ಚೇತರಿಕೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಹೀಗಾಗಿ, ಬದ್ಧತೆಯನ್ನು ಪ್ರದರ್ಶಿಸುತ್ತಾ ಬಂದಿರುವ ಶಿಕ್ಷಕರ ನಿರಂತರ ಯತ್ನಗಳು ಕಲಿಕಾ ನಷ್ಟವನ್ನು ನಿಭಾಯಿಸುವಲ್ಲಿ ಒಂದಷ್ಟು ಆರಂಭಿಕ ಯಶಸ್ಸನ್ನು ಪಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಅರಿತುಕೊಳ್ಳುವುದು ಈ ಅಧ್ಯಯನದ ಉದ್ದೇಶವಾಗಿತ್ತು.

ಸಾರ್ವಜನಿಕ ಶಾಲಾ ವ್ಯವಸ್ಥೆಯ ಇತಿಮಿತಿಯೊಳಗೆ ಕೆಲಸ ಮಾಡುವಾಗಲೂ ವಿದ್ಯಾರ್ಥಿಗಳ ಕಲಿಕೆಯತ್ತ ನಿರಂತರವಾಗಿ ತಮ್ಮ ಬದ್ಧತೆ ಮತ್ತು ಸಾಮರ್ಥ್ಯ ತೋರಿಸಿದ ಕೆಲವು ಆಯ್ದ ಶಿಕ್ಷಕರ ಮಾದರಿ ಪ್ರಯತ್ನಗಳು ಮತ್ತು ಕಲಿಕಾ ಚೇತರಿಕೆಗೆ ಅವರಿಗೆ ಬೇಕಾಗುವ ವ್ಯವಸ್ಥೆಯ ಒಟ್ಟಾರೆ ನೆರವನ್ನು ಗುರುತಿಸುವುದು ಈ ಅಧ್ಯಯನದ ಉದ್ದೇಶವಾಗಿತ್ತು.ಈ ಅವಧಿಯಲ್ಲಿ ಉಂಟಾದ ಕಲಿಕಾ ಚೇತರಿಕೆಯ ವ್ಯಾಪ್ತಿಯನ್ನು ಅರಿತುಕೊಳ್ಳುವುದಕ್ಕಾಗಿ, ಹಿಂದಿನ ಎರಡು ತರಗತಿಗಳ (ಪ್ರಸ್ತುತ ತರಗತಿಯಲ್ಲ) ಭಾಷೆ ಮತ್ತು ಗಣಿತದಲ್ಲಿ ವಿದ್ಯಾರ್ಥಿಗಳು ಹೊಂದಿರುವ ನಿರ್ದಿಷ್ಟ ಸಾಮರ್ಥ್ಯಗಳ ಪ್ರಾರಂಭಿಕ ಹಂತದ (ಬೇಸ್‌ಲೈನ್) ಮತ್ತು ಅಂತಿಮ ಹಂತದ (ಎಂಡ್‌ಲೈನ್) ಮೌಲ್ಯಮಾಪನವನ್ನು ನಡೆಸಲಾಯಿತು. ಎರಡನೇ ತರಗತಿ ಮಾತ್ರ ಇದಕ್ಕೆ ಹೊರತಾಗಿತ್ತು, ಇಲ್ಲಿ ಕೇವಲ ಹಿಂದಿನ ತರಗತಿಯ ಸಾಮರ್ಥ್ಯದ ಮೌಲ್ಯಮಾಪನವನ್ನು ನಡೆಸಲಾಯಿತು.

ಸಾರ್ವಜನಿಕ ಶಾಲಾ ವ್ಯವಸ್ಥೆಯಲ್ಲಿ ಬದ್ಧತೆಯುಳ್ಳ ಶಿಕ್ಷಕರ ನಿರಂತರ ಪ್ರಯತ್ನವು ಕಲಿಕಾ ನಷ್ಟದ ಚೇತರಿಕೆಯಲ್ಲಿ ಧನಾತ್ಮಕ ಪರಿಣಾಮವನ್ನು ನೀಡುತ್ತದೆ ಎಂಬುದನ್ನು ಈ ಅಧ್ಯಯನದ ಒಟ್ಟಾರೆ ಫಲಿತಾಂಶವು ಅನುಮೋದಿಸಿದೆ. ಆದರೆ ಸದ್ಯಕ್ಕೆ ತೀರಾ ಅಲ್ಪ ಪ್ರಮಾಣದಲ್ಲಿ ಮಾತ್ರವೇ ಪ್ರಗತಿ ಸಾಧಿಸಲಾಗಿದ್ದು, ಇಂತಹ ಬದ್ಧತೆಯ ಪ್ರಯತ್ನದ ಹೊರತಾಗಿಯೂ ಗಣನೀಯ ಪ್ರಮಾಣದ ವಿದ್ಯಾರ್ಥಿಗಳು ಹಿಂದಿನ ತರಗತಿಯ ಸಾಮರ್ಥ್ಯ ಮಟ್ಟಕ್ಕೆ ತಲುಪಿಲ್ಲ ಎಂಬುದನ್ನು ಈ ಅಧ್ಯಯನವು ತಿಳಿಸುತ್ತದೆ. ಶಾಲೆಗಳ ಮುಚ್ಚುವಿಕೆಯಿಂದಾಗಿ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಮೇಲೆ ಉಂಟಾಗಿರುವ ವ್ಯಾಪಕ ಮತ್ತು ಆಳವಾದ ಪರಿಣಾಮದ ಕಾರಣ, ಕಲಿಕಾ ನಷ್ಟದ ಚೇತರಿಕೆಗೆ ಇಡೀ ಸಾರ್ವಜನಿಕ ಶಾಲಾ ವ್ಯವಸ್ಥೆಯು ಅತ್ಯಂತ ಸುಸ್ಥಿರ ಹಾಗೂ ದೀರ್ಘಕಾಲೀನ ಪ್ರಯತ್ನಗಳನ್ನು ಮಾಡಬೇಕು ಎಂದು ಈ ಅಧ್ಯಯನವು ಶಿಫಾರಸ್ಸು ಮಾಡುತ್ತದೆ.

ಇದನ್ನೂ ಓದಿ: ಎಮ್ಮೆ ಅಪಘಾತ ವಿಮೆ ನಿರಾಕರಿಸಿದ ವಿಮಾ ಕಂಪನಿಗೆ 95 ಸಾವಿರ ರೂ.ದಂಡ

ಈ ಪ್ರಯತ್ನಗಳ ಮೂಲ ಸಾರವನ್ನು ಹೊಂದಿರುವ ಕಾರ್ಯಕ್ರಮಗಳನ್ನು ಕೆಲವು ರಾಜ್ಯಗಳು ವಿನ್ಯಾಸಗೊಳಿಸಿ ಈಗಾಗಲೇ ಜಾರಿಗೆ ತಂದಿರುವುದು ಸಂತಸದ ವಿಷಯ. ಆದರೆ, ಮುಂದಿನ ೧೨-೧೮ ತಿಂಗಳುಗಳಲ್ಲಿ ಈ ಎಲ್ಲ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದನ್ನು ಅವರು ಖಾತರಿಪಡಿಸಿಕೊಳ್ಳಬೇಕು. ಇನ್ನೊಂದೆಡೆ, ಕಲಿಕಾ ನಷ್ಟವನ್ನು ಸಾಕಷ್ಟು ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇತರ ರಾಜ್ಯಗಳು ಸಹ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಅಥವಾ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು.

ʻಈ ದೇಶವು ಎದುರಿಸುತ್ತಿರುವ ಶೈಕ್ಷಣಿಕ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಕೋವಿಡ್ ಕಾರಣದಿಂದಾಗಿ ಶಾಲೆಗಳು ಮುಚ್ಚಿದ್ದ ಸಂದರ್ಭದಲ್ಲಿ ಕಲಿಕೆಯಲ್ಲಿ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ನಾವು ವ್ಯವಸ್ಥಿತವಾಗಿ ಕೆಲಸ ಮಾಡಿದರೆ, ಸಾಕಷ್ಟು ಸಮಯವನ್ನು ಮೀಸಲಿಟ್ಟರೆ ಮತ್ತು ಶಿಕ್ಷಕರಿಗೆ ಸೂಕ್ತ ನೆರವನ್ನು ಒದಗಿಸಿದರೆ ಮಾತ್ರ ನಷ್ಟಗೊಂಡಿರುವ ಕಲಿಕೆಯನ್ನು ಸರಿದೂಗಿಸಬಹುದು. ಇಂದಿನ ಸಂದರ್ಭದಲ್ಲಿ ಬೇರೆ ಯಾವ ವಿಚಾರವೂ ಶಿಕ್ಷಣದಷ್ಟು ಪ್ರಮುಖವಲ್ಲʼ ಎಂದು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಸಿ.ಇ.ಒ ಅನುರಾಗ್ ಬೆಹರ್ ಹೇಳಿದ್ದಾರೆ.

ಅಧ್ಯಯನದ ಪ್ರಮುಖ ಒಳನೋಟಗಳು:

ಅಧ್ಯಯನ ನಡೆಸಲಾದ ೮-೧೦ ವಾರಗಳ ಅವಧಿಯಲ್ಲಿ, ತರಗತಿಯ ಅವಲೋಕನ ಮತ್ತು ಸಂದರ್ಶನದ ಮೂಲಕ ಶಿಕ್ಷಕರ ಪ್ರಯತ್ನಗಳನ್ನು ದಾಖಲಿಸಲಾಗಿದೆ.

•  ೮೯ ಶೇಕಡಾದಷ್ಟು ಶಿಕ್ಷಕರು, ವಿದ್ಯಾರ್ಥಿಗಳ ನಿರೂಪಣೆಗಳು ಮತ್ತು ಅನುಭವಗಳಿಗೆ ತರಗತಿಯಲ್ಲಿ ಹೆಚ್ಚು ಅವಕಾಶ ಒದಗಿಸುವ ಮೂಲಕ ಮಕ್ಕಳು ಶಾಲೆಗೆ ಮತ್ತು ತರಗತಿಯ ದೈನಂದಿನ ಚಟುವಟಿಕೆಗಳಿಗೆ ಮರಳಲು ಸಹಾಯ ಮಾಡುತ್ತಿರುವುದನ್ನು ಗಮನಿಸಲಾಯಿತು. ಇತರ ಶಿಕ್ಷಕರು, ಇಡೀ ದಿನ ಆಟಗಳು ಮತ್ತು ಚಟುವಟಿಕೆಗಳನ್ನು ನಡೆಸುವುದರ ಮೂಲಕ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ವೈಯಕ್ತಿಕ ಗಮನ ನೀಡುತ್ತಿರುವುದು ಕಂಡು ಬಂದಿತು.

• ಕೆಲವು ತರಗತಿ ಕೋಣೆಗಳಲ್ಲಿ ವಿವಿಧ ವರ್ಗದ (ಮಲ್ಟಿಗ್ರೇಡ್) ವಿದ್ಯಾರ್ಥಿಗಳು ಒಟ್ಟಿಗೆ ಇದ್ದರೆ, ಒಂದೇ ತರಗತಿ (ಸಿಂಗಲ್‌ಗ್ರೇಡ್) ಕೋಣೆಗಳಲ್ಲಿ ಕಲಿಕೆಯ ವ್ಯಾಪಕ ಅಂತರವಿರುವ ವಿವಿಧ ಹಂತಗಳ ವಿದ್ಯಾರ್ಥಿಗಳು ಇದ್ದರು. ಶೇ. ೭೨ರಷ್ಟು ಶಿಕ್ಷಕರು ತಾರ್ಕಿಕ ಕಲಿಕಾ ಹಂತಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ, ಅವರ ಕಲಿಕಾ ಚೇತರಿಕೆಗಾಗಿ ವಿಭಿನ್ನ ಕಲಿಕಾ ಸಾಮಗ್ರಿಗಳು, ಚಟುವಟಿಕೆಗಳು ಮತ್ತು ಬೋಧನಾ ವಿಧಾನಗಳನ್ನು ಬಳಸುತ್ತಿರುವುದು ಕಂಡು ಬಂತು. ಶಿಕ್ಷಕರು ಸಮುದಾಯ ಆಧರಿತ ಸಾಮೂಹಿಕ ಪ್ರಾಜೆಕ್ಟ್ಗಳು ಮತ್ತು ಕಾರ್ಯಹಾಳೆ(ವರ್ಕ್ಶೀಟ್)ಗಳ ಮೂಲಕ ಶಾಲಾ ಅವಧಿಯ ನಂತರವೂ ವಿದ್ಯಾರ್ಥಿಗಳಿಗೆ ಕಲಿಕಾ ಅವಕಾಶಗಳು ದೊರೆಯುವಂತೆ ನೋಡಿಕೊಂಡಿರುವುದು ವರದಿಯಾಗಿದೆ.

ಇದನ್ನೂ ಓದಿ: ವೀರಪ್ಪನ್ ತಾಣವಾಗಿದ್ದ ಈ ಊರು ಇಂದು ಯೋಧರ ಗ್ರಾಮ.. ಇಲ್ಲಿದೆ ಸೇನಾ ತರಬೇತಿ ಅಕಾಡೆಮಿ

• ಶೇ. ೮೧ರಷ್ಟು ಶಿಕ್ಷಕರು ತರಗತಿ ಕೋಣೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಥಳೀಯ ಉಪಭಾಷೆಯನ್ನು ಬಳಸಲು ಉತ್ತೇಜಿಸಿದ್ದಾರೆ ಹಾಗೂ ತರಗತಿಯಲ್ಲಿ ನಡೆಯುವ ಚರ್ಚೆಗಳನ್ನು, ವಿದ್ಯಾರ್ಥಿಗಳು ಮನೆಯಲ್ಲಿ ಮಾತನಾಡುವ ಭಾಷೆಯ ಜೊತೆಗೆ ಸಂಪರ್ಕಿಸಲು ಪ್ರಜ್ಞಾಪೂರ್ವಕ ಯತ್ನವನ್ನು ಮಾಡಿದ್ದಾರೆ. ಭಾಷೆ ಮತ್ತು ಗಣಿತದ ಬುನಾದಿ ಸಾಮರ್ಥ್ಯಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಕೊಳ್ಳುವಂತೆ ಮಾಡುವುದಕ್ಕಾಗಿ ಕಾರ್ಯಹಾಳೆ(ವರ್ಕ್ಶೀಟ್)ಗಳು, ಗ್ರಂಥಾಲಯದ ಪುಸ್ತಕಗಳು, ಸಂದರ್ಭೋಚಿತ ಸ್ಥಳೀಯ ಬೋಧನೆ-ಕಲಿಕೆ ಸಾಮಗ್ರಿಗಳು (ಟಿ.ಎಲ್.ಎಂ ಗಳು) ಮತ್ತು ನಕಾಶೆಗಳು ಇತ್ಯಾದಿಗಳನ್ನು ಒಳಗೊಂಡ ವಿವಿಧ ಬೋಧನೆ-ಕಲಿಕೆ ಸಂಪನ್ಮೂಲಗಳನ್ನು ಸಹ ಶಿಕ್ಷಕರು ಬಳಸಿಕೊಂಡಿದ್ದರು.
ಶೇ. ೩೮ರಷ್ಟು ಶಿಕ್ಷಕರು ಮೌಖಿಕ, ಲಿಖಿತ ಹಾಗೂ ಮಿಶ್ರ ವಿಧಾನಗಳನ್ನು ಬಳಸಿ, ಕಾರ್ಯಹಾಳೆ(ವರ್ಕ್ಶೀಟ್)ಗಳ ರೂಪದಲ್ಲಿ, ಗುಂಪು ಚರ್ಚೆಗಳು, ಪಾತ್ರಾಭಿನಯ, ತರಗತಿ ಕೋಣೆಯ ಕೆಲಸ (ಕ್ಲಾಸ್‌ವರ್ಕ್), ಮನೆಗೆಲಸ(ಹೋಮ್‌ವರ್ಕ್), ಅವಲೋಕನಗಳು, ಪ್ರಾಜೆಕ್ಟ್ ಕೆಲಸ ಇತ್ಯಾದಿಗಳ ಮೂಲಕ ಸ್ವಯಂ ಮೌಲ್ಯಮಾಪನ ಮತ್ತು ಸಹಪಾಠಿಗಳ ಮೌಲ್ಯಮಾಪನ ಸೇರಿದಂತೆ ಮೌಲ್ಯಮಾಪನಕ್ಕಾಗಿ ಬೇರೆ ಬೇರೆ ಸಾಧನಗಳನ್ನು ಬಳಸಿರುವುದನ್ನು ಗಮನಿಸಲಾಗಿದೆ. ಇಂತಹ ಮೌಲ್ಯಮಾಪನಗಳ ಸಂದರ್ಭದಲ್ಲಿ ಶಿಕ್ಷಕರು ಪ್ರತಿ ವಿದ್ಯಾರ್ಥಿಗೂ ವಿಶೇಷ ಗಮನ ನೀಡಿರುವುದು ವರದಿಯಾಗಿದೆ.

ಅಧ್ಯಯನದ ಆರಂಭದ ವೇಳೆಯ ಸಂದರ್ಭದಲ್ಲಿ ಕಲಿಕಾ ಮಟ್ಟಗಳ ಸ್ಥಿತಿಗತಿಯನ್ನು ಅರಿತುಕೊಳ್ಳುವುದಕ್ಕಾಗಿ, ಅಧ್ಯಯನದ ಅವಧಿಯ ಆರಂಭದಲ್ಲಿಯೇ ವಿದ್ಯಾರ್ಥಿಗಳ ಮೌಲ್ಯಮಾಪನ ನಡೆಸಲಾಯಿತು. ಈ ಮೌಲ್ಯಮಾಪನವು, ಹಿಂದಿನ ಎರಡು ತರಗತಿಗಳ (೨ನೇ ತರಗತಿಯನ್ನು ಹೊರತುಪಡಿಸಿ) ನಿರ್ದಿಷ್ಟ ಸಾಮರ್ಥ್ಯಗಳಿಗೆ ಸಂಬಂಧಿತ ಸ್ಥಿತಿಗತಿಯನ್ನು ಸೂಚಿಸಿತು. ಎಲ್ಲಾ ತರಗತಿಗಳಲ್ಲಿ, ಮುಖ್ಯವಾಗಿ ಭಾಷೆ ಮತ್ತು ಗಣಿತದಲ್ಲಿ, ಹಿಂದಿನ ತರಗತಿಯ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಕಲಿಕಾ ನಷ್ಟ ಉಂಟಾಗಿರುವುದನ್ನು ಈ ಅಧ್ಯಯನದಲ್ಲಿ ಗಮನಿಸಲಾಯಿತು.
ಅಧ್ಯಯನದ ಅವಧಿಯ ಆರಂಭದಲ್ಲಿ,

• ಕ್ರಮವಾಗಿ ೨, ೩, ೪ ಮತ್ತು ೫ನೇ ತರಗತಿಗಳ ಶೇ. ೫೩, ೭೦, ೫೮ ಮತ್ತು ೬೧ರಷ್ಟು ವಿದ್ಯಾರ್ಥಿಗಳಿಗೆ ಭಾಷಾ ವಿಷಯದಲ್ಲಿ ಮೌಲ್ಯಮಾಪನ ಮಾಡಲಾದ ನಿರ್ದಿಷ್ಟ ಸಾಮರ್ಥ್ಯಗಳಿಗೆ ಸಂಬAಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಆಗಲಿಲ್ಲ.

• ಕ್ರಮವಾಗಿ ೨, ೩, ೪ ಮತ್ತು ೫ನೇ ತರಗತಿಗಳ ಶೇ. ೨೯, ೫೭, ೫೨ ಮತ್ತು ೫೪ ರಷ್ಟು ವಿದ್ಯಾರ್ಥಿಗಳಿಗೆ ಗಣಿತದಲ್ಲಿ ಮೌಲ್ಯಮಾಪನ ಮಾಡಲಾದ ನಿರ್ದಿಷ್ಟ ಸಾಮರ್ಥ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಆಗಲಿಲ್ಲ.
ಕಲಿಕಾ ಚೇತರಿಕೆಯು ಹೇಗೆ ಮುಂದುವರಿಯುತ್ತಿದೆ ಎಂಬುದನ್ನು ಅರಿತುಕೊಳ್ಳುವುದಕ್ಕಾಗಿ ಅಧ್ಯಯನದ ೮-೧೦ ವಾರಗಳ ಕೊನೆಗೆ ವಿದ್ಯಾರ್ಥಿಗಳನ್ನು ಇನ್ನೊಮ್ಮೆ ಮೌಲ್ಯಮಾಪನಕ್ಕೆ ಒಳಪಡಿಸಲಾಯಿತು. ವಿವಿಧ ತರಗತಿಗಳಲ್ಲಿ ಭಾಷೆ ಮತ್ತು ಗಣಿತದಲ್ಲಿ ಮೌಲ್ಯಮಾಪನ ನಡೆಸಲಾದ ನಿರ್ದಿಷ್ಟ ಸಾಮರ್ಥ್ಯಗಳಲ್ಲಿ ಒಂದಷ್ಟು ಸುಧಾರಣೆಗಳು ಕಂಡು ಬಂದವು.

• ಭಾಷೆಯಲ್ಲಿ ಮೌಲ್ಯಮಾಪನ ನಡೆಸಿದಾಗ, ಕ್ರಮವಾಗಿ ೨, ೩, ೪ ಮತ್ತು ೫ನೇ ತರಗತಿಗಳ ಶೇ. ೪೧, ೪೬, ೫೦ ಮತ್ತು ೪೧ ರಷ್ಟು ವಿದ್ಯಾರ್ಥಿಗಳು ನಿರ್ದಿಷ್ಟ ಸಾಮರ್ಥ್ಯಗಳಲ್ಲಿ ಸುಧಾರಣೆ ತೋರಿಸಿರುವುದು ಕಂಡು ಬಂತು.

• ಗಣಿತದಲ್ಲಿ ಮೌಲ್ಯಮಾಪನ ನಡೆಸಿದಾಗ, ಕ್ರಮವಾಗಿ ೨, ೩, ೪ ಮತ್ತು ೫ನೇ ತರಗತಿಗಳ ಶೇ. ೫೨, ೫೪, ೪೭ ಮತ್ತು ೬೩ ರಷ್ಟು ವಿದ್ಯಾರ್ಥಿಗಳು ನಿರ್ದಿಷ್ಟ ಸಾಮರ್ಥ್ಯಗಳಲ್ಲಿ ಸುಧಾರಣೆ ತೋರಿಸಿರುವುದು ಕಂಡು ಬಂತು.

ಈ ಅಧ್ಯಯನದ ಉದ್ಧೇಶ ಶಿಕ್ಷಕರ ಪ್ರಯತ್ನದಿಂದಲೇ ಮಕ್ಕಳ ಕಲಿಕೆಯಲ್ಲಿ ಚೇತರಿಕೆಯಾಗಿದೆ ಎಂಬುದನ್ನು ಪ್ರತಿಪಾದಿಸುವುದಲ್ಲವಾದರೂ, ಅಧ್ಯಯನದಲ್ಲಿ ಭಾಗಿಯಾದ ಶಿಕ್ಷಕರು ಮಾಡಿರುವ ಪ್ರಯತ್ನವು ಕಲಿಕೆಯ ಚೇತರಿಕೆಯ ಮೇಲೆ ಒಂದಷ್ಟು ಪರಿಣಾಮವನ್ನು ಬೀರಿದೆ ಎಂಬುದು ಒಟ್ಟಾರೆಯಾಗಿ ಸ್ಪಷ್ಟವಾಗಿದೆ, ಆದರೂ ಇನ್ನೂ ಸಾಕಷ್ಟು ಪ್ರಯತ್ನ ಮತ್ತು ಕೆಲಸ ಆಗಬೇಕಾಗಿದೆ. ಅಲ್ಲದೆ ಈ ಅಧ್ಯಯನದಲ್ಲಿ ಹಿಂದಿನ ಎರಡು ತರಗತಿಗಳ (೨ನೇ ತರಗತಿಯನ್ನು ಹೊರತುಪಡಿಸಿ) ಸಾಮರ್ಥ್ಯಗಳ ಮೌಲ್ಯಮಾಪನ ನಡೆಸಲಾಗಿದೆಯೇ ಹೊರತು ಸಂಬಂಧಪಟ್ಟ ತರಗತಿಗೆ ಬೇಕಾದ ಸಾಮರ್ಥ್ಯಗಳಲ್ಲ ಎಂಬುದನ್ನು ಗಮನಿಸಬೇಕು. ಮುಂದಿನ ತರಗತಿಗೆ ಹೋಗಲು ವಿದ್ಯಾರ್ಥಿಗಳು ಸಿದ್ಧರಾಗಿದ್ದರೂ, ಹಿಂದಿನ ಎರಡು ತರಗತಿಗಳ ಸಾಮರ್ಥ್ಯದಲ್ಲಿ ಅವರು ಇನ್ನೂ ಹಿಡಿತ ಸಾಧಿಸಿಲ್ಲ. ಅಂದರೆ, ಕಳೆದ ಎರಡು ವರ್ಷಗಳಲ್ಲಿ ಅವರು ಏನನ್ನೂ ಕಲಿತಿಲ್ಲ. ನಾವು ಎಂದಿನಂತೆಯೇ ಮುಂದುವರಿದರೆ ಮುಂದೆ ಉಂಟಾಗುವ ಕಲಿಕಾ ನಷ್ಟವನ್ನು ಭರಿಸುವುದು ದುಸ್ತರ ಎನಿಸಲಿದೆ.

ಹೀಗಾಗಿ, ಕಲಿಕಾ ಚೇತರಿಕೆಯನ್ನು ನಿಭಾಯಿಸುವುದಕ್ಕಾಗಿ ಸಮಗ್ರ ಮಟ್ಟದಲ್ಲಿ ಉತ್ತಮ ಸಂಯೋಜಿತ ಮತ್ತು ಬಹುಮುಖಿ ಪ್ರಯತ್ನದ ಅಗತ್ಯವಿದೆ. ಇದಕ್ಕಾಗಿ, ಶಿಕ್ಷಕರ ಸಾಮರ್ಥ್ಯ ಮತ್ತು ಅವರಿಗೆ ಬೇಕಾದ ನೆರವನ್ನು ಗಮನದಲ್ಲಿರಿಕೊಂಡ ಸಮಗ್ರ ಮತ್ತು ದೀರ್ಘಕಾಲೀನ ವಿಧಾನವನ್ನು ಅಳವಡಿಸುವ ಅಗತ್ಯವಿದೆ, ಹಾಗೂ ಎಲ್ಲಾ ಶಿಕ್ಷಕರು ಅಳವಡಿಸಿಕೊಳ್ಳಬಹುದಾದ ಬೋಧನಾ ವಿಧಾನಗಳನ್ನು ಹರಡುವ ಕಡೆಗೆ ಗಮನ ನೀಡಬೇಕು. ಬರೇ ತೋರಿಕೆಗಾಗಿ ಈ ಯತ್ನಗಳು ನಡೆಯಬಾರದು. ಬದಲಾಗಿ, ಈ ವಿಷಮ ಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಮಾತ್ರವಲ್ಲದೆ ಪ್ರತಿ ವಿದ್ಯಾರ್ಥಿಯ ಯಶಸ್ಸಿಗೆ ಅನುವು ಮಾಡಿಕೊಡುವ ಬೋಧನೆ-ಕಲಿಕೆಯತ್ತ ಸಾಗಲು ಈ ನಿರ್ಣಾಯಕ ಹಂತದಲ್ಲಿ ನಿರಂತರ ಪ್ರಯತ್ನದ ಅಗತ್ಯವಿದೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕುರಿತು
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವನ್ನು ಕರ್ನಾಟಕ ಸರಕಾರದ ೨೦೧೦ರ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಕಾಯಿದೆಯಡಿ ಸ್ಥಾಪಿಸಲಾಗಿದೆ. ಅಜೀಂ ಪ್ರೇಮ್‌ಜಿ ಪೌಂಡೇಷನ್ ಸ್ಥಾಪಿಸಿರುವ ಈ ವಿಶ್ವವಿದ್ಯಾಲಯವು ಸಂಪೂರ್ಣವಾಗಿ ಸೇವೆಯ ಉದ್ದೇಶವನ್ನು ಹೊಂದಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿರುವ ಲಾಭರಹಿತ ಸಂಸ್ಥೆಯಾಗಿದೆ. ವಿಶ್ವವಿದ್ಯಾಲಯವು ಸ್ಪಷ್ಟವಾದ ಸಾಮಾಜಿಕ ಉದ್ದೇಶವನ್ನು ಹೊಂದಿದ್ದು ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ. ಹೊಸ ಪ್ರತಿಭೆಯನ್ನು ಅಭಿವೃದ್ಧಿಪಡಿಸುವುದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಸಾಮರ್ಥ್ಯ ವೃದ್ಧಿ ಮತ್ತು ಶಿಕ್ಷಣ ಮತ್ತು ಅಭಿವೃದ್ಧಿಯ ಕ್ಷೇತ್ರದಲ್ಲಿ ವಿಷಯದ ಸಂಬಂಧಿತ ಜ್ಞಾನವನ್ನು ಸೃಷ್ಠಿಸುವಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಜೀಂ ಪ್ರೇಮ್‌ಜಿ ಫೌಂಡೇಷನ್ ವಿಶ್ವವಿದ್ಯಾಲಯದ ಚಟುವಟಿಕೆಗಳನ್ನು ಪ್ರಾಯೋಜಿಸುತ್ತಿದೆ. ಶಾಲಾ ಶಿಕ್ಷಣದಲ್ಲಿ ಎರಡು ದಶಕಗಳಿಂದ ಅಜೀಂ ಪ್ರೇಮ್‌ಜಿ ಫೌಂಡೇಷನ್ ಪಡೆದ ಕಲಿಕೆ ಮತ್ತು ಅನುಭವದ ಆಧಾರದಲ್ಲಿ ಈ ವಿಶ್ವವಿದ್ಯಾಲಯವು ಕರ‍್ಯನಿರ್ವಹಿಸುತ್ತಿದೆ. ಭಾರತದ ಶಿಕ್ಷಣ ಮತ್ತು ಅಭಿವೃದ್ಧಿ ಕ್ಷೇತ್ರಗಳು ಎದುರಿಸುತ್ತಿರುವ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ವಿಶ್ವವಿದ್ಯಾಲಯ ರೂಪುಗೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News