ಬೆಂಗಳೂರು: ಗೋ ಸಂಪತ್ತನ್ನು ಉಳಿಸುವ ಪ್ರಯತ್ನದ ಹಂತವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋವುಗಳನ್ನು ದತ್ತು ಪಡೆಯುವ ಮೂಲಕ ಪುಣ್ಯಕೋಟಿ ದತ್ತು ಯೋಜನೆಯಲ್ಲಿ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರು, ಅಧಿಕಾರಿಗಳು ಹಾಗೂ ಇತರೆ ಸಂಸ್ಥೆಗಳ ನೌಕರರು ಭಾಗಿಯಾಗುವಂತೆ ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಮ್ಮ ಸರ್ಕಾರವು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020ನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಗೋವುಗಳನ್ನು ಸಂರಕ್ಷಿಸಿ, ಗೋಶಾಲೆಗಳನ್ನು ಸಬಲೀಕರಣಗೊಳಿಸುವುದು ನಮ್ಮ ಉದ್ದೇಶವಾಗಿರುತ್ತದೆ ಎಂದಿದ್ದಾರೆ.
ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಸದಾ ಒತ್ತು ನೀಡುವ ಸಲುವಾಗಿ ರಾಜ್ಯದಲ್ಲಿ 200ಕ್ಕೂ ಹೆಚ್ಚು ಖಾಸಗಿ ಗೋಶಾಲೆಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆಗಳನ್ನು ಸ್ಥಾಪಿಸಲಾಗುತ್ತಿದ್ದು, ಗೋವು ಮತ್ತು ಅದರ ಸಂತತಿಗೆ ಆಶ್ರಯ ನೀಡಿ ಆರೈಕೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಯೋಜನೆಗೆ ಧನ ಸಹಾಯ ನೀಡುವವರಿಗೆ ಆದಾಯ ತೆರಿಗೆ 80G ವಿನಾಯಿತಿ ಸೌಲಭ್ಯ ಸಿಗಲಿದೆ ಎಂದು ಪ್ರಭು ಚವ್ಹಾಣ್ ವಿವರಿಸಿದ್ದಾರೆ.
ಇದನ್ನೂ ಓದಿ : ಆಸ್ಟ್ರೇಲಿಯಾ ಉಪ ಪ್ರಧಾನಿಗೆ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಗಿಫ್ಟ್.! ಇದಕ್ಕಿದೆ ವಿಶೇಷ ಕಾರಣ
ನಿರ್ಗತಿಕ, ಪರಿತ್ಯಕ್ತ, ಅನಾರೋಗ್ಯ, ಆಶಕ್ತ, ವಯಸ್ಸಾದ ಜಾನುವಾರುಗಳನ್ನು ಹಾಗೂ ರೈತರು ಸಾಕಲಾಗದ ಹಸು-ಕರುಗಳನ್ನು ಪೋಷಿಸಲು ಹಾಗೂ ರಾಜ್ಯದ ಗೋಶಾಲೆಗಳನ್ನು ಆತ್ಮನಿರ್ಭರವಾಗಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸರ್ಕಾರದ ಅವಿಭಾಜ್ಯ ಅಂಗವಾಗಿರುವ ರಾಜ್ಯದ ಸರ್ಕಾರಿ ನೌಕರರು ಪುಣ್ಯಕೋಟಿ ಸಂತತಿ ರಕ್ಷಣೆಗೆ ಯಾವುದಾದರೊಂದು ತಿಂಗಳ ವೇತನದಲ್ಲಿ ಒಂದು ಬಾರಿಗೆ ದೇಣಿಗೆ ನೀಡಿ ರಾಜ್ಯದ ಗೋಶಾಲೆಗಳ ಗೋವುಗಳನ್ನು ಪೋಷಿಸುವ ಕಾರ್ಯದಲ್ಲಿ ಭಾಗಿಯಾಗಿ ಸರ್ಕಾರದ ಈ ಮಹತ್ಕಾರ್ಯದಲ್ಲಿ ಕೈಜೋಡಿಸುವಂತೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರೊಂದಿಗೆ ಪೋನ್ ಮೂಲಕ ಮಾತನಾಡಿರುವುದಾಗಿ ಪ್ರಭು ಚವ್ಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ.
ಗೋಮಾತಾ ಸಂರಕ್ಷಣೆಗೆಂದೇ ವಿಶೇಷ-ವಿಶಿಷ್ಠ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲಾ ಗೋಶಾಲೆಯಲ್ಲಿ ಗೋವು ದತ್ತು ಪಡೆದಿದ್ದಾರೆ. ಇವರೊಂದಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರುಷ್ಠಾಧಿಕಾರಿಗಳು, ಜಿಪಂ ಸಿಇಒ, ವಿವಿಧ ಇಲಾಖಾಧಿಕಾರಿ, ಸಿಬ್ಬಂದಿಗಳು, ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಪುಣ್ಯಕೋಟಿ ದತ್ತು ಪಡೆದಿರುವ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿರುವ ಪ್ರಭು ಚವ್ಹಾಣ್, ಜಿಲ್ಲೆಗೊಂದರಂತೆ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿ 31 ಗೋವುಗಳನ್ನು ದತ್ತು ಪಡೆದಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಐಎಎಸ್, ಐಪಿಎಸ್, ಕೆಎಎಸ್, ವಿವಿದ ಇಲಾಖಾಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳು ಹಾಗೂ ನಿಗಮ/ಮಂಡಳಿ/ಪ್ರಾಧಿಕಾರ/ವಿಶ್ವವಿದ್ಯಾಲಯ ಅಧಿಕಾರಿ-ಸಿಬ್ಬಂದಿಗಳು, ಯಥಾ ಶಕ್ತಿಯಾಗಿ ತಮ್ಮ ಸ್ವಂತ ಆದಾಯದಿಂದ ಮೂಕ ಪ್ರಾಣಿಗಳ ಸೇವೆಗೆ ಕಟ್ಟಿಬದ್ಧರಾಗಬೇಕಾಗಿದೆ. ಈ ಯೋಜನೆ ಯಶಸ್ವಿಯಾಗಲು ಸರ್ಕಾರಿ ನೌಕರರು, ಉದ್ಯಮಿಗಳು, ಗುತ್ತಿಗೆದಾರರು, ಸಂಘ-ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಉದ್ಯಮಿಗಳು ಮತ್ತು ಸಾರ್ವಜನಿಕ ಸಹಭಾಗಿತ್ವ-ಸಹಕಾರ ಅತ್ಯಗತ್ಯವಾಗಿದೆ ಎಂದು ಪ್ರಭು ಚವ್ಹಾಣ್ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ.
ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿ ಜಾನುವಾರುಗಳ ದತ್ತು (ADOPT) ಯೋಜನೆ, ಗೋಶಾಲೆಗಳಿಗೆ ದೇಣಿಗೆ (Donation) ಯೋಜನೆ ಹಾಗೂ ಜಾನುವಾರುಗಳಿಗಾಗಿ ಆಹಾರ (FEED A COW) ಯೋಜನೆಯಡಿ ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ (ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ವವ ಇತ್ಯಾದಿ) ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಲ್ಲಿರುವ ಗೋವುಗಳ ಆಹಾರಕ್ಕಾಗಿ ವಂತಿಗೆ ನೀಡಲು ಅವಕಾಶ ಕಲ್ಪಿಸಲಾಗಿದ್ದು, ತಾವೆಲ್ಲರೂ ಕೈ ಜೋಡಿಸುವಂತೆ ಪ್ರಭು ಚವ್ಹಾಣ್ ಅವರು ಸರ್ಕಾರಿ ನೌಕರುಗಳಲ್ಲಿ ವಿನಂತಿಸಿದ್ದಾರೆ.
ಇದನ್ನೂ ಓದಿ : ಬಚ್ಚಾ ಅಮಿತ್ ಶಾ ಎದುರು ನೀವು ಕೈಕಟ್ಟಿ ನಿಲ್ಲುವುದು ಸರಿಯೇ : ಬಿಎಸ್‌ವೈಗೆ ʼಕೈʼ ಪ್ರಶ್ನೆ
ದೇಶದಲ್ಲಿಯೇ ಮೊಟ್ಟ ಮೊದಲು ಪುಣ್ಯಕೋಟಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ಪುಣ್ಯ ಕೋಟಿ ಆನ್ ಲೈನ್ ಪೋರ್ಟಲ್ https://punyakoti.karahvs.in ಮೂಲಕ ಗೋಸಂತತಿಯನ್ನು ಸರ್ಕಾರಿ ನೌಕರರು ತಮ್ಮ ಸ್ವ ಇಚ್ಛೆಯಿಂದ ದತ್ತು ಪಡೆಯುವ ಸತ್ಕಾರ್ಯದಲ್ಲಿ ಭಾಗಿಯಾಗಿ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಸಚಿವರು ವಿನಂತಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರದಲ್ಲಿ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪ್ರಾಣಿ ಸಹಾಯವಾಣಿ ಕೇಂದ್ರ ಸ್ಥಾಪನೆ, ಗೋಶಾಲೆಗಳ ನಿರ್ಮಾಣ, ಪಶು ಸಂಜೀವಿನಿ ಅಂಬ್ಯುಲೆನ್ಸ್, 400 ಪಶುವೈದ್ಯರು, 250 ಪಶು ಪರಿವೀಕ್ಷಕರ ನೇಮಕ, 20000ಕ್ಕೂ ಅಧಿಕ ಜಾನುವಾರುಗಳ ರಕ್ಷಣೆ ಮಾಡಿ 900ಕ್ಕೂ ಅಧಿಕ ಎಫ್.ಐ.ಆರ್ ದಾಖಲಿಸಲಾಗಿದೆ. ಗೋಮಾತಾ ಸಹಕಾರ ಸಂಘ ಸ್ಥಾಪಿಸಿ, ಗೋಶಾಲೆಗಳನ್ನು ಆತ್ಮ ನಿರ್ಭರ ಗೋಶಾಲೆಗಳನ್ನಾಗಿಸಲು ತಮ್ಮ ಸಹಕಾರ ಅಗತ್ಯವಿದ್ದು, ತಾವುಗಳು ಪುಣ್ಯಕೋಟಿ ದತ್ತು ಅಭಿಯಾನದಲ್ಲಿ ಭಾಗಿಯಾಗುವ ಮುಖೇನ ಪುಣ್ಯಕಟ್ಟಿಕೊಳ್ಳಿ ಪ್ರಭು ಚವ್ಹಾಣ್ ಸಾರ್ವಜನಿಕರನ್ನು ಕೋರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.