ಮುಂಬೈ: ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ ಟೂರ್ನಿಯ 51ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 5 ರನ್ ಗಳ ರೋಚಕ ಗೆಲುವು ಸಾಧಿಸಿತು. ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳ ಸವಾಲಿನ ಮೊತ್ತ ಪೇರಿಸಿತು.
ಗೆಲುವಿನ ಗುರಿ ಬೆನ್ನತ್ತಿದ ಗುಜರಾತ್ ಗೆಲುವಿನ ಸನಿಹಕ್ಕೆ ಬಂದು ಕೊನೆ ಓವರ್ ನಲ್ಲಿ ಎಡವಿತು. ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದ ಗುಜರಾತ್ 5 ರನ್ ಗಳಿಂದ ಸೋಲು ಕಂಡಿತು.
ಇದನ್ನೂ ಓದಿ: IPL 2022 : 'ಸಿಎಸ್‌ಕೆ ಕೆಟ್ಟ ಸ್ಥಿತಿಯನ್ನು ಕಂಡು ಸಿಟ್ಟಿಗೆದ್ದ ಸೆಹ್ವಾಗ್'
ಮುಂಬೈ ಸವಾಲಿನ ಮೊತ್ತ
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಪರ ನಾಯಕ ರೋಹಿತ್ ಶರ್ಮಾ(43) ಮತ್ತು ಇಶಾನ್ ಕಿಶನ್(45) ಮೊದಲ ವಿಕೆಟ್‍ಗೆ 74 ರನ್‍ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿಹಾಕಿಕೊಟ್ಟರು. ಇನ್ನುಳಿದಂತೆ ಟಿಮ್ ಡೇವಿಡ್(ಅಜೇಯ 44), ತಿಲಕ್ ವರ್ಮಾ(21) ಬ್ಯಾಟಿಂಗ್ ನೆರವಿನಿಂದ ಮುಂಬೈ 175ರ ಗಡಿ ದಾಟಲು ಸಾಧ‍್ಯವಾಯಿತು. ಗುಜರಾತ್ ಪರ ರಶೀದ್ ಖಾನ್ 2 ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್ ಮತ್ತು ಪ್ರದೀಪ್ ಸಾಂಗ್ವಾನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಸಹಾ-ಗಿಲ್ ಅಬ್ಬರ ಬ್ಯಾಟಿಂಗ್!
178 ರನ್ ಗಳ ಸವಾಲಿನ ಗುರಿ ಬೆನ್ನತ್ತಿದ ಗುಜರಾತ್ ಪರ ಆರಂಭಿಕ ಜೋಡಿ ವೃದ್ಧಿಮಾನ್ ಸಹಾ(55) ಮತ್ತು ಶುಭಮನ್ ಗಿಲ್(52) ಮೊದಲ ವಿಕೆಟ್‍ಗೆ 106 ರನ್ ಗಳ ಭರ್ಜರಿ ಜೊತೆಯಾಟವಾಡಿತು. ಇನ್ನುಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ(24), ಸಾಯಿ ಸುದರ್ಶನ್(19) ರನ್ ಗಳಿಸಿದರು.
ಡ್ಯಾನಿಯಲ್ ಸ್ಯಾಮ್ಸ್ ಬೌಲಿಂಗ್ ಮ್ಯಾಜಿಕ್
ಅಂತಿಮ ಓವರ್ ನಲ್ಲಿ ಗುಜರಾತ್ ಗೆಲುವಿಗೆ ಕೇವಲ 9 ರನ್ ಗಳ ಅವಶ್ಯವಿತ್ತು. ಆದರೆ ಡ್ಯಾನಿಯಲ್ ಸ್ಯಾಮ್ಸ್ ಮ್ಯಾಜಿಕ್ ಮಾಡುವ ಮೂಲಕ ಮುಂಬೈಗೆ ಗೆಲುವು ತಂದುಕೊಟ್ಟರು. ಸ್ಫೋಟಕ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿರುವ ರಾಹುಲ್ ತೆವಾಟಿಯಾ(3) ರನೌಟ್ ಆಗಿ ನಿರಾಸೆ ಮೂಡಿಸಿದರೆ, ಸಿಕ್ಸರ್ ಅಟ್ಟಿ ತಂಡಕ್ಕೆ ಗೆಲುವು ತಂದುಕೊಡಲು ಡೇವಿಡ್ ಮಿಲ್ಲರ್(ಅಜೇಯ 19)ಗೆ ಸಾಧ‍್ಯವಾಗಲಿಲ್ಲ.
ಇದನ್ನೂ ಓದಿ: Mi vs GT : ಆಘಾತಕಾರಿ ನಿರ್ಧಾರ ತೆಗೆದುಕೊಂಡ ರೋಹಿತ್ ಶರ್ಮಾ!
ಸ್ಯಾಮ್ಸ್ ಅತ್ಯುತ್ತಮ ಬೌಲಿಂಗ್ ನಡೆಸುವ ಮೂಲಕ ಮುಂಬೈಗೆ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. 3 ಓವರ್ ಬೌಲಿಂಗ್ ಮಾಡಿದ ಸ್ಯಾಮ್ಸ್ ಕೇವಲ 18 ರನ್ ಬಿಟ್ಟುಕೊಟ್ಟು ಗುಜರಾತ್ ಸೋಲಿಗೆ ಕಾರಣರಾದರು. ಪ್ರಸಕ್ತ ಟೂರ್ನಿಯಲ್ಲಿ ಮುಂಬೈ 2ನೇ ಗೆಲುವು ದಾಖಲಿಸಿದರೆ, ಗುಜರಾತ್ ಸತತ 2ನೇ ಸೋಲು ಕಾಣಬೇಕಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.